ಕನ್ನಡ ಕಲೀತಾ ಇರೋ ವಿದೇಶೀಯರು!

ಎರಡು ತಿಂಗಳ ಹಿಂದೆ "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್" ಅನ್ನೋ ಫ್ರೆಂಚು ನುಡಿ ಕಲಿಸೋ ಸಂಸ್ಥೆಯೋರು ಕನ್ನಡ ಕಲಿಸಲು ಮುಂದಾಗಿರೋ ಸುದ್ದೀನಾ ಏನುಗುರುನಲ್ಲಿ ಬರ್ದಿದ್ವಿ. ಇಗೋ ನೋಡಿ ಈ ವೀಡಿಯೋನಾ... (ಕೃಪೆ : ವಿಡಿಯೋ ಗಿರ್ಮಿಟ್)



ಗುರು! ಅವ್ರು ವಿದೇಶದವ್ರು. ಅವರು ಫ್ರಾನ್ಸ್ ಅನ್ನೋ ದೇಶದಿಂದ ಬಂದಿರೋರು. ಅವರಿರೋದು ಯೂರೋಪಿಯನ್ ಒಪ್ಪುಕೂಟ(federation)ದಲ್ಲಿ. ಅವರಿಗೆ ಒಪ್ಪುಕೂಟದ ಧರ್ಮ ಗೊತ್ತು, ಅವರಿಗೆ ವಲಸಿಗರ ಧರ್ಮ ಗೊತ್ತು ಅಂತೆಲ್ಲಾ ಹೇಳದೆ ಈ ವೀಡಿಯೋದಿಂದ ಸ್ಪೂರ್ತಿ ಪಡೆದು ನಮ್ಮ ನಮ್ಮ ಸಂಸ್ಥೆಗಳಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸೋಕೆ ಮುಂದಾಗೋಣ್ವಾ ಗುರು?

ನೋಡ್ರಣ್ಣೋ... ಬರಲಿದೆ ಹಿಂದಿ ಹೇರಿಕೆಯ ಹೊಸ ಅಸ್ತ್ರ!!!


ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಕಪಿಲ್ ಸಿಬಾಲ್‍ಗೆ ನಿಜವಾಗ್ಲೂ ಇದ್ಯಾಕೆ ಇಂಥಾ ಬುದ್ಧಿ ಬಂತೋ ದೇವರಿಗೇ ಗೊತ್ತು! ಅಲ್ಲಾ ಮೊನ್ನೆ ಮೊನ್ನೆ ‘ಇಡೀ ಭಾರತಕ್ಕೆ ಒಂದೇ ಬೋರ್ಡು, ಇನ್ಮುಂದೆ ನಿಮ್ ಎಸ್ಸಿಸ್ಸೆಲ್ಸಿ ಬೋರ್ಡು ಬೋರ್ಡಿಗ್ ಇರಲ್ಲ’ ಅಂದೋರು ಆಮೇಲಿಂದಾ ‘ನಾ ಅಂದಿದ್ ಆ ಅರ್ಥದಲ್ ಅಲ್ಲಾ’ ಅಂತಂದು ಕೈತೊಳಕೊಂಡಿದ್ರು. ಈಗ ನೋಡುದ್ರೆ ಇಡೀ ಭಾರತದ ಮೂಲೆ ಮೂಲೆಯಲ್ಲಿರೋ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲುಸ್‍ಬೇಕು ಅಂತಾ ಹೊಸ ರಾಗಾ ಹಾಡ್ತಾವ್ರಲ್ಲಪ್ಪಾ ಅಂತ ಜನ ಬೆಪ್ಪಾಗ್ ಕುಂತವ್ರೇ ಗುರು!

ಏಕತೆಗೆ ಹಿಂದೀ ಬೇಕನ್ನೋ ಹುಸಿ ರಾಷ್ಟ್ರೀಯತೆ!

ಈ ವಯ್ಯಾ ಹೇಳಿರೋದುನ್ನೇ ಒಸೀ ನೋಡಿ. ಸಾಂಸ್ಕೃತಿಕ ಏಕತೆಗೆ ತಾಯ್ನುಡಿಯಂತೆ, ರಾಷ್ಟ್ರೀಯ ಏಕತೆಗೆ ಹಿಂದಿಯಂತೆ, ಇಂಗ್ಲೀಷು ಜಾಗತಿಕವಾಗಿ ಅನುಕೂಲ ಮಾಡಕ್ಕಂತೆ! ಅಂದ್ರೆ ಇವರ್ ಪ್ರಕಾರ ಕನ್ನಡದೋರು ಹಿಂದಿ ಕಲೀದಿದ್ರೆ ಭಾರತದ ಏಕತೆಗೆ ಧಕ್ಕೆ ತಗುಲುತ್ತೆ ಅಂದಂಗಾಯ್ತಲ್ಲಾ ಗುರು! ಈಗಾಗಲೇ ಹಿಂದಿ ನಮ್ಮ ಕೆಲಸ ಬೊಗಸೆ ಬದುಕುಗಳನ್ನು ಮೂರಾಬಟ್ಟೆ ಮಾಡಕ್ ಮುಂದಾಗಿರೋದನ್ನು ನೋಡ್ತಿದೀವಿ. ಇನ್ನು ಶಾಲೇಲಿ ಹಿಂದಿ ಕಡ್ಡಾಯ ಮಾಡುದ್ರೆ ಇದು ನಮ್ ಮಕ್ಕಳಿಗೆ ಕಲಿಕೇನ ತೊಡಕು ಮಾಡಕ್ಕೂ ಒಂದು ಕಾಣಿಕೆ ಸಲ್ಸುತ್ತೆ ಅಷ್ಟೆ. ಅಷ್ಟುಕ್ಕೂ ಯಾಕೆ ಬೆಂಗಾಲಿಗಳು, ಕನ್ನಡಿಗರು, ತಮಿಳ್ರು, ಮರಾಠಿಗ್ರು, ಗುಜರಾತಿಗಳು, ಸಿಂಧಿಗಳು, ಪಂಜಾಬಿಗಳು, ತೆಲುಗ್ರು... ಅಯ್ಯೋ ಪಟ್ಟಿ ದೊಡ್ದಿದೆ, ಒಟ್ನಲ್ಲಿ ಭಾರತೀಯರು ಹಿಂದೀ ಕಲೀಬೇಕು? ಒಂದು ಭಾಷೆ ಇದ್ರೆ ಮಾತ್ರಾ ಏಕತೆ ಅನ್ನೋ ಮನಸ್ಥಿತಿ ಭಾರತಾನಾ ಒಗ್ಗೂಡ್ಸಲ್ಲಾ, ಬದಲಾಗಿ ಒಡ್ಯುತ್ತೆ. ಪ್ರತಿ ಪ್ರದೇಶದ ಅನನ್ಯತೆ ಕಾಪಾಡಕ್ಕೆ ಸಿದ್ಧವಿಲ್ಲದ ವ್ಯವಸ್ಥೆ ಬೇಗ ಕುಸಿಯುತ್ತೆ ಗುರು! ಹಾಗಾಗ್‍ಬಾರ್ದು ಅನ್ನೋದೇ ನಮ್ಮ ಕಳಕಳಿ. ಇದೇ ಭಾರತೀಯರೆಲ್ಲರ ಕಳಕಳಿ. ಅಲ್ಲಾ! ನಮ್ಮ ಮೇಲೆ ಯಾವ ತೆರನಾದ ಹೇರಿಕೇನೂ ಇಲ್ಲದೇನೇ, ಬರೀ ನಮ್ಮತನಾನೇ ಇಟ್ಕೊಂಡು ನಾವೆಲ್ಲಾ ರಾಷ್ಟ್ರೀಯ ಏಕತೆ ಸಾಧಿಸಕ್ ಆಗಲ್ವಾ? ಆಗಲ್ಲಾ ಅಂದ್ರೆ ಹೀಗೆ ಹಿಂದೀನಾ ಕಡ್ಡಾಯ ಮಾಡೋ ಹೇರಿಕೆಯಿಂದ ಆದೀತಾ? ಮುಂದಿನ ಪರಿಣಾಮಗಳ ಅರಿವಿಲ್ಲದೆ ಅಂಥಾ ದೊಡ್ ಸ್ಥಾನದಲ್ ಇರೋರು ಹಿಂಗ್ ಹೇಳಿಕೆ ಕೊಡೋದು ಸರೀನಾ ಗುರು? ಇದ್ಯಾವ ಸೀಮೆ ರಾಷ್ಟ್ರೀಯ ಏಕತೆಯೆಡೆಗೆ ಇಡ್ತಿರೋ ಹೆಜ್ಜೆ ಗುರು?

ಇದರ ಹಿಂದಿರೋ ನಿಜ ಉದ್ದೇಶ?

ಇವ್ರು ಹೇಳಿದಂಗೇ ಒಂದು ಭಾಷೆ ಇಡೀ ಭಾರತಾನ ಒಗ್ಗೂಡ್ಸುತ್ತೆ ಅನ್ನೋದಾದ್ರೆ, ಸಚಿವರು ಹಿಂದೀ ಅದೆಂಗೇ ಒಗ್ಗೂಡ್ಸುತ್ತೆ ಅನ್ನೋ ಪ್ರಶ್ನೆಗೂ ಉತ್ರ ಕೊಡಬೇಕಾಗುತ್ತೆ. ನೀವು ಭಾರತದ ಬೇರೆ ರಾಜ್ಯಗಳಿಗೆ ಹೋಗೋದಾದ್ರೆ ಅಲ್ಲಿ ಹಿಂದಿಯಲ್ಲಿ ವ್ಯವಹರಿಸಬಹುದು ಅಂತಾರೇನೊ? ಹಾಗಾದ್ರೆ ಏನಾದೀತು ಅಂತಾ ಒಂದ್ಸಲ ಯೋಚಿಸಿ, ಬೆಂಗಳೂರಿಗೆ ಬರೋ ಕನ್ನಡೇತರರೆಲ್ಲಾ ಹಿಂದಿ ಕಲಿತು ಬರ್ತಾರೆ, ಅವರ ಜೊತೆ ಸಂಪರ್ಕಕ್ಕೆ ಬರೋ ಬೆಂಗಳೂರಿನ ಕನ್ನಡಿಗರೆಲ್ಲಾ ರಾಷ್ಟ್ರೀಯ ಏಕತೆ ಕಾಪಾಡಕ್ಕೇ ಅಂತಾ ಹಿಂದೀಲಿ ವ್ಯವಹರುಸ್ತಾರೆ. ಅಂದ್ರೆ ನಮ್ಮೂರಿನ ಅಂಗಡೀಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸ ಮಾಡಕ್ಕೂ ಹಿಂದೀ ಬರಬೇಕಾಗುತ್ತೆ. ಬೀದಿಕಸ ಗುಡ್ಸೋ ಜಾಡಮಾಲಿಗೂ, ಮನೆಗೆ ಪೇಪರ್, ಹಾಲು ಹಾಕೋನಿಗೂ ಹಿಂದಿ ಬರಬೇಕಾಗುತ್ತೆ. ಹಾಗೆ ಬರಬೇಕು ಅಂದ್ರೆ ಆರುಕೋಟಿ ಕನ್ನಡಿಗರಿಗೆಲ್ಲಾ ಹಿಂದೀನ ಕಲುಸ್ಬೇಕಾಗುತ್ತೆ. ಈಗ ಕಪಿಲ್ ಸಿಬಾಲ್ ಸಾಹೇಬ್ರು ಮಾಡಕ್ ಹೊಂಟಿರೋದೂ ಇಂಥಾದ್ದೇ ನಡೆ ಅಲ್ವಾ? ಇದರರ್ಥ ಇಡೀ ಭಾರತಾನಾ ಹಿಂದಿ ಮಾತಾಡೊರಿಗೆ ಸ್ವರ್ಗ ಮಾಡಬೇಕು, ಹಿಂದಿ ತಾಯ್ನುಡಿಯೋರು ಎಲ್ಲಿಗ್ ಹೋದ್ರೂ ತೊಂದ್ರೆ ಇಲ್ಲದೆ ಬದುಕೋ ಹಾಗಾಗಬೇಕು ಅಂತನ್ನೋ ಒಂದೇ ಉದ್ದೇಶ ಅಲ್ವಾ ಕಾಣೋದು? ಅಥ್ವಾ ‘ಆರು ಕೋಟಿ ಕನ್ನಡಿಗರೆಲ್ಲಾ ಕರ್ನಾಟಕದಿಂದ ಹೊರಗೇ ಹೋಗಿ ಬದುಕ್ತಾರೆ ಅಂತೇನಾದ್ರೂ ಇವರಿಗೆ ಬರ್ಕೊಟ್ಟಿದೀವಾ?’ ಅಂತಾ ಕೇಳಬೇಕಾಗಿದೆ. ಇಡೀ ಭಾರತದ ಜನಸಂಖ್ಯೆಯ 20% ಜನರಿಗಾಗಿ ಉಳಿದ 80% ಜನರ ಮೇಲೆ ಒಂದು ಭಾಷೆ ಕಲೀಬೇಕು ಅಂತನ್ನೋ ನಿಯಮಾನ ಅದೆಂಗೆ ರಾಷ್ಟ್ರೀಯ ಏಕತೆಯ ಕ್ರಮ ಅನ್ನಕ್ಕಾಗುತ್ತೇ ಗುರು!

ನಾಡಿನ ಒಗ್ಗಟ್ಟು ಮುರಿಯುವ ತುಷ್ಟೀಕರಣ ನಿಲ್ಲಲಿ!

ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ತೆರವಾಗಿದ್ದ ಐದು ಸ್ಥಾನಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಕೊಳ್ಳೇಗಾಲದಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಕೊಳ್ಳೇಗಾಲದಲ್ಲಿ ವಿವಿಧ ತಮಿಳು ಸಂಘದ ಪ್ರತಿನಿಧಿಗಳು ಅಲ್ಲಿನ ತಮಿಳು ಭಾಷಿಕರನ್ನು ಬಿಜೆಪಿಗೆ ಬೆಂಬಲಿಸಿ ಮತನೀಡುವಂತೆ ಮನವೊಲಿಸುತ್ತಿದ್ದ ಬಗ್ಗೆ ಒಂದು ವರದಿ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ್ದರಿಂದ ಸಂತುಷ್ಟಗೊಂಡ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ ತಮಿಳು ಸಂಘಗಳ ಪ್ರಮುಖರು ಇಲ್ಲಿಗೆ ಬಂದು ಬಿಜೆಪಿಯ ಪರವಾಗಿ ಮತ ಬೇಡಿದ್ದಲ್ಲದೆ, ಸಂಬಂಧಿಗಳಿಂದ ಬಿಜೆಪಿಗೆ ಮತಹಾಕುವಂತೆ ಶಿಫಾರಸ್ಸು ಮಾಡಿದರು ಅನ್ನುತ್ತಿದೆ ಈ ವರದಿ.

ವಲಸಿಗರನ್ನು ಪ್ರತ್ಯೇಕಿಸುವ ಮತ ರಾಜಕಾರಣ!

ಒಂದು ನಾಡಿನಲ್ಲಿ ನೆರೆ ರಾಜ್ಯಗಳಿಂದ, ಹೊರನಾಡುಗಳಿಂದ ಜನತೆ ವಲಸೆ ಬಂದು ಬದುಕುವುದು ಸಹಜವಾಗಿದ್ದು, ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಕಾಲಾನಂತರ ಬೆರೆತು ಆಯಾ ನಾಡಿಗರೇ ಆಗುವುದು ಸಹಜ. ಆದರೆ ಇಂತಹ ವಲಸಿಗರನ್ನು ಮತಗಳಿಕೆಯ ಉದ್ದೇಶದಿಂದ, ಮುಖ್ಯವಾಹಿನಿಯಿಂದ ಹೊರಗಿಟ್ಟು ಪ್ರತ್ಯೇಕತೆಯ ಬೀಜ ಬಿತ್ತಿ ತುಷ್ಟೀಕರಿಸುವ ಕೆಲಸಕ್ಕೆ ನಾಡಿನ ರಾಜಕೀಯ ಪಕ್ಷಗಳು ಕೈ ಹಾಕುತ್ತಿರುವುದು ಸರಿಯಲ್ಲ. ಜನರನ್ನು ಒಡೆದು ಆಳುವ ಇಂತಹ ಕ್ರಮಗಳು ನಮ್ಮ ನಾಡಿನ ಏಳಿಗೆಗೆ, ನಾಡಿಗರ ಒಗ್ಗಟ್ಟಿಗೆ ಮಾರಕವಾಗಿದೆ ಗುರು!

ಸಾರ್ವಜನಿಕ ಸ್ಥಳಗಳ ಹೆಸರಿಡಲೊಂದು ನಿಯಮ!

ಸಾರ್ವಜನಿಕ ಸ್ಥಳಗಳಿಗೆ ಹೊಸದಾಗಿ ಹೆಸರಿಡಬೇಕಾದ್ರೆ ಅಥವಾ ಇರೋ ಹೆಸರು ಬದಲಾಯಿಸಬೇಕಾದ್ರೆ ಅನುಸರಿಸಬೇಕಾಗಿರೊ ನಿಯಮಾವಳಿಗಳ್ನ ಕರ್ನಾಟಕ ಸರ್ಕಾರ ಪ್ರಕಟಿಸಿದೆ ಅನ್ನೋ ಸುದ್ದಿ ಬಂದಿದೆ ಗುರು! ಇದು ಸರಿಯಾದ ರೀತೀಲಿ ನಾಡಿನ ಸ್ವಂತಿಕೆ ತೋರಿಸಕ್ಕೆ ಇರೋ ಒಳ್ಳೇ ವ್ಯವಸ್ಥೆ ಆಗೋದಾದ್ರೆ ಸಕ್ಕತ್ ಒಳ್ಳೇದು.

ಹೊಸ ಹೆಸರು ಇಡೋವಾಗ...

ಯಾವುದೇ ಒಂದು ರಸ್ತೆ, ಬಡಾವಣೆ, ಬೀದಿ, ಪಾರ್ಕು, ವೃತ್ತಗಳಿಗೆ ಹೊಸದಾಗಿ ಹೆಸರು ಇಡೋವಾಗ ಆಯಾ ಪ್ರದೇಶದ ಗಣ್ಯರ ಹೆಸರಿಡ್ತೀವಿ ಅನ್ನೋ ನಿಲುವು ಸರಿಯಾಗಿದೆ. ಹಾಗೇ ತಾನೆ ಹೆಚ್ಚಿನ ಪ್ರದೇಶಗಳಿಗೆ ಹೆಸರು ಬಂದಿರೋದು... ದೊರೆಸಾನಿ ಪಾಳ್ಯ, ಮಾರೇನಹಳ್ಳಿ, ಮುನಿಯಪ್ಪ ಬ್ಲಾಕ್, ಬೈಯ್ಯಪ್ಪನಹಳ್ಳಿ... ಹೀಗೆ. ನಮ್ಮೂರ ಜಾಗಗಳಿಗೆ ನಮ್ಮ ಹಿರಿಯರ ಹೆಸರುಗಳನ್ನು ಇಡೋದು ಒಂದು ರೀತಿಯಲ್ಲಿ ಅವರಿಗೆ ನಾವು ತೋರಿಸೋ ಗೌರವಾನೆ ಆಗಿದೆ. ಆದರೆ ಈ ಕ್ರಮ ಈಗಾಗ್ಲೆ ಇರೋ ಹೆಸರುಗಳನ್ನು ಬೇಡದೆಯೇ ಬದಲಿಸೋ ಕ್ರಮವಾಗದ ಹಾಗೆ ಈ ವ್ಯವಸ್ಥೆ ಜೋಪಾನವಾಗಿ ಇರಬೇಕು. ಆಲಮಟ್ಟಿ ಜಲಾಶಯಕ್ಕೆ ಆ ಹೆಸರೇ ಸೂಕ್ತವಾಗಿದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಸರಿನ ಅಗತ್ಯವೇನಿತ್ತು? ಮುಂದಿನ ದಿನಗಳಲ್ಲಿ ಅದು ಶಾಸ್ತ್ರಿ ಅಣೆಕಟ್ಟು ಅಂತಲೋ ಎಲ್.ಬಿ.ಎಸ್ ಅಣೆಕಟ್ಟೆ ಅಂತಲೋ ಆಗೋದಕ್ಕಿಂತಲೂ ಆಲಮಟ್ಟಿ ಅಣೆಕಟ್ಟೆ ಅನ್ನೋ ಹೆಸರೇ ಒಳ್ಳೆಯದಲ್ವಾ?

ಇರೋ ಹೆಸರು ಬದಲಾಯಿಸೋ ಬಗ್ಗೆ!

ಈಗಾಗಲೇ ಇರೋ ಹೆಸರುಗಳನ್ನು ಆದಷ್ಟೂ ಹಾಗೇ ಉಳುಸ್ಕೋಬೇಕು. ಈ ವರದಿಯಲ್ಲಿ ಬರ್ದಿರೋ ಹಾಗೆ ಎರಡೆರಡು ಮರಿಯಪ್ಪನ ಪಾಳ್ಯ ಇದೆ, ಅದಕ್ಕಾಗಿ ಒಂದರ ಹೆಸರನ್ನು ಬದಲಾಯಿಸೋಣ ಅನ್ನೋ ನಿಲುವು ಸರಿಯಿಲ್ಲ. ಅದರ ಬದಲು ದಾಸರಹಳ್ಳಿಗೆ ಇದ್ದಹಾಗೆ ಟಿ.(ತುಮಕೂರು) ದಾಸರಹಳ್ಳಿ, ಮಾಗಡಿ ರಸ್ತೆ ದಾಸರಹಳ್ಳಿ ಅನ್ನೋ ಹೆಸರುಗಳು ಉತ್ತಮವಾಗಿದೆ. ಯಾವುದೇ ಪ್ರದೇಶ/ ಸ್ಮಾರಕಕ್ಕೆ ಇರೋ ಹೆಸರನ್ನು ಅದರ ಐತಿಹಾಸಿಕ ಮಹತ್ವವನ್ನು ಕಡೆಗಣಿಸೋ ಹಾಗೆ ಬದಲಾಯಿಸೋದು ಮಾತ್ರಾ ಆಗಬಾರದು. ಅಂದ್ರೆ ಮೇಟಗಳ್ಳಿಯನ್ನು ಮಥುರಾನಗರ ಮಾಡೋದಾಗಲೀ, ಸೂಳೆಕೆರೆಯನ್ನು ಶಾಂತಿಸಾಗರ ಮಾಡೋದಾಗ್ಲಿ, ಆನೆಪಾಳ್ಯವನ್ನು ಗಜೇಂದ್ರನಗರ ಎನ್ನುವುದಾಗಲೀ, ಮಂಡ್ಯವನ್ನು ಮಾಂಡವ್ಯ ನಗರ ಅಂತ ಬದಲಾಯಿಸೋದಾಗ್ಲೀ ಒಳ್ಳೇದಲ್ಲ ಗುರು!

ಯಾವ ಹೆಸರಿಡಬೇಕು?

ನಮ್ಮ ನಾಡಿನ ತುಂಬಾ ಇರೋ ಬಡಾವಣೇಗಳ/ ರಸ್ತೆಗಳ ಹೆಸರುಗಳನ್ನೇ ನೋಡಿ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ದೀನದಯಾಳ ಉಪಾಧ್ಯಾಯ ರಸ್ತೆ, ರವೀಂದ್ರನಾಥ ಟ್ಯಾಗೂರ್ ನಗರ, ಜಯಪ್ರಕಾಶ ನಗರ, ಇಂದಿರಾ ನಗರ, ಸಂಜಯ ನಗರ, ಶಾಸ್ತ್ರಿ ನಗರ, ರಾಜೀವ್ ಗಾಂಧಿ ಆಸ್ಪತ್ರೆ, ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆ... ಹೀಗೆ ತುಂಬಿಸಿಬಿಟ್ಟಿದ್ದೀವಿ. ರಾಷ್ಟ್ರನಾಯಕರಿಗೆ ಗೌರವ ತೋರುಸ್ಬೇಕು ಅಂತಾ ಆಯಾ ಜಾಗದ ಹೆಸರು ಬದಲಿಸೋ ಹವ್ಯಾಸ ಒಳ್ಳೇದೇನಲ್ಲಾ ಗುರು. ಜಯಪ್ರಕಾಶ ನಾರಾಯಣರಿಗೆ ಗೌರವ ಕೊಡಬೇಕು ಅಂತಾ ಪುಟ್ಟೇನಳ್ಳಿ ಹೆಸರನ್ನು ಜೆ.ಪಿ ನಗರ 7ನೇ ಹಂತ ಅಂತಾ ಮಾಡೋದು ಎಷ್ಟು ಸರಿ? ಒಟ್ಟಿನಲ್ಲಿ ಕನ್ನಡದ ಹೆಸರುಗಳನ್ನೇ, ಕನ್ನಡಿಗರ ಹೆಸರುಗಳನ್ನೇ ಕನ್ನಡನಾಡಿನ ಎಲ್ಲ ಕಡೆ ಇಡೋದೆ ಈ ಏರ್ಪಾಡಿನ ಗುರಿಯಾಗಿರಬೇಕು.

ಕೊನೆಹನಿ: ಇಂದಿನ ಮಹಾರಾಷ್ಟ್ರದ ಅನೇಕ ಊರುಗಳ ಮೂಲ ಹೆಸರು ಕನ್ನಡದ್ದು, ಆ ಕಾರಣದಿಂದ ಆ ಪ್ರದೇಶಗಳು ಹಿಂದೆ ಕನ್ನಡನಾಡಿನ ಭಾಗವೇ ಆಗಿದ್ದವು ಎಂದು ಸಾಧಿಸಬಹುದು ಎಂಬುದಾಗಿ ಅನೇಕ ಹಿರಿಯ ಸಂಶೋಧಕರುಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ನಮ್ಮೂರಿನ ಹೆಸರುಗಳು ಕನ್ನಡದಲ್ಲಿರಬೇಕಾದ್ದು ಐತಿಹಾಸಿಕವಾಗಿಯೂ ಮಹತ್ವದ್ದೇ ಆಗಿದೆ ಅನ್ಸಲ್ವಾ ಗುರು?

ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಕೊಡ್ಸೋ ಹೊಣೆಗಾರಿಕೆ ಯಾರ‍್ದು?

2004ರಲ್ಲಿ ಎದ್ದು ತಣ್ಣಗಾಗಿದ್ದ ಬಿರುಗಾಳಿ ಇದೀಗ ಮಗಧೀರ ಅನ್ನೋ ತೆಲುಗು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮತ್ತೆ ಭುಗಿಲೆದ್ದಿದೆ ಗುರು! ಇದು ಭಾರತ, ಯಾರು ಎಲ್ಲಿ ಯಾವ ಭಾಷೆಯ ಚಿತ್ರಾನ್ನಾದ್ರೂ ಬಿಡುಗಡೆ ಮಾಡೋ ಹಕ್ಕಿದೆ ಇತ್ಯಾದಿಗಳನ್ನೆಲ್ಲಾ ತೆಲುಗು ಚಿತ್ರಬ್ರಹ್ಮರು ಮಾತಾಡ್ತಿರೋ ಸುದ್ದಿ ಮಾಧ್ಯಮಗಳಲ್ಲಿ ಕಾಣ್ತಾ ಇದೆ. ಆದ್ರೆ ಮೇಲಿನ ಸಿನಿಮಾ ಗೈಡ್‍ನ ನೋಡಿ... ಅದರಲ್ಲಿ ಬೆಂಗಳೂರಿನ ಟಾಕೀಸುಗಳಲ್ಲಿ ಎಷ್ಟ್ರಲ್ಲಿ ಕನ್ನಡ ಸಿನಿಮಾ ಇದೆ ಅಂತಾ ಗೊತ್ತಾಗುತ್ತೆ!

ಮೊದಲು ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರ ಸಿಗಬೇಕು!

ಕೆಲವಾರಗಳ ಹಿಂದೆ ತೆಲುಗಿನ ಮಗಧೀರ ಅನ್ನೋ ಚಿತ್ರ ಬೆಂಗಳೂರಿನ ಚಿತ್ರಮಂದಿರಗಳೂ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಿದೆ. ಇದರಿಂದ ಕನ್ನಡದ ಅನೇಕ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗಿರೋದೇ ಅಲ್ಲದೆ ಚೆನ್ನಾಗಿ ಓಡ್ತಾ ಇದ್ದ ಹಲವಾರು ಚಿತ್ರಗಳಿಗೆ ಎತ್ತಂಗಡಿಯ ಭಾಗ್ಯವೂ ದೊರಕಿದೆ. ಕನ್ನಡ ಚಿತ್ರಗಳಿಗೆ ನಮ್ಮೂರಲ್ಲೇ ಚಿತ್ರಮಂದಿರಗಳು ಸಿಗುತ್ತಿಲ್ಲಾ ಅನ್ನೋದು ಎಷ್ಟು ಸರಿ? 2004ರ ಹೊತ್ತಿಗೆ ಪರಭಾಷಾ ಚಿತ್ರ ಬಿಡುಗಡೆ ಬಗ್ಗೆ ಏಳು ವಾರಗಳ ಗಡುವು, ನಾಲ್ಕು ಪ್ರಿಂಟು, 21 ಕೇಂದ್ರಗಳು ಅನ್ನೋ ಕಡಿವಾಣಾನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಜಾರಿಗೊಳಿಸೋ ಮಾತಾಡಿದ್ರೂ ಕೂಡಾ ಪರಿಣಾಮಕಾರಿಯಾಗಿ ಜಾರಿ ಮಾಡಿದ್ನ ಕಾಣಲಿಲ್ಲ. ತೆಲುಗು ಚಿತ್ರರಂಗದೋರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದ್ರೆ ತಮ್ಮ ಗಳಿಕೆಗೆ ಪೆಟ್ಟು ಬೀಳುತ್ತೆ ಅಂತಾ ಕುಯ್‍ಗುಟ್ತಿರೋದ್ನ ನೋಡುದ್ರೆ ಅಳಬೇಕೋ ನಗಬೇಕೋ ತಿಳೀತಿಲ್ಲಾ ಗುರು! ಕನ್ನಡ ಚಿತ್ರಗಳಿಗೆ ಮೂಲ ಮಾರುಕಟ್ಟೆಯೂ ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ ಮಾರುಕಟ್ಟೆಯೂ ಆಗಿರುವ ನಮ್ಮ ನಾಡಲ್ಲಿ ನಮ್ಮ ಚಿತ್ರಗಳು ಚಿತ್ರಮಂದಿರದ ಕೊರತೆ ಎದುರಿಸಿ ಮುಗ್ಗರಿಸಿ ಬಿದ್ರೂ ಪರವಾಗಿಲ್ಲಾ, ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಇರಬಾರದು ಅನ್ನೋದು ಯಾವ ಸೀಮೆ ನ್ಯಾಯಾ?


ಸರ್ಕಾರ ಮತ್ತು ವಾಣಿಜ್ಯ ಮಂಡಲಿ ಕಣ್‍ತೆರೆಯಲಿ!

ನೀವೇ ನೋಡಿ, ಇಡೀ ಬೆಂಗಳೂರಲ್ಲಿರೋ ಒಟ್ಟು ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ಪರಭಾಷೆಯ ಚಿತ್ರಗಳು ಆಕ್ರಮಿಸಿಕೊಂಡು ಕೂತಿವೆಯಲ್ಲಾ... ಹೀಗಾದ್ರೆ ಕನ್ನಡ ಸಿನಿಮಾಗಳ ಗತಿ ಏನು? ಲಕ್ಷಾಂತರ ರೂಪಾಯಿ ಸುರಿದು ಸಿನಿಮಾ ತೆಗೆದೋರು ಚಿತ್ರಮಂದಿರ ಸಿಗ್ತಿಲ್ಲಾ ಅಂತಾ ಪೇಪರ‍್ನಲ್ಲಿ ಜಾಹೀರಾತು ಹಾಕೋ ಗತಿ ಬಂತಲ್ಲಪ್ಪಾ? ಕನ್ನಡ ಚಿತ್ರರಂಗಾನ ಬುಡಸಮೇತ ಕೊಚ್ಚಿಕೊಂಡು ಹೋಗೋ ಪರಭಾಷಾ ಚಿತ್ರಪ್ರವಾಹಾನ ತಡೆಗಟ್ಟೋ ಅಣೆಕಟ್ಟೆಯಾಗಿ ನಿಲ್ಲಬೇಕಾದ್ದು ನಮ್ಮ ರಾಜ್ಯಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲಸ. ಇವರು ಅದೇನು ಮಾಡ್ತಾರೋ ಗೊತ್ತಿಲ್ಲಾ, ಆದ್ರೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಕನ್ನಡದ ಚಿತ್ರಗಳಿಗೆ ಮೊದಲ ಆದ್ಯತೆ, ಇದಾಗಿ ಮಿಕ್ಕುದ್ರೆ ಬೇರೆ ಭಾಷೆಯ ಚಿತ್ರಗಳಿಗೆ ಜಾಗ ಅನ್ನೋದನ್ನು ಜಾರಿಗೆ ತರಬೇಕಾಗಿದೆ ಅನ್ನೋದಂತೂ ಸರಿಯಾಗಿದೆ! ಅಲ್ವಾ ಗುರು?

ರಾಷ್ಟ್ರೀಯ ಏಕತೆಗೆ ದಾರಿ ಯಾವುದಯ್ಯಾ?

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸಹಮತದ ಬೆಂಬಲವನ್ನು ನಮ್ಮ ಬಿ.ಜೆ.ಪಿ ಸರ್ಕಾರ ಅನೇಕ ಗಣ್ಯರ ಹೇಳಿಕೆಗಳ ಮೂಲಕ ಗಳಿಸಿಕೊಳ್ತಾಯಿದೆ. ಈ ಗಣ್ಯರ ಪಟ್ಟಿಗೆ ಹೊಸ ಸೇರ್ಪಡೆ ನಮ್ಮ ನಾಡಿನ ಗೌರವಾನ್ವಿತ ನಿವೃತ್ತ ನ್ಯಾಯಾಧೀಶ, ಮಾಜಿ ರಾಜ್ಯಪಾಲ, ರಾಜ್ಯಸಭಾ ಸದಸ್ಯ ನ್ಯಾ.ಮಾ. ರಾಮಾಜೊಯಿಸ್. ಇವರ ಹೇಳಿಕೆ ಪ್ರತಿಮೆ ಸ್ಥಾಪನೆಗೆ ಬೆಂಬಲವಾಗಿರುವವರ, ರಾಜ್ಯಸರ್ಕಾರದ, ಸರ್ಕಾರ ನಡೆಸುತ್ತಿರುವ ಬಿಜೆಪಿಯ, ಮತ್ತದರ ಚಿಂತನಾ ಮನೆಯ ಸಿದ್ಧಾಂತದ ಸಾರವಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ. ಪ್ರತಿಮೆ ಅನಾವರಣ ಮಾಡಿದ ಯಡ್ಯೂರಪ್ಪನವರ ಭಾಷಣವೂ ಇದನ್ನೇ ಧ್ವನಿಸುತ್ತಾ ಇದೆ.

ನಿಜ ರಾಷ್ಟ್ರೀಯತೆಯೋ? ಹುಸಿ ರಾಷ್ಟ್ರೀಯತೆಯೋ?

ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಸಿನಿಕ/ ಅಸಹಜ/ ಕಾಲ್ಪನಿಕ ಅಭಿಪ್ರಾಯಗಳಿಂದ ತುಂಬಿರುವ ಸಿದ್ಧಾಂತ ಪ್ರತಿಪಾದಿಸುತ್ತಿರುವ ಇವರುಗಳು ಹೇಳಿರೋ ಮಾತುಗಳ್ನೇ ನೋಡಿ. ಇದರ ಸಾರ ಏನಪ್ಪಾ ಅಂದ್ರೆ "ಇದೀಗ ಕನ್ನಡಪರರು ತಿರುವಳ್ಳುವರ್ ಪ್ರತಿಮೆ ವಿಷಯದಲ್ಲಿ ವಿರೋಧ ತೋರುವುದು ಕನ್ನಡದ ಅಭಿಮಾನದ ಹೆಸರಲ್ಲಿ ರಾಷ್ಟ್ರೀಯತೆಗೆ, ರಾಷ್ಟ್ರೀಯ ಏಕತೆಗೆ, ರಾಷ್ಟ್ರೀಯ ಭ್ರಾತ್ವತ್ವಕ್ಕೆ ಮಾರಕವಾಗಿರುವ ನಡವಳಿಕೆಗಳು." "ನಾವು ಮೊದಲು ಭಾರತೀಯರು. ಆಮೇಲೆ ಕನ್ನಡಿಗರು, ತಮಿಳರು, ತೆಲುಗರು..." ಇತ್ಯಾದಿ. ಭಾರತವೆನ್ನುವ ಈ ಮನೆಯಲ್ಲಿ ವಾಸಮಾಡುವ ಸೋದರರಾದ ತಮಿಳರು, ಕನ್ನಡಿಗರ ನಡುವೆ ಎಂತಹ ಒಡಕೂ ಇಲ್ಲ, ಇದ್ದರೂ ನಾವೆಲ್ಲಾ ಸೋದರರಾದ್ದರಿಂದ ಕನ್ನಡಿಗರು ಅವುಗಳ ಬಗ್ಗೆ ಅಪಸ್ವರ ಎತ್ತಬಾರದು. ಯಾರ ಕೋಣೆಗೆ ಯಾರಾದರೂ ಹೋಗಿ ವಾಸ ಮಾಡಬಹುದು. ಒಬ್ಬನ ತಟ್ಟೆಗೆ ಇನ್ನೊಬ್ಬ ಕೈಹಾಕುತ್ತಿದ್ದರೂ ಸಹಿಸಿಕೊಳ್ಳಬೇಕು.
ಇದರಂತೆ ನಮ್ಮೂರಿನ ರೈಲ್ವೇ ಕೆಲಸಗಳು ಕನ್ನಡಿಗರಿಗೆ ಸಿಗದಿದ್ದರೂ ಸರಿಯೇ, ಬಿಹಾರಿಗಳಿಗೆ ಸಿಕ್ಕರೂ ಸರಿಯೇ. ಯಾಕಂದರೆ ಅವರೂ ಭಾರತೀಯರು. ರೈಲ್ವೇ ಡಿ ದರ್ಜೆ ಕೆಲಸಗಳಿಗೆ ಹಿಂದಿಯಲ್ಲಿ ಅರ್ಜಿ ಬರೆಯಬೇಕಾದ್ದು ಕಡ್ಡಾಯವಾದರೂ, ಹಿಂದಿಯವನಿಗಿಂತ ಚೆನ್ನಾಗಿ ಹಿಂದಿ ಬರಲಾರದ ಕಾರಣದಿಂದಾಗಿ ಆ ಕೆಲಸಗಳು ನಮ್ಮ ಜನರ ಕೈತಪ್ಪಿದರೂ ಸರಿಯೇ. ಏಕಂದರೆ ಉತ್ತರದ ಹಿಂದಿಯವನೂ ಭಾರತೀಯನಲ್ಲವೆ. ಬೆಳಗಾವಿ ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರದಲ್ಲಿದ್ದರೂ ಒಂದೇ. ಯಾಕಂದರೆ ಅದೂ ಭಾರತವೇ. ಕಾವೇರಿ ನೀರು ಕನ್ನಡದವರಿಗಿಲ್ಲದೆ ತಮಿಳುನಾಡಿಗೆ ಬಿಟ್ಟರೂ ಸರಿಯೇ. ಅದೂ ಭಾರತವೇ. ಆದ್ರೆ ತಮಾಷೆ ನೋಡಿ. ಇಂತಹ ಬೋಧನೆ ರಾಷ್ಟ್ರೀಯತೆಯ ಸಿದ್ಧಾಂತ ಪ್ರತಿಪಾದಕರಿಗೆ ನೆಲೆ ಕೊಟ್ಟ ಕನ್ನಡದವರ ಮೇಲೆ ಹೇರಲಾಗುತ್ತದೆಯೇ ಹೊರತು ಇವರನ್ನು ತಿರಸ್ಕರಿಸುತ್ತಾ ಬಂದಿರುವ ತಮಿಳರ ಮೇಲಲ್ಲ. ಇಡೀ ಭಾರತವನ್ನು ಭಾಷಾವಾರು ಪ್ರಾಂತ್ಯವಾಗಿಸಿರುವುದು ದೊಡ್ಡತಪ್ಪು ಎಂಬುದು ಇವರ ಅನಿಸಿಕೆ. ಪರಸ್ಪರರ ನಡುವಿನ ಭಿನ್ನತೆಗಳನ್ನೂ, ಭಿನ್ನಾಭಿಪ್ರಾಯಗಳನ್ನು ಬಚ್ಚಿಟ್ಟುಕೊಳ್ಳುತ್ತಾ ಸಾಂಸ್ಕೃತಿಕ ವಿನಿಮಯದ ಕ್ರಮಗಳನ್ನು ಮಾಡುವುದು ಭಾರತದ ಏಕತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಾರೆ ಇವರು.
ಸಮ ಗೌರವದ ಒಕ್ಕೂಟವೇ ರಾಷ್ಟ್ರೀಯ ಸೌಹಾರ್ದಕ್ಕೆ ದಾರಿ!
ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವ, ತಮಿಳುನಾಡಲ್ಲಿ ತಮಿಳಿನ ಸಾರ್ವಭೌಮತ್ವ, ಭಾರತದ ಪ್ರತಿ ರಾಜ್ಯಕ್ಕೂ ಸಮಾನ ಗೌರವ, ಎಲ್ಲಾ ವಿವಾದಗಳ ಪರಿಹಾರಕ್ಕೂ ಸೂತ್ರಬದ್ಧವಾದ ನೀತಿಗಳು, ವಿವಾದಗಳನ್ನು ಬಗೆಹರಿಸಲು ಪಕ್ಷಪಾತವಿಲ್ಲದ-ಸಂಸದರ ಸಂಖ್ಯೆಯ ಆಧಾರದ ಮೇಲೆ ವಾಲಲಾರದ ನ್ಯಾಯತಕ್ಕಡಿ ವ್ಯವಸ್ಥೆ, ಒಬ್ಬರ ಬಗ್ಗೆ ಒಬ್ಬರಿಗೆ ಗೌರವ ಹೆಚ್ಚಿಸುವ ಹಾಗೂ ಒಬ್ಬರ ಮೇಲೊಬ್ಬರು ಅತಿಕ್ರಮಣ ನಡೆಸದ ಸಾಮಾಜಿಕ ವ್ಯವಸ್ಥೆಗಳು ಭಾರತವನ್ನು ಬಲಿಷ್ಠಗೊಳಿಸಲು, ಭಾರತದ ಏಕತೆಯನ್ನು ಕಾಪಾಡಲು ಇರುವ ಏಕೈಕ ಸಾಧನವೆನ್ನುವುದನ್ನು ಇವರ ಸಿದ್ಧಾಂತ ಮರೆತು ಬಿಟ್ಟಿದೆ ಗುರು! ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರು ಇದನ್ನು ಅರಿತು ತಿದ್ದಿ ನಡೆಯೋದು ಒಳ್ಳೇದಲ್ವಾ ಗುರು? ಒಟ್ನಲ್ಲಿ ಎಲ್ಲ ಭಾರತೀಯರ ಹಿತ, ಸ್ವಾಭಿಮಾನ, ತಮ್ಮತನಗಳನ್ನು ಉಳಿಸಿಕೊಳ್ಳಲು, ಸಮಾನತೆಯ ಸಮಗೌರವದ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ಮಣೆ ಹಾಕಲು ನಾಡಿನ ಜನತೆ ಮುಂದಾಗಬೇಕಿದೆ ಗುರು!

ಪುಗಸಟ್ಟೆ ಉಪದೇಶ ನಮಗೆ ಮಾತ್ರಾ ಕೊಡೋದು ಮಾನವತೇನಾ?

“ಕನ್ನಡಿಗರು ಸಹಿಷ್ಣುಗಳು, ನಾವು ಈ ರೀತಿ ನಡ್ಕೊಂಡ್ರೆ ನಮ್ಮ ಇಮೇಜಿಗೆ ಧಕ್ಕೆ ಬರುತ್ತೆ, ಕನ್ನಡಿಗರಿಗೆ ಪರಂಪರೆಯಿಂದ ಬಂದಿರೋ ಒಳ್ಳೇ ಹೆಸರು ಹಾಳಾಗುತ್ತೆ, ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತೆ.... ನಮ್ಮ ಔದಾರ್ಯ, ಪರಸ್ಪರ ಸೋದರ ಬಾಂಧವ್ಯ ತೋರುಸ್ಬೇಕು"... ಈ ಸಲ ತಿರುವಳ್ಳುವರ್ ವಿಷಯಕ್ಕೆ ಕೇಳಿಬರುತ್ತಿರೋ ಮಾತುಗಳಿವು. ಹಿಂದೆ ನೂರಾರು ಘಟನೆಗಳಲ್ಲಿ ಈ ಮಾತುಗಳು ಕೇಳಿ ಬಂದಿತ್ತು. ಸದಾ ಇಂಥಾ ವಿಶ್ವಮಾನವತ್ವದ, ಉದಾತ್ತತೆಯ, ಆದರ್ಶದ ಬುದ್ಧಿಮಾತುಗಳನ್ನು ಕೇಳೋ ಭಾಗ್ಯ ಕನ್ನಡದೋರಿಗೆ ಬಿಟ್ಟು ಇನ್ಯಾರಿಗೆ ತಾನೆ ಇದೆ ಹೇಳಿ ಈ ಪರಪಂಚದಲ್ಲಿ?!!

ಹಿಂದಿನದ್ನೂ ಒಸಿ ನೆನಪಿಸಿಕೊಳ್ಮಾ!

ಈ ಹಿಂದೆ ರೈಲ್ವೇಯಲ್ಲಿ ಕೆಲಸಗಳು ಖಾಲಿ ಇದ್ದಾಗ ಬಿಹಾರಿಂದ ಬಿಟ್ಟಿ ರೈಲು ಹಾಕಿ ಜನ್ರುನ್ ತುಂಬಿಕೊಂಡು ಬಂದಿದ್ದನ್ನು ವಿರೋಧ ಮಾಡಿದಾಗಲೂ ಇಂಥವೇ ಮಾತುಗಳನ್ನು ಕೇಳಿದ್ವಿ. ಬ್ಯಾಂಕುಗಳಲ್ಲಿ ಕನ್ನಡ ಬಳಸ್ತಿಲ್ಲಾ ಅಂದಾಗ, ಹಿಂದಿ ಹೇರಿಕೆಯನ್ನು ವಿರೋಧಿಸಿದಾಗ, ಕರ್ನಾಟಕದಲ್ಲಿ ಕನ್ನಡದಲ್ಲಿ ನಮಗೆ ಗ್ರಾಹಕ ಸೇವೆ ಸಿಗಬೇಕು, ಕನ್ನಡದಲ್ಲಿ ನಾಮಫಲಕಗಳಿರಬೇಕು.... ಹೀಗೆ ಯಾವುದೇ ಸಂದರ್ಭದಲ್ಲಾಗಿರಲಿ ಕನ್ನಡದವರಿಗೆ ಪುಗಸಟ್ಟೆ ಉಪದೇಶಾಮೃತದ ಸುರಿಮಳೆ ಗ್ಯಾರಂಟಿ.

ನಾವು ಕೇಳ್ತೀವಿ ಅಂತಾ ಬುದ್ಧಿ ಹೇಳಕ್ ಬರ್ತಾರೆ!

“ಹೌದಲ್ವಾ? ಮಾನವತೆಗೆ ಮೀರಿದ್ದು ಯಾವುದಿದೆ? ಈ ಗಡಿ, ನುಡಿ, ಪ್ರತಿಮೆ ಇವೆಲ್ಲಾ ವಿಷಯಗಳಿಗಾಗಿ ಕಚ್ಚಾಡೋದು ಮಾನವತೆಗೆ ಎಸಗೋ ಅಪಚಾರ...." ಅಂತಾ ನಾವೆಲ್ಲಾ ನಂಬೋ ಹಾಗೇ ಸಾಗುತ್ತೆ ಈ ವಾದಸರಣಿ. ಇವರು ಹೇಳೋದೇ ನಿಜವಾದರೇ ಯಾವುದೇ ದೇಶಕ್ಕೆ ಗಡಿ ರಕ್ಷಣಾ ಪಡೆಯೂ ಬೇಕಿಲ್ಲ, ಸೈನ್ಯವೂ ಬೇಕಿಲ್ಲ. ನಮ್ಮತನದ ಮೇಲಾಗೋ ಆಕ್ರಮಣವನ್ನು ವಿರೋಧಿಸಿ ತಡೀತೀವಿ ಅನ್ನೋ ಸ್ವಾಭಿಮಾನಕ್ಕೂ, ಬೇರೆಯೋರ ಬಗ್ಗೆ ತೋರಿಸೋ ಆಕ್ರಮಣಕಾರಿ ಮನೋಭಾವದ ಸಣ್ಣ ಮನಸ್ಸಿಗೂ ನಡುವಿನ ವ್ಯತ್ಯಾಸಾನಾ ಈ ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮರೆತು ಬಿಡ್ತಾರೆ. ಇಂಥಾ ಮಾತುಗಳು ’ಕಡಿಯೋ ಮೊದಲು ಕುತ್ತಿಗೆಗೆ ಹಚ್ಚೋ ಬೆಣ್ಣೆ’ ಅಂತಾ ಗುರುತಿಸಲಾರದಷ್ಟು ಕುರಿಗಳಲ್ಲ ನಮ್ಮ ಜನಾ ಗುರು!
ಒಳ್ಳೇತನಾನ ದೌರ್ಬಲ್ಯ ಮಾಡೋ ಉಪದೇಶ!
ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಕೆಲಸಾನೆಲ್ಲಾ ಬೇರೆಯೋರಿಗೆ ಕೊಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಊರಲ್ಲೇ ನಿಮ್ಮನ್ನು ಪರಕೀಯರನ್ನಾಗಿ ಮಾಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಕೈಯ್ಯಿಂದ್ಲೇ ನಿಮ್ಮ ನದಿ ನೀರುನ್ನ ಕಿತ್ಕೊಂಡು ಹೋಗ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಯೋಜನೆಗಳನ್ನು ನೆರೆಯವರು ಕಸಗೋತಿದ್ರು.... ಹೀಗೆ ಒಳ್ಳೇವ್ರು ಒಳ್ಳೇ ಇಮೇಜು ಅಂತಾ ಎಲ್ಲಾನು ಸಹಿಸ್ಕೊಂಡು ಸ್ವಾಭಿಮಾನಾನ ಬಲಿಕೊಡಿ ಅನ್ನೋ ಉಪದೇಶಾ ಸದಾ ಕನ್ನಡದೋರಿಗೇ ಕೊಡೋಹಾಗ್ ಕಾಣೂತ್ತಲ್ಲಾ ಗುರು! ನಿಜವಾಗ್ಲೂ ಯಾರಿಗಾದ್ರೂ ಯಾಕೆ ಬೇಕಾಗಿದೆ ಜಗಳಾ? ಯಾರಿಗಾದ್ರೂ ಯಾಕೆ ಬೇಕು ಹೋರಾಟ? ಜೈಲಿನ ಕಂಬಿ ಎಣಿಸಾಟ? ಪೊಲೀಸರ ಬೂಟು ಲಾಟಿ ಏಟು ತಿನ್ನಾಟ? ನಿಜವಾಗ್ಲೂ ಸಮಾನ ಗೌರವಾ ಕೊಡಬೇಕು ಅನ್ನೋ ಪಾಠದ ಅಗತ್ಯ ಇವತ್ತು ಕನ್ನಡದೋರಿಗೆ ಅಜೀರ್ಣ ಆಗೋಷ್ಟು ಆಗೋಗಿದೆ. ಇರಲಿ, ಸಹನೆಯಿಂದ ಇರೋಣ, ಸಣ್ಣ ಮನಸ್ಸು ಬೇಡ... ಆದ್ರೆ ಈ ತಿರುವಳ್ಳುವರ್ ವಿಷ್ಯದಲ್ಲೇ ತಮಿಳುನಾಡು ಸಮಾನ ಗೌರವ ಕೊಡಕ್ಕೆ ಸಿದ್ಧಾನಾ? ಅವರೂ ಸರ್ವಜ್ಞಂಗೊಳ್ಳೆ ಜಾಗ ಕೊಟ್ಟು, ಹೊಗೇನಕಲ್ ವಿಷಯದಲ್ಲಿ ಜಂಟಿ ಗಡಿ ಸಮೀಕ್ಷೆಗೆ ಒಪ್ಪಿ, ಸುಮ್ನೆ ಶಾಸ್ತ್ರೀಯ ಭಾಷೆ ಪಟ್ಟಕ್ಕೆ ತೊಡರುಗಾಲು ಹಾಕೋದ್ನ ನಿಲ್ಸಿ ಸೌಹಾರ್ದತೆ ತೋರುಸ್ಲಿ ಅಂತಾ ಅವರಿಗೊಂದು ಮಾತ್ನ ಈ ವಿಶ್ವಮಾನವರು ಹೇಳ್ತಾರಾ ಗುರು?
Related Posts with Thumbnails