ಇಬ್ಬರು ಹೆಂಡಿರ ಮುದ್ದಿನ ಲಾಯರ್!

ಇತ್ತೀಚೆಗೆ ಕರ್ನಾಟಕದಲ್ಲಿನ ("ಕೆಳ") ನ್ಯಾಯಲಯಗಳಲ್ಲಿ "ಆದಷ್ಟೂ" ಕನ್ನಡದಲ್ಲೇ ಕೆಲಸ ನಡೀಬೇಕು ಅಂತ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ರು. ನ್ಯಾಯಾಲಯ ಇದನ್ನ ಯಶಸ್ವಿಗೊಳಿಸೋಕ್ಕೆ ಅಲ್ಲಿನ ವಕೀಲರಿಂದಲೇ ಸಾಧ್ಯ ಅಂತ ಹೇಳಿ, ವಕೀಲರ ಮೇಲೆ ತಮ್ಮ ವಾದಗಳಲ್ಲಿ ಕನ್ನಡದ ಬಳಕೆಯ ಮೇಲೆ ಹೆಚ್ಚಿನ ಒತ್ತಡ ತಂದಿದೆ. ವಕೀಲರು ಇದರಲ್ಲಿ ಮುಖ್ಯವಾದ ಪಾತ್ರ ವಹಿಸಿದಾರೆ ಅನ್ನೋದು ನಿಜವಾದರೂ ನ್ಯಾಯಲಯಗಳಲ್ಲಿ ಕನ್ನಡದ ಅನುಷ್ಠಾನ ಅಂದ್ರೆ ಅದು ಬರೀ ವಕೀಲರು ಉಪಯೋಗಿಸೋ ಭಾಷೆಯಲ್ಲಿ ಬದಲಾವಣೆ ಮಾತ್ರ ಅಲ್ಲ; ನ್ಯಾಯಾಲಯಗಳಲ್ಲಿ ಕಾನೂನಿಗೆ ಸಂಬಂಧ ಪಟ್ಟ ಪ್ರತಿಯೊಂದು ಕಡತಾನೂ, ನ್ಯಾಯಾಂಶಗಳೂ, ಒಳಾಡಳಿತವೂ, ಭಾರತೀಯ ಸಂವಿಧಾನವೂ, ಕಾನೂನು ಪುಸ್ತಕಗಳೂ - ಎಲ್ಲವೂ ಕನ್ನಡದಲ್ಲಿರಬೇಕು.

ಒಂದು ವ್ಯವಸ್ಥೆ ಸುಗಮವಾಗಿ ನಡೀಬೇಕು ಅಂದ್ರೆ ಅದರಲ್ಲಿರೋ ಜನರು ಒಂದೇ ಭಾಷೆ ಮಾತಾಡ್ತಾ ಇರಬೇಕು ಅನ್ನೋದು ಸ್ಪಷ್ಟ. ಕಾನೂನಿಗೆ ಸಂಬಂಧ ಪಟ್ಟ ಎಲ್ಲಾ ಕಡತಗಳು, ನ್ಯಾಯಾಂಶಗಳು, ನಮ್ಮ ಸಂವಿಧಾನ, ಇವೆಲ್ಲಾ ಇಂಗ್ಲಿಷಿನಲ್ಲೇ ಇದ್ರೆ ಕರ್ನಾಟಕದ ಜನರಿಗೆ ಏನ್ ಅರ್ಥ ಆಗತ್ತೆ ಗುರು? ಅರ್ಥವಾಗದ ಭಾಷೇಲಿರೋ ನ್ಯಾಯವನ್ನ ವಕೀಲಿ ಕಲೀತಿರೋರು ಅದೆಷ್ಟು ಚೆನ್ನಾಗಿ ಕಲಿತಾರು? ಆ ವ್ಯವಸ್ಥೆಯಲ್ಲಿರೋ ಲೋಪದೋಷಗಳ್ನ ಅದೆಷ್ಟು ತಿದ್ದಾರು? ವಕೀಲರಾದಮೇಲೆ ಇಂಗ್ಲೀಷ್ ಬಾರದ ಗಿರಾಕಿಗಳಿಗೆ ಅದೆಷ್ಟು ನ್ಯಾಯ ಕೊಡಿಸಾರು? "ಇಬ್ಬರು ಹೆಂಡಿರ ಮುದ್ದಿನ ಪೋಲೀಸ್" ಇದ್ದಂಗೆ ಈಕಡೆ ಕನ್ನಡದ ಜನ, ಆಕಡೆ ಇಂಗ್ಲೀಷಿನ ಪುಸ್ತಕಗಳು - ಇವುಗಳ ನಡುವೆ ವಕೀಲನ ಕತೆ ಏನಾಗಬೇಕು? ಈ ಇಂಗ್ಲೀಷ್ಮಯ ವ್ಯವಸ್ಥೆಯಿಂದ ನ್ಯಾಯ ಬೇಕಾದೋರಿಗೂ ಕಷ್ಟ, ಕೊಡೋರಿಗೂ ಕಷ್ಟ, ಕೊಡಿಸೋರಿಗೂ ಕಷ್ಟ!

ಕೊನೆ ಗುಟುಕು

ಕಾನೂನು ಅರ್ಥವಾಗೋದು ಇಂಗ್ಲೀಷ್ ಬರೋರಿಗೆ ಮಾತ್ರ ಅನ್ನೋ ಹುಚ್ಚುತನ ನಮ್ಮಲ್ಲಿ ಇರೋದ್ರಿಂದ್ಲೇ ಇತ್ತೀಚೆಗೆ ಬಿಟ್ಟಿ ಕಾನೂನು ಸಲಹೆ ಕೊಡೋ ಕೇಂದ್ರಗಳು ಹುಟ್ಟಿಕೊಂಡಿವೆ ಅನ್ನಿಸುತ್ತೆ! ಈ ನಾಟಕಗಳ್ನೆಲ್ಲಾ ಬಿಟ್ಟು ನ್ಯಾಯಾಲಯಗಳು ಸಂಪೂರ್ಣವಾಗಿ ಕನ್ನಡೀಕರಣಗೊಳ್ಳಬೇಕು ಗುರು!

ಮಿಲನದ ಹಾಡಿಗೆ ಎಂಕನ ಭಾಷ್ಯ

ಹುಚ್ಚುಹಿಡಿದ ಭಕ್ತ ಒಬ್ಬ ಪ್ರತಿಯೊಂದರಲ್ಲೂ ತನ್ನ ಪ್ರೀತಿಯ ಭಗವಂತನ್ನ ಕಾಣೋಹಾಗೆ, ಪ್ರೀತಿಸುತ್ತಾ ಇರೋ ಒಬ್ಬನಿಗೆ ಎಲ್ಲೆಲ್ಲೂ ತನ್ನ ನಲ್ಲೆ ಕಂಡಂಗೆ ಎಂಕನಿಗೆ ಮಿಲನ ಚಿತ್ರದಲ್ಲಿ ಜಯಂತ ಕಾಯ್ಕಿಣಿ ಬರೆದಿರೋ ಒಂದು ಹಾಡಲ್ಲಿ ಬರೀ ಕನ್ನಡಿಗನಿಗೆ ಏಳಿಗೆಯ ಕಿವಿಮಾತೇ ತುಂಬಿತ್ತು ಅಂತ ನಮಗೆ ಬಂದು ಹೇಳಿದ. "ಅದೆಂಗ್ಲಾ ಎಂಕ?" ಅಂತ ಕೇಳಿದಾಗ ಔನು ಆ ಹಾಡಿಗೆ ಕೊಟ್ಟ ಭಾಷ್ಯ ಒಸಿ ಹಿಂಗಿತ್ತು:

ಈ ಹಾಡಲ್ಲಿ ಒಬ್ಬ ಕನ್ನಡಿಗ ತನ್ನ ಕನಸಿನ ಕರ್ನಾಟಕದೆಡೆಗೆ ಹೊರ್ಟಿರ್ತಾನೆ ಗುರು! ಅವನಿಗೆ ಕವಿ ಹೀಗೆ ಹೇಳ್ತಾನೆ:
ಕಿವಿಮಾತೊಂದು ಹೇಳಲೇ ನಾನಿಂದು ದಾರಿ ನಿಂತಾಗ ಸಾಗಲೇ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೇ ಬೇಕಿಂದು ||ಪ||

ಕನ್ನಡಿಗನಿಗೆ ಏಳಿಗೆಯ ದಾರಿ ನಿಂತುಹೋಗಿದೆ ಅನ್ನಿಸಿದೆ. ಅವನಿಗೆ ಕವಿ ಹೇಳಿರೋದು ಏನು ಅಂದ್ರೆ - ನೀನು ನಿನ್ನೆ ಏನೇ ಆಗಿರು (ವಿಜಯನಗರದ ಅರಸನೇ ಆಗಿರು, ಇಲ್ಲವೇ ಬ್ರಿಟಿಷರ ಕಾಲಾಳೇ ಆಗಿರು), ಆ ನೆನ್ನೆ ಅನ್ನೋದು ಈಗಿಲ್ಲ. ನಾಳೆ ನೀನೇನಾಗ್ತ್ಯಾ ಅನ್ನೋದು ತಿಳಿದಿಲ್ಲ. ಆದ್ರೆ ಒಂದು ಖಂಡಿತ ಏನಪ್ಪಾ ಅಂದ್ರೆ ನೀನು ಇವತ್ತು ನಿನ್ನತನವನ್ನ ಬಿಟ್ಟು ಬಾಳಕ್ಕಾಗಲ್ಲ, ನೀನು ನೀನಾಗೇ ಬಾಳಬೇಕು. ಅಂದ್ರೆ - ನೀನು ನಿನ್ನ ಕನ್ನಡತನವನ್ನ ಬಿಡದೇ ಬಾಳಬೇಕು. ಹೀಗೆ ನೀನಾಗಿ ಬಾಳುವುದು ಬಿಡುವುದು ಎಂಬ ಆಯ್ಕೆ ನಿನ್ನದಲ್ಲ. ನೀನಿಲ್ಲಿ ಅಸ್ವತಂತ್ರ. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ನೀನಾಗಿ ಬಾಳಲೇಬೇಕು.
ಹಸಿರಾಗಿದೆ ದ್ವೀಪವು ನಿನಗಾಗಿ ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ||೧||

ಹಸಿರಾದ ದ್ವೀಪ ಅಂದರೆ ಕನಸಿನ ಕರ್ನಾಟಕ. ಹಸಿರು ಸಮೃದ್ಧಿಯ ಸೂಚಕ. ದ್ವೀಪ ಹೇಗೆ? ಹೇಗೆ ಎಂದರೆ ಇಡೀ ಪ್ರಪಂಚ ಎಂಬ ಸಾಗರದಲ್ಲಿರೋದರಿಂದ ದ್ವೀಪ. ಈ ಕನಸಿನ ಕರ್ನಾಟಕ - ಯಾವುದು ಗುರಿಯೋ ಆ ಕನಸಿನ ಕರ್ನಾಟಕ ನಿನಗಾಗೇ ಇದೆ, ಮತ್ತೊಬ್ಬನಿಗಲ್ಲ. ಮತ್ತೂ ಏನೆಂದರೆ ಆ ಹಸಿರಾದ ದ್ವೀಪ - ಎಂದರೆ ಸಮೃದ್ಧ ಕರ್ನಾಟಕ - ಮುಂದೆ ಇದ್ದೇ ಇದೆ. ಇದೆಯೋ ಇಲ್ಲವೋ ಎನ್ನುವ ಸಂದೇಹ ಬೇಡ. ಆ ಗುರಿಯ ಕಡೆಗೆ ನಸುನಗುತಲೇ ನೀನು ಗೆಲುವುಮೊಗದವನಾಗಿ ಸಾಗು! ಹೊಸ ಎಂದರೆ ಇವತ್ತಿನ ಜಾಗತೀಕರಣವಾಗಿರೋ. ತಂಗಾಳಿ ಯಾಕೆ ಅಂದರೆ ಅದರಿಂದ ಕನ್ನಡಿಗನಿಗೆ ಒಳಿತೇ ಆಗಿದೆ. ಅ ಹೊಸ ತಂಗಾಳಿ ಮೆಲುವಾಗಿ ಹೇಳಿದೆ. ಮೆಲುವಾಗಿ ಎಂದರೆ ಬುದ್ಧಿವಂತರ ಕಿವಿಗೆ ಮಾತ್ರ ಕೇಳಿಸುವ ಹಾಗೆ. ಏನು ಹೇಳಿದೆ? ಈ ಬಾಳುಂಟು ಬಾಳುವ ಸಲುವಾಗಿ. ಈ ಬಾಳು ಎಂದರೆ ಕನ್ನಡಿಗನಾಗಿ ಹುಟ್ಟಿರುವ ಈ ಬಾಳು. ಇದು ಬಾಳುವ ಸಲುವಾಗಿಯೇ ಇದೆ ಎಂದರೆ ನೀನು ಕನ್ನಡಿಗನಾಗಿಯೇ ಸದಾಕಾಲ ಬಾಳಬೇಕು ಎಂದರ್ಥ. ಬಾಳೇ ಬಾಳ್ತೀಯ, ಬಾಳದೆ ಹೇಗಿರಬಲ್ಲೆ ನೀನು? ಇದು ನಿನ್ನ ಕೈಯಲ್ಲಿ ಇಲ್ಲವೇ ಇಲ್ಲ!
ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು ಓಡಲೇಬೇಕು ನೀನಿಂದು ||೨||

ಕನ್ನಡಿಗ ಇವತ್ತಿನ ದಿನ ನಾಲ್ಕು ಗೋಡೆಗಳ ನಡುವ ಒಬ್ಬೊಬ್ಬನೇ ಇದ್ದಾನೆ, ಇತರ ಕನ್ನಡಿಗರೊಡನೆ ಒಗ್ಗೂಡಿಲ್ಲ. ಆ ನಾಲ್ಕುಗೋಡೆಗಳ ಬಾಗಿಲಿನಾಚೆಗೆ ಬಾಳು - ಎಂದರೆ ಜೀವನ - ಅವನನ್ನು ಬಾ ಎಂದು ಕರೆದಿದೆ. ಇಲ್ಲಿ ಕನ್ನಡಿಗ ಎಂದರೆ ಒಬ್ಬನೇ ಅಲ್ಲ, ಕೋಟಿಗಟ್ಟಲೆ ಜನ. ಇವರೆಲ್ಲ ಬಾಗಿಲಿನಾಚೆಗೆ ಬಂದಾಗಲೇ ಅದು ಬಾಳು. ಎಂದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಗೂಡಿನಿಂದ ಹೊರಬಂದು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟನ್ನೇ ಇಲ್ಲಿ ಬಾಳು ಎಂದಿರುವುದು. ಒಗ್ಗಟ್ಟಿಲ್ಲದೆ ತನ್ನ ನಾಲ್ಕು ಗೋಡೆಯೊಳಗೆ ಕೂತಿರುವುದು ಬಾಳೇ ಅಲ್ಲ, ಸಾವು! ಹೀಗೆ ಒಗ್ಗಟ್ಟೆಂಬ ಬಾಳು ಕೂಗಿದಾಗ ನೀನು ಸಂತಸದಿಂಡ ಓಗೊಟ್ಟು ಓಡಲೇಬೇಕು ಇಂದು - ಎಂದರೆ ನಿನಗೆ ಓಡದೆ ಬೇರೆ ದಾರಿಯಿಲ್ಲ; ಓಡದೆ ಇರುವುದು ನಿನ್ನ ನಿಯಂತ್ರಣದಲ್ಲಿಲ್ಲ!
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದೂ
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು ||೩||

ಸಮಯ - ಎಂದರೆ ಹಿಂದು, ಇಂದು ಮತ್ತು ಮುಂದು - ಇವೆಲ್ಲವೂ ನಿನಗಾಗಿ ಸಾವಿರ ಕಣ್ಣಿನ ನವಿಲಾಗಿ ನಿಂತಿದೆ. ಕಣ್ಣೇಕೆ ಎಂದರೆ ಅದು ನಿನ್ನನ್ನು ನೋಡುತ್ತಿರುವುದರಿಂದ. ಎಂದರೆ ನಿನ್ನ ಹಿಂದಿನವರು, ಇಂದಿನವರು ಮತ್ತು ಮುಂದಿನವರು - ಇವೆರಲ್ಲಾ ನಿನ್ನನ್ನು ಅಸಂಖ್ಯಾತ ಕಣ್ಣುಗಳಿಂದ ನೋಡುತ್ತಿದ್ದಾರೆ, ನಿನ್ನ ಪ್ರತಿಯೊಂದು ಹೆಜ್ಜೆಯನ್ನೂ ಆಲಿಸುತ್ತಿದ್ದಾರೆ. ಇಡೀ ಸಮಯವನ್ನು ಒಂದು ನವಿಲೆಂದಿರುವುದು ಅದರ ಅಂದವನ್ನು ಸೂಚಿಸಲು. ಹೀಗೆ ಸಮಯವೆನ್ನುವುದೇ ಹೆಪ್ಪುಗಟ್ಟಿ ನಿನ್ನನ್ನು ನೋಡುತ್ತಿದ್ದಾಗ ಹಗುರಾಗಿ ಕಣ್ಣನ್ನು ತೆರೆದು ನೀನು ಅದನ್ನು ನೋಡಲೇಬೇಕು ಬಂದು. ಹಗುರಾಗಿ ಏಕೆ ಎಂದರೆ ಪೂರ್ತಿ ನೋಡಲು ಹೊರಟರೆ ನಿನ್ನ ಕಣ್ಣು ಸುಟ್ಟುಹೋದೀತು, ಅದಕ್ಕೆ. ನೋಡಲೇ ಬೇಕು ಎಂದರೆ ಮತ್ತೆ ನಿನಗೆ ನೋಡದೆ ಆಯ್ಕೆಯೇ ಇಲ್ಲ ಎಂಬ ಅರ್ಥ. ಇಡೀ ಸಮಯವೇ ನಿನ್ನ ಮುಂದೆ ನಿಂತಿದ್ದಾಗ ನೀನು ನೋಡದೆ ಇರಲಾರೆ ಎನ್ನುವುದು ಕವಿವಾಣಿ. ಇಲ್ಲೂ ನೋಡುವುದು ಬಿಡುವುದು ನಿನ್ನ ಹತೋಟಿಯಲ್ಲಿಲ್ಲ; ಅಸ್ವತಂತ್ರನು ನೀನು.
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ ||೪||

ಕನ್ನಡಿಗನ ಮೇಲೆ ಕವಿದಿರುವ ಮೋಡಕ್ಕೆ ಒಂದು ಬೆಳ್ಳಿಯ ಅಂಚಿದೆ, ಆದ್ದರಿಂದ ಮೋಡ ಬಾನಲ್ಲಿ ನಗುವ ಬೀರಿದೆ. ಮೋಡ ಇವತ್ತಿನ ತೊಂದರೆಗಳು. ಆ ತೊಂದರೆಗಳೇ ಏಳಿಗೆಗೆ ಬೇಕಾದ್ದೆಲ್ಲವನ್ನೂ ತುದಿಯಲ್ಲಿ ಹೊಂದಿರುವುದರಿಂದ ಬೆಳ್ಳಿಯ ಅಂಚಿರುವುದು. ಹೀಗಿರುವಾಗ ನಿನ್ನ ಬಾಳಿನ ಸಂಗೀತವನ್ನ. ಸಂಗೀತ ಎಂದರೆ ಲಯಬದ್ಧವಾದ ಮತ್ತು ಎಲ್ಲರಿಗೂ ಇಷ್ಟವಾಗುವಂಥ ಒಂದು ಗುಂಪುಗಾಯನ. ಇಂತಹ ಒಗ್ಗಟ್ಟಿನ ಗುಂಪುಗಾಯನದಲ್ಲಿ ನಿನ್ನ ಪಾಲನ್ನು ನೀನು ಹಾಡಲೇಬೇಕು. ಹಾಡದೆ ಆಯ್ಕೆ ನಿನಗಿಲ್ಲ ಇಲ್ಲಿ!
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ ||೫||

ಆ ನಿನ್ನ ಕನಸಿನ ಕರ್ನಾಟಕ ಯಾವುದಿದೆಯೋ ಅದರ ಕಡೆಗೆ ನೀನು ಮಿಂಚುವ ಅಲೆಗಳ ನದಿಯಾಗಿ ಬೇಗನೆ ಚಲಿಸು. ಮಿಂಚುವ ಅಲೆ ಏತಕ್ಕೆ ಎಂದರೆ ಸೂರ್ಯನ ಶಕ್ತಿಯನ್ನು ಬಿಂಬಿಸುವುದರಿಂದ. ನದಿ ಬೇಗ ಏತಕ್ಕೆ ಚಲಿಸುತ್ತದೆ ಎಂದರೆ ಕಲ್ಲು-ಬಂಡೆಗಳ ಅಡಚಣೆಗಳಿಂದ. ಹೀಗೆ ಬೇಗ ಬೇಗನೆ ನದಿಯಾಗಿ ಹರಿದು ನೀನು ನಿನ್ನ ಪಾಲಿನ ಆಟವನ್ನು ಆಡಲೇಬೇಕು. ಏನು ಆಟ? ಈ ಬಾಳೆಂಬ ಆಟ - ಯಾವುದರಲ್ಲಿ ನೀನು ಕನಸಿನ ಕರ್ನಾಟಕವನ್ನು ಕಟ್ಟಲು ಹೊರಟಿದೆಯೋ ಆ ಆಟ. ಆಡಲೇಬೇಕು ಎಂದರೆ ಅದು ಕವಿ ಕನ್ನಡಿಗನಿಗೆ ಮಾಡಿರುವ ಆಜ್ಞೆಯಲ್ಲ, ಅವನ ಅಸ್ವತಂತ್ರತೆಯನ್ನ ಸೂಚಿಸುತ್ತಿದೆ. ಆ ಆಟವನ್ನು ನೀನು ಆಡುವುದಿಲ್ಲ ಎಂದುಕೊಂಡರೂ ನೀನು ಆಡಲೇಬೇಕು. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ಆಡಲೇಬೇಕು, ಕನ್ನಡಿಗನಾಗಿ ಬಾಳಲೇಬೇಕು, ನಿಂತ ದಾರಿಯಲ್ಲಿ ಮುಂದೆ ಸಾಗಲೇಬೇಕು, ಒಗ್ಗಟ್ಟಾಗಲೇಬೇಕು, ನಿನ್ನ ಕನಸಿನ ಕರ್ನಟಕವನ್ನು ನೀನು ಹೋಗಿ ಮುಟ್ಟಲೇಬೇಕು; ನಿನಗಿಲ್ಲಿ ಆಯ್ಕೆಯಿಲ್ಲ, ಇದಾವುದೂ ನಿನ್ನ ಹತೋಟಿಯಲ್ಲಿಲ್ಲ; ಎಲ್ಲಾ ಆಗಲೇಬೇಕು!

ಅಲ್ಲ - "ಅದೆಂಗ್ಲಾ ಎಂಕ?" ಅಂತ ಕೇಳಿದ ತಕ್ಷಣ ಇಷ್ಟೆಲ್ಲಾ ಹೇಳಿದನಲ್ಲ, ಎನಾದರೂ ಅರ್ಥವಾಯಿತಾ ಗುರು? ಸುಮ್ಮನೆ ಹೋಗಿ ಪೂಜಾ ಗಾಂಧೀನೂ ಐಟಂ ಹಾಡ್ನೂ ನೋಡ್ಕೊಂಡ್ ಬಾರ್ಲಾ ಅಂದ್ರೆ ಯೇನೋ ಬುಟ್ಟ ಸಿದ್ಧಾಂತ!

ಬ್ರಿಟಿಷರು, ಕನ್ನಡ, ಬೃಹದಾರಣ್ಯಕ ಉಪನಿಷತ್ತು ಮತ್ತು ನಾವು

ಬ್ರಿಟಿಷರು ಹೇಗೆ ಆಡಳಿತದಲ್ಲಿ ಕನ್ನಡದ ಬಳಕೆ ಮಾಡ್ತಿದ್ರು ಅನ್ನೋ ಬಗ್ಗೆ ವಿ.ಕ. ದಲ್ಲಿ ನಟರಾಜ್ ಅವರ ಬರಹದ ಬಗ್ಗೆ ಮೊನ್ನೆಮೊನ್ನೆ ಬರೆದಿದ್ದೆವು. ಆ ಬ್ರಿಟಿಷರು ಕನ್ನಡಕ್ಕಾಗಿ ಕೆಲಸ ಮಾಡಿದರು ಇಲ್ಲವೇ ಕನ್ನಡಕ್ಕಾಗಿ ಕೈ ಎತ್ತಿದರು ಇಲ್ಲವೇ ಕನ್ನಡವನ್ನ ಉದ್ಧಾರ ಮಾಡಿದರು ಅನ್ನೋದು ಗೌಣವಾಗಿ ಏರ್ಪಟ್ಟಿದ್ದರೂ ಅದೇ ಅವರಿಂದ ಕಲೀಬೇಕಾದ ಪಾಠ ಅಲ್ಲ. ಪಾಠ ಇನ್ನೂ ಆಳವಾದ್ದು.

ಆಡಳಿತದಲ್ಲಿ ಕನ್ನಡದ ಬಳಕೆ ಮಾಡ್ತಿದ್ದ ಬ್ರಿಟಿಷರ ಕತೆಯ ಮುಖ್ಯ ಸಂದೇಶ ಏನೂಂದ್ರೆ ಔರು ತಮ್ಮ ಆಡಳಿತ ಮತ್ತು ವ್ಯಾಪಾರದ ಕೆಲಸವನ್ನ ಆದಷ್ಟೂ ಸಮರ್ಪಕವಾಗಿ ಮಾಡಬೇಕಾದರೆ ಅದಕ್ಕೆ ಕನ್ನಡ ಕಲೀಬೇಕು, ಕನ್ನಡದಲ್ಲೇ ಮಾಡಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡಿದ್ರು ಅನ್ನೋದು. ಇವತ್ತು ನಮ್ಮ ಜನ ಇದನ್ನ ಮರೆತು ಬ್ರಿಟಿಷರಿಗೆ ಕನ್ನಡಾಭಿಮಾನ ಇತ್ತು ಅಂತ ತಪ್ಪು ಅರ್ಥ ಮಾಡ್ಕೊಳೋದು, ಔರ ಬಗ್ಗೆ ಭಯ ಭಕ್ತಿ ಬರೆಸಿಕೊಳ್ಳೋದು - ಇವೆಲ್ಲಾ ಮೂರ್ಖತನಾನೂ ಹೌದು, ನಿಜಕ್ಕೂ ನಮ್ಮ ಜೀವನದಲ್ಲಿ ನಮ್ಮ ಭಾಷೆಯ ಸ್ಥಾನ ಅಂದ್ರೆ ಏನು ಅಂತ ಅರ್ಥ ಮಾಡ್ಕೊಳ್ದೇ ಇರೋದೂ ಹೌದು.

ಔರು ಯಾರೂ ಕನ್ನಡ ಅನ್ನೋ ಒಂದು ವಸ್ತೂನ ಉದ್ಧಾರ ಮಾಡಕ್ಕೆ ಹೊರಡಲಿಲ್ಲ. ಔರು ತಮ್ಮ ಉದ್ಧಾರ ಮಾಡ್ಕೊಳಕ್ಕೇ ಹೊರಟಿದ್ದು. ಜೊತೆಗೆ ಕನ್ನಡ ಬೆಳೀತು, ಅಷ್ಟೆ. ಇವತ್ತಿನ ದಿನವೂ ಅಷ್ಟೆ, ಏನೋ ಕನ್ನಡ ಉದ್ಧಾರ ಮಾಡ್ತೀನಿ ಅಂತ ಯಾರೂ ಹೊರಡಬೇಕಾಗಿಲ್ಲ. ಉದ್ಧಾರ ಮಾಡ್ಕೋಬೇಕಾಗಿರೋದು ನಮ್ಮನ್ನ ಮಾತ್ರ. ಜೊತೆಗೆ ಕನ್ನಡ ಬೆಳೆಯತ್ತೆ, ಅಷ್ಟೆ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮೈತ್ರೇಯಿಗೆ ಯಾಜ್ಞ್ಯವಲ್ಕ್ಯ ಇದನ್ನೇ ಹೇಳಿದ್ದ:
ಸಂಸ್ಕೃತದಲ್ಲಿ:ನ ವಾ ಅರೇ ಭೂತಾನಾಂ ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ
ಆತ್ಮನಸ್ತು ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ |
ನ ವಾ ಅರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವತಿ
ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ |

ಕನ್ನಡದಲ್ಲಿ:
ಅರೇ! ಜೀವಿಗಳ ಬಯಕೆಯಿಂದ ಜೀವಿಗಳು ಪ್ರಿಯವಾಗವು
ಆತ್ಮದ ಬಯಕೆಯಿಂದ ಜೀವಿಗಳು ಪ್ರಿಯವಾಗುತ್ತವೆ |
ಅರೇ! ಎಲ್ಲದರ ಬಯಕೆಯಿಂದ ಎಲ್ಲವೂ ಪ್ರಿಯವಾಗದು
ಆತ್ಮದ ಬಯಕೆಯಿಂದ ಎಲ್ಲವೂ ಪ್ರಿಯವಾಗುತ್ತದೆ |

ಈ ಸಂದರ್ಭದಲ್ಲಿ ಈ ಶ್ಲೋಕವನ್ನ ಅರ್ಥ ಮಾಡ್ಕೋಬೇಕಾಗಿರೋದು ಹೀಗೆ:
ಅರೇ! ಕನ್ನಡದ ಬಯಕೆಯಿಂದ ಕನ್ನಡವು ಪ್ರಿಯವಾಗದು
ಆತ್ಮದ ಬಯಕೆಯಿಂದ ಕನ್ನಡವು ಪ್ರಿಯವಾಗುತ್ತದೆ |

ಒಟ್ನಲ್ಲಿ ಆ ಬ್ರಿಟಿಷರೂ ಯಾವುದೋ "ಕನ್ನಡ" ಅನ್ನೋ ತಮಗಿಂತ ಬೇರೆಯಾದ ಒಂದು ವಸ್ತುವನ್ನ ಬಯಸಿ ಅದನ್ನ ಉದ್ಧಾರ ಮಾಡಕ್ಕೆ ಹೊರಡಲಿಲ್ಲ, ನಾವೂ ಹೊರಡಬಾರದು. ನಮ್ಮ ಉದ್ಧಾರವನ್ನ ಬಯಸಿ ಕೆಲಸ ಮಾಡಿದಾಗ ತಾನೇ ಕನ್ನಡ ಉದ್ಧಾರವಾಗುತ್ತೆ. ಆ ಬ್ರಿಟಿಷರ ಕಾಲದಲ್ಲೂ ಇದೇ ಆಗಿದ್ದು. ಔರು ತಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಹೊರಟಿದ್ದಕ್ಕೇ ಔರು ಅಷ್ಟು "ಕನ್ನಡಕ್ಕಾಗಿ ಕೈ ಎತ್ತಿದ್ದು" ಗುರು! ನಮ್ಮ ಉದ್ಧಾರವನ್ನ ನಾವು ಬಯಸದೆ ಎಷ್ಟು "ಕನ್ನಡಕ್ಕಾಗಿ ಕೈ ಎತ್ತಿದರೂ" ಕನ್ನಡವೂ ಉದ್ಧಾರವಾಗಲ್ಲ, ನಾವೂ ಉದ್ಧಾರವಾಗಲ್ಲ (ಮೊದಲನೇದು ಗೌಣವಾಗಿ, ಎರಡನೇದು ನೇರವಾಗಿ). ಈ ಮಾತು ಆಡಳಿತ ಮತ್ತು ವ್ಯಾಪಾರಗಳಿಗೆ ಹೇಗೆ ಅನ್ವಯಿಸುತ್ತೋ ಹಾಗೇ ಅಧ್ಯಾತ್ಮದ ವಿಷಯದಲ್ಲೂ ಅನ್ವಯಿಸುತ್ತೆ. ಏನ್ ಗುರು?

ಕೊನೆ ಗುಟುಕು

"ಇದೇನಿದು? ಏನ್ಗುರು ಸಂಸ್ಕೃತದ ಶ್ಲೋಕ ಬರೆಯೋದೆ?" ಅಂತೀರಾ? ಹ್ಹ ಹ್ಹ! ಸಂಸ್ಕೃತದಿಂದ ಕಲೀಬೇಕಾಗಿರೋದನ್ನ ನಾವು ಕಲೀಲೇಬೇಕು. ಕಲೀಬಾರದ್ದನ್ನ ಕಲೀಬಾರದು, ಅಷ್ಟೆ (ಕಲೀಬೇಕಾಗಿರೋದನ್ನ ಕಲಿಯಕ್ಕಾಗದೇ ಇರೋರೇ ಕಲೀಬಾರದ್ದನ್ನ ಕಲಿಯೋದು). ಇದು ಸಂಸ್ಕೃತಕ್ಕೆ ಮಾತ್ರ ಅಲ್ಲ, ಎಲ್ಲಾದಕ್ಕೂ ಅನ್ವಯಿಸುತ್ತೆ ಗುರು!

ಸರ್ವಶಿಕ್ಷಾ ಅಭಿಯಾನದಲ್ಲಿ ಕೇಂದ್ರದ ಸೋಲು: ಗೊತ್ತಿದ್ದ ವಿಷಯವೇ!

"ಶಾಲೆಯ ಚಟುವಟಿಕೆಗಳಲ್ಲಿ ಸಮುದಾಯದ ಕ್ರಿಯಾತ್ಮಕ ಸಹಭಾಗಿತ್ವದ ಮೂಲಕ ಎಲ್ಲ ಸಾಮಾಜಿಕ ಮತ್ತು ಲಿಂಗ ಸಂಬಂಧಿ ಕಂದರಗಳನ್ನು ನಿವಾರಿಸಿ, 2010 ರೊಳಗೆ ಎಲ್ಲರಿಗೂ ತೃಪ್ತಿದಾಯಕ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡುವುದು" ಅನ್ನೋ ಉದ್ದೇಶ ಇಟ್ಕೊಂಡಿರೋ ಸರ್ವಶಿಕ್ಷಾ ಅಭಿಯಾನದಲ್ಲಿ ಶಿಕ್ಷಣ ಕೊಡಕ್ಕೆ ಹೊರ್ಟಿರೋರಿಗೂ ಪಡೆಯೋರಿಗೂ ಎಂಥಾ "ಕಂದರ" ಇದೆ ಅಂತ ಇವತ್ತಿನ ಪ್ರಜಾವಾಣೀಲಿ ಕನ್ನಡ ವಿ.ವಿ. ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಟಿ. ಆರ್. ಚಂದ್ರಶೇಖರ ತೋರಿಸಿಕೊಟ್ಟಿದ್ದಾರೆ.

ಕೇಂದ್ರಸರ್ಕಾರದ ಈ ಅಭಿಯಾನ ಸ್ಥಳೀಯ ಅಂಕಿ-ಅಂಶಗಳು, ಸ್ಥಳೀಯ ಪರಿಸ್ಥಿತಿಗಳ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡಕ್ಕಾಗದೆ ಹೇಗೆ "ದಿಕ್ಕು ತಪ್ಪಿದೆ" ಅಂತ ಚಂದ್ರಶೇಖರ ಅವರ ಪದಗಳಲ್ಲೇ ಓದಿ:
ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಕಾರ್ಯಕ್ರಮದ ಮುಖ್ಯ ಸಮಸ್ಯೆಯೇನೆಂದರೆ ಅದಕ್ಕೆ ಪ್ರಾದೇಶಿಕ ಆಯಾಮ ಇಲ್ಲದಿರುವುದು. ಇದ್ದರೂ ಅದಕ್ಕೆ ನೀಡಬೇಕಾದಷ್ಟು ಮಹತ್ವವನ್ನು ನೀಡಿಲ್ಲ. ತಾತ್ವಿಕವಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ, ಆದರೆ ಅವುಗಳನ್ನು ರಾಜ್ಯ ಮಟ್ಟದಲ್ಲಿ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಏಕರೂಪಿಯಾಗಿ ಮತ್ತು ಯಾಂತ್ರಿಕವಾಗಿ ತಯಾರಿಸಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಪ್ರಾದೇಶಿಕ ಅಂತರ-ಅಸಮಾನತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳು ತಯಾರಾಗುತ್ತಿಲ್ಲ.

[...]

ಈ ಬಗೆಯ ಸಮಸ್ಯೆಗೆ ಸಂಬಂಧಿಸಿದಂತೆ ಸರ್ವಶಿಕ್ಷಾ ಅಭಿಯಾನದಲ್ಲಿ ಗಮನ ನೀಡಿರುವುದು ಕಂಡುಬರುತ್ತಿಲ್ಲ. ಇದರಿಂದಾಗಿ ಸರ್ವರಿಗೂ ಶಿಕ್ಷಣವೆಂಬ ಉದ್ದೇಶವೇ ವಿಫಲಗೊಳ್ಳುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಗೆ ಗಮನ ನೀಡದಿದ್ದರೆ ಸರ್ವಶಿಕ್ಷಾ ಅಭಿಯಾನದ 2010ರ ಗುರಿಯನ್ನು ಸಾಧಿಸುವುದು ರಾಜ್ಯದಲ್ಲಿ ಕಷ್ಟಸಾಧ್ಯವಾಗುತ್ತದೆ.

[...]

ಪ್ರಾದೇಶಿಕ ಅಸಮಾನತೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಿರುವ ಡಾ. ಡಿ. ಎಂ. ನಂಜುಂಡಪ್ಪ ಸಮಿತಿಯು ರಾಜ್ಯದ 175 ತಲ್ಲೂಕುಗಳ ಪೈಕಿ 143 ಶೈಕ್ಷಣಿಕವಾಗಿ ಮುಂದುವರೆದ ತಾಲ್ಲೂಕುಗಳೆಂದೂ ಮತ್ತು 32 ಶೈಕ್ಷಣಿಕ ದುಃಸ್ಥಿತಿಯಲ್ಲಿವೆಯೆಂದೂ ಗುರುತಿಸಿದೆ...ಸರ್ವ ಶಿಕ್ಷಾ ಅಭಿಯಾನದ ತಜ್ಞರು ಇದರ ಬಗ್ಗೆ ಗಮನ ನೀಡಿದಂತೆ ಕಾಣುವುದಿಲ್ಲ.

ಒಟ್ನಲ್ಲಿ ಈ ಸರ್ವಶಿಕ್ಷಾ ಅಭಿಯಾನದಲ್ಲಿ ಕೇಂದ್ರ ಹಾಕಬಾರದ್ದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿರುವುದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ ಗುರು! ಸುಮ್ಮನೆ ಈ ಕೆಲಸವನ್ನ ರಾಜ್ಯಕ್ಕೇ ಬಿಟ್ಟು ಬೇಕಾದ ಅನುದಾನ ಕೊಟ್ಟಿದ್ದರೆ ಸಾಕಾಗಿತ್ತು. ಅಲ್ಲ, 100ಕೋಟಿ ಜನಸಂಖ್ಯೆಯಿರೋ ದೇಶದ ಮೂಲೆಮೂಲೆಗಳಲ್ಲಿ ಹೋಗಿ ಪ್ರಾಥಮಿಕ ಶಿಕ್ಷಣ ಕೊಡ್ತೀನಿ ಅಂತ ದಿಲ್ಲಿ ಅಂದುಕೊಳ್ಳೋದೇ ಮಹಾ ಮೂರ್ಖತನ ಗುರು! ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊನ್ನೆಮೊನ್ನೆ ದಿಲ್ಲಿಯಲ್ಲಿ ನಡೆದ ಒಕ್ಕೂಟ ವ್ಯವಸ್ಥೆಗಳ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ -
Defence, foreign policy and macro-economic management are clearly best dealt at the national level. Other policy issues like health care, education and law and order, are best dealt with at more decentralised levels of governance.

ಅಂತ ಹೇಳಿ ಈ ದೇಶದಲ್ಲಿ ಶಿಕ್ಷಣ ಹೇಗೆ ನಡೀಬೇಕು ಅಂತ ಕೇಂದ್ರ ಅರ್ಥ ಮಾಡ್ಕೊಂಡಿದೆ ಅನ್ನೋ ಭರವಸೆ ಕೊಟ್ಟಿದ್ದಾರಲ್ಲ, ಅದನ್ನ ಜಾರೀಗ್ ತರದೇ ಇರೋದ್ರಿಂದ್ಲೇ ತಾನೆ ಈ ಯೋಜ್ನೆ ಡುಮ್ಕಿ ಹೊಡೀತಿರೋದು? ನಿಜಕ್ಕೂ ಭಾರತೀಯ ಒಕ್ಕೂಟದಲ್ಲಿ ಕೇಂದ್ರ ರಕ್ಷಣೆ ಮತ್ತು ವಿದೇಶಸಂಪರ್ಕ ಮುಂತಾದ ಮಾಡಬೇಕಾದ್ದನ್ನು ಸರಿಯಾಗಿ ಮಾಡಿ ಮಿಕ್ಕಿದ್ದನ್ನು ರಾಜ್ಯಗಳಿಗೆ ಬಿಡೋದೇ ಸರಿಯಾದ ದಾರಿ. ಇದನ್ನ ಅರ್ಥ ಮಾಡ್ಕೊಳ್ದೇ ಇರೋ ಭಾರತೀಯ ಆಡಳಿತ ವ್ಯವಸ್ಥೇಲಿ ಇಂಥಾ ಯೋಜನೆಗಳು ಸೋಲುಣ್ಣೋದು ಖಂಡಿತ! ಭಾರತದ ಒಕ್ಕೂಟ ವ್ಯವಸ್ಥೇಲಿ ಕೇಂದ್ರದ ಪಾತ್ರ ಏನಿರಬೇಕು, ರಾಜ್ಯಗಳ ಪಾತ್ರ ಏನಿರಬೇಕು ಅಂತ ಇದ್ರಿಂದಾನಾದ್ರೂ ಸರಿಯಾಗಿ ಅರ್ಥ ಮಾಡ್ಕೊಳೋ ಪ್ರಯತ್ನ ನಡೀಬೇಕು. ಏನ್ ಗುರು?

ಕನ್ನಡ ಚಿತ್ರಗಳಿಂದ ನಾವೇ ದುಡ್ಡು ಮಾಡ್ಕೋಬೇಕು

ಗೋವಾದಲ್ಲಿ ನಡಿತಿರೋ 38ನೇ ಅಂತರ್ರಾಷ್ಟ್ರೀಯ ಚಲನ-ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಮಿನುಗುತ್ತಿವೆ ಅಂತ ಡೆಕ್ಕನ್ ಹೆರಾಲ್ಡ್ ನಲ್ಲಿ ಸುದ್ಧಿ. ಕನ್ನಡದಲ್ಲಿ ಒಳ್ಳೇ ಚಿತ್ರಗಳು ಇವೆಯಾ, ಅಥವಾ ಇರಕ್ಕೆ ಸಾಧ್ಯ ಇದೆಯಾ, ಜನ ಅದನ್ನು ನೋಡುತ್ತಾರಾ ಅಂತ ಕುಹಕ ಪ್ರಶ್ನೆಗಳ್ನ ಹಾಕೋರಿಗೆ ಈ ವರದಿ ಸರಿಯಾದ ಉತ್ತರ ನೀಡತ್ತೆ ಗುರು!

ಕಳೆದ ಎರಡು ವರ್ಷದಿಂದ ಅನೇಕ ಕನ್ನಡ ಚಿತ್ರಗಳು ಯಶಸ್ಸು ಕಂಡು ಬಂಡವಾಳ ಹಾಕೋರ ಜೇಬು ತುಂಬಿಸಿ ಕನ್ನಡ ಚಿತ್ರಗಳಿಗೆ ಬೇಜಾನ್ ಮಾರುಕಟ್ಟೆ ಇದೆ ಅಂತ ಸಾಬೀತು ಮಾಡಿವೆ. ಅನೇಕ ಯುವ ನಟ-ನಟಿಯರು, ಕಲಾವಿದರು, ತಂತ್ರಜ್ಞರು ಕನ್ನಡ ಚಿತ್ರರಂಗ ಪ್ರವೇಶಿಸಿ ಹೊಸ ಹೊಸ ಪ್ರಯೋಗಗಳ ಮೂಲಕ ಮೆರಗು-ಬೆರಗು ಹುಟ್ಟಿಸಿದ್ದಾರೆ.

ಆದ್ರೆ ಕನ್ನಡ ಚಿತ್ರಗಳಿಗಿರೋ ಮಾರುಕಟ್ಟೆಯಿಂದ ಇವತ್ತಿನ ದಿನ ಎರ್ರಾಬಿರ್ರಿ ದುಡ್ಡು ಮಾಡ್ಬೋದು ಅಂತ ಅರ್ಥ ಮಾಡ್ಕೊಂಡಿರೋ ನಿರ್ದೇಶಕ, ನಿರ್ಮಾಪಕರಲ್ಲಿ ಪರಭಾಷಿಕರು ಸಕ್ಕತ್ ಜನ ಇದಾರೆ ಅನ್ನೋದು ನಮ್ಮ ಮುಟ್ಠಾಳತನದ ಗುರುತು! ನಮ್ಮ ಭಾಷೆಯ ಚಿತ್ರಗಳ್ನ ಮಾಡ್ಕೊಂಡು ನಾವೇ ದುಡ್ಡು ಮಾಡ್ಕೊಳೋ ಯೋಗ್ಯತೇನೂ ನಮಗೆ ಇಲ್ಲವಾ? ನಮ್ಮ ಕನ್ನಡದ ನಿರ್ದೇಶಕ-ನಿರ್ಮಾಪಕರು ದುಡ್ಡು ಸುರಿದು ಒಳ್ಳೊಳ್ಳೇ ಚಿತ್ರಗಳ್ನ ತೆಗೀಬೇಕು, ಕನ್ನಡದ ಮಾರುಕಟ್ಟೆಯಿಂದ ಲಾಭ ಪಡ್ಕೋಬೇಕು. ಈ ಲಾಭಾನೂ ಬೀದೀಲಿ ಹೋಗೋರೆಲ್ಲಾ ಹೊಡ್ಕೊಂಡು ಹೋಗಕ್ಕೆ ಬಿಡಬಾರದು ಗುರು! ಸೋಲಿಗೆ ಹೆದರಿ "ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ" ಆಗದು ಗೆಲುವು ಎಂದೂ ಅಂತ ನಾವು ಅರ್ಥ ಮಾಡ್ಕೋಬೇಕು.

ತಕ್ಕಳಿ ಬಂದೈತೆ ಶಂಖದಿಂದ ತೀರ್ಥ!

ಕಳೆದ ಹದಿನೈದು ದಿನಗಳಿಂದ ವಿ.ಕ.ದಲ್ಲಿ ಪ್ರತಿ ದಿನ ನಟರಾಜ್ ಅನ್ನೋರು ಕರ್ನಾಟಕದ ಇತಿಹಾಸದಲ್ಲಿ ಆಂಗ್ಲರು ಕನ್ನಡಕ್ಕೆ ಸಲ್ಲಿಸಿದ್ದ ಸೇವೆಗಳನ್ನ ಬರಹ ರೂಪದಲ್ಲಿ ಪಟ್ಟಿ ಮಾಡಿಟ್ಟಿದಾರೆ. ಅಬ್ಬಬ್ಬ! ನಿಜಕ್ಕೂ ಬ್ರಿಟಿಷರೇ ಇಷ್ಟೆಲ್ಲಾ ಕನ್ನಡ ಪರವಾಗಿ ಕೆಲ್ಸ ಮಾಡಿ, ಮಾಡಿಸಿರೋದು ಕೇಳ್ದ್ರೆ ಔರಿಗಿದ್ದ ತಿಳುವಳಿಕೆ ನಮಗೆ ಇನ್ನೂ ಇಲ್ಲವಲ್ಲಾ ಅಂತ ತಲೆ ಚೆಚ್ಕೋಬೇಕು ಅನ್ನಿಸುತ್ತೆ ಗುರು!

ನಟರಾಜ್ ಅವರ ಎಲ್ಲಾ ಬರಹಗಳಲ್ಲೂ ಎತ್ತಿ ತೋರುಸ್ತಾ ಇರೋದೇನಪ್ಪಾ ಅಂದ್ರೆ ಆಗಿನ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿಯಲ್ಲೂ "ಎಲ್ಲೇ ಆಗಲಿ, ಆಡಳಿತ ವ್ಯವಸ್ಥೆ ಸ್ಥಳೀಯ ಭಾಷೇಲೇ ಇರಬೇಕು" ಅನ್ನೋ ಸತ್ಯದ ಅರಿವಿತ್ತು ಅನ್ನೋದು. ಕ್ಲಾರ್ಕ್ ಅನ್ನೋ ಪಾಲ್ಟಿ ಇದಕ್ಕೆ ಕೊಟ್ಟಿರೋ ಸಮರ್ಥನೆ ನೋಡಿದರೆ ಇಷ್ಟು ತಿಳುವಳಿಕೆ ಇನ್ನೂ ನಮ್ಮ ಜನಕ್ಕೆ ಬಂದಿಲ್ಲವಲ್ಲಾ ಅಂತ ಬೇಜಾರಾಗತ್ತೆ ಗುರು:
"ಎಲ್ಲಾ ಅರ್ಜಿಗಳು ಇಂಗ್ಲೀಷಿನಲ್ಲಿ ಬಂದರೆ ತಾಲೂಕ್ ಹಾಗು ವಿಭಾಗೀಯ ಮಟ್ಟದಲ್ಲಿ ಅದನ್ನ ಕನ್ನಡಕ್ಕೆ ಅನುವಾದಿಸಬೇಕಾಗುತ್ತದೆ. ಕನ್ನಡವಾದರೆ ಈ ಹೊರೆ ತಪ್ಪುತ್ತದೆ."

ಆಹಾ! ನಮ್ಮ ಇಂದಿನ ಸರ್ಕಾರವೂ ಅರ್ಥ ಮಾಡಿಕೊಳ್ಳದೇ ಇರೋ ಮಾತನ್ನ ಈ ಮನುಷ್ಯ ಎಂತಹ ಸುಲಭವಾಗಿ ಹೇಳಿದಾರೆ ನೋಡು ಗುರು! ನಮ್ಮ ಜನರ, ಜನರಿಗಾಗಿ, ಮತ್ತು ಜನರಿಂದ ರಚಿಸಲಾಗಿರೋ ಸರ್ಕಾರದ ಜೊತೆ ನಾವ್ಯಾಕೆ ಇಂಗ್ಲಿಷಿನಲ್ಲಿ ವ್ಯವಹಾರ ಮಾಡಬೇಕು? ಕನ್ನಡ ತಾನೆ ಅದಕ್ಕೆ ಸರಿಯಾದ ಮಾಧ್ಯಮ? ನಮ್ಮ ಸರ್ಕಾರಿ ಕಚೇರಿಗಳ ಇಂದಿನ ಹೆಸರುಗಳ್ನ ನೋಡು ಗುರು! ಎಲ್ಲಾ ಹೆಸ್ರುಗಳು ಮತ್ತವುಗಳ ಬೋರ್ಡುಗಳು ಎಲ್ಲಾ ಆಂಗ್ಲಮಯವಾಗಿವೆ! ರಾಜ್ಯಸರ್ಕಾರದ ವಿಭಾಗಗಳು ಕನ್ನಡದಲ್ಲಿ ಸ್ವಲ್ಪಮಟ್ಟಿಗೆ ಮಾಡ್ತಿವೆ, ಆದ್ರೆ ಪೂರ್ತಿ ಕನ್ನಡದಲ್ಲೇ ಎಲ್ಲಾ ಕೆಲಸಗಳ್ನೂ ಮಾಡೋ ದಿನ ಇನ್ನೂ ಬಂದಿಲ್ಲ. ಇನ್ನು ಕೇಂದ್ರಸರ್ಕಾರಗಳಿಗೆ ಹಿಂದೀರೋಗ ಹತ್ತಿರುವಾಗ ಕನ್ನಡ ಕೇಳೋರ್ಯಾರು?

ಇದಕ್ಕೆ ಹೋಲಿಸಿ ಈ ಕ್ಲಾರ್ಕ್ ಎಂಬಾತನ ಆಡಳಿತದಲ್ಲಿ ವ್ಯತ್ಯಾಸ ನೋಡು ಗುರು: ಈತ ಕನ್ನಡೇತರ ಭಾಷೆಗಳಲ್ಲಿ ಬಂದ ಅರ್ಜಿಗಳನ್ನ ಮುಲಾಜೇ ಇಲ್ದೆ ತಿರಸ್ಕರಿಸ್ತಿದ್ನಂತೆ! ಇದು ಒಂದು ಭಾಷೆಯ ಮೇಲಿನ ಅಭಿಮಾನ ತೋರ್ಸತ್ತೆ ಅನ್ನೋದಲ್ಲ ಮುಖ್ಯವಾದ ವಿಷಯ; ಇಲ್ಲಿಯ ಆಡಳಿತವನ್ನ ನಿಜವಾಗಲೂ ಸರಿಯಾಗಿ ನಡೆಸಕ್ಕೆ ಕನ್ನಡಾನೇ ಸಾಧನ ಅಂತ ಅರ್ಥ ಮಾಡ್ಕೊಂಡಿದ್ರು ಅನ್ನೋದು. ಜಾನ್ ಮೆಕ್ರಾಲ್ ಎಂಬ ಬ್ರಿಟಿಷ್ ಅಧಿಕಾರಿ ಆಡಳಿತದಲ್ಲಿ ಸ್ಥಳೀಯ ಭಾಷೆಗಳ ಮಹತ್ವದ ಕುರಿತು ಹೀಗೆ ಹೇಳಿದ್ರಂತೆ:
"ಪ್ರಾಂತೀಯ ಭಾಷೆಯ ಪರಿಜ್ಞಾನವಿಲ್ಲದೆ ಯಾವೊಬ್ಬ ಸರ್ಕಾರಿ ನೌಕರನು ತನ್ನ ಸರ್ಕಾರಕ್ಕಾಗಲಿ, ಜನತೆಗಾಗಲಿ, ಅಷ್ಟೇಕೆ ತನ್ನ ಆತ್ಮತೃಪ್ತಿಯಾಗುವಷ್ಟರ ಮಟ್ಟಿಗಾಗಲೀ ತನ್ನ ಪಾಲಿನ ಕರ್ತವ್ಯವನ್ನ ನಿರ್ವಹಿಸಲಾರ."

ಹೊರಗಿನಿಂದ ಬಂದಿದ್ದ ಈ ಆಂಗ್ಲದೋರು ಕನ್ನಡವನ್ನ ಕೇವಲ ಕಲಿತೋರಲ್ಲ, ಅದನ್ನ ಬೆಳೆಸೋಕ್ಕೆ ಏನೆಲ್ಲಾ ಸಾಧ್ಯವೋ ಅವೆಲ್ಲಾ ಮಾಡೂ ಇದ್ರು. ಕನ್ನಡವೇ ಬಾರದ ಈ ವಿದೇಶಿಗರು ಬೇರೊಂದು ಭಾಷೆ ಕಲಿತಿದ್ದಲ್ದೆ ಪುಸ್ತಕಗಳ್ನ ಕನ್ನಡಕ್ಕೆ ಅನುವಾದ ಮಾಡಿ, ಮಾಡಿಸಿ, ಕನ್ನಡದಲ್ಲಿ ಪುಸ್ತಕಗಳೂ ಬರ್ಯೋ ಕೆಲ್ಸಮಾಡಿದಾರೆ. ಫ್ಲೀಟ್ ಎಂಬಾತ "ಕನ್ನಡ ಜಿಲ್ಲೆಯ ರಾಜಮನೆತನಗಳು" ಎಂಬ ಪುಸ್ತಕವನ್ನ ಬರ್ದಿದ್ರು ಅಂತ ತಿಳ್ಸಿದಾರೆ. ಇದೇ ಮನುಷ್ಯ ಕನ್ನಡ ನಾಡಿನಲ್ಲಿ ತಾನು ಕಳೆದ ಜೀವನದ ದಿನಗಳನ್ನ ನೆನಪಿಸಿಕೊಂಡು 1901ರಲ್ಲಿ
"ಭಾರತದ ಭಾಷೆಗಳಲ್ಲೆಲ್ಲಾ ಅತ್ಯಂತ ಮಧುರವಾದ ಭಾಷೆ ಅಂದ್ರೆ ಕನ್ನಡ, ಶ್ರೀಮಂತ ಭಾಷೆ ಅಂದ್ರೆ ಕನ್ನಡ"

ಅಂತ ಹೇಳ್ಕೊಂಡಿದಾರೆ. ಹೊರಗಿನಿಂದ ಬಂದೋರಿಗೇ ಕನ್ನಡದ ಬಗ್ಗೆ ಇಂತಹ ಅಭಿಮಾನ ಇದ್ದಾಗ ಇನ್ನು ನಮಗೆ ನಮ್ಮ ನುಡಿಯ ಬಗ್ಗೆ ಇದಕ್ಕಿಂತ್ಲೂ ಹೆಚ್ಚಿರ್ಬೇಕು ಅಲ್ವ ಗುರು?! ನಮ್ಮ ಭಾಷೆ ನಿಜವಾಗ್ಲೂ ಎಷ್ಟು ಶಕ್ತಿ ಉಳ್ಳೋ ಭಾಷೆ ಅಂತ ತಿಳ್ಕೊಳೋದು ಮುಖ್ಯ ಗುರು!

ಆಡಳಿತ ಭಾಷೆ ಕನ್ನಡವೇ ಆಗಿರ್ಬೇಕು ಅಂತ ಶಾಸನಗಳ್ನ ಹೊರ್ಡ್ಸಿರೋ ಬ್ರಿಟಿಷ್ ಅಧಿಕಾರಿಗಳೇ ಹೆಚ್ಚು! ಉದಾಹರಣೆಗೆ ರೈಸ್ ಎಂಬಾತ ತನ್ನ ಅಧಿಕಾರಾವಧಿಯಲ್ಲಿ ಶಿಕ್ಷಣ ಮತ್ತು ಆಡಳಿತಗಳು ಕನ್ನಡದಲ್ಲೇ ಇರ್ಬೇಕು ಅಂತ ಕಡ್ಡಾಯಗೊಳಿಸಿದ್ರು. ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯನಿಗೆ ದಕ್ಕಬೇಕಾದ ಮಾಹಿತಿ ಎಷ್ಟು ಮತ್ತೆ ಯಾವ ರೀತಿಯಲ್ಲಿ ದಕ್ಕಬೇಕು ಅಂತ ಇಂದಿನ RTI ಮಾದರಿಯ ಅರಿವು ಆಗ್ಲೇ ಇತ್ತು ಅಂತ ಇದ್ರಿಂದ ಗೊತ್ತಾಗತ್ತೆ ಗುರು! ಆದ್ರೆ ಇವತ್ತಿನ ದಿನ ನಮ್ಮ ಸರ್ಕಾರದೋರು RTI ಅನ್ನೋ ಹೆಸರಲಲ್ಲಿ (ಮೊದಲಾಗಿ ಅದೇ ಇಂಗ್ಲೀಷು!) ಎಲ್ಲಾ ಇಂಗ್ಲೀಷುಮಯ ಮಾಡಿ ಕೂತಿರೋದು ಎಂಥಾ ಮೂರ್ಖತನ ಗುರು!

ಕುಂಟುನೆಪಗಳ್ನ ಹೇಳ್ಕೊಂಡು ಕೆಲಸ ತಪ್ಪಿಸಿಕೊಳ್ತಾ ಜನರನ್ನ ಕಷ್ಟಕ್ಕೆ ಸಿಕ್ಕಿಸುತ್ತಾ ಇರೋ ನಮ್ಮ ಸರ್ಕಾರದೋರು, ಆಡಳಿತಗಾರರು ಈ ಬ್ರಿಟೀಷರ ಕಾಲ್ಕೆಳಗೆ ನುಸುಳಬೇಕು! ಹೋಗ್ಲಿ, ಏನೂ ಬೇಡ, ಫಾರಿನ್ನೋರು ಹೇಳಿದ್ರು ಅಂತಾನಾದ್ರೂ ಕನ್ನಡಾನ ಜಾರಿಗೆ ತರಬಾರದೆ?! ಅಥವಾ ಈಗಿನ ಫಾರಿನ್ನೋರು ಯಾರ್ನಾದ್ರೂ ಕರ್ದು ಭಾಷಣ ಬಿಗಿಸಿ ಶಂಖದಿಂದ್ಲೇ ತೀರ್ಥ ಬರ್ಸೋಣವೆ?

"ನಮಸ್ಕಾರ! ಹೇಗಿದೀರಾ?"

ಮುಂಬೈನ DNA ಅನ್ನೋ ಇಂಗ್ಲೀಷ್ ಪತ್ರಿಕೇಲಿ ಈ ಹಿಂದೆ ನಮಗೆ "ಕನ್ನಡ ಗೊತ್ತಿಲ್ಲ" ಅಂತಿದ್ದ ಬೆಂಗಳೂರಿನ ವಲಸಿಗರು ಇವತ್ತು "ನಮಸ್ಕಾರ ಹೇಗಿದೀರಾ?" ಅನ್ನುತ್ತ ಕನ್ನಡ ಕಲೀತಿದಾರೆ ಅನ್ನೋ ಸುದ್ದಿ ವರದಿ ಆಗಿದೆ.

ನಿಧಾನವಾಗಾದರೂ ಕನ್ನಡ ಕಲಿಯೋ ನಿರ್ಧಾರ ತೊಗೊಂಡು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಒಲವು ತೋರುಸ್ತಿರೋ ವಲಸಿಗರಿಗೆ ಬೆನ್ನು ತಟ್ಟಿ ಹುರಿದುಂಬಿಸಬೇಕು ಗುರು! ಆಷ್ಟೇ ಅಲ್ಲದೆ ಇವರ ಕನ್ನಡ ಕಲಿಯುವ ಉತ್ಸಾಹ, ಕನ್ನಡದ ಪ್ರಾಮುಖ್ಯದ ತಿಳುವಳಿಕೆ, ಕನ್ನಡ ತಮ್ಮ ಬದುಕಿನ ಭಾಗ ಆಗ್ಬೇಕು ಅನ್ನೋ ನಿಲುವು, ಕನ್ನಡಿಗರೊಡನೆ ಬೆರೀಬೇಕು ಅನ್ನೋ ಆಸೆ, ಕನ್ನಡ ಸಂಸ್ಕೃಯಲ್ಲಿ ಒಂದಾಗಕ್ಕೆ ಇವ್ರು ತೋರುಸ್ತಿರೋ ಹವಣಿಕೆ - ಇವೆಲ್ಲಾ ಹೊಗಳಿಕೆಗೆ ಪಾತ್ರ ಗುರು!

ಒಂದು ಪ್ರದೇಶದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ, ಅಲ್ಲಿನ ಆಡಳಿತ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸುಧಾರಣೆಗೆ ಮತ್ತು ಪೂರ್ಣ ಒಗ್ಗಟ್ಟಿಗೆ ಅಲ್ಲಿನ ಭಾಷೆ ಮತ್ತು ಸಂಸ್ಕೃತಿ ಉತ್ತಮ ವಾಹಕವಾಗಿರುತ್ತದೆ. ಹಾಗಾಗಿ ವಲಸಿಗರು ತಾವು ನೆಲಸುವ ಪ್ರದೇಶದ ಭಾಷೆ ಮತ್ತು ಸಂಸ್ಕೃತಿಗೆ ಸಹಮತ ತೋರುವುದು ಆಯಾ ಪ್ರದೇಶದ ಏಳಿಗೆಗೆ ಬಹುಮುಖ್ಯವಾಗಿ ಬೇಕಾದ ಒಗ್ಗಟ್ಟನ್ನು ಒದಗಿಸುತ್ತೆ ಗುರು. ವಲಸಿಗನಿಗೆ ಇದು ಸ್ಥಳೀಯನ ಸ್ನೇಹದ ಜತೆಗೆ, ಅಲ್ಲಿರುವ ಅವಕಾಶ, ತನ್ನನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಸಾಣೆ ಹಿಡಿಯುತ್ತದೆ. ತಾನು ಈ ಊರಿನಲ್ಲಿ ಒಬ್ಬಂಟಿಯಲ್ಲ, ಎಲ್ಲರೊಡನೆ ಒಬ್ಬ ಎಂಬ ಹೆಮ್ಮೆಯನ್ನು ಸಂಪಾದಿಸಿಕೊಡುತ್ತೆ ಗುರು. ಇದು ವಲಸಿಗನಿಗೂ ಒಳ್ಳೇದು, ನಮಗೂ ಒಳ್ಳೇದು.

ಬೆಂಗಳೂರು-ಕರ್ನಾಟಕಕ್ಕೆ ಸಂಬಂಧಪಟ್ಟ ಈ ಸುದ್ಧಿ ಮುಂಬೈನಲ್ಲಿ ವಲಸಿಗರು ಮರಾಠಿ ಕಲಿಯಕ್ಕೆ, ಹಾಗೆಯೇ ಕೋಲ್ಕೋತ್ತಾದಲ್ಲಿ ಬಂಗಾಳಿ ಕಲಿಯಕ್ಕೆ, ಪ್ರೇರಕ ಆಗಬೇಕು. ಭಾರತ ಹಲವು ಭಾಷೆ-ಹಲವು ಸಂಸ್ಕೃತಿಗಳ ರಾಜ್ಯಗಳ ಒಕ್ಕೂಟ. ಈ ಒಕ್ಕೂಟದ ಒಳಿತಿನ ದೃಷ್ಟಿಯಿಂದ, ವಲಸಿಗರು ತಾವು ವಲಸೆ ಹೋದ ಜಾಗದ ನಾಡು-ನುಡಿ-ನಡೆಗಳ್ನ ಗೌರವಿಸಿ ಅವುಗಳಲ್ಲಿ ಒಂದಾಗೋದು ಬಹಳ ಮುಖ್ಯವಾದ ಪಾತ್ರ ವಹಿಸಿದೆ ಗುರು!

ನ್ಯಾಯವಾಗಿ ಬದ್ಧತೆ ಜೊತೆ ಯೋಜನೇನೂ ಬೇಕು

ರಾಜ್ಯದ ಎಲ್ಲಾ ಕೆಳನ್ಯಾಯಾಲಯಗಳಲ್ಲಿ (ಕನ್ನಡದ ಅನುಷ್ಠಾನ "ಕೆಳಗೆ" ಆದ್ರೆ ಸಾಕು ಅನ್ನೋ ಬುದ್ಧಿಗೆ ಬಡ್ಕೋಬೇಕು!) "ಆದಷ್ಟೂ" ಕನ್ನಡದಲ್ಲೇ ಕಲಾಪ ನಡಿಸಿ ಅಂತ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದಾರೆ.

ಈ "ಆದಷ್ಟೂ" ಅನ್ನೋದರ ಅರ್ಥವಾದರೂ ಏನು? ಪೂರ್ತಿ ಮಾಡಕ್ಕೆ ಏನು ಅಡ್ಡಿಗೆ ಬಂದಿದೆ? ಈ ಪ್ರಶ್ನೇನ ತೂಗಿ ತೂಗಿ ನೋಡಿದಾಗ ಗೊತ್ತಾಗೋದು ಇಷ್ಟೇ: ಇವರಿಗೆ ಯಾರಿಗೂ ಕನ್ನಡದಲ್ಲಿ ನಿಜವಾಗಲೂ ನ್ಯಾಯಾಲಯಗಳು ಕೆಲಸ ಮಾಡಬೇಕು ಅನ್ನೋ ಗುರಿ ನೆಲೆನಿಂತಿಲ್ಲ; ಉಪಚಾರಕ್ಕೆ ತಾವೂ ಕನ್ನಡಕ್ಕಾಗಿ "ಕೈ" ಎತ್ತುತ್ತಾರೆ, ಅಷ್ಟೆ!

ಕನ್ನಡ ಬರೋ ನ್ಯಾಯಾಧೀಶರು ಕಲಾಪಗಳ್ನ ಮತ್ತು ತೀರ್ಪನ್ನ ಕನ್ನಡದಲ್ಲಿ ನೀಡಬಹುದು ಅನ್ನೋ ಈ ಸುತ್ತೋಲೆ ಯಾಕೋ ಸಿನಿಮಾಗೆ ಹೋಗೋರು ಟಿಕೆಟ್ ತೊಗೊಂಡು ಹೋಗಬಹುದು ಅಂದಂಗಾಯ್ತು! ಅಂದ್ರೆ ಇದು ಒಪ್ಪಿಗೆ ಕೊಟ್ಟಿರೋಹಂಗಿದ್ಯೇ ಹೊರ್ತು ಅಪ್ಪಣೆ ಇದ್ದಂಗಿಲ್ಲ!

ಜನಕ್ಕಾಗಿ ವ್ಯವಸ್ಥೆಯಿರಬೇಕು, ವ್ಯವಸ್ಥೆಗಾಗಿ ಜನ ಅಲ್ಲ!


ಕನ್ನಡ ನಾಡಲ್ಲಿ ತಲತಲಾಂತರದಿಂದ್ಲೂ ನ್ಯಾಯ ಮತ್ತು ತೀರ್ಪುಗಳು ಇಂಗ್ಲಿಷ್ ಭಾಷೇಲೇ ಇರ್ತಿದ್ವಾ? ನಮ್ಮ ನ್ಯಾಯಾಲಯಗಳಲ್ಲಿ ನಮ್ಮದಲ್ಲದ ಭಾಷೇಲಿ ಕಲಾಪ ಮಾಡ್ತೀವಿ, ತೀರ್ಪು ನೀಡ್ತೀವಿ ಅನ್ನೋದು, ರಾಜ್ಯ ಉಚ್ಛನ್ಯಾಯಾಲಯದ ಕಲಾಪ ಇಂಗ್ಲಿಷ್ ಭಾಷೇಲೇ ಇರೋದು ಸರಿ ಅಂದುಕೊಳ್ಳೋದು - ಇವೆಲ್ಲಾ ಜನರಿಂದ ನ್ಯಾಯಾನ ಮತ್ತು ನ್ಯಾಯಾಲಯಾನ ದೂರ ಮಾಡಿದಹಾಗಾಗಲ್ವಾ ಗುರು? ನ್ಯಾಯಾಲಯಗಳು ಜನರಿಗೆ ಅರ್ಥವಾಗೋ ಭಾಷೇಲೇ ಕಲಾಪ ನಡೆಸಬೇಕು, ತೀರ್ಪುಗಳ್ನ ಕೊಡಬೇಕು ಅಂತ ಹೊಸದಾಗಿ ಬುದ್ಧಿವಂತರಿಗೆ ಹೇಳಬೇಕಾಗಿಲ್ಲ.

ಜನರಿಗಾಗಿ ವ್ಯವಸ್ಥೆಗಳು ಇರಬೇಕೇ ಹೊರತು ಇರೋ ವ್ಯವಸ್ಥೆಗಳಿಗಾಗಿ ಜನರಲ್ಲ ಅನ್ನೋದನ್ನ ಮರೀಬಾರದು. ಒಟ್ನಲ್ಲಿ ಈಗಿರೋ ವ್ಯವಸ್ಥೆಯಲ್ಲಿ ಮಾಡಬೇಕಾಗಿರೋದನ್ನ ಮಾಡಕ್ಕಾಗ್ತಿಲ್ಲ ಅನ್ನೋದಕ್ಕಿಂತ ಮಾಡಬೇಕಾಗಿರೋದನ್ನ ಮಾಡಕ್ಕೆ ಎಂಥಾ ವ್ಯವಸ್ಥೆ ಕಟ್ಟಬೇಕು ಅನ್ನೋ ಪ್ರಶ್ನೆ ನಮ್ಮ ಜನಕ್ಕೆ ಯಾವಾಗ ಬರತ್ತೋ! ಮುಟ್ಟಬೇಕಾದ ಗುರಿಗೆ ಬದ್ಧತೆ ಇದ್ದಿದ್ದರೆ ಈ ಕುಂಟುನೆಪಗಳ್ನೆಲ್ಲ ಕೊಡ್ತಿರ್ಲಿಲ್ಲ ಗುರು!

ಆಶಯ-ಬದ್ಧತೆಗಳು ಇದ್ದರೆ ಸಾಲದು, ಯೋಜನೆ ಇರಬೇಕು!

ನ್ಯಾಯಾಲಯಗಳಲ್ಲಿ ಕನ್ನಡದ ಅನುಷ್ಠಾನ ಮಾಡೋದು ನಿಜವಾಗಲೂ ನ್ಯಾಯಾಂಗದ ಆಶಯವೇ ಆಗಿದ್ದರೆ ಅದನ್ನ ಆಗುಮಾಡಿಸೋಕೆ ಹಾಕಿಕೊಂಡಿರೋ ಯೋಜನೆ ಎಲ್ಲಿ? ಆ ಗುರಿ ಮುಟ್ಟೋ ದಾರೀಲಿ ದಾಟಬೇಕಾದ ಮೈಲಿಗಲ್ಲುಗಳು, ಯಾವಾಗ ಯಾವ ಮೈಲಿಗಲ್ಲು ದಾಟಬೇಕು ಅನ್ನೋ ಮಾಹಿತಿಯನ್ನ ಇವರು ಬೆಳಕಿಗೆ ತರಬೇಕು. ಯೋಜನೆ ಇಲ್ಲದೆ ಅದೆಷ್ಟು ಸುತ್ತೋಲೆಗಳ್ನ ಹೊರಡ್ಸುದ್ರೂ ಅದು ಬರೀ ಕಾಟಾಚಾರ ಆಗ್ಬುಡುತ್ತೆ ಗುರು. ಇನ್ನು ನೂರು ವರ್ಷ ಆದ್ರೂ "ಆ ಕೊರತೆ ಇದೆ, ಈ ಕೊರತೆ ಇದೆ, ಅದಿಲ್ಲ, ಇದಿಲ್ಲ, ಮಣ್ಣಿಲ್ಲ ಮಸಿಯಿಲ್ಲ" ಅನ್ನುತ್ಲೇ ಇರ್ಬೇಕಾಗುತ್ತೆ ಅಷ್ಟೆ. ಒಟ್ನಲ್ಲಿ ಆಶಯ ನಿಜವಾಗಿರಬೇಕಾಗಿರೋದು ಒಂದಾದರೆ ಆಶಯದ ಜೊತೆ ಯೋಜನೇನೂ ಇರಬೇಕಾಗಿರೋದು ಇನ್ನೊಂದು. ಯೋಜನೆ ಎಲ್ಲಿ ಸ್ವಾಮಿ ಅಂತ ಕೇಳ್ಮ?

ಬೆಂಗ್ಳೂರಿನ ಗುಟ್ಟು ಬಾನುಲಿಯಲಿ ರಟ್ಟು

ಇತ್ತೀಚಿನ ಬಾನುಲಿ ಕೇಳುಗರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಮೂಂಚೂಣಿಯಲ್ಲಿರೋ ಎಫ್ ಎಂ ವಾಹಿನಿಗಳ ಪಟ್ಟಿ ಬಿಡುಗಡೆ ಆಗಿದೆ. ಹೆಚ್ಚಾಗಿ ಕನ್ನಡದಲ್ಲೇ ಪ್ರಸಾರ ಮಾಡೋ ಬಿಗ್ ಎಫ್.ಎಂ., ರೇಡಿಯೋ ಮಿರ್ಚಿ, ಎಸ್ ಎಫ್.ಎಂ. ಮತ್ತು ರೇಡಿಯೋ ಒನ್ - ಇವುಗಳು ಈ ಪಟ್ಟೀಲಿ ಪ್ರಮುಖ ಸ್ಥಾನದಲ್ಲಿದ್ದು ಬೆಂಗಳೂರಲ್ಲಿ ಕನ್ನಡಿಗ ಕೇಳುಗರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಅನ್ನೋದು ಇದರಿಂದ ಸ್ಪಷ್ಟವಾಗಿ ಹೊರಗೆ ಬಂದಿದೆ. ಬೆಂಗ್ಳೂರಲ್ಲಿ ಕನ್ನಡಿಗರು ಇಲ್ಲವೇ ಇಲ್ಲ, ಇರೋರೂ ಕನ್ನಡದ ಹಾಡು ಕೇಳಲ್ಲ ಅಂತ ಅನ್ಕೊಂಡಿರೋರ ಮುಖಕ್ಕೆ ಈ ಪಟ್ಟಿ ಮಂಗಳಾರತಿ ಎತ್ತಿದೆ ಗುರು!

ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಮನೆ ಮಾತಾಗಿರುವ ಆಕಾಶವಾಣಿ ಕೇಳುಗರ್ನ ಗಣನೆಗೆ ತೊಗೊಂಡಿಲ್ಲ ಅನ್ನೋದನ್ನ ಮರೀಬೇಡಿ! ಇವರನ್ನೂ ಸೇರಿಸಿಕೊಂಡರೆ ಶೇಕಡ 90ಕ್ಕೂ ಹೆಚ್ಚು ಬಾನುಲಿ ಕಾರ್ಯಕ್ರಮ ಕೇಳುಗರು ಕನ್ನಡ ಪ್ರಸಾರ ಮಾಡುವ ಬಾನುಲಿ ವಾಹಿನಿಗಳ ಜೊತೆಗೇ ಇರೋದು ಅನ್ನೋ ಅಂಕಿ-ಅಂಶ ಹೊರಗೆ ಬರತ್ತೆ.

ಈ ವಿವರಗಳು ಸಾರಿ ಸಾರಿ ಹೇಳ್ತಿರೋದು ಬೆಂಗಳೂರಲ್ಲಿ ಇರೋ ಮಾರುಕಟ್ಟೆ ಕನ್ನಡದ್ದು ಅನ್ನೋದನ್ನೇ. ಹಿಂದಿ ಹಾಡುಗಳ್ನ ಪ್ರಾಸಾರ ಮಾಡ್ಕೊಂಡು ಶುರುವಾಗಿದ್ದ ರೇಡಿಯೋ ಮಿರ್ಚಿಗೆ ರಂಗು ಬಂದಿದ್ದು ಔರು ಕನ್ನಡದ ಮಾರುಕಟ್ಟೇನ ಅರ್ಥ ಮಾಡ್ಕೊಂಡ ಮೇಲೆ ಮಾತ್ರ ಅಂತ ಈಗಾಗ್ಲೇ ತೋರಿಸಿಕೊಟ್ಟಾಗಿದೆ.

ಇನ್ನು ಕನ್ನಡ ಕಡೆಗಣಿಸಿರೋ ’ರೇಡಿಯೋ ಸಿಟಿ’ ನ ಇಡೀ ಸಿಟೀನೇ ಕಡೆಗಣಿಸಿದೆ ಅನ್ನೋದೂ ಇದೇ ಸಮೀಕ್ಷೆಯಿಂದ ಹೊರಕ್ಕೆ ಬಂದಿದೆ. ಹಿಂದಿಜ್ವರ ಹತ್ತಿರೋ ಫೀವರ್ ಎಫ್. ಎಂ. ಗಂತೂ ಆ ಜ್ವರದಿಂದ ಲಕ್ವಾ ಹೊಡೆಯೋ ಮುಂಚೆ ಕನ್ನಡದ ಮಾತ್ರೆ ತೊಗೊಂಡು ಚೇತರಿಸಿಕೊಳ್ಳಬೇಕು ಅನ್ನೋ ಉಪದೇಶಾನ ಈ ಸಮೀಕ್ಷೆ ಬಿಟ್ಟಿಯಾಗಿ ಕೊಟ್ಟಿದೆ! ಬುದ್ಧಿವಂತ್ರು ಅರ್ಥ ಮಾಡ್ಕೋಬೇಕು, ಅಷ್ಟೆ.

ವಾಹಿನಿಗಳಲ್ಲಿ ಹಿಂದೀಲಿ, ಇಂಗ್ಲೀಷಲ್ಲಿ ಜಾಹೀರಾತು ಕೊಟ್ಟಿರೋನಿಗೆ ಯಾಕೆ ನಾನಿನ್ನೂ ಬೆಂಗಳೂರಲ್ಲಿ ಹೆಚ್ಚು ವ್ಯಾಪಾರ ಮಾಡಕ್ಕಾಗಿಲ್ಲ ಅಂತ ನಿದ್ದೆ ಬರದೇ ಇರಬಹುದು. ಅವನಿಗೂ ಈ ಸಮೀಕ್ಷೆಯಲ್ಲೇ ಪಾಠ ಇದೆ. ಬುದ್ದಿವಂತನಾದೋನು ಆ ಪಾಠ ಕಲ್ತು, ಕನ್ನಡದಲ್ಲೇ ಜಾಹೀರಾತುಗಳ್ನ ಮಾಡಿ ತನ್ನ ವ್ಯಾಪಾರ ಹೆಚ್ಚುಸ್ಕೋತಾನೆ. ಈ ಬುದ್ಧಿವಂತಿಕೆ ತೋರಿಸೋರೂ ಸಕ್ಕತ್ ಜನ ಇದಾರೆ, ಇಲ್ಲದೆಯೇನಿಲ್ಲ. ಔರು ಮಾರುಕಟ್ಟೇಲಿ ಹೆಚ್ಚುಹೆಚ್ಚು ಜನರನ್ನ ಮುಟ್ತಾರೆ, ಪೆದ್ದರು ಸೋಲ್ತಾರೆ, ಅಷ್ಟೆ.

ಇದೆಲ್ಲಾ ಓದುದ್ರೆ ಬೆಂಗ್ಳೂರಲ್ಲಿ ಮತ್ತೊಮ್ಮೆ ಕನ್ನಡಿಗರ ಸಂಖ್ಯೆ ಹೆಚ್ತಾ ಇದೆ ಅಂತ ಯಾರಿಗಾದರೂ ಅನ್ನಿಸಬಹುದು. ಆದ್ರೆ ನಿಜಾಂಶ ಏನಪ್ಪಾ ಅಂದ್ರೆ - ಆ ಪ್ರಾಬಲ್ಯ ಹೋಗೇ ಇರಲಿಲ್ಲ. ಹೋದಂಗೆ ಮಾಧ್ಯಮಗಳು ಮಾಡಿದ್ವು, ಅಷ್ಟೆ.

ರಿಮೋಟುಗಳು ಕುಣಿಸಿದಂತೆ ಕುಣಿಯುವ ಒಕ್ಕೂಟ ವ್ಯವಸ್ಥೆಗಳು

ಮೊನ್ನೆ ಮೊನ್ನೆ ದಿಲ್ಲೀಲಿ ನಾಲ್ಕನೇ ಒಕ್ಕೂಟ ವ್ಯವಸ್ಥೆಗಳ ಅಂತರರಾಷ್ಟ್ರೀಯ ಸಮ್ಮೇಳನ (International conference on Federalism) ನಡೀತು. ಇದರ ಉದ್ಘಾಟನಾ ಭಾಷಣದಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಕ್ಕೂಟ ವ್ಯವಸ್ಥೆಗಳು, ಅವುಗಳಿಂದ ಆಗುತ್ತಿರುವ ಒಳಿತು, ಅವುಗಳು ಎದುರಿಸ್ತಾ ಇರೋ ಸವಾಲುಗಳು - ಇವುಗಳ ಬಗ್ಗೆ ಸಾಕಷ್ಟು ಚಿಂತನೆಗಳ್ನ ಮುಂದಿಟ್ರು. ಇವುಗಳಿಗೆ ಸೂಕ್ತವಾಗಿ ಭಾರತದ ಉದಾಹರಣೆಗಳ್ನೂ ಕೊಟ್ಟು ಮಾತಾಡಿದ ಸಿಂಗ್ ಹೇಳಿದಂಗೆ ಒಕ್ಕೂಟ ವ್ಯವಸ್ಥೆಗಳ ರಚನೆ, ಕೇಂದ್ರ ಮತ್ತು ರಾಜ್ಯಗಳ ನಡುವಣ ಜವಾಬ್ದಾರಿಗಳ ಹಂಚಿಕೆ ವಿಷಯದಲ್ಲಿ ಆಗಾಗ ಬದಲಾವಣೆಗಳು ಆಗಬೇಕಾಗಿರೋದೇನೋ ಸರೀನೇ; ಆದ್ರೆ ಈಗಿರೋ ಭಾರತೀಯ ಒಕ್ಕೂಟದಲ್ಲೇ ಕೇಂದ್ರ ತನ್ನ ಕೆಲಸ ಸರಿಯಾಗಿ ನಿಭಾಯಿಸ್ತಾ ಇದ್ಯಾ ಗುರು?

ಉದಾಹರಣೆಗೆ ಕೇಂದ್ರದ ರಿಮೋಟು ಇಟ್ಟುಕೊಂಡಿರೋದ್ರಿಂದ ತಮಿಳ್ನಾಡು ತಮಿಳಿಗೆ ಹೇಗೆ ಶಾಸ್ತ್ರೀಯ ಭಾಷೆ ಸ್ಥಾನ ಗಿಟ್ಟಿಸಿಕೊಳ್ತು, ರಿಮೋಟಿಲ್ಲದ ಕರ್ನಾಟಕಕ್ಕೆ ಹೇಗೆ ಗಿಟ್ಟಿಸಿಕೊಳ್ಳಕ್ಕಾಗಿಲ್ಲ ಅನ್ನೋದನ್ನೇ ತೊಗೊಳ್ಳಿ. ತಮಿಳ್ನಾಡು ತೋರಿಸುತ್ತಾ ಇರೋ "ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ("narrow political considerations") ಗೆ ತಲೆಬಾಗಿಸಿ, ಎಲ್ಲಿ ಸರ್ಕಾರ ಬಿದ್ದುಹೋಗತ್ತೋ ಅಂತ ಕೇಂದ್ರ ತಮಿಳ್ನಾಡಿಗೆ ಯಾವಾಗಲೂ ಮಣೆಹಾಕಿ, ಕರ್ನಾಟಕಕ್ಕೆ ಯಾವಾಗಲೂ ಸೋಲಾಗೋಹಂಗೇ ಮಾಡ್ತಾ ಇರೋದು ವ್ಯವಸ್ಥೆಯಲ್ಲಿರೋ ಕೊರತೆಗಳ್ನ ಮಾತ್ರ ಅಲ್ಲ, ಅದನ್ನ ನಡೆಸುತ್ತಾ ಇರೋ ರಾಜಕಾರಣಿಗಳ ಮುತ್ಸದ್ದಿತನದ ಕೊರತೇನೂ ತೋರಿಸುತ್ತೆ, ನಿಜವಾದ ನ್ಯಾಯದ ಬದಲಾಗಿ ತಂತಮ್ಮ ಕುರ್ಚಿಗಳಿಗೆ ಬದ್ಧವಾಗಿರೋದನ್ನೂ ತೋರಿಸುತ್ತೆ.

ಸಿಂಗ್ ಅವರ ಸರ್ಕಾರಕ್ಕೆ ನಿಜಕ್ಕೂ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಅದು ತಮಿಳ್ನಾಡಿನ ಒತ್ತಡಕ್ಕೆ ಹೆಜ್ಜೆಹೆಜ್ಜೆಗೂ ಮಣೀತಿರ್ಲಿಲ್ಲ. ಹಾಗೇ ತಮಿಳ್ನಾಡಿಗೂ ಕೇಂದ್ರದಲ್ಲಿ ರಿಮೋಟಿಂದ ತನ್ನ ಬೇಳೆ ಬೇಯಲ್ಲ ಅನ್ನೋ ಸಂದೇಶಾನೂ ಹೋಗ್ತಿತ್ತು. ಆದ್ರೆ ಸಿಂಗ್ ಅವರ ಸರ್ಕಾರಕ್ಕೆ ತಾನು ಬೀಳದೆ ಮುಂದುವರಿಯೋದೇ ಆದ್ಯತೆಯಾಗಿತ್ತಲ್ಲ? ಒಟ್ಟಿನಲ್ಲಿ ತಮಿಳ್ನಾಡು ಮತ್ತು ಕೇಂದ್ರ - ಇವರಿಬ್ಬರ "ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ("narrow political considerations") ಗಳಿಂದ ಕರ್ನಾಟಕ ಬಡವಾಯ್ತು, ಅಷ್ಟೆ! ಏನ್ ಗುರು?

ಕಲಿಕೆ ರಾಜ್ಯದ ಪಟ್ಟೀಲೇ ಇರಬೇಕು

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯೋರು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಯೊಂದರ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಗಳು ಬರ್ತಾ ಇವೆ. ಏನಪ್ಪಾ ಈ ಮನವಿ ಅಂದ್ರೆ - 1976ರಲ್ಲಿ ಶಿಕ್ಷಣವನ್ನ ರಾಜ್ಯದ-ಪಟ್ಟಿ (state-list) ಇಂದ ಕಿತ್ತಿ ಜಂಟಿ ಪಟ್ಟಿಯೊಳ್ಗೆ (concurrent-listಗೆ) ಸೇರ್ಸಿದ್ದು ಸರಿಯಲ್ಲ, ವಾಪಸ್ ರಾಜ್ಯದ ಪಟ್ಟಿಗೆ ಸೇರಿಸ್ಬೇಕು ಅನ್ನೋದು. ಇದಾದರೆ ಭಾರತದ ಎಲ್ಲಾ ಭಾಷಾವಾರು ರಾಜ್ಯಗಳಿಗೂ ಸಕ್ಕತ್ ಒಳ್ಳೇದು ಗುರು.

ಭಾಷಾವಾರು ರಾಜ್ಯಗಳ ಒಕ್ಕೂಟವಾಗಿರೋ ನೂರು ಕೋಟಿ ಜನರ ಭಾರತದಲ್ಲಿ ದೇಶದ ಎಲ್ಲಾ ಮೂಲೆಗಳಿಗೂ ಶಿಕ್ಷಣ ಸಮರ್ಪಕವಾಗಿ ತಲುಪಿಸೋ ಕೆಲಸಾನ ದಿಲ್ಲೀಲಿ ಕೂತ್ಕೊಂಡಿರೋ ಕೇಂದ್ರ ಸರ್ಕಾರ ಹೇಗೆ ಮಾಡೀತು?! ಕೇಂದ್ರ ಸರ್ಕಾರ ಕೂಡಲೆ ಈ ಮನವಿಗೆ ಗೌರವ ಕೊಟ್ಟು ಶಿಕ್ಷಣವನ್ನ ರಾಜ್ಯ ಪಟ್ಟಿಗೆ ಹಿಂತಿರುಗಿಸ್ಬೇಕು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗ ಶಿಕ್ಷಣ ರಾಜ್ಯ ಸರ್ಕಾರಗಳ ಹೊಣೆ-ಪಟ್ಟಿಯಲ್ಲಿತ್ತು. ಅದೇ ಸರಿ ಗುರು! ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಜಂಟಿ ಪಟ್ಟಿಯಲ್ಲಿರೋದು ಪ್ರತಿಯೊಂದು ರಾಜ್ಯದಲ್ಲೂ ಶಿಕ್ಷಣ ಪ್ರಭಾವಶಾಲಿಯಾಗಿಲ್ಲದೇ ಇರೋದಕ್ಕೆ ಒಂದು ಮುಖ್ಯವಾದ ಕಾರಣ. ಹೇಗೆ ಅಂತ ನೋಡ್ಮ.

ಕಲಿಕೆಯ "ಏನು" ಮತ್ತು "ಹೇಗೆ" ಗಳ ನಿರ್ಧಾರ ಸ್ಥಳೀಯವಾಗಿ ಆಗಬೇಕು

ಪ್ರತಿಯೊಂದು ಜನಾಂಗಾನೂ ಶಿಕ್ಷಣದ ಮೂಲಕ ಏನು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಅನ್ನೋದರ ನಿರ್ಧಾರ ಸ್ಥಳೀಯವಾಗೇ ಆಗಬೇಕು ಗುರು. ಉದಾಹರಣೆಗೆ ನಮ್ಮ ಇತಿಹಾಸದಲ್ಲಿ ಏನೇನಾಗಿತ್ತು, ಅದ್ರಿಂದ ನಾವು ಏನು ಕಲೀಬಹುದು, ನಮ್ಮ ನುಡಿಯ ಒಳಗುಟ್ಟುಗಳು ಮತ್ತು ವ್ಯಾಕರಣ, ನಮ್ಮ ರಾಜ್ಯದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು, ನಮ್ಮ ಹಿಂದೆ ಈ ನೆಲವನ್ನು ತುಳಿದ ದಿಗ್ಗಜರು, ನಮ್ಮಲ್ಲಿ ಹಿಂದೆ ಇದ್ದ ಜ್ಞಾನ-ವಿಜ್ಞಾನಗಳು, ನಮ್ಮ ಹಿಂದಿನೋರು ನಮಗೆ ಬಿಟ್ಟುಹೋದ ಜ್ಞಾನದ ಬಳುವಳಿಗಳು - ಇದನ್ನೆಲ್ಲಾ ಸರಿಯಾಗಿ ಒಬ್ಬ ಕನ್ನಡಿಗ ಅಲ್ಲದೆ ದಿಲ್ಲಿ ಇಂದ ಬಂದೋನು ಹೇಗೆ ಮಾಡಾನು? ಔನಿಗೇನು ಗೊತ್ತಿರತ್ತೆ ಮಣ್ಣು ಇಲ್ಲೀ ಬಗ್ಗೆ? ಒಟ್ಟಿನಲ್ಲಿ ನಮ್ಮ ಕಲಿಕೆಯ ವಸ್ತು ನಿರ್ಧಾರ ಮಾಡೊಕ್ಕೆ ನಾವೇ ಸರಿಯಾದೋರು ಹೊರತು ನಾವ್ಯಾರು ಅಂತ ಸರಿಯಾಗಿ ಗೊತ್ತೇ ಇಲ್ಲದೋರಲ್ಲ.

ಇನ್ನು ಕಲಿಕೆ ಹೇಗೆ ಕೊಡಬೇಕು ಅಂತ ನಿರ್ಧರಿಸೋದಕ್ಕೂ ರಾಜ್ಯವೇ ಸರಿ. ಈ ಕಲಿಕೆಯ ವಿಧಾನ ಅಂದಾಗ ಎರಡು ಮುಖ್ಯವಾದ ಅಂಶಗಳು ಮನಸ್ಸಿಗೆ ಬರತ್ವೆ:
  • ಯಾವ್ದೇ ಒಂದು ವಿಷ್ಯಾನ ಮನುಷ್ಯ ಸರಿಯಾಗಿ ಅರ್ಥ ಮಾಡ್ಕೊಳೋದು ಅವನ ಹತ್ತಿರದ ವಸ್ತುಗಳೊಡನೆ ಅದರ ಸಂಬಂಧ ಕಂಡಾಗ್ಲೇ ಗುರು! ಉದಾಹರ್ಣೆಗೆ ನಮ್ಮ ಒಂದು ಮಗುವಿಗೆ ಗಣಿತದಲ್ಲಿ ಏಣಿಸೋದು ಕಲಿಸುವಾಗ ಐದು ಲಾಡು ಮತ್ತೆ ತಂದು ಮುಂದೆ ಇಡಬೇಕೇ ಹೊರತು ಐದು ಆಗ್ರಾ-ಪೇಟ ಅಲ್ಲ! ದೂರದೋರು ಇದನ್ನೆಲ್ಲ ನಿರ್ಧಾರ ಮಾಡೋದ್ರಿಂದ ಒಂದು ಗಂಡಾಂತರವೇನಪ್ಪಾ ಅಂದ್ರೆ ನಿಧಾನವಾಗಿ ನಮ್ಮ ನಿಜವಾದ ಪರಿಸರವೇ ಮರ್ಥೋಗತ್ತೆ! ಇದೇ ಮುಂದುವರೆದರೆ ಹತ್ತಿರದ್ದೆಲ್ಲ ಹುಳುಕು, ಹತ್ತಿರದ್ದೆಲ್ಲ ಕೊಳಕು ಅನ್ನಿಸಕ್ಕೆ ಶುರುವಾಗತ್ತೆ. ಇದರಿಂದ ಕನ್ನಡಿಗ (ಹಾಗೇ ತಮಿಳ, ಹಾಗೇ ತೆಲುಗ...) ನಶಿಸಿಹೋಗ್ತಾನೆ ಗುರು!
  • ಇನ್ನು ಕಲಿಕೆಯಲ್ಲಿ ಭಾಷೆಯ ಪಾತ್ರಾನಂತೂ ಹೊಸದಾಗಿ ಹೇಳಬೇಕಾಗೇ ಇಲ್ಲ. ಕಲಿಕೆ ಪ್ರಭಾವಶಾಲಿಯಾಗಕ್ಕೆ ಅದು ನಮ್ಮ ಭಾಷೆಯಲ್ಲಿರ್ಬೇಕು. ಇದನ್ನ ನಾವಲ್ಲದೆ ಕೇಂದ್ರದೋರು ಏನು ಮಾಡಾರು ಗುರು?
ಮುಂದೆ ಏನು?

ಕೇಂದ್ರ ಸರ್ಕಾರ ಈ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಕೂಡಲೆ ಶಿಕ್ಷಣವನ್ನ ರಾಜ್ಯದ ಪಟ್ಟಿಗೆ ಸೇರಿಸಬೇಕು. ಇದರ ಜೊತೆ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯದ ಸರ್ಕಾರಗಳೂ ಕೇಂದ್ರದ ಮೇಲೆ ಒತ್ತಡ ತಂದು ತಂತಮ್ಮ ನಾಡಿಗರಿಗೆ (ನಾಡಿಗ = ನಾಡಿನಲ್ಲಿ ವಾಸಿಸುವವ) ಒಳ್ಳೇ ಶಿಕ್ಷಣ ಕೊಟ್ಟು ಅವರ ಏಳ್ಗೆಗೆ ಕಾರಣವಾಗ್ಬೇಕು. ಶಿಕ್ಷಣದ ವಿಚಾರದಲ್ಲಿ ಇದು ಎಂತಹ ಮುಖ್ಯ ಅಂಶ ಅಂತ ಅರ್ಥ ಮಾಡ್ಕೊಂಡು ನಾವು ನೀವೂ ಸರ್ಕಾರಗಳ ಮೇಲೆ ಒತ್ತಾಯ ಹಾಕ್ಬೇಕು. ಏನ್ ಗುರು?

ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು

ಮೈಸೂರಲ್ಲಿ ರಾಜೀವ ಸರಳಾಕ್ಷ ಅನ್ನೋರು ಒಲ್ಲದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಜೊತೆಗೆ ಏಗಿ ಏಗಿ ಕೊನೆಗೂ ಕನ್ನಡದಲ್ಲಿ ಎಂ.ಬಿ.ಎ. ಪರೀಕ್ಷೆ ತೊಗೊಂಡು ಪಾಸಾಗಿದಾರೆ ಅಂತ ಪ್ರಜಾವಾಣಿ ಕೆಲವು ದಿನದ ಹಿಂದೆ ವರದಿ ಮಾಡಿತ್ತು. ರಾಜೀವ ಇವತ್ತು ಒಬ್ಬ ವಿಚಿತ್ರ ಮನುಷ್ಯ ಅಂತ ಅನ್ನಿಸೋ ವ್ಯವಸ್ಥೆ ಸರಿಯಲ್ಲ ಗುರು! ನಮ್ಮ ಜನರಿಗಾಗೇ ಇರಬೇಕಾದ ನಮ್ಮ ವಿ.ವಿ.ಗಳು ನಮ್ಮದಲ್ಲದ ಒಂದು ಭಾಷೇಲಿ ಇಂಥಾ ಪದವಿಗಳ್ನ ಪಡ್ಕೋಬೇಕು ಅನ್ನೋ ಪೆದ್ದತನ ನಿಧಾನವಾಗಾದರೂ ನಿಲ್ಲಬೇಕು. ನಿಜವಾದ ಕಲಿಕೆಗೂ ನಮಗೂ ನಡುವೆ ಬೇರೆ ಒಂದು ಭಾಷೆ ಅಡ್ಡಗೋಡೆಯಾಗಿ ನಿಂತಿರೋದು ಸರೀನಾ ಅಂತ ಪ್ರಶ್ನೆ ಮಾಡೋಷ್ಟು ಸ್ವಂತ ಚಿಂತನೇನಾದ್ರೂ ನಮಗೆ ಬರಬೇಕು ಗುರು!

ಇವತ್ತಿನ ದಿನ ಕನ್ನಡದಲ್ಲಿ ಉನ್ನತ ಶಿಕ್ಷಣ ಇಲ್ಲ ಅನ್ನೋದೇನೋ ನಿಜ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕಲಿಕೆಯಾಗಲಿ ಮ್ಯಾನೇಜ್ಮೆಂಟಿನ ಕಲಿಕೆಯಾಗಲಿ ಇಲ್ಲ ಅನ್ನೋದು ನಿಜ. ಆದ್ರೆ ಇದೇ ವ್ಯವಸ್ಥೆ ಇನ್ನೆಂದೆಂದಿಗೂ ಇರಲಿ ಅಂತ ಒಂದು ರೀತಿ ಸೋಲೊಪ್ಪಿಕೊಂಡಿವೆಯಲ್ಲ ನಮ್ಮ ವಿ.ವಿ.ಗಳು, ಇದೆಷ್ಟು ಸರಿ? ನಮ್ಮ ವಿ.ವಿ.ಗಳ್ನ ನಾವು ಹುಟ್ಟಿಹಾಕಿಕೊಂಡಿರೋದು ನಿಜಕ್ಕೂ ನಮ್ಮ ಲಾಭಕ್ಕೇ ಅನ್ನೋದಾದರೆ ನಮ್ಮ ಜನರ ಭಾಷೆಯಲ್ಲೇ ಕಲಿಕೆಯ ಏರ್ಪಾಡು ಮಾಡೋದು ಇವರ ಗುರಿಯಾಗಬೇಡ್ವಾ ಗುರು?

ನಮ್ಮ ಎಷ್ಟು ವಿ.ವಿ.ಗಳಲ್ಲಿ ಇವತ್ತು ಬೇಡ, ಇನ್ನು ಐವತ್ತು ವರ್ಷದಲ್ಲಾದರೂ ಕನ್ನಡದಲ್ಲಿ ಉನ್ನತಶಿಕ್ಷಣ ಸಿಗೋಹಾಗೆ ಮಾಡಕ್ಕೆ ಯಾವ ಯೋಜನೆಗಳ್ನ ಹಾಕಿಕೊಂಡಿದಾರೆ? ನಿಧಾನವಾಗಿ - ಅಂದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆಯಿಂದ ಏನು ಪಡ್ಕೋಬೇಕೋ ಅದನ್ನೂ ಕೈಬಿಡದೆ - ಕಲಿಕೆಯ ಸೌಲಭ್ಯವನ್ನ ಕರ್ನಟಕದ ಮುಲೆಮೂಲೆಗಳಲ್ಲಿ ಅಡಗಿರೋ ಪ್ರತಿಭೆಗಳಿಗೆಲ್ಲಾ ಮುಟ್ಟಿಸೋ ಕೆಲಸಕ್ಕೆ ಧೈರ್ಯದಿಂದ ಕೈ ಹಾಕಬೇಕು. ಕನಸೇ ಕಾಣದೆ ಹೋದರೆ ನನಸಾಗೋದು ಹೇಗೆ ಗುರು?

ದೀಪಿಕಾ ಕಳೆದುಕೊಂಡ ಐಶ್ವರ್ಯ!

ದೀಪಿಕಾ ಪಡುಕೋಣೆ ತನ್ನ ಮೊದಲ ಚಿತ್ರ ಇತ್ತೀಚೆಗೆ ಬಂದ ಯಾವುದೋ ಹಿಂದಿ ಚಿತ್ರ ಅಂತ ಸುಳ್ಳು ಹೇಳಿಕೊಂಡು ತಿರುಗ್ತಿದಾಳೆ ಅಂತ ಎಲ್ಲೆಲ್ಲೂ ಸುದ್ದಿ. ಅಲ್ಲ - ಇದೆಂಥಾ ರೋಗ? ಉಪ್ಪಿ ಜೊತೆಗೆ "ಐಶ್ವರ್ಯ" ಅನ್ನೋ ಕನ್ನಡ ಚಿತ್ರದಿಂದ ತೆರೆಗೆ ಬಂದೋಳಿಗೆ ತನ್ನ ಅಭಿನಯದ ಮೊದಲ ಚಿತ್ರ ಕನ್ನಡದ್ದು ಅಂತ ಹೇಳೋಕ್ಕೆ ಕೀಳರಿಮೆ ಯಾಕಿರಬೇಕು? ತಾನು ಮೇಲೆ ಹತ್ತಕ್ಕೆ ನೆರೆವಾದ ಕನ್ನಡದ ಏಣಿಗೆ ಗೌರವದಿಂದ ನಮಸ್ಕರಿಸೋ ಬದಲು ಕಾಲಿನಿಂದ ದಬ್ಬಿದಾಳಲ್ಲ ಗುರು?

ತಾನು ಯಾರು, ತನ್ನ ನಾಡು ಯಾವುದು, ತನ್ನ ನುಡಿ ಯಾವುದು ಅನ್ನೋದರ ಬಗ್ಗೇನೇ ಕೀಳರಿಮೆ ಇಟ್ಟುಕೊಂಡು ಅದನ್ನೆಲ್ಲ ಮುಚ್ಚಿಹಾಕೋಂಥೋರು ನಾಡಿನ ಮಟ್ಟಿಗೆ ಸತ್ತ ಲೆಕ್ಕವೇ. "ಐಶ್ವರ್ಯ" ಚಿತ್ರದಲ್ಲಿ ಏನಾದರೂ ಈ ಉಂಡಮನೆಗೆ ಎರಡು ಬಗೆಯೋಳ್ನ ನೋಡಿ ಖುಷಿ ಪಟ್ಟಿದ್ದರೆ ಇವತ್ತಿಗೆ ಆ ಖುಷೀನೆಲ್ಲ ಸೇರಿಸಿ ಸುಟ್ಟಾಕಬೇಕು ಗುರು!

ದೀಪಿಕಾ ಪಡುಕೋಣೆ, ನೀನೇ ನಿನ್ನ ತಪ್ಪು ತಿದ್ದುಕೊಳ್ಳೋ ದಿನ ಹೆಚ್ಚು ದೂರ ಇಲ್ಲ! ಒಂದು ದಿನ ಬರತ್ತೆ, ಆಗ ನಿನಗೆ "ಐಶ್ವರ್ಯ"ವೂ ನೆನಪಾಗತ್ತೆ, ನಿನ್ನ ನುಡೀನೂ ನೆನಪಾಗತ್ತೆ, ನಿನ್ನ ನಾಡೂ ನೆನಪಾಗತ್ತೆ. ನಿನ್ನ ಐಶ್ವರ್ಯವೆಲ್ಲವೂ ಹಾಳಾಗಿ ನೀನು ಕನ್ನಡಾಂಬೆಯ ಕಾಲಿಗೆ ಬಿದ್ದು ಕಣ್ಣೀರಿಡುವ ದಿನ ಬರತ್ತೆ, ಕಾದು ನೋಡು!

ಇಲ್ಲಿ ಯಾರು ಕುಂಬ್ಳೆ ಅಂದ್ರೆ? ಕೈ ಎತ್ತಿ!

ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ತಡವಾಗಾದ್ರೂ ಆಯ್ಕೆಯಾಗಿರೋದು ಹೆಮ್ಮೆ ತಂದಿದೆ ಗುರು! ಕುಂಬ್ಳೆಗೆ ಈ ಹೊಸ ಜವಾಬ್ದಾರಿಯಲ್ಲೂ ಯಶಸ್ಸು ಸಿಗಲಿ! ಅಂದಹಾಗೆ, ಅನಿಲ್ ಕುಂಬ್ಳೆಗೆ ಈ ಸ್ಥಾನ ಅಷ್ಟು ಸಲೀಸಾಗೇನು ದಕ್ಕಿಲ್ಲ. ನಾಯಕನ ಸ್ಥಾನಕ್ಕೆ ಏರಿದ ಕುಂಬ್ಳೆ ಸಾಗಿದ ದೂರ ಬಹಳ, ಸವೆಸಿದ ದಾರಿನೂ ದೂರದ್ದು. ಈ ಹಾದೀಲಿ ಸಾಗ್ತಾ ಸಾಗ್ತಾ ಕುಂಬ್ಳೆ 118 ಟೆಸ್ಟ್ ಪಂದ್ಯಗಳ್ನ ಆಡಿದಾರೆ, 566 ವಿಕೆಟ್ ಉರುಳಿಸಿ ಭಾರತದ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಕೂಡಾ ಆಗಿದಾರೆ, ಉಪನಾಯಕನಾಗಿ ಆಡಿ ಅನುಭವಾನೂ ಪಡೆದಿದಾರೆ.

ವೆಸ್ಟ್ ಇಂಡೀಸ್ ಎದುರು ಒಂದು ಪಂದ್ಯದಲ್ಲಿ ಚೆಂಡೇಟು ಬಿದ್ದು ದವಡೆ-ಮೂಳೆ ಚದರಿ ಹೋದಾಗ್ಲೂ ಬೌಲ್ ಮಾಡಿದ ಅನಿಲ್ ಕುಂಬ್ಳೆ, ಬದ್ಧತೆಗೊಂದು ಹೊಸ ಭಾಷ್ಯ ಬರೆದದ್ದು ಕ್ರಿಕೆಟ್ ಇರೋವರೆಗೂ ಮರೆಯಕ್ಕಾಗದೇ ಇರೋ ವಿಷ್ಯ! 1999ರಲ್ಲಿ ಪಾಕಿಸ್ತಾನದ ಜೊತೆ ಆಡಿದ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಹತ್ತೂ ವಿಕೆಟ್ ಗಳನ್ನು ಕಬಳಿಸಿದ ಆ ಆಟ ಅನಿಲ್ ಕುಂಬ್ಳೆಯ ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ ಗುರು! ಕುಂಬ್ಳೆ ತಂಡದ ನಾಯಕನಾಗಕ್ಕೆ ಕಾರಣ ಬರೀ ಆತನ ಪ್ರತಿಭೆಯೊಂದೇ ಕಾರಣ ಅಲ್ಲ; ಅದರ ಜೊತೆ ಜೊತೆಗೇ ಸಕ್ಕತ್ ಪರಿಶ್ರಮ, ಬಿಡುವಿಲ್ದಿರೋ ಪ್ರಯತ್ನ, ಛಲ ಮತ್ತು ಆಟಕ್ಕೆ ಬದ್ಧತೆಗಳು ಬಹಳ ಪಾತ್ರ ವಹಿಸಿವೆ.

ಕನ್ನಡ ನಾಡು ಏಳಿಗೆ ಹೊಂದಕ್ಕೆ ಇವತ್ತು ನಮ್ಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಉದ್ದಿಮೆ, ಮನರಂಜನೆ, ಶಿಕ್ಷಣ, ರಾಜಕಾರಣ... ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕುಂಬ್ಳೆಗಳು ಬೇಕು. ಆ ಛಲವಂತ ಬೇರೆಲ್ಲೂ ಇಲ್ಲ, ಕನ್ನಡಿಗ ಕನ್ನಡಿ ಮುಂದೆ ನಿಂತ್ರೆ ತಾನೇ ಕಾಣ್ಸ್ತಾನೆ! ಏನ್ ಗುರು?

ಕನ್ನಡಿಗನಾದ ಗ್ರಾಹಕನಾಗಿ ನಿಮ್ಮ ಅನುಭವ ಹಂಚಿಕೊಳ್ಳಿ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಇಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಎಲ್ಲದರಲ್ಲೂ ಆದ್ಯತೆ ಸಿಗಬೇಕು ಅಂತ ಹಂಬಲಿಸೋ ಅಂಥೋರಿಗೆ, ಇದನ್ನು ನಮ್ಮ ಹಕ್ಕು ಅಂತ ಈಗಾಗಲೇ ಅರಿತಿರೋ ಕನ್ನಡಿಗರಿಗೆಲ್ಲಾ ನಮಸ್ಕಾರಗಳು. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರೋ ಸಂಗತಿಗಳು ನಮ್ಮ ನಿಮ್ಮ ಗಮನಕ್ಕೆ ಬಂದಾಗ ಸಂಕಟ ಪಟ್ಕೋತೀವಿ. ಆ ಸಮಸ್ಯೆ ಬಗೆಹರೀಲಿ ಅಂತಾ ತುಡೀತೀವಿ. ಬದಲಾವಣೆಗಳು ಆದಾಗ ಹಿಗ್ಗುತ್ತೀವಿ. ಆ ಬದಲಾವಣೆಗಳು ನಮ್ಮಿಂದಲೇ ಆಗಿದ್ದರೆ ಮೆರೀತೀವಿ.ಪೆಟ್ರೋಲ್ ಬಂಕಿನವರು ಹೇಗಿದ್ದರು ನೋಡಿ, ಕನ್ನಡದವರಿಗೆ ಇಂಗ್ಲಿಷ್ ಲಿಪೀಲಿ ಹಿಂದಿ ಹೇಳ್ಕೊಡ್ತಾ ಇದಾರೆ...ಪಾಪ. ಇದು ನಮ್ ಬೆಂಗಳೂರಿನ ಒಂದು ಪೆಟ್ರೋಲ್ ಬಂಕಲ್ಲಿ ಹಾಕಿದ್ದ ನಾಮಫಲಕ.
ಇದೇ ಬಂಕ್ ನವರೇ ಈಗ ಹೇಗೆ ಬದಲಾಗಿದಾರೆ ಅಂತ ನೋಡಿ. ಖುಷಿ ಆಗ್ತಿದೆ ಅಲ್ವಾ?

ಬೆಂಗಳೂರಿನ ಖಾಸಗಿ ಎಫ್.ಎಂ ವಾಹಿನಿಗಳು ಒಂದು ವರ್ಷದ ಹಿಂದೆ "ನಮ್ಮದು 100% ಬಾಲಿವುಡ್ ಸ್ಟೇಷನ್" "ಕನ್ನಡಕ್ಕೆ ಮಾರುಕಟ್ಟೆ ಇಲ್ಲ" "ಕನ್ನಡ ಹಾಡುಗಳು ಸಿಗ್ತಿಲ್ಲ" ಅಂತ ಕುಂಟು ನೆಪ ಹೇಳ್ತಾ ೧೦~೧೫% ಕನ್ನಡ ಹಾಡುಗಳನ್ನು ಹಾಕ್ತಿದ್ರು. ಆದ್ರೆ ಇವತ್ತು ಬೆಂಗಳೂರಿನ ಟಾಪ್ 3 ಎಫ್.ಎಂಗಳಲ್ಲಿ ಕಡಿಮೆ ಅಂದ್ರೆ 80% ಕನ್ನಡ ಹಾಡುಗಳೇ ಬರುತ್ತಿವೆ. ಸಿಂಗಪೂರ್ ಏರ್ ಲೈನ್ಸ್ ನವರು ಕನ್ನಡಿಗರ ಒತ್ತಾಯಕ್ಕೆ ಮಣಿದು ತಮ್ಮ ವಿಮಾನಗಳಲ್ಲಿ ಕನ್ನಡದ ಮೆನು ಸಿಗೋ ಹಾಗೆ ಮಾಡಿದಾರೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ.

ಈ ಬದಲಾವಣೆಗೆ ಕಾರಣವೇನು?

ಇವೆಲ್ಲಾ ಹೇಗಾಯ್ತು ಅಂದ್ರೆ ಅದಕ್ಕೆ ಉತ್ತರ ಗ್ರಾಹಕನಾಗಿ ಕನ್ನಡಿಗ ಒಗ್ಗಟ್ಟಾಗಿ ನಿಂತದ್ದರಿಂದ ಆಯ್ತು. ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದು. ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ್ದು, ಮಿಂಚೆ (e-mail) ಚಳವಳಿ ನಡೆಸಿದ್ದು, ಪತ್ರಿಕೆಗಳಿಗೆ ಬರೆದಿದ್ದು...ಇವೇ ಕಾರಣ. ನಿಜ, ನಾವು ಒಟ್ಟಾಗಿ ಧ್ವನಿ ಎತ್ತೋಣ. ಮತ್ತಷ್ಟು ಬದಲಾವಣೆಗಳಿಗೆ ಕಾರಣರಾಗೋಣ.

ನೀವೇನು ಮಾಡಬಹುದು?

ನಿಮ್ಮ ಅನುಭವಗಳನ್ನು ವಿವರಗಳೊಂದಿಗೆ graahaka@gmail.com ಗೆ ಮಿಂಚಿಸಿ. ಸೂಕ್ತವಾದವುಗಳನ್ನು ಏನ್‌ಗುರುವಿನಲ್ಲಿ ಪ್ರಕಟಪಡಿಸಲಾಗುತ್ತದೆ. ಆ ಮೂಲಕ ಕನ್ನಡಿಗರನ್ನು ಒಗ್ಗೂಡಿಸೋಣ. ಬನ್ನಿ, ನೀವೂ ಬದಲಾವಣೆ ಮಾಡಬಲ್ಲಿರಿ...ಐದು ಬೆರಳು ಸೇರಿದರೆ ಮುಷ್ಟಿ ...

ಕನ್ನಡಿಗರು ಒಗ್ಗೂಡದೆ ಗಣಕದಲ್ಲಿ ಕನ್ನಡದ ಮುನ್ನಡೆಯಿಲ್ಲ

ಗಣಕ ತಂತ್ರಜ್ಞಾನದಲ್ಲಿ ಕನ್ನಡದ ಮುನ್ನಡೆ ಆಗಿದೆ ಅಂತ ನವೆಂಬರ್ 1ರಂದು ವಿ.ಕ ಪತ್ರಿಕೆ ವರದಿ ಮಾಡಿದೆ. IISc ಸಂಸ್ಥೇಲಿ ಕನ್ನಡದಲ್ಲಿ ಗಣಕ ತಂತ್ರಜ್ಞಾನ ತರೋ ಪ್ರಯತ್ನದಲ್ಲಿ OCR ಎಂಬ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೆಲಸ ನಡ್ದಿರೋ ಬಗ್ಗೆ ಇಲ್ಲಿ ಹೇಳಿದಾರೆ. ಇದಲ್ದೆ ಕನ್ನಡದಲಿ ಶ್ರೀಲಿಪಿ, ನುಡಿ, ಕನ್ನಡ ಸ್ಪೆಲ್-ಚೆಕ್ಕರ್, ಮುಂತಾದ ಹೊಸ ತಂತ್ರಜ್ಞಾನಗಳೂ ಬಂದಿವೆ ಅಂತ್ಲೂ ವರದಿ ಹೇಳತ್ತೆ (ಆದ್ರೆ ಇಡೀ ಪ್ರಪಂಚವೇ ಉಪಯೋಗಿಸ್ತಾ ಇರೋ ಬರಹ ತಂತ್ರಾಂಶದ ಬಗ್ಗೆ ತುಟಿಕ್-ಪಿಟಿಕ್ ಅನ್ನಲ್ಲ ಆ ವರದಿ!). ಅಂತರ್ಜಾಲ ತಾಣಗಳಲ್ಲೂ ಇತ್ತೀಚೆಗೆ ಹೆಚ್ಚಿನ ಬರಹಗಳು ಕನ್ನಡದಲ್ಲೇ ಕಂಡು ಬರ್ತಿರೋದು ಖುಷಿಯ ವಿಷಯ ಆಗಿದೆ.

ಆದ್ರೆ ಈಗ ನಾವುಗಳು ಇಟ್ಟಿರೋ ಪುಟ್ಟಪುಟ್ಟ ಹೆಜ್ಜೆಗಳಿಂದ್ಲೇ ಸಂತೃಪ್ತರಾಗದೆ ಇನ್ನೂ ಬಹಳ ದೂರ ಹೋಗಬೇಕಿದೆ ಗುರು! ಅದಕ್ಕೆ ಈ ತಂತ್ರಜ್ಞಾನದ ಇವತ್ತಿನ ಸ್ಥಿತಿ ಏನು, ಇನ್ನೂ ಏನೇನಾಗಬೇಕು, ಅದಕ್ಕೆ ಏನೇನು ಬೇಕು ಅಂತ ಯೋಚನೆ ಮಾಡೋದು ಬಹಳ ಮುಖ್ಯ ಗುರು.

ಈಗಿರೋ ಕನ್ನಡ ಗಣಕ ತಂತ್ರಾಂಶಗಳಲ್ಲಿ ತೊಂದರೆಗಳಿವೆ
ಇವತ್ತು ಕನ್ನಡದಲ್ಲಿ ಇರೋ ತಂತ್ರಾಂಶಗಳ ಗುಣಮಟ್ಟ ಹೇಗಿದೆ, ಅವುಗಳಲ್ಲಿ ಏನು ತೊಂದರೆಗಳಿವೆ, ಅವುಗಳಲ್ಲಿ ಏನು ಬದಲಾವಣೆಗಳಾಗಬೇಕು ಅಂತ ನೋಡಿದರೆ ಮನಸ್ಸಿಗೆ ಬರೋ ಕೆಲವು ಇಲ್ಲಿವೆ:
  • ಹೆಚ್ಚಾಗಿ ಲಿಪಿ ತಂತ್ರಾಂಶಗಳು ಬಳಸೋ ಫಾಂಟ್-ಗಳು ಯೂನಿಕೋಡಿನಲ್ಲಿ ಬಹಳ ಸೀಮಿತ ರೀತಿಯಲ್ಲಿ ಸಿಗತ್ವೆ. ಆದ್ರಿಂದ ಇವುಗಳ್ನ ಉಪ್ಯೋಗ್ಸಿದ್ರೆ ಸುಮಾರು ಕಡೆ ಕನ್ನಡ ಅಕ್ಷರಗಳ ಬದ್ಲು "?" ಚಿನ್ನೆಯೇ ಗತಿ! ಇಂತಹ ಯಾವುದೇ ಫಾಂಟ್ ಗಳು ಪೂರ್ತಿಯಾಗಿ ಯೂನಿಕೋಡ್‍ನಲ್ಲಿ ದೊರೆಯಬೇಕು.
  • ಎಷ್ಟೇ ಬಗೆಯ ತಂತ್ರಜ್ಞಾನಗಳು ಕನ್ನಡದಲ್ಲಿ ಬಂದ್ರೂ ಇನ್ನೂ ನಾವು ಒಂದು ಗಣಕದೊಡನೆ ಮಾತಾಡಲು ಕನ್ನಡದ್ದೇ ಆದ ಕೀಲಿಮಣೆ ಮಾಡ್ಕೊಂಡಿಲ್ಲ! ಇದು ಕೂಡಲೆ ಬೇಕಿರೋ ಒಂದು ವಸ್ತು ಗುರು! ಇದಿಲ್ಲದೆ ನಾವೆಲ್ಲರೂ ಇಂಗ್ಲೀಷ್ ಕೀಲಿಮಣೇನೇ ಇಟ್ಕೊಂಡು ಕನ್ನಡ ಕುಟ್ತಾ ಇರೋದು ಒಂಥರಾ ಪೆದ್ದತನಾನೇ ಗುರು!
  • Windows XPನಲ್ಲೂ ಕನ್ನಡ language-interface-pack/support ಗಳು ಇಂದಿಗೂ ಪೂರ್ತಿಯಾಗಿಲ್ಲ. ಇದು ಪೂರ್ತಿಯಾಗೋವರ್ಗೂ ಅದರ ಉಪ್ಯೋಗ ಸೊನ್ನೇನೇ ಗುರು! ವಿಂಡೋಸ್ನಲ್ಲಿ ಪ್ರತಿಯೊಂದು ಹಂತದಲ್ಲೂ ನಮಗೆ ಕನ್ನಡದ ಉಪ್ಯೋಗವೇ ಮಾಡೋ ಹಾಗಿರ್ಬೇಕು. ಮತ್ತೆ ಇದರಲ್ಲಿ ಎಲ್ಲೆಡೆ ಕನ್ನಡದ ಅಕ್ಷರಗಳು ಸರಿಯಾಗಿ ಕಾಣಬೇಕು.
  • ಲಿನಕ್ಸ್ (Linux) ನಲ್ಲಂತೂ ಎಲ್ಲಾನೂ ನೀವೇ ಮಾಡ್ಕೊಳಿ ಅಂತ ಇಡೀ ಸೋರ್ಸ್-ಕೋಡ್ ಬಿಟ್ಟಿಯಾಗಿ ನಮ್ಮ ಮುಂದೆ ಇಟ್ಟಿದಾರೆ. ಬಳಕೆದಾರನಿಗೆ ಕನ್ನಡದ ಅನುಭವ ಕೊಡಿಸೋದು ಕನ್ನಡಿಗರದೇ ಕೆಲಸ ಇವತ್ತಿನ ದಿನ. ಆದರೆ ನಮ್ಮ ಕನ್ನಡಿಗರು ಈ KDE/GNOME ಅನುವಾದದ ಯೋಜನೆಯಲ್ಲೂ ಎಷ್ಟು ಹಿಂದಿದಾರೆ ಅಂತ ಯೋಚನೆ ಮಾಡಿದರೇ ನಾಚಿಕೆಯಾಗತ್ತೆ!
  • KDE/GNOME/Windows XP ಗಳ್ನ ಅನುವಾದ ಮಾಡೋರು ಕನ್ನಡದ ಪದಗಳ್ನ ಮರೆತು ಯಾರ ಬಾಯಲ್ಲೂ ಹೊರಳದಂಥಾ ಸಂಸ್ಕೃತದ ಪದಗಳ್ನ ಉಪಯೋಗಿಸಿದರೆ ಹೇಗೆ?
  • ಇಂದು ನಾವು ಕಾಣ್ತಿರೋ ಕನ್ನಡದ ಅಂತರ್ಜಾಲತಾಣಗಳಲ್ಲಿ ಅನೇಕವುಗಳ್ನ ಓದಕ್ಕೇ ಆಗಲ್ಲ. ಆ ತಾಣಗಳಿಗೆ ಹೋದ ಕನ್ನಡಿಗ ಏನೇನು ದೊಮ್ಮರಾಟ ಮಾಡುದ್ರೂ ಕನ್ನಡ ಕಾಣಿಸಲ್ಲ. ಇಲ್ಲಿ ಯೂನಿಕೋಡನ್ನು ಪಾಲಿಸದೇ ಇರೋದೇ ಕಾರಣ. ಪ್ರತಿ ಕನ್ನಡ ತಾಣವೂ ಯೂನಿಕೋಡನ್ನ ಪಾಲಿಸ್ಬೇಕು.
  • ಕನ್ನಡದಲ್ಲಿ ಲೇಟೆಕ್ ಇದೆ. ಯಾವುದೇ ಕನ್ನಡದ ಬರಹವನ್ನ PDFಆಗಿ ಮಾಡಲು ಸಹಾಯ ಏನೋ ನೀಡತ್ತೆ, ಇದ್ರೂ ಇದ್ರಲ್ಲೂ ಕಿರೀಕು ಅಂದ್ರೆ ಗಣಕದೊಡನೆ ಮಾತಾಡೋದು ಒಂದು ವಿಚಿತ್ರವಾದ ಕಂಗ್ಲಿಷಿನಲ್ಲೇ!
  • ಬರಹ ತಂತ್ರಾಂಶವು ಚೆನ್ನಾಗೇ ಇದೆ, ಆದ್ರೆ ಅದು ವಿಂಡೋಸ್-ನಲ್ಲಿ ಬಿಟ್ಟು ಇನ್ನ್ಯಾವ ಓ.ಎಸ್.ನಲ್ಲೂ ಸಿಗಲ್ಲ
ಜಗತ್ತಿನ ಬೇರೆ ಭಾಷೆಗಳಿಗೆ ಹೋಲಿಸಿದ್ರೆ ಕನ್ನಡದಲ್ಲಿ ಇನ್ನೂ ಸಕ್ಕತ್ ಕೆಲಸ ಆಗಬೇಕಾಗಿದೆ! ಜಪಾನ್ನವರ, ಚೈನಾದವರ ಬಹಳ ಕಷ್ಟ ಎನ್ನಲಾಗಿರೋ ಲಿಪಿ ಉಳ್ಳ ಭಾಷೆಗಳಲ್ಲಿ ಇಂಗ್ಲಿಷಿನ ಸಮಾನವಾದ ಸೌಕರ್ಯಗಳು ಈಗಾಗ್ಲೇ ಗಣಕಗಳಲ್ಲಿ ದೊರೆಯತ್ತೆ. ಸಕ್ಕತ್ ವೈಜ್ಞಾನಿಕ ಲಿಪಿ ಅಂತ ಕರೆಸಿಕೊಳ್ಳೋ ಕನ್ನಡಕ್ಕೇನು ಧಾಡಿ?!

ತೊಂದರೆಗಳ್ನ ಬಗೆಹರಿಸಲು ಏನೇನಾಗಬೇಕು?

ಮೇಲಿನ ತೊಂದರೆಗಳು ಬಗೆಹರಿದು ಗಣಕ ಆನುಮಾಡಿದ ತಕ್ಷಣ ಪೂರ್ತಿ ಕನ್ನಡದಲ್ಲಿ ಯಾವುದೇ ಕಿರೀಕೂ ಇಲ್ಲದೆ ವ್ಯವಹರಿಸೋ ಕನಸು ನನಸಾಗಬೇಕಾದ್ರೆ ಈ ಕೆಳಗಿನವು ಆಗಬೇಕು ಗುರು:
  • ಗಣಕದಿಂದ ಇಂಗ್ಲೀಷ್ನ ತೆಗೆಯಕ್ಕೆ ಆಗೋದೇ ಇಲ್ಲ ಅನ್ನೋ ಯೋಚನೆ ಕೈಬಿಡಬೇಕು. ಎಲ್ಲವೂ ಕನ್ನಡದಲ್ಲೇ ಸಾಧ್ಯ ಅನ್ನೋ ಗುರಿ ಇಟ್ಕೋಬೇಕು. ಯಾಕೆ ಸಾಧ್ಯವಿಲ್ಲ? ಕನ್ನಡಕ್ಕೆ ಯಾವ ರೋಗವೂ ಬಂದಿಲ್ಲ. ಬಂದಿರೋದು ನಿಜವೇ ಆದರೆ ಅದು ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿರೋ ಕನ್ನಡಿಗರಿಗೆ!
  • ಕನ್ನಡಿಗರು ಒಗ್ಗಟ್ಟಿಂದ ಕೆಲಸಗಳ್ನ ಮಾಡಬೇಕು. ಇವತ್ತಿನ ದಿನ ಪ್ರಪಂಚದಲ್ಲಿ ಎಲ್ಲೇ ಕೂತಿದ್ದರೂ ಅಂತರ್ಜಾಲದಲ್ಲಿ ಸಹಕರಿಸಿ ಕೆಲ್ಸ ಮಾಡಬಹುದು. ಮಾಡಿದ್ದನ್ನೇ ಮಾಡ್ಕೊಂಡು ಕಿಸ್ಬಾಯಿದಾಸ ಅಂದಹಾಗೆ ಇವತ್ತಿಂದ ಹತ್ತು ವರ್ಷ ಆದರೂ ಅದದೇ ಕೆಲ್ಸಗಳ್ನ ಮಾಡ್ತಾ ಇದ್ರೆ ನಮ್ಮಲ್ಲಿ ಸಹಕಾರದ ಬುದ್ಧಿ ಇಲ್ಲ ಅಂತ ತೋರ್ಸತ್ತೆ, ಅಷ್ಟೆ. ಹೀಗೇ ಮುಂದುವರೆದ್ರೆ ನಾವು ಉದ್ಧಾರ ಆದ್ವಿ, ಅದಾಯ್ತು!
  • ಮೂಲಭೂತ ಹಂತದಲ್ಲಿ ಸಂಶೋಧನೆ/ಅಭಿವೃದ್ಧಿಗಳ್ನ ಮಾಡಕ್ಕೆ ನಾವು ಹಿಂಜರೀಬಾರ್ದು, ನಮ್ಮ ವಿ.ವಿ.ಗಳು ಅಂಜಬಾರದು. ಉದಾಹರಣೆಗೆ ಇಂಗ್ಲೀಷಿನ ಕೀಲಿಮಣೇನೇ ನಮಗೆ ಗತಿ ಅಂತ ಹೇಳಿದೋರು ಯಾರು? ಅಂತರ್ಜಾಲ ತಾಣಗಳ ವಿಳಾಸಗಳು ರೋಮನ್ ಅಕ್ಷರಗಳಲ್ಲೇ ಇರಬೇಕು ಅಂತ ಹೇಳಿದೋರು ಯಾರು? ಪ್ರೋಗ್ರಾಮಿಂಗ್ ಕನ್ನಡದಲ್ಲಿ ಆಗಲ್ಲ ಅಂದೋರು ಯಾರು?
  • ಹೊಸ ಪದಗಳ್ನ ಹುಟ್ಟಿಸುವಾಗ ಆದಷ್ಟೂ ಆಡುನುಡಿಯಿಂದ್ಲೇ ಪದಗಳ್ನ ತೊಗೋಬೇಕು, ಬಾಯಲ್ಲಿ ಹೊರಳೋ ಪದಗಳ್ನೇ ಹುಟ್ಟಿಸಬೇಕು (ಆದು ಸಂಸ್ಕೃತದಿಂದ ಬಂದರೂ ತೊಂದರೆಯಿಲ್ಲ).
  • ಉದ್ದಿಮೆದಾರರು ಕನ್ನಡದ ತಂತ್ರಾಂಶಗಳ್ನ ತಯಾರಿಸಿ ಕರ್ನಾಟಕದಲ್ಲಿರೋ 5.5ಕೋಟಿ ಕನ್ನಡಿಗರ ಮಾರುಕಟ್ಟೇನ ಮುಟ್ಟೋ ಗುರಿ ಇಟ್ಟುಕೊಳ್ಳಬೇಕು. ಕನ್ನಡ ಅಂದ ತಕ್ಷಣ ಏನೋ ದಾನ-ಧರ್ಮ ಅನ್ನೋ ಅನಿಸಿಕೆ ಬಿಟ್ಟು ವ್ಯಾಪಾರ ಅಂತ ತೊಗೋಬೇಕು.
  • ಸರ್ಕಾರ ಇದರಲ್ಲೆಲ್ಲ ತನ್ನ ಪಾತ್ರ ಏನು ಅಂತ ಅರ್ಥ ಮಾಡ್ಕೋಬೇಕು. ಸರ್ಕಾರದ ಪಾತ್ರ ಈ ಕೆಲಸಗಳೆಲ್ಲಾ ಸುಗಮವಾಗಿ ಆಗೋಹಾಗೆ ನೋಡಿಕೊಳ್ಳೋದೇ ಹೊರತು, ವಿ.ವಿ.ಗಳಿಗೆ ಯೋಜನೆಗಳ್ನ ನಡೆಸೋದಕ್ಕೆ ದುಡ್ಡು ಕೊಡೋದೇ ಹೊರತು ತಾನೇ ತಂತ್ರಾಂಶಗಳ್ನ ಅಭಿವೃದ್ಧಿ ಪಡಿಸೋದಲ್ಲ (ಒಂದು ಕಾಲದಲ್ಲಿ ಸರ್ಕಾರ ಹೋಟೆಲ್ ನಡೆಸುತ್ತಾ ಇತ್ತು. ಆ ಕಾಲ ಹೋಯ್ತು!).
ಏನ್ ಗುರು?

ಜಯಲಲಿತಾ ಮೈಸೂರಲ್ಲಿದ್ದಾಗ ಕನ್ನಡ ಮಾತಾಡ್ತಿದ್ರೋ ಇಲ್ಲವೋ?

"ನಾನು ಮೈಸೂರಲ್ಲಿ ಹುಟ್ಟಿರಬಹುದು, ಆದರೂ ನಾನು ಕನ್ನಡತಿಯಲ್ಲ, ನನ್ನ ಮೈಯಲ್ಲಿ ಹರಿಯುತ್ತಿರುವುದು ತಮಿಳು ರಕ್ತ" ಅಂತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರ ಒಂದು ಹೇಳಿಕೆ ನೆನ್ನೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಯಾಗಿದೆ. ಯಾವ ತಮಿಳ್ನಾಡಿನ ಸೀರೆ-ಪಂಚೆ ರಾಜಕೀಯದ ಉಸಾಬರೀಗೂ ಹೋಗದೆ ಜಯಲಲಿತಾ ಔರಿಗೆ ಒಂದು ಚಿಕ್ಕ ಪ್ರಶ್ನೆ ಹಾಕಿ ನಮ್ಮ ಕೆಲಸ ಮುಗಿಸೋಣ.

ಮೈಸೂರಿಂದ ಮದರಾಸಿಗೆ

ಅಕಸ್ಮಾತ್ ನಿಮಗೆ ಗೊತ್ತಿಲ್ಲದೇ ಇದ್ರೆ...ಜಯಲಲಿತಾ ಔರು ಮೈಸೂರಲ್ಲಿ ಹುಟ್ಟಿ ವಲಸೆ ಹೋಗಿದ್ದು ತಮಿಳುನಾಡಿಗೆ. ಅಲ್ಲೇ ದುಡಿಮೆ ಮಾಡಿ, ಜನ ಮೆಚ್ಚುಗೆ ಗಳಿಸಿ, ಕೊನೆಗೆ ತಮಿಳು ಜನಗಳನ್ನು ಪ್ರತಿನಿಧಿಸಿ ರಾಜ್ಯದ ಮುಖ್ಯಮಂತ್ರಿಯೂ ಆಗಿ ರಾಜಕೀಯವಾಗೂ ಏಳಿಗೆ ಪಡೆದದ್ದು ತಮಿಳುನಾಡಿನಲ್ಲೇ.

ಜಯಲಲಿತಾ ಔರಿಗೆ ಒಂದು ಬಹಿರಂಗ ಪ್ರಶ್ನೆ

ಜಯಲಲಿತಾ ಔರು ತಮ್ಮ ರಕ್ತದ ಬಗ್ಗೆ ಒಂದು ಸಕ್ಕತ್ ಡೈಲಾಗ್ ಹೊಡೆದಿರೋದು ಹಾಗಿರಲಿ. ಆದ್ರೆ ಇಲ್ಲಿ ನಮ್ಮ ಪ್ರಶ್ನೆ:
ಮೈಸೂರಲ್ಲಿದ್ದಾಗ ಈಕೆ ಕನ್ನಡ ಮಾತಾಡ್ತಾ ಇದ್ದರೋ ಇಲ್ಲವೋ? ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಇವರು ಪೂರಕವಾದಂಥಾ ನಿಲುವುಗಳ್ನ ಇಟ್ಟುಕೊಂಡಿದ್ದರೋ ಇಲ್ಲವೋ?

ಇವರ ಉತ್ತರ "ಹೌದು, ಕನ್ನಡ ಮಾತಾಡ್ತಾ ಇದ್ದೆ, ಪೂರಕವಾದ ನಿಲುವುಗಳ್ನ ಇಟ್ಕೊಂಡಿದ್ದೆ" ಅನ್ನೋದಾದರೆ (ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಇವತ್ತು ಔರು ತಮ್ನ ತಮಿಳ್ನೋರು ಅಂತ ಕರ್ಕೊಂಡ್ರೂ "ಭೇಷ್! ನೀವು ಮೈಸೂರಲ್ಲಿದ್ದಾಗ ಕನ್ನಡತಿಯೇ ಆಗಿದ್ದಿದ್ದು" ಅಂತ ಔರಿಗೆ ಹೇಳಬೇಕು. ಯಾಕೇಂತೀರಾ? ಒಂದು ಪ್ರದೇಶದಲ್ಲಿ ವಾಸ ಮಾಡೋ ಬೇರೆ ತಾಯಿನುಡಿಯ ಜನರು ಆಯಾ ಪ್ರದೇಶದ ಭಾಷೆ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು, ಆಯಾ ಭಾಷಾ ಜನಗಳ, ಪ್ರಾಂತ್ಯದ ಅನನ್ಯತೆಗೆ ಪೂರಕವಾಗಿ ಬದುಕು ಸಾಗಿಸಿದ್ರೆ ಆಯಾ ಭಾಷಿಕರೇ ಆಗಿ ಹೋದಂಗೆ ಗುರು. ಹಾಗಾಗೇ ನಾವೆಲ್ಲ ಮಾಸ್ತಿ, ಬೇಂದ್ರೆ ಮೊದಲಾದೋರ್ನ ಕನ್ನಡಿಗರು ಅಂತ ಕರ್ಯೋದು. ಕರ್ನಾಟಕಕ್ಕೆ ಯಾವಾಗಲೋ ನೂರಾರು ವರ್ಷಗಳ ಹಿಂದೆ ವಲಸೆ ಬಂದೋರ ಮನೆಯಲ್ಲಿ ಹುಟ್ಟಿದ ಜನ ತಮ್ಮ ಮನೆ ಮಾತು ಬೇರೆ ಅನ್ನೋ ಕಾರಣಕ್ಕೆ ತಾವು ಕನ್ನಡದವರಲ್ಲ ಅಂದುಕೊಳ್ಳೋದು ಮಹಾ ತಪ್ಪು!

ಇದು ಬಿಟ್ಟು "ಇಲ್ಲ, ನಾನು ಮೈಸೂರಲ್ಲಿ ಕನ್ನಡ ಮಾತಾಡ್ತಾ ಇರಲಿಲ್ಲ, ನಾನು ಕರ್ನಾಟಕದಲ್ಲಿ ಇದ್ದುಗೊಂಡೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಪೂರಕವಾದ ನಿಲುವುಗಳ್ನ ಇಟ್ಕೊಂಡಿರಲಿಲ್ಲ" ಅನ್ನೋದಾದರೆ (ತಿರ್ಗಾ ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಮ್ಯಾಟ್ರು ಒಸಿ ಬೇರೇನೇ ಆಗೋಗತ್ತೆ. ಯಾಕೇಂತೀರಾ? ಇಲ್ಲೇ ಹುಟ್ಟಿ, ಓದು-ಬರಹ ಕಲ್ತು, ಯೌವನ ಕಳೆದು, ಇಲ್ಲೀ ಸೌಲತ್ತುಗಳ್ನೆಲ್ಲಾ ಬಳಸಿಕೊಂಡು, ಇಲ್ಲೀ ಉಪ್ಪು ತಿಂದು, ಇಲ್ಲೀ ನೀರು ಕುಡಿದು, ಇಲ್ಲೀ ಸಂಸ್ಕೃತಿಗೆ, ಇಲ್ಲೀ ನಾಡು-ನುಡಿ-ನಾಡಿಗರಿಗೆ ಗೌರವ ಕೊಡದೇ ಇದ್ದೆ ಅನ್ನೋ ಮಾತು ಇವರಿಗೆ ಶೋಭಿಸೋದೇ ಇಲ್ಲ ಗುರು! ಇವತ್ತಿನ ದಿನ ಬೆಂಗ್ಳೂರಲ್ಲಿ ಕೆಲವು ವಲಸಿಗ್ರು ಇದಾರಲ್ಲ - ಉಂಡ ಮನೆಗೇ ಎರಡು ಬಗೆಯೋಂಥೋರು, ಕನ್ನಡಾನ ಕಸದಬುಟ್ಟೀಗೆ ಎಸಿಯೋರು, ನಮಗೇ ಔರ್ ಭಾಷೆ ಕಲಿಸ್ತೀವಿ ಅನ್ನೋ ಸೊಕ್ಕಿನ ಜನ - ಔರಿಗೂ ಇವ್ರಿಗೂ ಏನು ವೆತ್ಯಾಸ ಅಂತ ಕೇಳಬೇಕಾಗತ್ತೆ (ಆಗತ್ತೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ಹೇಳ್ತಿಲ್ಲ).

ಏನ್ ಜಯಲಲಿತಾ ಔರೆ? ನಿಮ್ಮ ಉತ್ತರ ಏನು?

ಹಿಂದಿ ಹೇರಿಕೆ ಅಲ್ಲವಂತೆ, ಉತ್ತೇಜನವಂತೆ! ಏನ್ ವೆತ್ಯಾಸ ಬುದ್ದಿ?

ರಾಜ್ಯೋತ್ಸವ ಆಗಿ ಒಂದು ದಿನ ಆಗಕ್ಕಿಲ್ಲ, ಕನ್ನಡಿಗರಿಗೆ ಕನ್ನಡಪ್ರಭದ ಸಂಪಾದಕೀಯ ಹಿಂದೀನ ನಾವು ಕಣ್ಮುಚ್ಚಿಕೊಂಡು ಒಪ್ಕೋಬೇಕು ಅನ್ನೋ ವಿಷದ ಚುಚ್ಚುಮದ್ದು ಕೊಡ್ತು. ಆದ್ರೆ ಅದನ್ನ ತೊಗೊಳಕ್ಕೆ ನಾವೇನು ಕಿಮೇಹೂ (ಕಿವಿ ಮೇಲೆ ಹೂ) ಮಡೀಕೊಂಡಿಲ್ಲವಲ್ಲ? ಅವತ್ತಿನ ಕನ್ನಡಪ್ರಭ ಸಂಪಾದಕೀಯಕ್ಕೂ (ಕಪ್ರಸಂ-ಗೂ) ಏನ್ಗುರುಗೂ ಮಾತುಕತೆ ಒಸಿ ಹಿಂಗ್ ನಡೀತು:

ಕಪ್ರಸಂ ಇಂತೆಂದಿತು:

ಹಿಂದಿಯನ್ನು ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಕಡ್ಡಾಯದ ಪ್ರಶ್ನೆಯೇ ಇಲ್ಲ.

ಮೇಲಿನ ಬಾಲಿಶ ವಿಶ್ಲೇಷಣೆಯಿಂದ ಮುಗುಳ್ನಕ್ಕು ಏನ್ಗುರುವು ಇಂತೆಂದನು:

ಇಲ್ಲಿ ಲಕ್ಷಾಂತರ ಮಕ್ಕಳು ತಾವೇ ಮೇಲೆ ಬಿದ್ದು ಹಿಂದಿ ಕಲೀತಿದಾರಂತೆ! ಯಾಕೆ ಕಲಿತಾರು ಸ್ವಾಮಿ? ಹಿಂದೀಗೂ ನಮಗೂ ಏನು ಸಂಬಂಧ? ಹಿಂದೀನೇ ಯಾಕೆ ಕಲಿತಾರು? ಹಿಂದಿ ಬದ್ಲು ಸಿಂಹಳ ಭಾಷೇನೋ ಸ್ವಾಹಿಲಿ ಭಾಷೇನೋ ಯಾಕೆ ಕಲೀತಿಲ್ಲ ಸ್ವಾಮಿ? ಯಾಕೆ ಗೊತ್ತಾ? ಕನ್ನಡದ ಮುಗ್ಧ ಮಕ್ಕಳಿಗೆ ಕಡ್ಡಾಯವಾಗಿ ಹಿಂದಿ ಕಲೀಲೇಬೇಕು ಅಂತ ತ್ರಿಭಾಷಾ ಸೂತ್ರ ಅನ್ನೋ ಶಿಕ್ಷೆ ಜಡಿದಿದಾರಲ್ಲ, ಅದೇ ಕಾರಣ! ಇದು ಕಡ್ಡಾಯ ಅಲ್ಲದೆ ಇನ್ನೇನು, ಬುದ್ದಿ?

ಕನ್ನಡದ ಪಠ್ಯಪುಸ್ತಕದಲ್ಲೇ ಹಿಂದೀನ ರಾಷ್ಟ್ರಭಾಷೆ ಅನ್ನೋ ಸುಳ್ಳು ಹೇಳ್ಕೊಟ್ಟು ಹಿಂದೀನ ಕಣ್ಮುಚ್ಚಿಕೊಂಡು ಒಪ್ಕೋಬೇಕು ಅನ್ನೋ ವಾತಾವರಣ ಹುಟ್ಟಿಸಿಬಿಟ್ಟು "ಔರೇ ಸ್ವಂತವಾಗಿ ಕಲೀತಿದಾರೆ" ಅಂದ್ರೆ ಎಲ್ಲೀ ನ್ಯಾಯ ಸ್ವಾಮಿ?

ಕಪ್ರಸಂ ಇಂತೆಂದಿತು:

ಅಖಿಲ ಭಾರತ ಸಂಸ್ಥೆಗಳಲ್ಲಿ ಹಿಂದಿ ಬಳಕೆ ವಿರೋಧಿಸುವ ಚಳವಳಿಯೂ ಇಲ್ಲಿ ಇಲ್ಲ.

ಒಳಗುಟ್ಟನ್ನರಿಯದ ಕಪ್ರಸಂ-ನನ್ನು ಕುರಿತು ಏನ್ಗುರುವು ಇಂತೆಂದನು:

ಕರ್ನಾಟಕದಲ್ಲಿ ಅಖಿಲ ಭಾರತ ಸಂಸ್ಥೆಗಳಲ್ಲಿ ಹಿಂದಿ ಬಳಕೇನ ಯಾರೂ ಯಾಕೆ ವಿರೋಧಿಸ್ತಾ ಇಲ್ಲ ಗೊತ್ತಾ ಮಾಹಾಸ್ವಾಮಿ? ಯಾಕೇಂದ್ರೆ ಹಿಂದಿ ಕಲ್ತ್ರೆ ನಿಮಗೆ ಭಡ್ತಿ ಕೊಡ್ತೀವಿ, ಹಿಂದಿ ಕಲ್ತ್ರೆ ನಿಮಗೆ ಸಂಬಳ ಹೆಚ್ಚಿಸ್ತೀವಿ, ಹಿಂದಿ ಕಲ್ತ್ರೆ ನಿಮಗೆ ಚಾಕ್ಲೇಟ್ ಕೊಡ್ತೀವಿ, ನಿಮಗೆ ಲಾಲಿಪಪ್ಪು ಕೊಡ್ತೀವಿ ಅಂತ ಆಸೆ ತೋರ್ಸಿ ಕೂಡ್ಸಿದಾರಲ್ಲ, ಅದೇ ಕಾರಣ ಸ್ವಾಮಿ! ಇಷ್ಟೆಲ್ಲಾ ಆಮಿಷ ತೋರಿಸಿದರೆ ಪಾಪ ಆ ಸಂಸ್ಥೆಗಳ ಒಳಗೇ ಯೇಗಬೇಕಾಗಿರೋ ಕನ್ನಡಿಗರು ಹೇಗೆ ತಾನೆ ಚಳುವಳಿ ಮಾಡಾರು ಬುದ್ದಿ? ಬಡವ, ನಾ ಮಡಗಿದಂಗೆ ಇರ್ತೀನಿ ಅಂತ ಸುಮ್ನೆ ಕೂತೌರೆ ಬುದ್ದಿ! ಇಷ್ಟೂ ಅರ್ಥ ಆಗಿಲ್ವಾ ನಿಮಗೆ?

ಕಪ್ರಸಂ ಇಂತೆಂದಿತು:

ರಾಜ್ಯದಲ್ಲಿ ಸದ್ಯಕ್ಕೆ ಹಿಂದಿ ಹೇರಿಕೆಯ ವಾತಾವರಣ ಇಲ್ಲ. ಆದರೆ ಹಿಂದಿಗೆ ಉತ್ತೇಜನ ನೀಡುವ ವ್ಯವಸ್ಥೆ ಇದೆ. ಅದೇ ಸರಿಯಾದ ನೀತಿ.

ತರವಲ್ಲದ ತಂಬೂರಿ ಸ್ವರವನ್ನು ಬಾರಿಸಿದ ಕಪ್ರಸಂ-ನನ್ನು ಕುರಿತು ತುಸು ಕೋಪಗೊಂಡು ಏನ್ಗುರುವು ಇಂತೆಂದನು:

ತಕ್ಕೋ! ಬುಟ್ಬುಟ್ರು ಪದಗಳಲ್ಲಿ ನಿಜಾಂಶವನ್ನ ತೇಲಿಸಿಬಿಡೋ ವಾಕ್ಯಾನ! ಅಲ್ಲಾ, ಹೇರಿಕೆಗೂ ಉತ್ತೇಜನಕ್ಕೂ ವೆತ್ಯಾಸವಾದ್ರೂ ಏನೆಂದು ಹೇಳುವಂತವನಾಗು ಓ ಪದಪ್ರಯೋಗವಿಶಾರದನೆ! "ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಕೊಲೆ ನಡಿಯಬೇಕು ಎಂಬ ಹೇರಿಕೆ ಇಲ್ಲ" ಅನ್ನೋ ವಾಕ್ಯಕ್ಕೂ "ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಕೊಲೆ ನಡೆಯುವುದಕ್ಕೆ ಉತ್ತೇಜನ ನೀಡುವ ವ್ಯವಸ್ಥೆ ಇದೆ" ಅನ್ನೋ ವಾಕ್ಯಕ್ಕೂ ಏನು ವೆತ್ಯಾಸ ಅಂತ ಒಸಿ ತಿಳಿಸಿಕೊಡಿ ಬುದ್ದಿ!

ಈ ನಾಟಕಗಳ್ನ ಬಿಟ್ಟು, ನಿಜದಿಂದ ದೂರ ಹೋಗದೆ ನಿಂತು ನೋಡಿ, ನಿಮಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ಮಾರುಕಟ್ಟೆಯಲ್ಲಿ, ಗ್ರಾಹಕಸೇವೆಯಲ್ಲಿ, ಮನರಂಜನೆಯಲ್ಲಿ - ಪ್ರತಿಯೊಂದರಲ್ಲೂ ನಡೀತಿರೋ ಹಿಂದಿ ಹೇರಿಕೆ ಕಣ್ಣಿಗೆ ಕಾಣತ್ತೆ. ಈ ಹಿಂದಿ ಹೇರಿಕೆ ಅನ್ನೋದು ಕನ್ನಡಿಗರ ಮೇಲೆ ಬಿದ್ದಿರೋ ಒಂದು ಶಾಪ. ಇದರಿಂದ ಕನ್ನಡಕ್ಕೆ ಕನ್ನಡನಾಡಿನಲ್ಲೇ ಸಾರ್ವಭೌಮತ್ವ ಇಲ್ಲದಂತಾಗಿದೆ. ಇದರಿಂದ ಕನ್ನಡಿಗನಿಗೆ ತನ್ನ ನುಡಿಯ ಬಗ್ಗೇನೇ ಕೀಳರಿಮೆ ಹುಟ್ಟಿದೆ, ತನ್ನ ನಾಡಿನ ಬಗ್ಗೇನೇ ಕೀಳರಿಮೆ ಹುಟ್ಟಿದೆ.

ಇದು ಯಾವ ರೀತೀಲೂ "ಸರಿಯಾದ ನೀತಿ" ಖಂಡಿತ ಅಲ್ಲ! ಇದನ್ನ "ಸರಿಯಾದ ನೀತಿ" ಅಂತ ಒಪ್ಕೊಳೋದೂ ಒಂದೆ, ಪ್ರತಿಯೊಬ್ಬ ಕನ್ನಡಿಗಾನೂ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳ್ಕೊಳೋದೂ ಒಂದೇ! ಆದ್ದರಿಂದ ಈ ಹಿಂದಿ ಹೇರಿಕೆಗೆ ಒಂದು ಚೂರೂ ಸೊಪ್ಪು ಹಾಕಬಾರದು!

ಕೊಡಗಿನಲ್ಲಿ ಕೊಡವನೇ ಅರಸ ಅಂತ ಮರೀಬಾರದು

ಕಳೆದ ವರ್ಷ ಕರ್ನಾಟಕ ಸರ್ಕಾರ ಕೊಡವರಿಗೆ ಸಂಬಂಧ ಪಟ್ಟ ಒಂದು ಆದೇಶ ಹೊರಡಿಸಿತ್ತು. ಆ ಒಂದು ಆದೇಶದ ಮೂಲಕ ಕೊಡವರಿಗೆ ಜುಮ್ಮ/ಬಾಣೆ ಜಮೀನಿನ ಮೇಲಿನ ಹಕ್ಕು ಉಳಿಸಿಕೊಡೋ ಒಳ್ಳೇ ಕೆಲಸಾನ ಸರ್ಕಾರ ಮಾಡ್ತು. ಆದ್ರೆ ತಲೆಮಾರುಗಳಿಂದ ಇದ್ದ ಹಕ್ಕನ್ನು ಮೊಟಕುಗೊಳಿಸಿ, ಕೊಡವರ ಬದುಕಿಗೆ ಮುಳುವಾಗಿದ್ದ 2004ರ ಎರಡು ಕಾಯ್ದೇನ ಹಿಂಪಡೆಯೋ ಸುತ್ತೋಲೆ ಹೊರಡ್ಸಿದ್ರೂ ಇನ್ನೂ ಜಾರಿಯಾಗಿಲ್ಲ. ಕೊಡಗಿನಲ್ಲಿ ಕೊಡವರ ಕಾಫಿ ತೋಟಗಳನ್ನು ಅವರವರ ಹೆಸರಿಗೆ ಅಧಿಕೃತಗೊಳಿಸಿರೋ ಆದೇಶ ಅಲ್ಲಿ ಜನರ ಕೈಗಿನ್ನೂ ಸಿಕ್ಕದೆ ಬೆಳೆಸಾಲ ಕೂಡಾ ಹುಟ್ತಿಲ್ಲ. ಇದು ಕೊಡವರ ಆರ್ಥಿಕ ಏಳಿಗೆಗೆ ಕೊಡಲಿ ಪೆಟ್ಟಾಗಿದ್ದು ಕೊಡಗಿನಲ್ಲೇ ಕೊಡವರ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಂತಾಗಿರೋದು ಸರಿಯಲ್ಲ ಗುರು.

ತಲತಲಾಂತರದಿಂದ ಇದ್ದ ಹಕ್ಕು ಮೊಟಕು ಮಾಡೋದು ತಪ್ಪು

ಮೈಸೂರು ಮಹಾರಾಜರ ಕಾಲದಲ್ಲಿ ಸರ್ಕಾರಿ ಜಾಗದಲ್ಲಿ ವ್ಯವಸಾಯ ಮಾಡಲು ಜುಮ್ಮ ಮತ್ತು ಬಾಣೆ ಕಾಯ್ದೆಗಳ ಮೂಲಕ ಕೊಡವರಿಗೆ ಅವಕಾಶ ಮಾಡಲಾಯಿತು. ಕೊಡಗಿನಲ್ಲಿ ಅನೇಕರಿಗೆ ಈ ರೂಪದಲ್ಲಿ ಜಮೀನು ಸಿಕ್ತು. ಈಗ ಅರಣ್ಯ ಇಲಾಖೆಗೆ ಸೇರಿಕೊಂಡಿರೋ ಆ ಭೂಮಿಯ ಮೆಲಿನ ಹಕ್ಕನ್ನು ಮೊಟಕುಗೊಳಿಸೋ ಕೆಲ್ಸಾನ 2004ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಂದು ಆದೇಶದ ಮೂಲಕ ಮಾಡ್ತು. ಕೊಡವರು ತಮ್ಮ ನೆಲದ ಮೇಲೆ ತಲತಲಾಂತರದಿಂದ ಇರೋ ಹಕ್ಕನ್ನು ಹೀಗೆ ಕಿತ್ಕೊಳ್ಳೋದು ಸರೀನಾ ಅಂತ ಗೋಳಾಡ್ತಾ ಇದಾರೆ. ಇವರ ಗಾಯಕ್ಕೆ ಉಪ್ಪು ಸವರುವಂತೆ ತಲಕಾವೇರಿ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಪ್ರಸ್ತಾಪಿಸಲಾಗುತ್ತಿದ್ದು, ಇದರ ಮೂಲಕ ತಮ್ಮ ನೆಲ ಹಾಗೂ ನೆಲೆಯನ್ನು ಕಳಕೊಳ್ಳೊ ಭಯ ಅಲ್ಲಿ ಜನರನ್ನು ಕಾಡ್ತಿದೆ.
ಕೊಡಗಿಗೆ ಕೊಡವನೇ ಅರಸ
ಕೊಡಗಿನಲ್ಲಿ ಕೊಡವರೇ ಸಾರ್ವಭೌಮ ಜನ, ಕೊಡವ ಭಾಷೆಯೇ ಸಾರ್ವಭೌಮ ಭಾಷೆ ಅನ್ನೋದರಲ್ಲಿ ಯಾರಿಗೂ ಸಂದೇಹ ಬೇಡ. ಇವಕ್ಕೆ ಮಾರಕವಾಗುವ ಯಾವುದೇ ರೀತಿಯ ಕ್ರಮ ಖಂಡಿತಾ ಸರಿಯಲ್ಲ ಗುರು. ನಮ್ಮ ನಾಡಿನಲ್ಲಿರೋ ವೈವಿಧ್ಯತೆಗಳನ್ನು ಉಳಿಸಿಕೊಳ್ಳೋದರ ಮೂಲಕವೇ ನಾವು ಏಕತೆಯನ್ನು ಸಾಧಿಸೋಕ್ಕೆ ಸಾಧ್ಯ ಒಂದು ಪ್ರದೇಶದ ಜನರ ಬದುಕು, ಏಳ್ಗೆ ಮತ್ತು ಸಂಸ್ಕೃತಿಗಳ ಮೇಲೆ ಮಾರಕವಾಗೋ ಅಂಥಾ ನಿರ್ಣಯಗಳನ್ನಾಗಲಿ, ನೀತಿಗಳನ್ನಾಗಲೀ ನಮ್ಮ ಸರ್ಕಾರಗಳು ತೊಗೋಬಾರದು.
ಕೊಡಗಿನಲ್ಲಿ ಕೊಡವ ಭಾಷೆ ಮತ್ತು ಸಂಸ್ಕೃತಿಗಳನ್ನು ನಾವು ಕಾಪಾಡಿಕೊಳ್ಳೋದು ನಮ್ಮ ಧರ್ಮ ಗುರು. ಆ ಕಾರಣದಿಂದಲೇ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳೋ ಮೊದಲು ಸರ್ಕಾರಗಳು ಹಿಂದೆ ಮುಂದೆ ಯೋಚ್ಸಿ, ಅದಕ್ಕೆ ಸಂಬಂಧ ಪಟ್ಟ ಜನರ ಜೊತೆ, ಜನ ಪ್ರತಿನಿಧಿಗಳ ಜೊತೆ ಮಾತುಕತೆ ಮಾಡಿ ಮುಂದುವರೀಬೇಕು ಗುರು. ಇಲ್ಲದೆ ಇದ್ರೆ ಅಂತಹ ಪ್ರದೇಶದ ಜನಗಳ ಸಾರ್ವಭೌಮತ್ವವನ್ನು ನಾವು ಕೊಂದು ಹಾಕಿದಂತೆ ಆಗುತ್ತೆ. ಏನೇ ಆಗಲಿ, ಕೊಡಗಿಗೆ ಕೊಡವನೇ ಸಾರ್ವಭೌಮ, ಕೊಡವ ನುಡಿ ಕೊಡಗಿನಲ್ಲಿ ಸಾರ್ವಭೌಮ ಭಾಷೆ ಆಗಿರಲೇ ಬೇಕು. ಅದೇ ಸರಿ.
ಇದು ಕೊಡಗಿನ ಸಮಸ್ಯೆ ಮಾತ್ರವಲ್ಲ, ಕರ್ನಾಟಕದ ಸಮಸ್ಯೆ
ಕೊಡಗಿನ ಜನರನ್ನ ಕಾಡ್ತಿರೋ ಈ ಸಮಸ್ಯೆ ಬರೀ ಕೊಡಗಿನ ಸಮಸ್ಯೆಯಲ್ಲ, ಇಡೀ ಕರ್ನಾಟಕದ ಸಮಸ್ಯೆ. ವೈವಿಧ್ಯತೇನ ಉಳಿಸಿಕೊಳ್ಳೋದ್ರಲ್ಲೇ ನಮ್ಮ ಏಳ್ಗೆ ಇರೋದು ಅಂತ ನಮ್ಮ ಸರ್ಕಾರಗಳಿಗೆ ಅರ್ಥವಾಗದೇ ಇರೋದೇ ಇದಕ್ಕೆ ಮೂಲ. ಅದೇಕೋ ಏನೋ "ವಿವಿಧತೆಯಲ್ಲಿ ಏಕತೆ, ವಿವಿಧತೆಯಲ್ಲಿ ಏಕತೆ" ಅಂತ ಮಂತ್ರ ಎಷ್ಟು ಸಾರಿ ಹೇಳ್ಕೊಂಡ್ರೂ ನಮ್ಮನ್ನಾಳೋರಿಗೆ ಆ ಮಂತ್ರದ ಅರ್ಥ ಗೊತ್ತಾಗಿರೋಹಂಗೆ ಕಾಣ್ತಿಲ್ಲ! ಕೊಡಗಿನ ಜನರೂ ಇದನ್ನು ಬರೀ ತಮ್ಮ ಸಮಸ್ಯೆ ಅಂತ ಅಂದುಕೊಳ್ಳದೆ ನಾಡಿನ ಎಲ್ಲ ಭಾಗಗಳ ಜನರನ್ನು ಜೊತೇಲಿಟ್ಟುಕೊಂಡು ಒಗ್ಗಟ್ಟಿಂದ ಇದಕ್ಕೆ ಪರಿಹಾರ ಹುಡುಕಬೇಕು. ಏನ್ ಗುರು?

ಇವತ್ತು ಕಿಟ್ಟಲ್ ಇಲ್ಲದೇ ಇದ್ರೂ ವಿಟ್ಠಲ್ ಇದಾರಲ್ಲ?

1832 ರಿಂದ 1903 ರವರೆಗೆ ಬದುಕಿದ್ದ ಜರ್ಮನ್ ಮೂಲದ ಡಾ. ರೆವರೆಂಡ್ ಫರ್ಡಿನೆಂಡ್ ಕಿಟ್ಟಲ್ ರಚಿಸಿದ ಕನ್ನಡ-ಇಂಗ್ಲೀಷ್ ಪದಕೋಶದ ಬಗ್ಗೆ 3ನೇ ನವಂಬರ್ ದಿವಸ ವಿ.ಕ. ವರದಿ ಮಾಡಿದೆ. ಜರ್ಮನಿ ಕಿಟ್ಟಲ್ಲು ಮತ್ತೆ ಕನ್ನಡದ ವಿಟ್ಠಲ್ಲು - ಇವರಿಬ್ಬರ ಬಗ್ಗೆ ಇವತ್ತು ಗಮನ ಹರಿಸೋಣ.

ಬೇರೆಬೇರೆ ಪ್ರದೇಶಗಳಲ್ಲಿದ್ದ ಕನ್ನಡಿಗರು ಬಳಸೋ ಪದಗಳ್ನೆಲ್ಲಾ ಒಗ್ಗೂಡಿಸಿ ಒಂದೇ ನಿಘಂಟು ಬರೆದ ಕಿಟ್ಟಲ್ ಒಂದು ರೀತಿಯ ಕನ್ನಡ ಪದಗಳ ಏಕೀಕರಣದ ಹರಿಕಾರ ಅಂದ್ರೆ ತಪ್ಪಾಗಲಾರದೋ ಏನೋ. ಕ್ರಿ.ಶ. 900 ರಿಂದ 1894 ರವರೆಗೆ 11 ಶತಮಾನಗಳ ಕಾಲ ಬಳಕೆಯಲ್ಲಿದ್ದ ಕನ್ನಡದ ಮಾಹಿತಿಗಳನ್ನು, ಯಾವುದೇ ಸರಿಯಾದ ಸೌಕರ್ಯಗಳಿರದಿದ್ದ ಆ ಸಮಯದಲ್ಲಿ, ಹರಿದು-ಹಂಚಿ ಹೋಗಿದ್ದ ಅಂದಿನ ಕರ್ನಾಟಕದ ಹಳ್ಳಿ-ಹಳ್ಳಿಗೆ ಎಡತಾಕಿ, ಕೆದಕಿ, ಪದಗಳನ್ನು ಹೆಕ್ಕಿ-ಒಂದು ಗೂಡಿಸಿ ಮಂದಿನ ಕನ್ನಡದ ಪೀಳಿಗೆಗೆ ಬಿಟ್ಟು ಹೋದ ಆ ಆಸ್ತಿ ದೊಡ್ಡದು ಗುರು! ಅಂದಿನ ಬ್ರಿಟೀಷ್ ದಿನಗಳಲ್ಲಿ ಪರೋಕ್ಷವಾಗಿ ಇದು ಹಲವರಿಗೆ ಕನ್ನಡ ಕಲಿಯುವ-ಕಲಿಸುವ ಸಾಧನವಾಗಿತ್ತು.

ಕಿಟ್ಟಲ್ ಆದಮೇಲೆ ಹೊಸ ಕನ್ನಡದ ಪದಕೋಶಗಳು ಹಲವು ಬಂದಿವೆ. ಆದರೆ ಅವುಗಳಿಗೆ ಕನ್ನಡಿಗರ ಬಾಯಲ್ಲಿ ಓಡಾಡುತ್ತಿರೋ ಎಷ್ಟೋಂದು ಎರವಲು ಪದಗಳ್ನ ದೂರ ಇಡಬೇಕು ಅನ್ನೋ ಮಡಿವಂತಿಕೆ , ಇಲ್ಲವೇ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಬಳಕೆಯಲ್ಲಿರೋ ಪದಗಳನ್ನೂ (ಮತ್ತು ಅವುಗಳಿಗೆ ಇರಬೋದಾದ ಬೇರೆಬೇರೆ ಅರ್ಥಗಳನ್ನು) ಸೇರಿಸಿಕೊಳ್ಳದಿರುವಿಕೆ, ಮತ್ತು ಸಂಸ್ಕೃತದ ಹಂಗು ಸ್ವಲ್ಪ ಹೆಚ್ಚಾಗಿರೋದು - ಈ ಮೂರು ದೋಷಗಳಿವೆ. ಬಸ್ಸು, ಕಾರು, ಇಂಕು, ಬಾಲು, ಬೆಲ್ಟು, ಮೊಬೈಲು, ಲವ್ - ಹೀಗೆ ಇಂದು ಪ್ರಚಲಿತದಲ್ಲಿರುವ ಪದಗಳನ್ನು ಕನ್ನಡ ಪದಗಳು ಅಂತ ಕರಿಯಕ್ಕೆ ಯಾಕೋ ನಮ್ಮೋರಿಗೆ ಮುಜುಗರ!

ಧರ್ಮ, ಪ್ರದೇಶ ಮತ್ತು ಮಡಿವಂತಿಕೆಗಳೆಂಬ ಮೂರು ಗೋಡೆಗಳನ್ನು ಒಡೆದು ಕನ್ನಡ ಪದಗಳ ಏಕೀಕರಣ ಒಂದು ನಿಜವಾದ ಕನ್ನಡದ ನಿಘಂಟಲ್ಲಿ ಆಗಬೇಕಿದೆ ಗುರು! ಇದನ್ನ ಮಾಡಕ್ಕೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿರೋ ವಿಟ್ಠಲ್ಗಳು ಜರ್ಮನಿಯಿಂದ ಕಿಟ್ಟಲ್ಲಂಥಾ ಮಹಾನುಭಾವ ಇನ್ನೂ ಬಂದಿಲ್ಲ ಅಂತ ಕೈಮೇಲೆ ಕೈಯಿಟ್ಟುಕೊಂಡು ಕೂತ್ಕೋಬೇಕಾಗಿಲ್ಲ ಗುರು!

ಕೊನೆ ಹನಿ

ಇಲ್ಲಿ ಸೂಚಿಸಿರೋ ವಿಟ್ಠಲ್ ಅನ್ನೋ ಹೆಸ್ರು ಸುಮ್ನೆ ಕಿತಾಪತಿಗೆ ಮಾತ್ರ. ಆ ಹೆಸರಿನ ಯಾರಾದರೂ ನಮ್ಮ ವಿ.ವಿ.ಗಳಲ್ಲಿದ್ದರೆ ಆಕಸ್ಮಿಕ.

ಎಲ್ಲಾ ಬರೀ ರೈಲು!

ಮೊನ್ನೆಮೊನ್ನೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜರ್ಮನಿಯ ಚಾನ್ಸೆಲರ್ ಎಂಜೆಲಾ ಮೆರ್ಕೆಲ್ ಇಬ್ಬರೂ ಸೇರಿ ಒಂದು ವೈಜ್ಞಾನಿಕ ರೈಲು ಬಿಟ್ಟಿದಾರೆ ಅಂತ ವಿ.ಕ. ದಿಂದ ಹಿಡಿದು ಜರ್ಮನಿ ಸರ್ಕಾರದ ಅಂತರ್ಜಾಲ ತಾಣದಲ್ಲೂ ವರದಿ ಆಗಿದೆ. ಈ ರೈಲಿಗೆ "ಸೈನ್ಸ್ ಎಕ್ಸ್‍ಪ್ರೆಸ್" ಅಂತ ಹೆಸರು. ಈ ರೈಲು ಭಾರತದ "ಮೂಲೆಮೂಲೆಗೂ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಕೊಂಡೊಯ್ಯಲಿದೆ" ಅಂತೆ. ಭಾರತದ ಎಲ್ಲಾ ರಾಜ್ಯಗಳಿಗೂ ಈ ರೈಲು ಹೋಗಲಿದೆಯಂತೆ.

ಈ ರೈಲು ವಿಜ್ಞಾನದ ಅಚ್ಚರಿಗಳ್ನ ಮುಟ್ಟಿಸೋ ಪ್ರಯತ್ನದಲ್ಲಿ ಯಾವ ಭಾಷೇಲಿ ಮುಟ್ಟಿಸಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡಿದ್ಯಾ ಗುರು? ಕರ್ನಾಟಕಕ್ಕೆ ಬಂದ ರೈಲು ಜರ್ಮನ್ನಲ್ಲೋ ಇಂಗ್ಲೀಷಲ್ಲೋ ಹಿಂದೀಲೋ ವಿಜ್ಞಾನವನ್ನ "ಮುಟ್ಟಿಸೋಕೆ" ಮುಂದಾದ್ರೆ ಅದೇನು ಮುಟ್ಟಿಸಿಕೊಂಡೇವೋ ಅದೇನು ಮುಟ್ಟಿಸಾರೋ ಆ ದ್ಯಾವರಿಗೇ ಪಿರೀತಿ!

ಪ್ಯಾರಿಸ್ಸಿಂದ ಇದೇ ರೈಲು ಜರ್ಮನಿಗೆ ಹೋದರೆ ಜರ್ಮನ್ ಭಾಷೇಲಿ ಇರಬೇಕು ಅಂತ ಮೆರ್ಕೆಲ್-ಗೆ ಗೊತ್ತಿದೆ. ಆದ್ರೆ ದಿಲ್ಲಿಯಿಂದ ಬಿಟ್ಟ ರೈಲು ಕರ್ನಾಟಕಕ್ಕೆ ಬಂದ್ರೆ ಕನ್ನಡದಲ್ಲಿರಬೇಕು ಅಂತ ನಮ್ಮ ಸಿಂಗ್-ಗೆ ಗೊತ್ತಾ? ಯಾಕೆ ಕೇಳ್ತಿದೀವಿ ಅಂದ್ರೆ - ದಿಲ್ಲಿಯಲ್ಲಿ ಕೂತಿರೋ ಪ್ರಳಯಾಂತಕ ಶಿಕ್ಷಣ ತಜ್ಞರಿಗಾಗಲಿ ರೈಲ್ವೆ ಅಧಿಕಾರಿಗಳಿಗಾಗಲಿ ಭಾರತದಲ್ಲೆಲ್ಲಾ ಇಂಗ್ಲೀಷ್ ಅಥವಾ ಹಿಂದಿಗಳಲ್ಲಿ ಒಂದು ನಡೆದೇ ನಡೆಯತ್ತೆ (ಇಲ್ಲಾ ನಡೀಬೇಕು) ಅನ್ನೋ ಭ್ರಮೆ ತುಂಬಾ ಮೊದಲಿಂದಲೇ ಇದೆ.

ನಿಜವಾಗಲೂ "ಮುಟ್ಟಿಸಬೇಕಾದ್ದನ್ನ" ಮುಟ್ಟಿಸೋಕೆ ಇವತ್ತಿನ ದಿನ ದಿಲ್ಲಿಯಿಂದ ಹೊರಟ ಈ ರೈಲಲ್ಲಿ ಕಡಿಮೆ ಅಂದರೆ ಭಾರತದ 25 ಭಾಷೆಗಳಲ್ಲಿ ವಿವರಿಸೋ ಜನ ಇರಬೇಕು, ಮಾಹಿತಿ/ವೈಜ್ಞಾನಿಕ ಸಾಹಿತ್ಯ ಸಿಗಬೇಕು ಗುರು! ವಿಜ್ಞಾನದ ಪ್ರಜ್ಞೆ ಹೆಚ್ಚಿಸ್ತೀನಿ ಅನ್ನೋ ಯೋಜನೆ ಏನೋ ಸರೀನೇ, ಆದ್ರೆ ಎಲ್ಲವೂ ದಿಲ್ಲಿಯಿಂದ್ಲೇ ಆಗಬೇಕು ಅಂದ್ರೆ ಹೆಂಗೆ ಗುರು?

ಈ ರೈಲು ಮಂಗಳೂರಿಗೆ ಬರತ್ತಂತೆ. ಅಲ್ಲೇನಾದರೂ ಇಂಗ್ಲೀಷಲ್ಲೋ ಜರ್ಮನ್ನಲ್ಲೋ ಹಿಂದೀಲೋ ಇವ್ರು ಒದರ್ತಾ ಇದ್ರೆ ಇದು ವೈಜ್ಞಾನಿಕ ರೈಲಲ್ಲ, ಬರೀ ರೈಲೇ ಇರಬೇಕು ಅನ್ನೋ ನಮ್ಮ ಊಹೆ ನಿಜವೇ ಆಗತ್ತೆ ಗುರು! ಆಗ ಆ ರೈಲೊಳಗೆ ತುಸ ವಿಜ್ಞಾನ ತುಂಬಿಸಿ ವಾಪಸ್ ದಿಲ್ಲೀಗೋ ಬೆರ್ಲಿನ್ನಿಗೋ ಕಳಿಸಬೇಕು, ಅಷ್ಟೆ!

ಕಾಸರಗೋಡಲ್ಲಿ ಕನ್ನಡವಿಲ್ಲದೆ ವೋಟಿಲ್ಲ!

ಇದ್ನೊಸಿ ನೋಡು ಗುರು:



ಈ CNN IBN ವರದಿ ಇನ್ನ್ಯಾವ ಊರಿನ ಬಗ್ಗೆಯೂ ಅಲ್ಲ, ಈಗ ಕೇರಳಕ್ಕೆ ಸೇರಿಹೋಗಿರುವ, ಮಹಾಜನ್ ವರದಿ ಪ್ರಕಾರ ಕರ್ನಾಟಕಕ್ಕೆ ಸೇರಬೇಕಾಗಿರುವ ಕಾಸರಗೋಡಿನ ಬಗ್ಗೆ, ಗುರು! ವರದಿ ಏನ್ ಹೇಳತ್ತೆ ನೋಡಿ:
ಇಲ್ಲಿ ಒಟ್ಟು 60% ಜನ ಕನ್ನಡ ಮಾತಾಡುತ್ತಾರೆ. ಇಲ್ಲಿಂದ ಆಯ್ಕೆಯಾದ ಎಮ್ಮೆಲ್ಲೆ ಕೂಡ ಕನ್ನಡದಲ್ಲೇ ಪ್ರಮಾಣವಚನ ತೊಗೊಂಡ್ರು. [ಕನ್ನಡ] ಭಾಷೆಯ ಪ್ರಭಾವ ಅಷ್ಟಿದೆ ಇಲ್ಲಿ!

[...]

ಮಂಜೇಶ್ವರದಲ್ಲಿ ಕನ್ನಡ ರಾರಾಜಿಸುತ್ತಿದೆ. ಇಲ್ಲೀ ಶೇಂದಿ ಅಂಗಡಿಗಳಿಂದ ಹಿಡಿದು ದೇವರಗುಡಿಗಳವರೆಗೆ ಎಲ್ಲೆಲ್ಲೂ ನಿಮಗೆ ಕನ್ನಡದ ಬೋರ್ಡುಗಳು ಕಾಣುತ್ತವೆ.

[...]

ಇಲ್ಲಿ ಎಲ್.ಡಿ.ಎಫ್. ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳೂ ಕನ್ನಡದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿವೆ. ಮಂಜೇಶ್ವರದ ಹಾಲಿ ಎಮ್ಮೆಲ್ಲೆಯ ಪ್ರಣಾಳಿಕೆ ಕನ್ನಡದಲ್ಲೂ ಇದೆ.

[...]

ಇಲ್ಲಿ ಕನ್ನಡವೇ ಮುಖ್ಯವಾದ ಭಾಷೆ, ಕನ್ನಡಿಗರೇ ಇಲ್ಲಿ ಮುಖ್ಯವಾದವರು.

ಅಥಣಿ ರೈತರ ಸಂಶೋಧನೆಗೆ ದಕ್ಕಲಿರೋ ಪೇಟೆಂಟು

ಇತ್ತೀಚೆಗೆ ಬೆಳಗಾವಿಯ ಅಥಣಿ ತಾಲೂಕಿನ ರೈತರು ಬಯೋ-ಡೈಜೆಸ್ಟರ್ ಅನ್ನೋ ಪ್ರಾಕೃತಿಕ ಗುಣಗಳುಳ್ಳ ಗೊಬ್ಬರವನ್ನ ಕಂಡುಹಿಡಿದು ಇನ್ನೇನು ಪೇಟೆಂಟ್ ಕೂಡ ಗಿಟ್ಟಿಸಿಕೋತಿದಾರೆ ಅಂತ ಇದೇ ತಿಂಗಳ 28ರಂದು ಡೆಕನ್-ಹೆರಾಲ್ಡ್ ಸುದ್ದಿ. ಇದು ಸಕ್ಕತ್ ಖುಷಿ ತರೋ ವಿಷಯಾಮ್ಮಾ!

ಈ ಪೇಟೆಂಟಿಗೆ ಇಂಗ್ಲೀಷೇನು ಬೇಕಾಗಲಿಲ್ಲ

ಕರ್ನಾಟಕದ ರೈತರು ಮಾಡಿರೋ ಈ ಸಾಧನೆ ಅಂತಿಂತದ್ದಲ್ಲ ಗುರು! ನಮ್ಮ ರೈತರು ಹೊಸ-ಹೊಸ ತಂತ್ರಜ್ಞಾನಗಳ್ನ ಕಂಡು‌ಹಿಡಿದು ಮಾರುಕಟ್ಟೆಯಲ್ಲಿ ಹೆಚ್ತಿರೋ ಬೇಡಿಕೆಗಳಿಗೆ ಸ್ಪಂದಿಸಿ ಲಾಭ ಪಡ್ದುಕೊಳ್ತಿದಾರೆ ಅನ್ನೋದು ಒಳ್ಳೇ ಬೆಳವಣಿಗೇನೇ. ರಾಜ್ಯದ ಹಲವು ಕಡೆ ರೈತರು ಸಾಲ ತೀರಿಸಕ್ಕಾಗದೆ ನರಳುತ್ತಾ ಆತ್ಮಹತ್ಯೆ ಮಾಡ್ಕೊಂಡಿರೋದೂ ಉಂಟು. ಈ ಹಿನ್ನೆಲೆಯಲ್ಲಿ ಅಥಣಿ ರೈತರು ಮಾಡಿರೋ ಕೆಲ್ಸ ಎಲ್ಲರಿಗೂ ದಾರಿ ತೋರ್ಸೋಹಂಗಿದೆ ಗುರು! ಯಾವ ಕೆಲ್ಸದಲ್ಲಿ ನಷ್ಟದ ಸಾಧ್ಯತೆ ಇಲ್ಲ ಹೇಳಿ? ನಷ್ಟಗಳಿಂದ ತಪ್ಪಿಸ್ಕೊಳಕ್ಕೆ ಹೊಸ ಚಿಂತನೆ ಮತ್ತು ಕ್ರಿಯಾಶೀಲತೆ ಬಹಳ ಉಪಯುಕ್ತ ಸಾಧನ ಅಂತ ತೋರ್ಸ್ಕೊಟ್ಟಿದಾರೆ ಇವ್ರು.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಹೊಂದಿರೋ ನಮ್ಮ ರೈತರು ಆಂಗ್ಲ ಮಾಧ್ಯಮದಲ್ಲಿ ಓದಿ ಕೊಳೆ ಹಾಕ್ಕೊಂಡಿರೋರಿಗೂ ಕಷ್ಟ ಅನ್ನಿಸೋ ಪೇಟೆಂಟಿಗೇ ಕೈ ಹಾಕಿದಾರೆ. ಮೂಲಭೂತ ಕಲಿಕೆ ಮಾತ್ರ ಪಡೆಯೋ ನಮ್ಮ ರೈತರು ಇಂಥಾ ಸಂಶೋಧನೆಗಳ್ನ ಮಾಡ್ತಿರುವಾಗ ಒಳ್ಳೇ ಉನ್ನತಶಿಕ್ಷಣವನ್ನ ಕನ್ನಡದಲ್ಲೇ ಪಡ್ಕೊಂಡ್ರೆ ಇನ್ನೇನೇನು ಸಾಧಿಸಬಹುದು ಅಂತ ಯೋಚ್ನೆ ಮಾಡಿದರೇ ಕೈಯಲ್ಲಿ ಕೂದಲು ಎದ್ದು ನಿಲ್ಲತ್ತೆ ಗುರು!

ಪೇಟೆಂಟುಗಳಿಂದ ಇಡೀ ಪ್ರಪಂಚದಿಂದ ಗೌರವಧನ ಗಿಟ್ಟಿಸಿಕೊಳ್ಳಬೇಕು

ಈ ಪೇಟೆಂಟಿಂದ ನಮ್ಮ ರೈತರ ಸಂಶೋಧನೆಗೆ ರಕ್ಷಣೆ ಏನೋ ಸಿಗೋಹಾಗಿದೆ. ಆದ್ರೆ ಇಂತಹ ಉತ್ತಮ ಸಂಶೋಧನೆಗಳ್ನ ಪೇಟೆಂಟು ಮಾಡಿಸಿಕೊಂಡು ಗೌರವಧನ ಗಿಟ್ಟಿಸಿಕೊಳಕ್ಕೆ ಯಾಕೆ ಪ್ರಯತ್ನ ಮಾಡಬಾರದು? ಹುಳಿಮಾವಿನ ಜೈವಿಕ-ಕೇಂದ್ರದ ಮುಖ್ಯಸ್ತರು ಹೇಳಿರೋ ಪ್ರಕಾರ ಈ ಪೇಟೆಂಟಿಂದ ನಮಗೆ ದುಡ್ಡು ಹುಟ್ಟೋ ಮಟ್ಟಿಗೆ ಕಾಣೆ! ಈ ವಿಷಯದಲ್ಲಿ ನಾವು ಸಕ್ಕತ್ ಹುಷಾರಾಗಿರಬೇಕು ಗುರು! ಪೇಟೆಂಟ್ ಮಾಡಿಕೊಂಡು ಇಡೀ ಪ್ರಪಂಚದಿಂದ ಗೌರವಧನ ಗುಟ್ಟಿಸಿಕೊಳೋದು ಹೇಗೆ ಅಂತ ನೋಡ್ಕೋಬೇಕು. ಯಾವುದೋ ಕೀಳರಿಮೆಗೆ ತಲೆಬಗ್ಗಿಸಿಕೊಂಡು ಇಂಥಾ ಒಳ್ಳೇ ಅವಕಾಶಾನ ಕೈಬಿಡಬಾರದು. ಏನ್ ಗುರು?

ಇಗೋ ಬಂದ ಹೊಸ ಕನ್ನಡಿಗ!

ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡನಾಡಲ್ಲಿ ಒಂದು ಅದ್ಭುತವಾದ ಬೆಳವಣಿಗೆ ಆಗಿದೆ ಗುರು! ಆ ಬೆಳವಣಿಗೆ ಆಗುವಾಗ ಫಿಲಮ್ಮಲ್ಲಿ ತೋರ್ಸೋ ಹಾಗೆ ಏನು ಗಂಟೆಗಳು ಹೊಡ್ಕೊಳ್ಳಿಲ್ಲ, ಜೋರು ಮಳೆ ಬರಲಿಲ್ಲ, ಸಿಡಿಲು-ಗುಡುಗುಗಳಾಗಲಿಲ್ಲ. ಯಾರೂ ಅದನ್ನ ಗಮನಿಸಲೂ ಇಲ್ಲ. ಏನು ಆ ಬದಲಾವಣೆ ಅಂತೀರಾ? ಅದೇನೆಂದರೆ - ಒಬ್ಬ ಹೊಸಬ ನಮ್ಮ ನಡುವೆ ಹುಟ್ಟುಕೊಂಡಿದಾನೆ. ಈತ ಒಂದು ಹೊಸಬಗೆಯ ಕನ್ನಡಿಗ - ಹೊಸಗನ್ನಡಿಗ. ಇವನನ್ನ ಅರ್ಥ ಮಾಡ್ಕೊಳಕ್ಕೆ ಬಹಳ ಜನ ಪ್ರಯತ್ನ ಪಟ್ಟಿದಾರೆ, ಆದ್ರೆ ಔರಿಗೆ ಯಾಕೋ ಈ ಪಾಲ್ಟಿ ಅರ್ಥವೇ ಆಗ್ತಿಲ್ಲ!

ಇವತ್ತಿನ ದಿನ ಇವನ ಮೂರ್ತಿಯೂ ಚಿಕ್ಕದು, ಕೀರ್ತಿಯೂ ಚಿಕ್ಕದು. ಆದರೆ ನಾಳೆ ಇವನದೇ. ನಾಳಿನ ದಿನ ಇವನ ಮೂರ್ತಿ-ಕೀರ್ತಿಗಳೆರಡೂ ಇಡೀ ಜಗತ್ತನ್ನೇ ಹರಡುತ್ತವೆ, ಕಾದು ನೋಡಿ! ಇವನಿಂದಲೇ ಕನ್ನಡನಾಡಿನ ಏಳ್ಗೆ ಸಾಧ್ಯ! ಇವನಿಂದಲೇ ಭಾರತದ ಏಳ್ಗೆ ಸಾಧ್ಯ! ಇವನಿಂದಲೇ ಪ್ರಪಂಚದ ಎಲ್ಲಾ ಭಾಷಾವಾರು ಜನಾಂಗಗಳ ಏಳ್ಗೆ ಸಾಧ್ಯ! ಇವನಿಂದಲೇ ಈ ಜಗತ್ತಿಗೆ ನಾಲ್ಕೂ ಪುರುಷಾರ್ಥಗಳ ಸಾಧನೆ ಕಬ್ಬಿಣದ ಕಡಲೆ ಅನ್ನಿಸೋದು ನಿಲ್ಲೋದು! ಇವನು ಇವತ್ತು ಕೊಚ್ಚೆಯಲ್ಲಿ ಬಿದ್ದುಗೊಂಡೇ ಅರಳುತ್ತಿರೋ ತಾವರೆ! "ಯಾರಿವನು? ಈ ಮನ್ಮಥನು?" ಅಂತೀರಾ? ಈ ಪಾಲ್ಟಿ ಎಂಥೋನು ಅಂತ ಒಸಿ ನೋಡ್ಮ!

ಕನ್ನಡತನವೇ ಇವನ ಗುರುತು

ಯಾರಾದ್ರೂ "ಯಾರಪ್ಪಾ ನೀನು?" ಅಂದ್ರೆ ಇವನು "ನಾನೊಬ್ಬ ಕನ್ನಡಿಗ" ಅಂತ ಗುರುತಿಸಿಕೋತಾನೆ. ಕನ್ನಡತನವೇ ಇವನ ಗುರುತು. ಕನ್ನಡತನವೇ ಇವನ ಭಾರತೀಯತೆ. ಕನ್ನಡತನವೇ ಇವನ ಜಾತಿ. ಸಂತೆಯಲ್ಲಿ ಮನೆಯೋರ್ನ ಗುರುತಿಸೋಹಾಗೆ, ಗಾಡಿ-ನಿಲ್ದಾಣದಲ್ಲಿ ತನ್ನ ಕಾರು ಗುರುತಿಸೋ ಹಾಗೆ ಎಲ್ಲಿಗೆ ಹೋದರೂ ಇವನು ಕನ್ನಡಿಗನ್ನ ಗುರುತಿಸ್ತಾನೆ! ಯಾರು ಕನ್ನಡಿಗ, ಯಾರು ಕನ್ನಡೇತರ ಅಂತ ಇವನು "ಥಟ್ ಅಂತ" ಹೇಳ್ತಾನೆ! ಹತ್ತು ಜನ ಇದ್ದರೆ ಅವರಲ್ಲಿ ಕನ್ನಡಿಗರೆಷ್ಟು ಅನ್ನೋ ಪ್ರಶ್ನೇನ ಇವನ ಮನಸ್ಸು ಇವನ ಅರಿವಿಲ್ಲದೆಯೇ ಕೇಳತ್ತೆ! ಜಗತ್ತಿನಲ್ಲಿ ಯಾರುಯಾರು ಏನೇನೇ ಸಾಧಿಸಲಿ, "ಅವನು ಕನ್ನಡಿಗನಾ?", ಇಲ್ಲವೇ "ಕನ್ನಡಿಗ ಇದನ್ನೇ ಸಾಧಿಸಬೇಕಾದ್ರೆ ಏನಾಗಬೇಕು?" ಅನ್ನೋ ಪ್ರಶ್ನೆಗಳು ಇವನ ಮನಸ್ಸನ್ನ ಕಾಡುತ್ತವೆ! ಇವನ ಕನ್ನಡತನಕ್ಕೆ ಧಕ್ಕೆ ಬರುವ ಯಾವ ಚಿಂತನೆಗೂ ಇವನು ಸೊಪ್ಪು ಹಾಕಲ್ಲ. ಅಧ್ಯಾತ್ಮವೇ ಇರಲಿ, ರಾಷ್ಟ್ರೀಯತೆಯೇ ಇರಲಿ, ಜಾಗತೀಕರಣವೇ ಇರಲಿ - ಇದ್ಯಾವುದನ್ನೂ ಇವನು ಬಿಟ್ಟುಕೊಡದೆ ಎಲ್ಲದಕ್ಕೂ ಕನ್ನಡವೇ ಸಾಧನ, ಕನ್ನಡವೇ ಏಣಿ ಅನ್ನೋದು ಇವನಿಗೆ ಅರ್ಥವಾಗಿದೆ.

ಕರ್ನಾಟಕದಲ್ಲಿ ಕನ್ನಡದ ಪಾತ್ರ ಏನು ಅಂತ ಇವನಿಗೆ ಗೊತ್ತು

ಹಿಂದೆ ಏನೇ ಆಗಿರಲಿ, ಕನ್ನಡಕ್ಕೆ ಇವತ್ತು ಕರ್ನಾಟಕದಲ್ಲಿ ಏನೇ ಸ್ಥಾನ ಇರಲಿ, ಸರಿಯಾದ್ದೇನು ಅಂತ ಇವನಿಗೆ ಗೊತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅನ್ನೋ ಅರಿವು ಇವನಿಗಿದೆ. ಈ ರಾಜ್ಯ ಕನ್ನಡಿಗರಿಗಾಗಿಯೇ ಇರೋದು ಅಂತ ಇವನಿಗೆ ಗೊತ್ತಿದೆ. ಬೀದೀಲಿರೋ ಬೋರ್ಡುಗಳಿಂದ ಹಿಡಿದು ಉನ್ನತ ಶಿಕ್ಷಣದ ವರೆಗೂ ಎಲ್ಲವೂ ಕನ್ನಡದಲ್ಲಿರಬೇಕಾದ್ದೇ ಸರಿ ಅಂತ ಇವನಿಗೆ ಗೊತ್ತಿದೆ. ಕೆಲಸದಲ್ಲಾಗಲಿ ಕಲಿಕೆಯಲ್ಲಾಗಲಿ ಮನರಂಜನೆಯಲ್ಲಾಗಲಿ ಮತ್ತೊಂದರಲ್ಲಾಗಲಿ ಕನ್ನಡವೇ ಇಲ್ಲಿ ಮುಂಚೂಣಿಯಲ್ಲಿರಬೇಕು ಅನ್ನೋದು ಇವನ ನಿಲುವು.

ಭಾರತ ಅಂದ್ರೆ ಏನು ಅಂತ ಇವನಿಗೆ ಗೊತ್ತು

ಭಾರತ ಅಂದ್ರೆ ಎಲ್ಲಾಕಡೆ ಬರೀ ಹಿಂದಿ ಇರಬೇಕು ಅಂತ ವಾದಿಸೋರಿಗೆ, ಕರ್ನಾಟಕದಲ್ಲೇ ಕನ್ನಡಕ್ಕೆ ಎರಡನೇ ಸ್ಥಾನ ಕೊಡೋರಿಗೆ ಇವನು ಕಿವಿ ಕೊಡಲ್ಲ. ಭಾರತ ಅಂದ್ರೆ ಭಾಷಾವಾರು ರಾಜ್ಯಗಳ ಒಕ್ಕೂಟ, ಇಲ್ಲಿ ಬಲಿಷ್ಠವಾದ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಗುಜರಾತು - ಹೀಗೆ ಎಲ್ಲಾ ಭಾಷಾವಾರು ರಾಜ್ಯಗಳು ಉದ್ಧಾರವಾಗೋದೇ ಭಾರತದ ಉದ್ಧಾರ ಅಂತ ಇವನಿಗೆ ಗೊತ್ತಿದೆ. "ಕರ್ನಾಟಕದಲ್ಲಿ ಭಾರತ ಇದೆ" ಅನ್ನೋದು ಇವನ ನಿಲುವು. ಕರ್ನಾಟಕದ ಉದ್ಧಾರವಾಗದೆ ಭಾರತದ ಉದ್ಧಾರ ಸಾಧ್ಯವಿಲ್ಲ ಅನ್ನೋದು ಇವನ ನಿಲುವು. ಯಾವುದೇ ವಿಷಯದಲ್ಲಾಗಲಿ ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಮೊದಲನೇ ಸ್ಥಾನ ಹೋಗಿ ಎರಡನೇ ಸ್ಥಾನ ಯಾವುದರಿಂದ ಸಿಗುವುದೋ ಅದು ತನ್ನ ಉಳಿವಿಗೇ ಮಾರಕ ಅಂತ ಇವನಿಗೆ ಗೊತ್ತು, ಅದನ್ನು ಇಲ್ಲವಾಗಿಸುವುದು ಇವನ ಜೀವನದ ಧ್ಯೇಯ.

ಜಾಗತೀಕರಣದ ಲಾಭ ಪಡ್ಕೊಳಕ್ಕೆ ಕನ್ನಡವೇ ಸಾಧನ ಅನ್ನೋದು ಇವನ ನಿಲುವು

ಜಾಗತೀಕರಣದ ಈ ಯುಗದಲ್ಲಿ ಕನ್ನಡಕ್ಕೆ ಹಿಂದೆಂದೂ ಇಲ್ಲದ ಪ್ರಾಮುಖ್ಯತೆ ಇದೆ ಎನ್ನುವುದು ಇವನ ನಿಲುವು. ಸೋಮಾರಿಗಳು, ದೂರದೃಷ್ಟಿಯಿಲ್ಲದೋರು ಹೇಳೋಹಾಗೆ ಇವನು ಜಾಗತೀಕರಣದಲ್ಲಿ ಗೆಲ್ಲಕ್ಕೆ ಇಂಗ್ಲೀಷೇ ಸಾಧನ ಅನ್ನಲ್ಲ. ಜಾಗತೀಕರಣದಿಂದ ಲಾಭ ಪಡ್ಕೊಳಕ್ಕೆ ನಿಜವಾದ ಜ್ಞಾನವೇ ಸಾಧನ, ಆ ನಿಜವಾದ ಜ್ಞಾನ ಕನ್ನಡಿಗರನ್ನು ವ್ಯಾಪಿಸಬೇಕಾದರೆ ಅದು ಕನ್ನಡದಲ್ಲೇ ಸಾಧ್ಯ ಅಂತ ಇವನಿಗೆ ಸಕ್ಕತ್ತಾಗಿ ಮನವರಿಕೆ ಆಗಿದೆ. ಇವತ್ತಿನ ದಿನ "ಇಂಗ್ಲೀಷು! ಇಂಗ್ಲೀಷು!" ಅಂತ ಜನಕ್ಕೆ ಹತ್ತಿರೋ ಹುಚ್ಚು ನೋಡಿದರೆ ಇವನಿಗೆ ಮುಗುಳ್ನಗೆ ಬರತ್ತೆ!

ಇವನದು ದೊಡ್ಡ-ದೊಡ್ಡ ಕನಸುಗಳು

ಕನ್ನಡ-ಕನ್ನಡಿಗ-ಕರ್ನಾಟಕಗಳ ವಿಷಯದಲ್ಲಿ ಹಿಂದೆಂದೂ ಕೇಳಬರದಂತಹ ಕನಸುಗಳು ಇವನದು. ಇಡೀ ಪ್ರಪಂಚವೇ ಮೆಚ್ಚುವಂಥವರಾಗಬೇಕು ನಾವು ಕನ್ನಡಿಗರು, ಯಾವ ಕ್ಷೇತ್ರದಲ್ಲೂ ನಾವು ಕಡಿಮೆಯಿರಬಾರದು, ಇಡೀ ಜಗತ್ತೇ ಕನ್ನಡ ಕಲಿಯಕ್ಕೆ ನಾಮುಂದು-ತಾಮುಂದು ಅಂತ ಬರಬೇಕು ಅನ್ನೋದು ಇವನ ಗುರಿ. ಇದೆಲ್ಲಾ ಅಸಾಧ್ಯ ಅನ್ನೋರ ಮುಖಕ್ಕೆ ಉಗೀತಾನೆ, ಹೇಗೆ ಸಾಧ್ಯ, ಯಾವಾಗ ಸಾಧ್ಯ, ಏನು ಮಾಡಿದರೆ ಸಾಧ್ಯ ಅಂತ ತೋರಿಸಿಕೊಡ್ತಾನೆ!

ಒಗ್ಗಟ್ಟು ಕನ್ನಡಿಗರ ಏಳ್ಗೆಗೆ ಮುಖ್ಯ ಅಂತ ಇವನಿಗೆ ಗೊತ್ತಿದೆ

ಹಿಂದಿನವರಿಗೂ ಇವನಿಗೂ ಇದೊಂದು ಬಹಳ ಮುಖ್ಯವಾದ ಬದಲಾವಣೆಯೋ ಏನೋ! ಇವನಿಗೆ ಕನ್ನಡಿಗರ ಒಗ್ಗಟ್ಟು ಬಹಳ ಮುಖ್ಯ ಅನ್ನೋ ಅರಿವಾಗಿದೆ. ಕನ್ನಡಿಗರ ಒಗ್ಗಟ್ಟಿಗಾಗಿ ಇವನ ಮನಸ್ಸು ಹಾತೊರೆಯುತ್ತದೆ. ಕನ್ನಡಿಗರಲ್ಲಿ ಒಡಕುಂಟುಮಾಡುವ ಯಾವುದೊಂದನ್ನು ಕಂಡರೂ ಇವನ ರಕ್ತ ಕುದಿಯುತ್ತದೆ, ಕಣ್ಣು ಕೆಂಪಾಗುತ್ತದೆ! ಈ ಒಗ್ಗಟ್ಟಿಗಾಗಿ ಇವನು ಹಾತೊರೆಯುವುದು ಇವನಲ್ಲಿರೋ ಯಾವುದೋ ಒಂದು ಕೊರತೆಯಿಂದ ಪ್ರೇರಿತವಾಗದೆ ಮುಂದೆ ಮಾಡಬೇಕಾದ ಅದ್ಭುತವಾದ ಕೆಲಸಗಳಿಂದ ಪ್ರೇರಿತವಾಗಿದೆ. ಶಕ್ತಿಯಿಲ್ಲದ ಕಾರಣ ಇವನು ಒಗ್ಗಟ್ಟಾಗುತ್ತಿಲ್ಲ, ಇರುವ ಶಕ್ತಿ ಮಿತಿಯಿಲ್ಲದೆ ಬೆಳೆಯಲಿ ಎಂದು ಒಗ್ಗಟ್ಟಾಗುತ್ತಿದ್ದಾನೆ, ತನ್ನ ಚೌಕಾಸಿಯಿಲ್ಲದ ಕನಸುಗಳ್ನ ನನಸಾಗಿಸಕ್ಕಾಗಿ ಒಗ್ಗಟ್ಟಾಗುತ್ತಿದ್ದಾನೆ.

ಇವನು ನಿಜದಿಂದ ದೂರ ಹೋಗಿಲ್ಲ, ಬರೀ ಕನಸುಗಾರನಲ್ಲ

ಇಷ್ಟೆಲ್ಲ ಕನಸು ಕಂಡರೂ ಇವನು ನಿಜದಿಂದ ದೂರ ಹೋಗಿಲ್ಲ. ಇವತ್ತು ಮತ್ತು ನಾಳೆ ಎರಡನ್ನೂ ಅರ್ಥ ಮಾಡಿಕೊಂಡಿದ್ದಾನೆ. ಇವತ್ತು ಏನಿದೆ, ನಾಳೆ ಏನಾಗಬೇಕು ಎನ್ನುವುದು ಅವನಿಗೆ ಗೊತ್ತಿದೆ. ಇವತ್ತಿನ ಪರಿಸ್ಥಿತಿ ರಾತ್ರೋ ರಾತ್ರಿ ಬದಲಾಗಲ್ಲ, ಸಾಕಷ್ಟು ಸಮಯ ಬೇಕು ಅನ್ನೋದು ಇವನಿಗೆ ಗೊತ್ತಿದೆ. ಆಡಳಿತದಲ್ಲಿ ಇವತ್ತು ಕನ್ನಡದ ಸ್ಥಾನ ಏನು, ಶಿಕ್ಷಣದಲ್ಲಿ ಏನು ಕತೆ, ಉದ್ಯೋಗದಲ್ಲಿ ಏನು ಕತೆ, ಕನ್ನಡಿಗನ ಇವತ್ತಿನ ಸಮಸ್ಯೆಗಳೇನು, ಕರ್ನಾಟಕ ಎದುರಿಸುತ್ತಾ ಇರೋ ತೊಂದರೆಗಳೇನು - ಅಂತೆಲ್ಲಾ ಇವನಿಗೆ ಗೊತ್ತಿದೆ. ಇವೆಲ್ಲ ಗೊತ್ತಿದ್ದರೂ ಇವನು ತನ್ನ ಕನಸುಗಳ್ನ ನನಸಾಗಿಸೋ ಕೆಲಸ ಕೈಬಿಟ್ಟಿಲ್ಲ, ಇವನ ಎದೆಗುಂದಿಲ್ಲ. ನಿಧಾನವಾಗಿ ಒಗ್ಗಟ್ಟಿಂದ ತನ್ನ ಕನಸನ್ನು ನನಸಾಗಿಸ್ತಾ ಇದಾನೆ. ಬಹಳ ವೃತ್ತಿಪರ ರೀತಿಯಲ್ಲಿ ಕನ್ನಡಕ್ಕಾಗಿ ಕೆಲಸ ಮಾಡ್ತಿದಾನೆ. ಈತ ಬರೀ ಕನಸುಗಾರನಲ್ಲ. ಆ ಕನಸನ್ನು ನನಸಾಗಿಸೋದಕ್ಕೆ ಹಗಲು-ಇರುಳು ಕೆಲಸ ಮಾಡ್ತಿದಾನೆ.

ಇಂಥಾ ಒಬ್ಬ ಕನ್ನಡಿಗ ಹುಟ್ಟಿದಾನೆ. ಮನೆಮನೆಯಲ್ಲೂ ಹುಟ್ಟಿದಾನೆ ಗುರು! ಅಂದಹಾಗೆ ನವೆಂಬರ್ ಒಂದಕ್ಕೆ ಇವನೂ ಕನ್ನಡದ ಬಾವುಟ ಹಾರಿಸದೆ ಇರಲ್ಲ!
Related Posts with Thumbnails