ವಿ.ಎಚ್.ಪಿ ಅಂದ್ರೆ ವಿಶ್ವ ಹಿಂದೀ ಪರಿಷತ್ತಾ?


ಮಹಾರಾಷ್ಟ್ರಾ ವಿಧಾನಸಭೆಯಲ್ಲಿ ಇತ್ತೀಚಿಗೆ ಅಬು ಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು ಮುಖಕ್ ಮಂಗಳಾರತಿ ಎತ್ತುಸ್ಕೊಂಡಿದ್ದಕ್ಕೆ ಏನು ಕಾರಣ? ‘ಅವರು ಮರಾಠಿಯಲ್ಲಿ ಪ್ರಮಾಣವಚನ ತೊಗೊಂಡಿಲ್ಲಾ’ ಅನ್ನೋದು ಎಂ.ಎನ್.ಎಸ್ ಕೊಡೋ ಕಾರಣವಾದರೆ ‘ಅಜ್ಮಿ ಅವ್ರು ಹಿಂದೀಲಿ ಪ್ರಮಾಣ ವಚನ ತೊಗೊಂಡಿದ್ದಕ್ಕೆ’ ಅನ್ನೋದು ಮಾಧ್ಯಮಗಳ, ರಾಷ್ಟ್ರೀಯ ಪಕ್ಷಗಳ ಹಾಗೂ ಅವುಗಳ ನಾಯಕರುಗಳು ಕೊಡೋ ಕಾರಣ. ಈ ವಿಷಯವಾಗಿ ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಶ್ರೀ ಅಶೋಕ್ ಸಿಂಘಾಲ್ ಅವ್ರು ಒಂದು ಹೇಳಿಕೆ ಕೊಟ್ಟಿದ್ದಾರೆ. ಹಿಂದೀಲಿ ಪ್ರಮಾಣ ವಚನ ಸ್ವೀಕಾರ ಮಾಡೋದನ್ನು ವಿರೋಧ ಮಾಡೋ ರಾಜ್ ಠಾಕ್ರೆಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಅಪ್ಪಣೆ ಕೊಡ್ಸಿದಾರೆ. ಇಷ್ಟೇ ಅಲ್ಲಾ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೇಲೂ ಸಂಘದ ಮುಖಂಡರಾದ ಮೋಹನ್ ಭಾಗವತ್ ಅವರೂ ಇದೇ ವಿಷಯವಾಗಿ ಇನ್ನೊಂದು ಧಾಟಿಯ ಮಾತುಗಳನ್ನಾಡಿದ್ದಾರೆ.

ಏಕಂತೆ ಇವರ ವಿರೋಧ?

ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ಗಳೆರಡೂ ಅದ್ಯಾಕೋ ಹಿಂದುತ್ವಕ್ಕೂ ಹಿಂದೀಗೂ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲ ಮಾಡ್ಕೊಂಡಂಗಿದೆ. ಇವರ ಮಾತುಗಳ ಪ್ರಕಾರ ಹಿಂದೀನ ವಿರೋಧಿಸೋದು ದೇಶದ್ರೋಹದ ಕೆಲಸ ಮತ್ತು ಹಿಂದೂ ಧರ್ಮದ್ರೋಹದ ಕೆಲಸ ಆಗಿದ್ದಂಗಿದೆ. ಭಾಗವತರಂತೂ ತಮ್ಮ ಭಾಷಣದಲ್ಲಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಭಾಷೆಯನ್ನೂ, ರಾಷ್ಟ್ರಪ್ರೇಮದ ಸಂಕೇತವಾಗಿ ಹಿಂದಿಯನ್ನೂ ಬಿಂಬಿಸಿ ಮಾತಾಡಿದರು. ಹೊರದೇಶದ ಭಾಷೆ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ತೊಗೊಂಡರೆ ಪರ್ವಾಗಿಲ್ಲಾ, ನಮ್ಮ ದೇಶದ ಹಿಂದೀಲಿ ಬೇಡ ಅಂದ್ರೆ ಏನರ್ಥ? ಎಂದು ಗುಟುರು ಹಾಕುದ್ರು. ಇದೆಂಗಿದೆ ಅಂದ್ರೆ ‘ಪಕ್ಕದ ಮನೆಯೋರ ಚಾಕುವಿನಿಂದ ಚುಚ್ಚುದ್ರೆ ನೋವಾಗುತ್ತೇ ಅಂತಾ ಚೀರೋದು ಸರೀ, ಆದ್ರೆ ನಮ್ಮ ಮನೆಯ ಚಾಕುವಿನಿಂದಲೇ ಚುಚ್ಚುದ್ರೆ ನೋವಾಗುತ್ತೆ ಅಂದ್ರೆ ಏನರ್ಥ?’ ಅಂದಂಗಿದೆ. ವಿಶ್ವ ಹಿಂದೂ ಪರಿಷತ್ ಆಗ್ಲೀ ಆರೆಸ್ಸೆಸ್ ಆಗ್ಲೀ ತಿಳ್ಕೋಬೇಕಾಗಿರೋದು ಹಿಂದೂ ಅನ್ನೋ ಪದಕ್ಕೂ ಹಿಂದಿ ಅನ್ನೋ ಪದಕ್ಕೂ ಯಾವ ಸಂಬಂಧವೂ ಇಲ್ಲಾ... ಹಾಗೇನಾದ್ರೂ ಹಿಂದೂ ಆದವನು ಹಿಂದೀಗೆ ಗೌರವ ಸಲ್ಲಿಸಲೇ ಬೇಕು ಅಂತ ಅಂದ್ಕೊಂಡಿದ್ರೆ ಇವರ ಹಿಂದುತ್ವದ ಪಟ್ಟಿಯಿಂದ ಭಾರತದ ಅರ್ಧಕ್ಕಿಂತ ಹೆಚ್ಚು ಹಿಂದುಗಳು ಹೊರಗಾಗ್ತಾರೆ ಅಷ್ಟೆ. ಹಾಗೇ ಆರೆಸ್ಸೆಸ್ ಮುಖಂಡರು ಕೂಡಾ ಇಂಗ್ಲಿಷ್‌ನಂತಹ ಸಮಾನ ಶತ್ರು(?)ವನ್ನು ತೋರಿಸಿ ಭಾರತಾನಾ ಒಂದು ಮಾಡ್ತೀವಿ ಅನ್ನೋ ತಪ್ಪು ದಾರಿಯಿಂದ ಹೊರಬರೋದು ಒಳ್ಳೇದು ಅನ್ಸುತ್ತೆ.

ವಿಶ್ವ ಹಿಂದೀ ಪರಿಷತ್ ಆಗದಿರಲಿ!

ಸಹಜವಾಗಿ ಭಾರತದಲ್ಲಿರೋ ವೈವಿಧ್ಯತೇನಾ ಒಪ್ಕೊಂಡು ಎಲ್ಲಾ ಭಾಷೆಗಳೂ ಅವುಗಳ ನಾಡಿನಲ್ಲಿ ಸಾರ್ವಭೌಮ ಭಾಷೆಗಳಾಗಬೇಕು ಅನ್ನೋ ನಿಲುವನ್ನು ತೋರಿಸಿದ್ದರೆ ಈ ಎರಡೂ ಸಂಸ್ಥೆಗಳ ಖ್ಯಾತಿಗೆ ತಕ್ಕಂಗೆ ಇರೋದು ಗುರು. ‘ಮಹಾರಾಷ್ಟ್ರದಲ್ಲಿ ಅಜ್ಮಿಯವರು ಮರಾಠಿಯಲ್ಲಿ ಪ್ರಮಾಣ ವಚನ ತೊಗೊಳ್ಳೋ ಮೂಲಕ ತಾವು ಮರಾಠಿ ಮುಖ್ಯವಾಹಿನೀಲಿ ಇದೀನಿ ಅನ್ನೋದನ್ನು ಎತ್ತಿ ಹಿಡಿಯಬೇಕಿತ್ತು. ಆ ಮೂಲಕ ದೇಶದಲ್ಲಿ ಭಾಷಾವಾರು ಮನಸ್ತಾಪಗಳನ್ನು ಹುಟ್ಟು ಹಾಕದಂತೆ ನಡೆದುಕೊಳ್ಳಬೇಕಿತ್ತು’ ಅನ್ನೋ ಒಂದು ಮಾತನ್ನು ಆಡಿದ್ದಿದ್ರೆ ಬಹುಷಃ ‘ಹೌದಪ್ಪಾ! ಇವರಿಗೆ ನಿಜವಾಗ್ಲೂ ದೇಶದ ಬಗ್ಗೆ ಕಾಳಜಿಯಿದೆ’ ಅಂತ ಜನ ನಂಬೋಕಾಗ್ತಿತ್ತು. ಈಗ ಇವರಾಡಿರೋ ಮಾತುಗಳು ‘ಅಣ್ಣಾ... ನಾವೆಲ್ಲಾ ಒಂದೇ ದೇಶದವರು, ನಿಮ್ಮ ಮನೆಗೆ ನುಗ್ಗಿ ನಿಮ್ಮುನ್ನ (ನಿಮ್ಮ ನುಡಿಯನ್ನ) ಹೊರಗಾಕುದ್ರೂ ನೀವು ದೇಶದ ಒಗ್ಗಟ್ಟಿಗಾಗಿ ಸಹಿಸಿಕೊಳ್ಳೀ. ದೇಶ ಅನ್ನೋದ್ರು ಮುಂದೆ ಮನೆ ಅನ್ನೋದು ಗೌಣಾ’ ಅಂದಂಗಿದೆಯಲ್ವಾ? ಈ ಎರಡೂ ಸಂಸ್ಥೆಗಳೋರು ನಿಮ್ಮ ನಿಮ್ಮ ಭಾಷೆಗಳ ಬಗ್ಗೆ ನಮಗೇನೂ ಅಗೌರವವಿಲ್ಲ. ಆದ್ರೆ ಅವುಗಳನ್ನು ನಿಮ್ಮ ಮನೆಗಳಲ್ಲಿ ಬಳಸಿಕೊಳ್ಳಿ. ಬೀದಿಗೆ ಬಂದಾಗ ಹಿಂದೀನ ಬಳ್ಸಿ ಅನ್ನೋ ಥರಾ ರಾಗ ಪಾಡುದ್ರೆ ಹೆಂಗೇ ಗುರು? ಒಟ್ನಲ್ಲಿ ಏನೋಪ್ಪಾ... VHP ಅಂದ್ರೆ ವಿಶ್ವ ಹಿಂದೀ ಪರಿಷತ್ತಾ ಅಂತಾ ಜನಕ್ಕೆ ಅನುಮಾನ ಶುರುವಾಗಿದೆ... ಏನಂತೀ ಗುರು?

ಸಚಿನ್, ಠಾಕ್ರೆ ಮತ್ತು ಮಹಾ...ರಾಷ್ಟ್ರ!


(ಫೋಟೋ : ಎನ್.ಡಿ.ಟಿ.ವಿ ಕೃಪೆ)

ಮೊನ್ನೆ ಮೊನ್ನೆ ಭಾರತೀಯ ಕ್ರಿಕೆಟ್‌ನ ರನ್ ಮಾಂತ್ರಿಕ ಸಚಿನ್ ರಮೇಶ್ ತೆಂಡೂಲ್ಕರ್ ಆಡಿದ ಮಾತುಗಳ ಬಗ್ಗೆ ಮತ್ತು ಅದಕ್ಕೆ ಶಿವಸೇನೆಯ ದೊಡ್ಡೆಜಮಾನ್ರಾದ ಬಾಳಾ ಸಾಹೆಬ್ ಠಾಕ್ರೆಯವರು ನೀಡಿದ ಪ್ರತಿ ಹೇಳಿಕೆಯ ಬಗ್ಗೆ ಭಾರತದ ಎಲ್ಲಾ ಮಾಧ್ಯಮದೋರೂ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಈ ಘಟನಾವಳಿಗಳು ಜನರಲ್ಲಿ ರಾಜ್ಯ ದೊಡ್ಡದೋ - ದೇಶ ದೊಡ್ಡದೋ, ಭಾಷೆ ದೊಡ್ಡದೋ - ರಾಷ್ಟ್ರೀಯತೆ ದೊಡ್ದದೋ ಅನ್ನೋ ಚರ್ಚೆಗೆ ಕಾರಣವಾಗಿದೆ. ನಿಸ್ಸಂದಿಗ್ಧವಾಗಿ ಎಲ್ಲಾ ಮಾಧ್ಯಮಗಳೂ ಭಾಷೆ ಮತ್ತು ಪ್ರಾದೇಶಿಕ ವಾದಾನಾ ದೇಶದ್ರೋಹದ್ದು ಅನ್ನೋ ಹಾಗೆ ಚಿತ್ರುಸ್ತಾ ಇದಾರೆ. ಪ್ರಾದೇಶಿಕ ಚಿಂತನೆ ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕ ಅಂತಾ ಶಂಖಾ ಹೊಡ್ಕೊತಾ ಇದಾರೆ. ನಾವೇನೂ ಕಮ್ಮಿ ಇಲ್ಲ ಅನ್ನುವ ಹಾಗೆ ಕನ್ನಡನಾಡಿನ ಮಾಧ್ಯಮಗಳೂ ಇದರ ಬಗ್ಗೆ ಪುಂಖಾನುಪುಂಖವಾಗಿ ಬರೀತಿದಾರೆ. ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿಜಯ ಕರ್ನಾಟಕದಲ್ಲಿ ಬರಹಗಾರ ಡಿ. ಅಶೋಕ್‌ರಾಮ್ ಅನ್ನೋರು ಸಚಿನ್ ಮುಂಬೈನ ಯಜಮಾನಿಕೆ ಬಗ್ಗೆ ಆಡಿದ ಮಾತನ್ನೇ ಮರೆಮಾಡಿ ’ನಾನು ಮೊದಲು ಭಾರತೀಯ ಅಂದಿದ್ದಕ್ಕೇ ಹೀಗೆ ಬಾಳಾಠಾಕ್ರೆ ಎಗರಾಡಿದಾರೆ, ಭಾಷೆಗಿಂತ ದೇಶ ದೊಡ್ದು... ಬ್ಲಾ ಬ್ಲಾ ಬ್ಲಾ’ ಅಂತೆಲ್ಲ ಬರೆದಿದ್ದಾರೆ. ಇದೇನಪ್ಪಾ ಹಿಂಗಾ... ಅಂತಾ ಏನ್‍ಗುರು ಈ ವಿಷಯದಲ್ಲಿ ಇಣುಕೌನೆ ನೋಡ್ಮಾ ಬಾ ಗುರು!

ಸಚಿನ್ ಮಾತಿನಲ್ಲಿರೋದೇನು?

ಸಚಿನ್ ಹೇಳಿರೋದ್ರ ಸಾರಾಂಶ “ನಾನೊಬ್ಬ ಮಹಾರಾಷ್ಟ್ರೀಯ ಅಂತಾ ಹೆಮ್ಮೆ ಇದೆ. ಆದರೆ ಅದಕ್ಕೆ ಮೊದಲು ನಾನು ಭಾರತೀಯ. ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು” ಅನ್ನೋದಾಗಿದೆ. ಅತ್ಯಂತ ದೇಶಭಕ್ತಿಯ ಮಾತುಗಳಿವು ಅನ್ನಿಸೋ ಹಾಗಿರೋ ಈ ಮಾತಲ್ಲಿ ಎಲ್ಲಾ ಸರಿಯೇ ಇದೆ ಅನ್ಸುತ್ತೆ. ಆದರೆ ಇದರಲ್ಲಿ ಬಾಳಾಠಾಕ್ರೆಯವರನ್ನು ಕೆರಳಿಸಿದ್ದು ‘ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾನು ಮೊದಲು ಭಾರತೀಯ’ ಅನ್ನೋ ಮಾತುಗಳು. ಮಾಮೂಲಿ ದಿನದಲ್ಲಾಗಿದ್ರೆ ಈ ಮಾತಿಗೆ ಅಷ್ಟು ಮಹತ್ವವೇ ಇರುತ್ತಿರಲಿಲ್ಲವೇನೋ? ಯಾಕಂದ್ರೆ ಠಾಕ್ರೆ ಕೂಡಾ ಭಾರತ ಮಾತೆ, ಭಾರತ ಜನತೆ, ಭಾರತೀಯತೆ, ಜೈ ಹಿಂದ್ ಅಂತಾನೇ ಇಷ್ಟು ವರ್ಷ ಮಾತಾಡಿದ್ದಿದೆ. ಆದ್ರೆ ಈಗ ಪರಿಸ್ಥಿತಿ ಹೆಂಗೆ ಭಿನ್ನಾ ಅಂತೀರಾ? ಇತ್ತೀಚಿಗಷ್ಟೇ ಅಲ್ಲಿನ ವಲಸಿಗರು ತಾವು ಭಾರತೀಯರು, ಎಲ್ಲಿಗೆ ಬೇಕಾದ್ರೂ ಹೋಗಿ ಬಾಳುವ ಹಕ್ಕಿದೆ, ನಮ್ಮ ನಡೆ ನುಡಿ ಆಚರಣೆ ಸಂಸ್ಕೃತಿಗಳನ್ನು ನಮಗೆ ಬೇಕಾದಂತೆ ಆಚರಿಸೋ/ ತೋರಿಸಿಕೊಳ್ಳೋ ಹಕ್ಕಿದೆ ಅಂತಾ ಸಂವಿಧಾನದ ಕಡೆಗೆ ಬೊಟ್ಟು ತೋರುಸ್ತಿದಾರೆ. ವಿಷ್ಯಾ ಇಷ್ಟೇ ಅಲ್ವೇ... ಮುಂಬೈ ನಗರ ಪಾಲಿಕೆಯ ಆಳ್ವಿಕೆ ಹಿಂದೀಲಿ ಆಗಬೇಕು ಇವರ‍್ಯಾಕೆ ಕೇಳುದ್ರು? ಇವ್ರು ೩೦ ವರ್ಷದಿಂದ ಮಹಾರಾಷ್ಟ್ರದಲ್ಲೇ ಬದುಕ್ತಾ ಇದ್ರೂ ಮರಾಠಿ ಕಲಿಯಲ್ಲ ಅಂತಾ ಯಾಕಂದ್ರು? ಹಿಂದೀನಾ ರಾಷ್ಟ್ರಭಾಷೆ ಅಂತ ಯಾಕಂದ್ರು? ಈಗ ಮುಂಬೈನ ಮಿನಿ ಉತ್ತರ ಪ್ರದೇಶ ಅಂತಾ ಹ್ಯಾಗಂದ್ರು? ಹಾಗೇ ಮರಾಠಿ ಮುಖ್ಯವಾಹಿನೀಲಿ ಬೆರೆಯದೇ ಹೋದ್ರೆ, ಅದು ಮುಂಬೈ ಮತ್ತು ಮಹಾರಾಷ್ಟ್ರಗಳ ಮರಾಠಿ ಜನರ ಬದುಕಿನ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋದೆಲ್ಲಾ ಇವರಿಗೆ ಗೊತ್ತಿಲ್ಲವೇನು?

ಸಚಿನ್ ಬೆಂಬಲಿಸಿ ಮಾತಾಡ್ದೋರು...

ಭಾರತ, ಮಹಾರಾಷ್ಟ್ರಾ, ಮುಂಬೈ ನಡುವೆ ಏನ್ ಸಂಬಂಧಾ ಇದೆ? ಮರಾಠಿಗೆ ಮುಂಬೈನಲ್ಲಿ ಏನ್ ಮಹತ್ವ ಇದೆ? ಅನ್ನೋದನ್ನೆಲ್ಲಾ ಯೋಚುಸ್ದೆ ಭಾರತ ಅನ್ನೋದ್ರು ಮುಂದೆ ಎಲ್ಲಾ ಗೌಣ ಅನ್ನೋ ಪ್ರಚಾರಕ್ಕೆ ಮರುಳಾಗಿರೋ ಸಾಮಾನ್ಯರು ಸಚಿನ್‍ನ ಬೆಂಬಲಿಸಿ ಮಾತಾಡ್ತಾರೆ. ಅಷ್ಟ್ಯಾಕೆ? ಯಾರಿಗೆ ಇದರಿಂದಾಗಿ ಲಾಭ ಇದೆಯೋ ಅವರೆಲ್ಲಾ ಇದನ್ನು ಬೆಂಬಲಿಸಿರೋರಲ್ಲಿ ಸೇರಿದ್ದಾರೆ. ಸಚಿನ್‌ಗಾದ್ರೂ ಬೇಕಿರೋದು ಅಖಿಲ ಭಾರತ ಮಟ್ಟದ ಬೆಂಬಲ ತಾನೇ? ಲಾಲೂ, ನಿತಿನ್, ಮುಲಾಯಂಸಿಂಗ್, ಅಮರ್‌ಸಿಂಗ್, ಮಾಯಾವತಿಯಂತಹ ಜನರಿರೋ ಪ್ರದೇಶದವರಿಗೆ ಸಚಿನ್‍ನ ಈ ಹೇಳಿಕೆಯಿಂದ ಲಾಭಾ ತಾನೇ? ಬೆಂಗಳೂರಿನಲ್ಲಿರಲಿ, ಮುಂಬೈಯಲ್ಲಿರಲಿ ಹೊರಗಿಂದ ಬಂದು ನೆಲೆಸಿರೋ ವಲಸಿಗರೆಲ್ಲಾ ಇದು ಲಾಭದಾಯಕವಾದ ಹೇಳಿಕೇನೆ. ಹಾಗಾಗಿ ಈ ಮಾತನ್ನು ಪಾಪಾ... ಹಿಂದೆ ಮುಂದೆ ನೋಡದೇ ಈ ಜನಾ ಮತ್ತವರ ಹಿಡಿತದ ಮಾಧ್ಯಮಗಳೋರೂ ಮೇಲೆ ಬಿದ್ದು ಬೆಂಬಲಿಸುತ್ತಾರೆ. ಇನ್ನು ರಾಷ್ಟ್ರೀಯ ಪಕ್ಷಗಳೋರು ಸಮರ್ಥಿಸೋದ್ರಲ್ಲಿ ಅನುಮಾನಾನೇ ಬೇಡ. ರಾಷ್ಟ್ರ ಅಂದ್ರೇನು ಅನ್ನೋದ್ರ್ ಬಗ್ಗೆ ಸರಿಯಾದ ಪರಿಕಲ್ಪನೇನೆ ಇಲ್ಲದ, ವೈವಿಧ್ಯತೆಯನ್ನು ಶಾಪವೆಂದೂ ಗೌಣವೆಂದೂ, ರಾಷ್ಟ್ರದ ಒಗ್ಗಟ್ಟಿಗೆ ವೈವಿಧ್ಯತೆಯನ್ನೇ ಅಳಿಸಿ ಹಾಕಬೇಕು ಅನ್ನೋ ಮನಸ್ಥಿತಿಯ ಜನರಿಂದ ಇನ್ನೇನು ತಾನೇ ನಿರೀಕ್ಷಿಸಬಹುದು? ಭಾಷಾವಾರು ಪ್ರದೇಶಗಳನ್ನು ಯಾಕೆ ರಚಿಸಲಾಯಿತು? ಕರ್ನಾಟಕ ಏಕೀಕರಣದ ಇತಿಹಾಸ ಏನು? ಭಾಷೆ ಅಂದರೇನು? ಸಮಾಜದಲ್ಲಿ ಅದರ ಪಾತ್ರವೇನು? ಎಂಬುದನ್ನೆಲ್ಲಾ ಅರಿಯದವರು ಬೆಂಬಲಿಸೋದು ಸಹಜ. ಭಾಷಾವಾರು ಪ್ರಾಂತ್ಯಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾತ್ರ ರಚಿಸಲಾಯಿತು ಎಂದು ಬೂಸಿ ಬಿಡುವವರು... ಸಚಿನ್ ಹೇಳಿಕೇನ ಬೆಂಬಲಿಸೋದು ಸಹಜ.

ಸಚಿನ್ ಮಾತಿನಲ್ಲಿರೋ ಟೊಳ್ಳುತನ ಏನು?

ಈಗ ಸಚಿನ್ ಹೇಳಿರೋ ಹಾಗೇ ‘ನಾನು ಮೊದಲು ಭಾರತೀಯ’ ಅನ್ನೋದ್ರ ಅರ್ಥ ಏನು? ಭಾರತದ ಹಿತಕ್ಕಾಗಿ ನಾನು ನನ್ನ ರಾಜ್ಯದ ಹಿತವನ್ನು, ನನ್ನ ಭಾಷೆಯ ಹಿತವನ್ನು ಬಿಟ್ಟುಕೊಡ್ತೀನಿ ಅಂತಾನಾ? ಯುದ್ಧದಂತಹ ಕೆಲವು ಸನ್ನಿವೇಶಗಳಲ್ಲಿ ತಾತ್ಕಾಲಿಕವಾಗಿ ಈ ರೀತಿ ಬಿಟ್ಟುಕೊಡುವುದನ್ನು ಒಪ್ಪಬಹುದು. ಸಾಮಾನ್ಯ ಸಂದರ್ಭದಲ್ಲಿ ಈ ಮಾತಿನ ಅರ್ಥವೇನು? ನನ್ನ ದೇಶದಲ್ಲಿ ಭಾಷೆ, ಪ್ರಾದೇಶಿಕತೆಯ ಆಧಾರದ ಮೇಲೆ ಒಗ್ಗಟ್ಟು ಮುರಿಯುವ ಕೆಲಸ ಮಾಡುವುದಿಲ್ಲ ಅಂತಾನಾ? ಹೌದೂ ಅನ್ನೋದಾದ್ರೆ ಸರಿ. ಇವತ್ತಿನ ದಿವಸ ಒಗ್ಗಟ್ಟು ಮುರಿಯೋ ಮಾತು ಯಾವುದು? ಎಲ್ಲಾ ಪ್ರದೇಶಗಳಿಗಿರುವ ಭಾಷಾ, ಸಾಂಸ್ಕೃತಿಕ ಅನನ್ಯತೆಗಳನ್ನು ಕಾಯ್ದುಕೊಳ್ಳಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಇಡೀ ದೇಶದಲ್ಲಿ ಯಾವುದೋ ಒಂದು ಪ್ರದೇಶದ ಭಾಷೆಯನ್ನು ಆಡಳಿತದಲ್ಲಿ ಜಾರಿಗೊಳಿಸಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಊರ ದೇವತೆ ಅಣ್ಣಮ್ಮ ದೊಡ್ಡವಳೋ? ಕನ್ನಡತಾಯಿ ರಾಜರಾಜೇಶ್ವರಿ ದೊಡ್ಡವಳೋ? ಭಾರತಮಾತೆ ದೊಡ್ಡವಳೋ? ಎಂಬ ಪ್ರಶ್ನೆಗೆ ಏನುತ್ತರ? ಭಾರತ ಮಾತೆ ದೊಡ್ಡೋಳು, ಕನ್ನಡಮ್ಮ ಅವಳ ಮಗಳು, ಅಣ್ಣಮ್ಮ ಮೊಮ್ಮಗಳು ಅನ್ನೋದು ಸರೀನಾ ಗುರು? ನಿಜವಾಗಿಯೂ ತಾಯಿ ಅಣ್ಣಮ್ಮನೆಂದರೂ, ರಾಜೇಶ್ವರಿಯೆಂದರೂ, ಭಾರತ ಮಾತೆಯೆಂದರೂ ಒಬ್ಬಳೇ ಅಲ್ಲವೇ? ಭಾಳ ದಿನದ ಮೇಲೆ ತಾಯ್ನಾಡಿಗೆ ಹಿಂತಿರುಗಿದ ದೇಶಪ್ರೇಮಿ ಇಲ್ಲಿ ಬೆಂಗಳೂರಿನ ಮಣ್ಣನ್ನು ಎತ್ತಿ ಕಣ್ಣಿಗೊತ್ತಿಕೊಂಡ್ರೆ ಅದು ಬೆಂಗಳೂರಿನ ಮಣ್ಣು ಮಾತ್ರವೇನು? ಅದು ಭಾರತದ ಮಣ್ಣಲ್ಲವೇನು? ಮುಂಬೈ ಅಂದರೆ ಭಾರತವಲ್ಲವೇನು? ನಾನು ಮಹಾರಾಷ್ಟ್ರೀಯ ಅಂದರೆ ಭಾರತೀಯ ಅಂದ ಹಾಗಲ್ಲವೇ? ಸಚಿನ್ ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋ ಮಾತಂದದ್ದು ತಪ್ಪಲ್ವಾ? ನಾನು ಮಹಾರಾಷ್ಟ್ರೀಯನೂ ಹೌದು, ಭಾರತೀಯನೂ ಹೌದು ಅನ್ನಬೇಕಾದ್ದು ಸರಿಯಲ್ವಾ? ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋದು ಕೃತಕ ಅನ್ಸಲ್ವಾ ಗುರು? ಸಚಿನ್‍ಗೆ ಭಾರತೀಯತೆ ಮತ್ತು ಮಹಾರಾಷ್ಟ್ರೀಯತೆ ಬಂದಿರೋದು ಒಟ್ಟೊಟ್ಗೆ ಅಲ್ವಾ? ಒಂದುಕ್ ಇನ್ನೊಂದು ವಿರುದ್ಧ ಅನ್ನೋ ಮನಸ್ಥಿತಿ ಸರೀನಾ? ನಿಜವಾಗಿ ನಾಡೊಡೆಯುತ್ತಿರುವವರು ಯಾರೆಂದರೆ ಅಣ್ಣಮ್ಮ, ರಾಜೇಶ್ವರಿ, ಭಾರತಾಂಬೆ ಅನ್ನೋ ಈ ಮೂವರಲ್ಲೂ ಒಬ್ಬಳನ್ನೇ ಕಾಣದೆ ಮೂವರಲ್ಲೂ ಪರಸ್ಪರ ಪೈಪೋಟಿಯ ಮೂರು ಬೇರೆ ಬೇರೆ ದೈವಗಳನ್ನು ಕಾಣುತ್ತಿರುವ ಹುಸಿ ರಾಷ್ಟ್ರೀಯವಾದಿಗಳು ಅನ್ನುಸ್ತಿಲ್ವಾ ಗುರು?

ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು!

ಮುಂಬೈ ಎಲ್ಲಾ ಭಾರತೀಯರಿಗೂ ಸೇರಿದ್ದು ಅನ್ನುವುದರ ಅರ್ಥವೇನು ? ಮುಂಬೈಗೆ ಯಾವ ಭಾರತೀಯ ಬೇಕಾದರೂ ಬರಬಹುದು, ಇರಬಹುದು, ದುಡಿಯಬಹುದು ಅನ್ನುವುದು ಮಾತ್ರವೇ ಆದರೆ ಇದು ಒಪ್ಪುವ ಮಾತೇ. ಆದರೆ ತಡೆಯಿಲ್ಲದ ವಲಸೆ, ಎಲ್ಲಾ ಕೆಲಸದಲ್ಲೂ ತಮ್ಮವರನ್ನು ತಂದು ತುಂಬುವ ಉಮ್ಮೇದಿ, ಮರಾಠಿ ಭಾಷಿಕರೆಂದರೆ ಟೀ, ಕಾಫಿ, ಡಬ್ಬಾವಾಲಾ, ರಿಕ್ಷಾವಾಲಗಳು ಎನ್ನುವಂತೆ ಮುಂಬೈನಲ್ಲಿ ಸನ್ನಿವೇಶ ಹುಟ್ಟಿಕೊಂಡಿರುವಾಗ, ರೈಲ್ವೇ ಬ್ಯಾಂಕು ಮೊದಲಾದ ಎಲ್ಲಾ ಕೆಲಸಕ್ಕೂ ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ನಡೆಯುತ್ತಿರುವಾಗ, ಅಂಥಾ ಪರೀಕ್ಷೆಗಳಿಗೆ ಬಿಟ್ಟಿ ರೈಲುಗಳಲ್ಲಿ ಬಿಹಾರ, ಉತ್ತರ ಪ್ರದೇಶಗಳಿಂದ ಜನರನ್ನು ಕರೆತರುತ್ತಿರುವಾಗ, ಆಡಳಿತ ಭಾಷೆಯನ್ನು ಹಿಂದಿಗೆ ಬದಲಾಯಿಸಿ ಎನ್ನುವಾಗ... ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎನ್ನುವ ಮಾತಿಗೆ ಬೇರೆಯೇ ಅರ್ಥ ಹುಟ್ಕೊಳುತ್ತೆ. ಮುಂಬೈ ಮರಾಠಿಗರಿಗೆ ಸೇರಿದ್ದಲ್ಲಾ ಎನ್ನುವ ಹೇಳಿಕೆಗೂ ಮುಂಬೈ ಇಡೀ ಭಾರತೀಯರಿಗೆಲ್ಲಾ ಸೇರಿದ್ದು ಅನ್ನುವುದಕ್ಕೂ ಅಂಥಾ ವ್ಯತ್ಯಾಸ ಏನಿದೆ ಗುರು? ಹಿಂದೆ ಈ ಮಾತೂ ಆಗಿಹೋಗಿದೆ. ಮುಂಬೈ ಬರೀ ಮರಾಠಿಗರು ಕಟ್ಟಿದ್ದಲ್ಲಾ, ಎಲ್ಲಾ ಭಾರತೀಯರು ಇದನ್ನು ಕಟ್ಟಿದ್ದಾರೆ ಎಂದಿದ್ದರು. ಏನ್ ಗುರುಗಳೇ... ಯಾರಾದರೂ ಮುಂಬೈ ನಗರವನ್ನು ಕಟ್ಟಲೆಂದು, ಬೆಳೆಸಲೆಂದು ಮುಂಬೈಗೆ ವಲಸೆ ಹೋಗಿರ್ತಾರಾ? ಅಥ್ವಾ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಿಯ ಹೊಸಿಲು ತುಳಿದಿರ್ತಾರಾ? ಏನೋ ಉಪಕಾರ ಮಾಡಕ್ಕೆ ಮುಂಬೈಗೆ ವಲಸೆ ಬಂದು, ಊರು ಉದ್ಧಾರ ಮಾಡಿದ ಹಾಗಿರೋ ದೊಡ್ಡಸ್ತಿಕೆಯ ಬೂಟಾಟಿಕೆಯ ಮಾತುಗಳನ್ನು ಆಡೋದು ಬಿಟ್ಟು... ತಿಳಿಯಬೇಕಾದ್ದು ಒಂದೇ. ಭಾರತದ ಮೂಲೆಮೂಲೆಯಿಂದ ಹಣ, ಬದುಕು, ಹೆಸರು, ಉನ್ನತಿಯನ್ನು ಅರಸಿ ಮುಂಬೈ ಮಹಾನಗರಿಗೆ ಕಾಲಿಡುವ ವಲಸಿಗರು ತಮ್ಮತನವನ್ನು, ನಡೆನುಡಿಯನ್ನು, ಸಂಸ್ಕೃತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಿಕೊಂಡು ಮುಂಬೈನ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಹಿಂದಿ ರಾಷ್ಟ್ರಭಾಷೆ, ಭಾರತದ ಯಾವ ಮೂಲೆಯಲ್ಲಾದರೂ ಇದು ನಡೀಬೇಕು ಅನ್ನುವ ಸುಳ್ಳಿನ ಪಿತ್ಥವನ್ನು ನೆತ್ತಿಯಿಂದಿಳಿಸಿಕೊಂಡು ನೆಟ್ಟಗೆ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆತು ಬದುಕುವುದಾದರೆ... ಹೌದು... ಮುಂಬೈ ಎಲ್ಲಾ ಭಾರತೀಯರದ್ದೇ. ಯಾಕಂದ್ರೆ ಈ ಮಾತು ನಾಳೆ ಬೆಂಗಳೂರಿಗೂ ಅನ್ವಯವಾಗೋದೇ! ಏನಂತೀ ಗುರು?

ರೈಲು ನೇಮಕಾತಿ : ಒಪ್ಪುಕೂಟದೆಡೆಗೊಂದು ಸರಿಹೆಜ್ಜೆ!!


ಆಹಾ! ಭಾರತ ದೇಶದಲ್ಲಿ ಅಪರೂಪಕ್ಕೊಂದು ಸಕ್ಕತ್ ಒಳ್ಳೇ ನಡೆ ಒಪ್ಪುಕೂಟಕ್ಕೆ ಒಪ್ಪೋ ಅಂಥಾ ದಿಕ್ಕಲ್ಲಿ ರೈಲ್ವೇ ಇಲಾಖೆಯಿಂದ ನಡೆದಿದೆ ಗುರು! ನಿನ್ನೆ ರೈಲು ಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿಯವರು ಇನ್ಮುಂದೆ ರೈಲು ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲೂ ಬರೆಯ ಬಹುದು ಅಂದ್ರು. ಜೊತೆಗೆ ಒಂದೇ ಹೊತ್ತಿನಲ್ಲಿ ಇಡೀ ದೇಶದ ತುಂಬಾ ರೈಲು ನೇಮಕಾತಿ ನಡೆಯುತ್ತೆ ಅಂತಾನೂ ಅಂದ್ರು. ಇದೆಲ್ಲಾ ಆಗಿದ್ದು ಕನ್ನಡಿಗರ ಒಗ್ಗಟ್ಟಿನ ಹೋರಾಟದಿಂದಾನೇ ಅನ್ನೋದು ಸ್ಪಟಿಕದಷ್ಟು ಸ್ಪಷ್ಟ. ಎರಡು ವರ್ಷದ ಹೋರಾಟದ ಕಾರಣದಿಂದ ಬರೀ ಕರ್ನಾಟಕಕ್ ಮಾತ್ರಾ ಅಲ್ಲಾ... ಇಡೀ ಭಾರತಕ್ಕೆ ಉಪಕಾರ ಆಗೋ ಅಂಥಾ ಒಂದು ನಿಲುವಿಗೆ ಕೇಂದ್ರಸರ್ಕಾರ ಬಂದಿದೆ ಅಂದ್ರೆ ತಪ್ಪಾಗಲ್ಲ.
ರೈಲು ನೇಮಕಾತಿ ಅನ್ಯಾಯ ಬೆಳಕಿಗೆ ತಂದಿದ್ದು...
ರೈಲು ನೇಮಕಾತಿಯ ಅನ್ಯಾಯ ಮೊದಲಿಗೆ ಬಯಲಿಗೆ ಬಂದಿದ್ದು ಏನ್‍ಗುರುವಿನಲ್ಲೇ... ಆಗಸ್ಟ್ ೨೦೦೭ರಲ್ಲಿ ಇವರು ಜಾಹೀರಾತು ಕೊಟ್ಟಾಗಲೇ ಏನ್‍ಗುರುವಿನಲ್ಲಿ ಇದರ ಬಗ್ಗೆ ಬರೆದಿದ್ದೆವು. ನಂತರದ ದಿನಗಳಲ್ಲಿ ಈ ಅನ್ಯಾಯದ ವಿರುದ್ಧವಾಗಿ ದನಿಯೆತ್ತಿ ಹೋರಾಟದ ಕಣಕ್ಕೆ ಧುಮುಕಿದ್ದು ಕರ್ನಾಟಕ ರಕ್ಷಣಾ ವೇದಿಕೆಯೋರು. ನೇಮಕಾತಿ ಪರೀಕ್ಷೆಗೆ ಉತ್ತರದಿಂದ ಪುಗಸಟ್ಟೆ ರೈಲಲ್ಲಿ ಜನರನ್ನು ತುಂಬ್ಕೊಂಡು ಬಂದಾಗ ಈ ಹೋರಾಟ ಉಗ್ರ ಸ್ವರೂಪ ಪಡೀತು. ನೈಋತ್ಯ ರೈಲ್ವೇ ಕಛೇರಿಗೆ ಮುತ್ತಿಗೆ ಹಾಕಿದಾಗ ರೈಲು ಇಲಾಖೆ ಎಚ್ಚೆತ್ತುಕೊಂಡು ಇಡೀ ನೇಮಕಾತಿ ಪ್ರಕ್ರಿಯೇನಾ ಮುಂದೂಡ್ತು. ಇಂಥದೇ ಹೋರಾಟ ನಮ್ಮಿಂದಲೇ ಪ್ರೇರಣೆ ನಡೆದ ಹಾಗೆ ಮಹಾರಾಷ್ಟ್ರದಲ್ಲೂ... ಭಾರತದ ಬೇರೆಬೇರೆ ಕಡೆಗಳಲ್ಲೂ ನಡೀತು. ಆಮೇಲಾದ ರಾಜಕೀಯ ಬದಲಾವಣೆಗಳಲ್ಲಿ ಹೊಸ ಸರ್ಕಾರ, ಹೊಸ ಮಂತ್ರಿಗಳು ಬಂದ್ರು. ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಈಗ ಕನ್ನಡಿಗರ ಹೋರಾಟಕ್ಕೆ ಗೌರವ ನೀಡಿ ಒಂದೊಳ್ಳೆ ನಿರ್ಧಾರ ಘೋಷಿಸಿದ್ದಾರೆ. ಇದರಂತೆ ಇನ್ಮುಂದೆ ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೀಬಹುದು. ಎಲ್ಲಾ ಕಡೆ ಒಟ್ಗೆ ಪರೀಕ್ಷೆ ನಡ್ಸೋದ್ರಿಂದ ಬೇರೆ ರಾಜ್ಯದಿಂದ ಇಲ್ಲಿಗೆ ಬರೋರ ಸಂಖ್ಯೆ ಕಮ್ಮಿ ಆಗೋ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯರಿಗೆ ಆದ್ಯತೆ ನೀಡೋಕೂ ರೈಲ್ವೇ ಮುಂದಾಗಿರೋದು ಸರಿಯಾದ ಒಪ್ಪುಕೂಟದೆಡೆಗಿನ ಹೆಜ್ಜೆಯಾಗಿದೆ.
ಬರೀ ರೈಲಲ್ಲ! ಎಲ್ಲ ನೇಮಕಾತಿಗಳೂ ಹೀಗಾಗಬೇಕು

ಇದು ಬರೀ ರೈಲು ಇಲಾಖೆಯಲ್ಲಾದ ಬದಲಾವಣೆಯಲ್ಲ. ಇದರಿಂದ ಕೇಂದ್ರಸರ್ಕಾರದ ಕೆಲಸಗಳಲ್ಲಿ ಇನ್ಮುಂದೆ ಸ್ಥಳೀಯರಿಗೆ ಆದ್ಯತೆ ಕೊಡಬೇಕು, ಆಯಾ ಪ್ರದೇಶಗಳ ಭಾಷೆಗಳಲ್ಲೇ ಪರೀಕ್ಷೆ ಬರೆಯೋ ಜನರ ಹಕ್ಕುನ್ನ ಮಾನ್ಯ ಮಾಡಬೇಕು. ಬ್ಯಾಂಕಿರಲಿ, ಸೈನ್ಯವಿರಲಿ ಎಲ್ಲಾ ಕಡೆಯ ಪರೀಕ್ಷೆಗಳು ಆಯಾ ರಾಜ್ಯಗಳ ಭಾಷೆಯಲ್ಲಿ ನಡೀಬೇಕು. ನಮ್ಮೂರಿನ ಕೆಲಸಗಳು ನಮ್ಮ ಮಣ್ಣಿನ ಮಕ್ಕಳಿಗೇ ಸಿಗಬೇಕು ಅಂತನ್ನೋ ಕೂಗಿಗೆ ಬಲ ಬಂದಂಗಾಗಿದೆ ಅಲ್ವಾ ಗುರು!

ಕೊನೆಹನಿ : ಬೆಂಗಾಲಿ ತಾಯ್ನುಡಿಯ ಮಮತಾ ಬ್ಯಾನರ್ಜಿ ಪ್ರಾದೇಶಿಕ ಪಕ್ಷಕ್ಕೆ ಸೇರಿದವರಾದ್ದರಿಂದಲೇ ಇಂಥಾ ಒಂದು ಒಪ್ಪುಕೂಟದ ಒಳಿತಿನ ತೀರ್ಮಾನ ಸಾಧ್ಯವಾಗಿದ್ದು ಅಂತನ್ನೋ ಮಾತನ್ನು ತಳ್ಳಿಹಾಕಕ್ ಆಗುತ್ತಾ ಗುರು?

ರೆಡ್ ಎಫ್.ಎಂ : ಕೆಂಪಾದವೋ ಎಲ್ಲಾ ಕೆಂಪಾದವೋ!!

ಬೆಂಗಳೂರಿನ ಎಸ್ ಎಫ್.ಎಮ್ ಅನ್ನೋ ಖಾಸಗಿ ಎಫ್.ಎಂ ಈಗ ರೆಡ್ ಎಫ್.ಎಮ್ ಅಂತ ಬದಲಾಗಿ ಸಕತ್ ಕನ್ನಡ ಹಾಡು ಹಾಕೋ ವಾಹಿನಿಯಾಗಿದೆಯಂತೆ. ಬೆಂಗಳೂರಿನ ರೇಡಿಯೊ ಮಾರುಕಟ್ಟೆಲಿ ದೊಡ್ಡ ಪಾಲು ( 10% ಗೂ ಹೆಚ್ಚು ) ಪಡಿಬೇಕು, ಆ ಮೂಲಕ ಹೆಚ್ಚು ಜಾಹೀರಾತಿನ ಆದಾಯ ಗಳಿಸಬೇಕು ಅಂದರೆ ಅದಕ್ಕಿರುವ ದಾರಿ ಕನ್ನಡ ಒಂದೇ ಅನ್ನೋದು ರೇಡಿಯೊ ಸಿಟಿ, ರೇಡಿಯೊ ಮಿರ್ಚಿ, ಫಿವರ್ ನಂತರ ಲೇಟ್ ಆದ್ರೂ ಲೇಟೆಸ್ಟ್ ಆಗಿ ರೆಡ್ ಎಫ್.ಎಮ್‍ಗೆ ಅರಿವಾದಂಗಿದೆ.

ರೇಡಿಯೊ ಕೇಳೋರ ಮಾಹಿತಿ (RAM) ಆಧಾರದ ಮೇಲೆ ಈ ಸಧ್ಯಕ್ಕೆ ಬೆಂಗಳೂರಿನ ರೇಡಿಯೊ ಸ್ಟೇಶನ್‍ಗಳ ಮಾರುಕಟ್ಟೆ ಪಾಲು ಇಂತಿದೆ:



ಗಮನಿಸಿ ನೋಡಿದರೆ ಮೇಲಿರುವ ಎಲ್ಲ ಸ್ಟೇಶನ್‍ಗಳು ಕನ್ನಡ ಹಾಡು ಹಾಕುವ ಸ್ಟೇಶನ್ ಗಳು ಮತ್ತು ಅವರೆಲ್ಲರ ಮಾರುಕಟ್ಟೆ ಪಾಲು ಗಣನೀಯವಾಗಿದೆ (10%ಕ್ಕಿಂತ ಹೆಚ್ಚು). ಇದರ ಅರ್ಥ ಏನಪ್ಪಾ ಅಂದ್ರೆ ರೇಡಿಯೋ ಮಾರುಕಟ್ಟೆಲಿ ಹೆಚ್ಚಿನ ಪಾಲು, ಹೆಚ್ಚಿನ ಆದಾಯ ಗಳಿಸಬೇಕು, ಹಾಗೆ ಮಾರುಕಟ್ಟೆಯಲ್ಲಿ ಅಗ್ರ ಆಟಗಾರ ಅನ್ನಿಸ್ಕೋಬೇಕು ಅನ್ನೋ ಎಲ್ಲ ವಾಹಿನಿಗಳಿಗೆ ಇರುವ ಒಂದೇ ಹಾದಿ ಅಂದ್ರೆ ಕನ್ನಡ ಅಪ್ಪಿಕೊಳ್ಳುವುದು ! ಇದನ್ನು ಅರಿತೇ ರೆಡ್ ಎಫ್.ಎಮ್ ಹೀಗೆ ಕನ್ನಡಕ್ಕೆ ಬದಲಾಗಿದ್ದು ಅನ್ಸಲ್ವಾ ಗುರು?

ಬೆಂಗಳೂರಿನಲ್ಲಿ ಕನ್ನಡ ಹಾಡು, ಮಾತಿಗಿರುವ ವ್ಯಾಪಕ ಬೇಡಿಕೆ

ಇಲ್ಲೊಂದು ಕುತೂಹಲಕರ ಮಾಹಿತಿ ಕಡೆ ವಸಿ ಕಣ್ಣ ಹಾಯ್ಸೋಣ ಬನ್ನಿ. ಕಳೆದ ವರ್ಷದ ಇದೇ ಸಮಯದ ಆಸುಪಾಸಿನಲ್ಲಿ ಫೀವರ್ ಮತ್ತು ರೇಡಿಯೋ ಸಿಟಿಗಳಿಗಿದ್ದ ಮಾರುಕಟ್ಟೆ ಪಾಲಿಗೂ, ಸಧ್ಯದ ಸ್ಥಿತಿಗೂ ಇರೋ ದೊಡ್ಡ ವ್ಯತ್ಯಾಸ ಸ್ವಲ್ಪ ನೋಡು ಗುರು.



ಆಧಾರ:
ಆಗಸ್ಟ್ 2008 :http://www.exchange4media.com/e4m/Radio/radionews.asp?section_id=7&news_id=31998&tag=26911

ಕನ್ನಡ ಅಪ್ಪಿಕೊಳ್ಳೋ ಮುಂಚೆ ಇದ್ದ ಪಾಲಿಗೂ, ನಂತರದ ಪಾಲಿಗೂ ಕಾಣೋ ವ್ಯತ್ಯಾಸ ಏನ್ ಹೇಳುತ್ತೆ? ಕನ್ನಡ ಅಪ್ಕೊಂಡ್ ನಂತರಾನೆ ವಾಹಿನಿಗಳು ಹೀಗೆ ಹೆಚ್ಚು ಹೆಚ್ಚು ಜನರನ್ನ ತಲುಪಲು ಶುರು ಆಗಿದ್ದು ಸ್ಪಷ್ಟವಾಗಿ ಕಾಣ್ಸತ್ತಲ್ವಾ? ಇದು ಕೊಡ್ತಿರೋ ಸಂದೇಶ ತುಂಬ ಸ್ಪಷ್ಟವಾಗಿದೆ. ಕನ್ನಡ = ದೊಡ್ಡ ಮಾರುಕಟ್ಟೆ ಪಾಲು, ದೊಡ್ಡ ದುಡ್ಡು. ಕನ್ನಡ ಕೈ ಬಿಡೋದು = ಮುಲೆಗುಂಪಾಗೋದು. ಬೆಂಗಳೂರಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅನ್ನೋದ್ರಲ್ಲಿ ಇನ್ನು ಏನಾದ್ರೂ ಸಂದೇಹ ಇದೆಯಾ ಗುರು ?

SBI : ಪ್ರವೇಶ ಪರೀಕ್ಷೇಲಿ ಹಿಂದಿಯೋರಿಗೆ ಅನುಕೂಲ!

ಭಾರತೀಯ ಸ್ಟೇಟ್ ಬ್ಯಾಂಕ್‍ನ ಬೆಂಗಳೂರು ವೃತ್ತದಲ್ಲಿ ಅಂದ್ರೆ ಕರ್ನಾಟಕದ ವ್ಯಾಪ್ತೀಲಿ ಖಾಲಿಯಿದ್ದ 800 ಗುಮಾಸ್ತರ ಹುದ್ದೆಗಳನ್ನು ತುಂಬಕ್ಕೆ ಬ್ಯಾಂಕು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದ್ದಾರೆ. ಈ ಮೂಲಕ ಕರ್ನಾಟಕದ 800 ನಿರೋದ್ಯೋಗಿಗಳ ಮನೇ ಒಲೆ ಉರಿಯಲು ಸಹಾಯ ಆಗುತ್ತೆ ಅಂತ ನಾವಂದುಕೊಂಡ್ರೆ ದಡ್ರಾಗ್ತೀವಿ ಗುರು!

ನೂರು ಮೀಟರ್ ಓಟದ ಸ್ಪರ್ಧೇಲಿ...

ಈ ನೇಮಕಾತಿ ಮಾಡ್ಕೊಳ್ಳೋವಾಗ ಅಭ್ಯರ್ಥಿಗಳು ಹಲವಾರು ಅರ್ಹತೆಗಳನ್ನು ಹೊಂದಿರಬೇಕು ಅಂತಾ ಬ್ಯಾಂಕ್ ನೇಮಕಾತಿ ಮಾಡೋರು ನಿಗದಿ ಮಾಡಿದಾರೆ. ಇದರಲ್ಲಿ ಸ್ಥಳೀಯ ಭಾಷೆ ಗೊತ್ತಿರೋದು "ಅಡಿಷನಲ್ ಕ್ವಾಲಿಟಿ" ಅಂದ್ರೆ ಹೆಚ್ಚುವರಿ ಅರ್ಹತೆಯಂತೆ. ಇಂಗ್ಲೀಷಿನ ಅರಿವು ಕಡ್ಡಾಯವಂತೆ. ಹಾಗಂತಾ ಅವರ ಜಾಹೀರಾತಲ್ಲಿ ಹಾಕಿದಾರೆ.
"ತಪ್ಪೇನ್ರಿ? ಇವತ್ತಿನ ದಿವಸ ಬ್ಯಾಂಕುಗಳೆಲ್ಲಾ ಕೆಲಸಾ ಮಾಡೋದು ಇಂಗ್ಲಿಷ್‍ನಲ್ಲಲ್ವಾ?" ಅಂತಾ ಕೇಳ್ತೀರೇನೋ... ಹಂಗಾದ್ರೆ ಹಿಂದಿ ಭಾಷೆಯೋರಿಗೆ ಯಾಕೆ ವಿಶೇಷ ಸವಲತ್ತು ಕೊಡ್ತಿದಾರೆ ಇವರು? ಅಂತ ಹುಬ್ಬೇರಿಸೋ ಹಾಗೆ ಮುಂದಿನ ಸಾಲುಗಳಲ್ಲಿ ಬರ್ದಿದಾರೆ.



ಈ ಬ್ಯಾಂಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದೀಲಿ ಇರುತ್ತೆ. ಉತ್ತರ ಬರೆಯೋರು ಹಿಂದೀಲಿ ಬೇಕಾದ್ರೂ ಬರೀಬೌದು! ಅಕಸ್ಮಾತ್ ಪಾಸಾಗಿ ಸಂದರ್ಶನಕ್ ಹೋದ್ರೆ ಅಲ್ಲೂ ಹಿಂದೀನಾ ಅಯ್ಕೆ ಮಾಡ್ಕೊಬೌದು!!

ಈ ಸಾಲುಗಳ ಅವಶ್ಯಕತೆ ಏನು? ಅಂತಾ ಸ್ವಲ್ಪ ನೋಡು ಗುರು! ಕರ್ನಾಟಕದ ಶಾಖೆಗಳಲ್ಲಿ ಕೆಲಸಕ್ಕೆ ಸೇರೋನಿಗೆ ಕನ್ನಡ ಕಡ್ಡಾಯವಾಗಿ ಬರಬೇಕೆಂಬ ನಿಯಮ ಇಲ್ಲ. ಬ್ಯಾಂಕು ಪರೀಕ್ಷೆ ತೊಗೊಳ್ಳೋ ಕನ್ನಡಿಗನಿಗೆ ತನ್ನದಲ್ಲದ ಇಂಗ್ಲಿಷ್ ಅರಿವು ಕಡ್ಡಾಯ. ಆದ್ರೆ ಹಿಂದೀ ತಾಯ್ನುಡಿಯವನಿಗೆ? ಜಾಹೀರಾತಲ್ಲಿ ಇಂಗ್ಲಿಷ್ ವ್ಯವಹಾರ ಜ್ಞಾನ ಕಡ್ಡಾಯ ಅಂತಾ ಇದ್ರೂ ಬರೀ ಇಂಗ್ಲಿಷಿನ ಒಂದು ಪ್ರಶ್ನೆಪತ್ರಿಕೇಲಿ ಪಾಸ್ ಆದ್ರೆ ಸಾಕು, ಉಳಿದದ್ದೆಲ್ಲಾ ಹಿಂದೀಲಿ ಬರ್ದು ಪಾಸಾಗಬಹುದು ಅಂತಲ್ವಾ? ಬ್ಯಾಂಕಿನ ವ್ಯವಹಾರಕ್ಕೆ ಬೇಕಾಗೋ ಇಂಗ್ಲಿಷ್ ಬರದಿದ್ರೂ, ತಾನು ವ್ಯವಹರಿಸಬೇಕಾಗಿರೋ ಜನರ ಭಾಷೆಯ ಗಾಳಿಗಂಧವೇ ಇಲ್ದಿದ್ರೂ ಕೆಲಸ ಸಿಗಕ್ಕೆ ಯಾವ ಸಮಸ್ಯೇನೂ ಇಲ್ಲ. ಇದು ನೂರು ಮೀಟರ್ ಓಟದ ಸ್ಪರ್ಧೇಲಿ ಹಿಂದಿಯವನನ್ನು ಎಂಬತ್ತು ಮೀಟರ್ ಮುಂದೆ ನಿಲ್ಸಿ 1,2,3 ಸ್ಟಾರ್ಟ್... ಅನ್ನೋ ಮೋಸದಾಟದ ಹಾಗಲ್ವಾ? ತನ್ನೊಡಲೊಳಗಿರುವ ಎಲ್ಲಾ ನುಡಿಗಳನ್ನೂ ಜನರನ್ನೂ ಸಮಾನವಾಗಿ ನೋಡದೆ ತಾರತಮ್ಯ ಮಾಡ್ತಿರೋ ಈ ವ್ಯವಸ್ಥೆ ಸರೀನಾ ಗುರು?

ತನ್ನ ಭಾಷಾನೀತೀನ ಭಾರತ ಸರ್ಕಾರ ಬದಲಾಯಿಸಿಕೊಂಡು ....ಕರ್ನಾಟಕದಲ್ಲಿ (ತಮಿಳುನಾಡಲ್ಲಿ) ಈ ಬ್ಯಾಂಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ (ತಮಿಳಿನಲ್ಲಿ) ಇರುತ್ತೆ. ಉತ್ತರ ಬರೆಯೋರು ಕನ್ನಡದಲ್ಲಿ(ತಮಿಳಿನಲ್ಲಿ) ಬೇಕಾದ್ರೂ ಬರೀಬೌದು! ಅಕಸ್ಮಾತ್ ಪಾಸಾಗಿ ಸಂದರ್ಶನಕ್ ಹೋದ್ರೆ ಅಲ್ಲೂ ಕನ್ನಡಾನ (ತಮಿಳನ್ನು) ಅಯ್ಕೆ ಮಾಡ್ಕೊಬೌದು!! ಅನ್ನೋ ರೀತಿಯಲ್ಲಿ ಆಯಾ ಪ್ರದೇಶಗಳ ನುಡಿಯಲ್ಲಿ ಪರೀಕ್ಷೆಗಳೂ, ಸಂದರ್ಶನಗಳೂ ನಡೆಯೋ ವ್ಯವಸ್ಥೆ ಭಾರತದಲ್ಲಿ ಹುಟ್ಕೊಳ್ಳೋ ತನಕಾ ಈ ದೇಶದಲ್ಲಿ ಸಮಾನತೆ ಅನ್ನೋದು ಬರೀ ಬೊಗಳೇ ಅನ್ನುಸ್ತಿಲ್ವಾ ಗುರು?
"ಬ್ಯಾಂಕು ಕೆಲಸ ವರ್ಗಾವಣೆ ಆಗೋ ಕೆಲಸಾ, ಇಡೀ ಭಾರತದಲ್ಲಿ ಎಲ್ಲಿಗೆ ಬೇಕಾದ್ರೂ ಪೋಸ್ಟಿಂಗ್ ಆಗ್ಬಹುದು" ಅಂತನ್ನೋ ವಾದಕ್ಕೆ ಮರುಳಾಗಿ ಬಿಡಬೇಡಿ... ಎಲ್ಲಿಗೇ ವರ್ಗಾ ಮಾಡುದ್ರೂ ಆಯಾ ಪ್ರದೇಶದ ನುಡೀಲಿ ವ್ಯವಹರಿಸೋ ತರಬೇತಿ ಕೊಟ್ಟು ಕಳಿಸಕ್ಕೂ ಆಗುತ್ತೆ ಮತ್ತು ಅದೇ ಸರಿಯಾದದ್ದು ಗುರು!

ವಲಸಿಗನ ಧರ್ಮ ಮತ್ತು ಭಾರತದ ಏಕತೆ!

ಉತ್ತರ ಪ್ರದೇಶ ಮೂಲದ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ವಿಧಾನಸಭೆಯ ಶಾಸಕ ಅಬು ಆಜ್ಮಿಯೋರು ಮಹಾರಾಷ್ಟ್ರ ವಿಧಾನಸಭೇಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದು, ಅದನ್ನು ಎಮ್.ಎನ್.ಎಸ್ ಪ್ರತಿಭಟಿಸಿದ್ದರಿಂದಾಗಿ ವಿಧಾನಸಭೆಯ ಅಂಗಳ ರಣರಂಗವಾದ ಸುದ್ದೀನಾ ನಾವೆಲ್ಲರೂ ಮಾಧ್ಯಮದಲ್ಲಿ ನೋಡುದ್ವಿ. ವಿಧಾನಸಭೆಯ ಸದನದ ಅಂಗಳದಲ್ಲಿ ಹೊಡೆದಾಟದಂತಹ ಅನಾಗರಿಕ ಘಟನೆಗಳು ನಡೆದದ್ದು ಸದನದ ಘನತೆಗೆ ತಕ್ಕುದಾಗಿರಲಿಲ್ಲ. ಇಂತಹ ಘಟನೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲ್ಲ ಮತ್ತು ಇವು ಖಂಡಿತವಾಗಿಯೂ ಮರುಕಳಿಸಬಾರದು. ಆದರೆ, ಹಿಂದಿ ಭಾರತದ ರಾಷ್ಟ್ರಭಾಷೆ ಅನ್ನೋ ಹಸೀ ಸುಳ್ಳುಮಾತುಗಳನ್ನು ಆಡುತ್ತಾ ವಲಸಿಗನ ಧರ್ಮವನ್ನು ಮರೆತು ನಡೆಯುವ ಜನರ ನಡವಳಿಕೆಯೇ ಇಂತಹದೊಂದು ಅಶಾಂತಿಗೆ ಕಾರಣವಾಗಿರೋದು ಅಂತನ್ನಿಸಲ್ವಾ ಗುರು?

ವಲಸಿಗನ ಧರ್ಮವೇನು?

ಹಾಗಿದ್ದರೆ, ವಲಸಿಗನ ಧರ್ಮವೇನು ಅಂತೀರಾ? ತಾನು ಹೊಟ್ಟೆಪಾಡಿಗೆ ಯಾವ ನಾಡಿಗೆ ಬರ್ತಾನೋ, ಆ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದು. ಅಲ್ಲಿನ ನುಡಿ ಕಲಿತು, ಆ ನುಡಿಯಾಡುವ ಜನರೊಡನೆ ಬೆರೆತು ಬಾಳೋದೇ ವಲಸಿಗನ ಸರಿಯಾದ ಧರ್ಮ. ಅದು ಬಿಟ್ಟು "ನಾಡಿಗರ ನುಡೀನ ನಾನ್ಯಾಕೆ ಬಳಸ್ಲಿ? ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ. ವ್ಯಾಪಾರ ಮಾಡ್ತೀನಿ. ಪ್ರಮಾಣ ತಗೋತೀನಿ" ಅನ್ನೋ ಮೂಲಕ ಎಂದೆಂದಿಗೂ ತಾನು ವಲಸಿಗನಾಗೇ ಉಳಿಯುವೆ, ಎಂದಿಗೂ ಆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲಾರೆ ಅನ್ನೋ ನಿಲುವು ‘ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ’ ಅಲ್ವಾ? ವಲಸಿಗನ ಧರ್ಮ ಮರೆತು ಈ ರೀತಿ ಅಶಾಂತಿಗೆ ಕಾರಣವಾಗೋದು ನಿಜವಾದ ಅರ್ಥದಲ್ಲಿ ದೇಶದ್ರೋಹ ಅನ್ಸಲ್ವಾ ಗುರು?

ಹಿಂದಿ ರಾಷ್ಟ್ರ ಭಾಷೆ ಅನ್ನೋ ಹಸಿ ಸುಳ್ಳು !

ಇವೆಲ್ಲವೂ ಒಂದು ತೆರನಾದರೆ... ‘ಹಿಂದಿಯಲ್ಲಿ ಪ್ರಮಾಣ ತೆಗೆದುಕೊಳ್ಳುವ ಮೂಲಕ ತಾನು ಭಾರತದ ರಾಷ್ಟ್ರಭಾಷೆಯಾದ ಹಿಂದಿಗೆ ಗೌರವ ಸಲ್ಲಿಸಿದ್ದೇನೆ’ ಎಂದು ಇವರು ಹೇಳುವುದು, ಅದನ್ನೇ ಹಲವು ಮಾಧ್ಯಮಗಳು ಹೌದು ಎಂಬಂತೆ ಪ್ರಸಾರ ಮಾಡುವುದನ್ನು ನೋಡಿದಾಗ "ಭಾರತದ ರಾಷ್ಟ್ರಭಾಷೆ ಹಿಂದಿ " ಎಂಬ ಅಪಾಯಕಾರಿ ಸಂದೇಶ ನೀಡುತ್ತಾ, ‘ಭಾರತ ಅಂದ್ರೆ ಹಿಂದೀ ಒಪ್ಕೋಬೇಕು’ ಅನ್ನೋ ಆಕ್ರಮಣಕಾರಿ ನಿಲುವು ಇವರಲ್ಲಿರುವುದು ಕಾಣಿಸುತ್ತೆ. ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಸಂವಿಧಾನದಲ್ಲೆಲ್ಲೂ ಹಿಂದಿ ರಾಷ್ಟ್ರಭಾಷೆಯೆಂದು ಬರೆದಿರದಿದ್ದರೂ, ಇವರು ಇಂತಹ ನಿಲುವು ತಳೆಯುವುದರ ಹಿಂದೆ ಹಿಂದಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಅನ್ನೋ ಸಾಮ್ರಾಜ್ಯ ಶಾಹಿ ಧೋರಣೆ ಎದ್ದು ಕಾಣುತ್ತೆ. ಯಾವುದೇ ಒಂದು ನಾಡಿನಲ್ಲಿ, ಆ ನಾಡಿನ ಜನರ ಒಗ್ಗಟ್ಟು ಆ ನಾಡಿನ ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇದಕ್ಕೆ ಭಾರತವು ಹೊರತಲ್ಲ. ಹಾಗಾದರೆ ಭಾರತದಲ್ಲಿ ಇಂತಹ ತಾರತಮ್ಯ ಒಗ್ಗಟ್ಟು ಮೂಡುವುದೋ? ಇರುವ ಒಗ್ಗಟ್ಟನ್ನು ಮುರಿದು ಹಾಕುವುದೋ? ಎಂದರೆ ಎರಡನೆಯದೇ ವಾಸ್ತವವಾದ ಮಾತಾಗಿದೆ. ಯಾಕೆಂದರೆ ಭಾರತ ದೇಶವು ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದ ಒಪ್ಪುಕೂಟ. ಇಲ್ಲಿ ಯಾವುದೋ ಒಂದು ನುಡಿಯಿಂದ ದೇಶವನ್ನು ಒಂದಾಗಿರಿಸಬಲ್ಲೇವು ಅನ್ನೋದು ನಿಜಕ್ಕೂ ಮೂರ್ಖತನದ ಮಾತು. ಇಲ್ಲೇನಿದ್ದರೂ, ಸಮಾನತೆಯೆಂಬ ಸರಳ ತಂತ್ರವೇ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ ಎಂಬುದನ್ನು ಎಷ್ಟು ಬೇಗ ಅರಿತರೆ ಅಷ್ಟು ಭಾರತದೇಶಕ್ಕೆ ಒಳ್ಳೆಯದು ಗುರು!

ನಮ್ಮೂರ ಕೆಲ್ಸಾ ನಮ್ಮ ಮಂದೀಗಾ: ಈಗ ಮಧ್ಯಪ್ರದೇಶದ ಸರದಿ!

ಮಹಾರಾಷ್ಟ್ರ ಆತು, ಒರಿಸ್ಸಾ ಆತು... ಈಗ ಮಧ್ಯಪ್ರದೇಶದವರ ಪಾಳಿ ಚಾಲೂ ಆದಂಗೈತ್ರೀಪಾ! ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾನ್ ಅವ್ರ ಇಂಥಾ ಒಂದು ಹೇಳಕಿ, ಮತ್ತ ಬಿಹಾರಿಗಳು ಸುದ್ಯಾಗ ಬರಂಗ ಮಾಡೇತಲ್ರಿ ಗುರುಗಳ! ಚೌಹಾನ್ ಸಾಹೇಬ್ರ ಆ ಹೇಳಿಕಿ ಹೊರಬಿದ್ದದ್ದೇ ತಡ, ಬಿಹಾರದ ಮಂತ್ರಿ ಮಾಗದರೆಲ್ಲ ಬಾಲಸುಟ್ಟ ಬೆಕ್ಕಿನಂಗ ಆಡಕತ್ತಾರಂತಲ್ರೀ! ಈ ಸುದ್ದೀ ಭಾಳ ಥ್ರಿಲ್ಲಿಂಗ್, ಎದುಕ್ ಅಂದ್ರಾ ಈ ಮಾತ್ ಆಡಿರು ಸಾಹೇಬ್ರು ರಾಷ್ಟ್ರೀಯವಾದಿ, ರಾಷ್ಟ್ರೀಯ ಪಕ್ಷ ಆಗಿರೂ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅದಾರಾ ಅನ್ನೋದಾಗೈತಿ. ‘ಹ್ಞಾಂ! ರಾಷ್ಟ್ರೀಯ ಪಕ್ಷದ ಮಂದಿ ಹೀಂಗಾ ಪ್ರಾದೇಶಿಕ ಮಾತು ಅಂತಾರಾ? ತೆಗೀರೀ ಗುರುಗಳಾ’ ಅನ್‍ಬ್ಯಾಡ್ರೀಪಾ! ಈ ಸುದ್ದಿ 07.11.2009ರ ಡಿ.ಎನ್.ಏ ಪತ್ರಿಕೆಯಾಗ ಹತ್ತನೇ ಪುಟದಾಗೆ ಬಂದೈತ್ರೀಪಾ!

ಮಧ್ಯಪ್ರದೇಶದಾಗಿನ ನೌಕರೀ ಅಲ್ಲೀ ಮಂದೀಗಾ!

ಮಧ್ಯಪ್ರದೇಶ ರಾಜ್ಯದಾಗಿನ ಅಷ್ಟೂ ಕಂಪನಿಗಳು, ಕೆಲಸಕ್ಕ ಮಂದೀನ ತೊಗೋವಾಗ ಇನ್ಮುಂದಾ ಸ್ಥಳೀಯರನ್ನು ಬದಿಗೊತ್ತಿ ಬಿಹಾರದ ಮಂದಿಗೆ ಕೆಲಸ ನೀಡಂಗಿಲ್ಲಾ. ಮಧ್ಯಪ್ರದೇಶ ರಾಜ್ಯದ ಮಕ್ಕಳಿಗಾ ಮೊದಲು ಕೊಡ್ಬೇಕು, ನಮ್ ಮಂದೀಗಾ ಕೆಲಸಕ್ ತ್ರಾಸ್ ಇದ್ದಾಗ ಬಿಹಾರ, ಪಹಾರದಿಂದ ಮಂದೀನ ಇಲ್ಲಿಗ್ ಕರ್ಕೊಂಡ್ ಬಂದು ಕೆಲಸ ಕೊಡೋಣು ಆಗಬಾರ್ದು’ ಅಂತ ಚೌಹಾನ್ ಸಾಹೇಬರು ಅಂದಾರಂತ! ಅಷ್ಟಾ ಅಲ್ಲ ಮತ್ತಾ... ‘ಇಲ್ಲಿ ಉದ್ಯೋಗ ನಮ್ಮ ಯುವಜನರ ಹೊಟ್ಟೆಪಾಡು ಮತ್ತು ಅವರ ಬಾಳಿನ ವಿಷಯ, ಅದಕ್ಕ ಈ ಕೆಲ್ಸದ್ ವಿಷಯದಾಗ ಹೊರಗಿನವ್ರಿಗೆ ಯಾವುದೇ ಆಸ್ಪದ ನೀಡಂಗಿಲ್ಲ’ ಅಂತನೂ ಹೇಳ್ಯಾರೀಪಾ. ಮಧ್ಯಪ್ರದೇಶ ಮುಖ್ಯಮಂತ್ರಿಗೋಳ ಈ ನಿರ್ಧಾರ ‘ಆ ನೆಲದ ಮಕ್ಕಳಿಗೆ ಅವ್ರ ನೆಲದಾಗ ಬದುಕು ಕಟ್ಕೊಡೋ ದಿಕ್ಕಾಗ ತೊಗೊಂಡಿರೋ ಭಾರಿ ಚೊಲೋ ತೀರ್ಮಾನ’ ಅಂತ ಅನ್ಸೇ ಅನ್ಸುಸ್ತದಲ್ರೀ ಗುರುಗಳಾ? ‘ನಮ್ಮ ಜನರ ಬದುಕಿನ ಜವಾಬ್ದಾರಿ ನಮ್ ಮ್ಯಾಲೆ ಐತಿ’ ಅಂತ ಜ್ಞಾನೋದಯ ಆಗಿನೋ ಏನೋ, ಗುಜರಾತ್, ಮಹಾರಾಷ್ಟ್ರ ಮತ್ತು ಒರಿಸ್ಸಾಮುಖ್ಯಮಂತ್ರಿಗಳು, ಇವತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಏನು ನಿಲುವಿಟ್ಟು ಕೊಂಡಾರೋ, ಅಂಥದೇ ಚೊಲೋ ನಿರ್ಧಾರಾನ ಹಿಂದೇನ ತೊಗೊಂಡಿದ್ರು.

ಹೊಯ್ಕೊಳಾಕ್ ಹತ್ತಿರೋ ಬಿಹಾರದ ಮಂತ್ರಿಗೋಳು!

ಬಿಹಾರದ ಮಂದೀ ಹೀಂಗಾ ಎಲ್ಲಾ ಕಡಿಯಿಂದ ಛೀ ಥೂ ಅನ್ನುಸ್ಕೊತಾ ಇರೋದ್ ನೋಡಿ ಅಲ್ಲಿನ ರಾಜಕೀಯ ಮಂದೀಗೇನಾರಾ ನಾಚಿಕಿ ಬಂತಂತಾ ಮಾಡೀರೇನೂ? ಅಂಥಾ ಖಬರ್ ನಮಗಂತೂ ಬಂದಿಲ್ರೀಪಾ! ಅಲ್ಲಿ ರಾಜಕಾರಣಿಗಳು ‘ಭಾರತದಾಗ ಮಂದೀ ಎಲ್ಲಾರಾ ಹೋಗಿ ಕೆಲಸ ಮಾಡೋ ಹಕ್ಕು ಅದಾ. ಅಂಥಾ ಹಕ್ಕುನ್ನಾ ನಮ್ ಸಂವಿಧಾನಾನೇ ಕೊಟ್ಟೇತಿ.’ ಅಂತಾ ಒದರೋದ್ರಾಗಾ ಅದಾರೀಪಾ! ತಮ್ ಮಂದಿ ಎದುಕ್ ಹೀಂಗಾ ಗುಳೆ ಹೊಂಟಾರಾ? ಹಾಂಗ್ ಹೋಗದಾಂಗ ನಮ್ ನಾಡಾಗಾ ಎಂಥಾ ಉದ್ದಿಮೆ ಕಟ್ಟೋಣು? ಹ್ಯಾಂಗಾ ವ್ಯವಸ್ಥಿ ಸರಿ ಮಾಡೋಣು? ಜನಸಂಖ್ಯಿ ಹ್ಯಂಗ್ ಕಮ್ಮಿ ಮಾಡೋಣು? ಅಂತ ಚಿಂತಿ ಮಾಡೋದರ ಬದಲಿಗೆ ಹಿಂಗ್ ತೋಳೇರಸಕ್ ಮುಂದಾದ್ರ ಹೆಂಗಾ? ನೀವೇ ಹೇಳಿ ಗುರುಗಳಾ! ಒಟ್ಟಿನಾಗ ‘ಬ್ಯಾರೆ ರಾಜ್ಯದಾಗಿನ ಕೆಲಸ ಬೊಗಸಿ ಇರೋದಾ ಬಿಹಾರದ ಮಂದೀಗಾ’ ಅಂತ ತಿಳ್ಕೊಂಡಂಗೈತಿ ಈ ಬಿಹಾರದ ಮಂತ್ರಿ ಮಂದಿ. ರೇಲು ಪರೀಕ್ಷಾ ಅನ್ನೂದು ಎಲ್ಲೇ ನಡೆದ್ರೂ ಬಿಹಾರದಿಂದ ಆ ಪರೀಕ್ಷೆ ನಡಿಯೋ ಊರಿಗೆ ಹಿಂಡು ಹಿಂಡಾಗಿ ಬಿಹಾರಿಗಳನ್ನ ಪುಗಸಟ್ಟಿ ರೈಲಾಗ್ ಕಳಸೋದ್ರಾಗ, ಅಲ್ಲೀ ರಾಜಕಾರಣಿಗೋಳು ಬಿಜಿ ಅದಾರಾ ಅಂತೀರೇನು? ಒಟ್ನಾಗಾ ಬಿಹಾರಾನ ಸರಿಯಾಗಿ ಅಭಿವೃದ್ಧಿ ಮಾಡಲಾಗದ ಅಲ್ಲೀ ರಾಜಕಾರಣಿಗಳಿಂದ ಇಡೀ ಭಾರತದ ಮೂಲಿಮೂಲಿ ಜನಕ್ ತ್ರಾಸಾಗಕ್ ಹತ್ತೇತಿ ಅನ್ನೂದಂತೂ ಖರೇ ಐತ್ರೀಪಾ! ಏನಂತೀರ್ರೀ ಸರಾ?

ಕಾಡನ್ನು ಕಾಪಾಡಬೇಕಾದ ಸರ್ಕಾರವೆಂಬ ಬೇಲಿಯೇ ಮೇಯದಿರಲಿ!

ಕಾಡುಪ್ರಾಣಿಗಳ ಜೀವ ತೆಗೆಯೋ ಇರುಳು ಓಡಾಟಕ್ಕೆ ಅನುಮತಿ ಕೊಡೋ ಕ್ರಮಕ್ಕೆ ಮುಂದಾಗಬೇಡಿ ಅಂತಾ ಹೈಕೋರ್ಟು ಕರ್ನಾಟಕ ರಾಜ್ಯಸರ್ಕಾರಾನ ತರಾಟೆಗೆ ತೊಗೊಂಡಿರೋ ಸುದ್ದಿ ದಿನಾಂಕ 05.11.2009ರ ವಿಜಯಕರ್ನಾಟಕದ 12ನೇ ಪುಟದಲ್ಲಿ ಬಂದಿದೆ ಗುರು! ನಮ್ಮ ಕರ್ನಾಟಕದ ಬಂಡಿಪುರದ ಕಾಡು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆಗಳಂತಹ ಪ್ರಾಣಿಗಳ ಜೊತೆಗೆ ಅನೇಕ ಅಪರೂಪದ ಜೀವಿಗಳಿಗೆ ತವರಾಗಿದೆ. ಅಷ್ಟೇ ಅಲ್ದೆ ಇಲ್ಲಿ ಅತ್ಯಂತ ಬೆಲೆಬಾಳುವ ಶ್ರೀಗಂಧದಂತಹ ಮರಗಿಡಗಳೂ ಬೆಳೆಯುತ್ತವೆ. ಇದುನ್ನೆಲ್ಲಾ ಕಾಪಾಡ್ಕೋಬೇಕಾದ್ದು ನಮ್ಮ ಅಂದ್ರೆ ನಮ್ಮ ಸರ್ಕಾರದ ಹೊಣೆ. ಈ ಮಾತ್ನ ಕರ್ನಾಟಕ ಸರ್ಕಾರಕ್ಕೆ ರಾಜ್ಯ ಹೈಕೋರ್ಟು ಬೈದು ಹೇಳಿದೆ.

ಇಷ್ಟಕ್ಕೂ ಆಗಿದ್ದೇನಪ್ಪಾ ಅಂದ್ರೆ, ಮೈಸೂರು-ನಂಜನಗೂಡು-ಬಂಡಿಪುರ ಮಾರ್ಗವಾಗಿ ಕೇರಳಕ್ಕೆ ಒಂದು ರಸ್ತೆ ಹೋಗುತ್ತೆ. ಇದರಲ್ಲಿ ಲಾರಿಪಾರಿ ಥರದ ಸಕ್ಕತ್ ಗಾಡಿಗಳು ಓಡಾಡ್ತಾ ಇರ್ತವೆ. ಈ ಗಾಡಿಗಳು ಹೋಗೋವಾಗ ನಡುಮಧ್ಯೆ ಕಾಡುಪ್ರಾಣಿಗಳು ಸಿಗೋದೂ ಸಹಜ. ಅದ್ಯಾವ ಕಾರಣಕ್ಕೋ ಏನೋ ಒಟ್ನಲ್ಲಿ ದಾರಿ ಮಧ್ಯದಲ್ಲಿ ಅನೇಕ ಆನೆಗಳು, ಹುಲಿಗಳು, ಜಿಂಕೆಗಳು, ಹಾವುಗಳು, ಕಾಡೆಮ್ಮೆಗಳೂ ಈ ಗುರುತಿಲ್ಲದ ಗಾಡಿಗಳಿಗೆ ಸಿಕ್ಕು ಸಾಯ್ತಾಯಿರೋ ಕಳವಳಕಾರಿ ಘಟನೆಗಳು ನಡೆದಿವೆ. ಇಂಥಾ ದುರಂತಗಳೂ ಕೂಡಾ ಇರುಳಲ್ಲಿ ಓಡಾಡೋ ಗಾಡಿಗಳಿಂದಲೇ ಆಗ್ತಿವೆ ಅನ್ನೋ ಕಾರಣದಿಂದಾಗಿ ಸಂಜೆ ಕತ್ತಲಾದ ಮೇಲೆ ಈ ದಾರಿಗಳಲ್ಲಿ ಗಾಡಿಗಳು ಓಡಾಡಬಾರದು ಅನ್ನೋ ಕಟ್ಟುಪಾಡು ಜಾರಿ ಮಾಡಿದ್ರಂತೆ. ಈ ಥರ ಮಾಡಿದ್ರಿಂದ ಅನೇಕ ಪ್ರಾಣಿಗಳ ಜೀವ ಉಳ್ಯೋದ್ರು ಜೊತೆಗೇ ಇನ್ನೊಂದು ಉಪಕಾರವೂ ಆಗಿದೆ. ಮರಗಳನ್ನು ಕದ್ದು ಮಾರೋ ಕಳ್ಳಕಾಕರ ಓಡಾಟ ವಹಿವಾಟೆಲ್ಲಾ ಇರುಳಲ್ಲೇ ನಡೀತಾ ಇದ್ದುದ್ದು ಈಗ ಅಂಥದ್ದಕ್ಕೆಲ್ಲಾ ಕಡಿವಾಣ ಹಾಕ್ದಂಗಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ?

ಚಾಮರಾಜನಗರದ ಜಿಲ್ಲಾಧಿಕಾರಿಗಳು ಇಂಥಾ ಆದೇಶ ಹೊರಡಿಸಿದ್ದು ಜೂನ್ ತಿಂಗಳಲ್ಲಿ, ಇದಾದ ವಾರದ ಒಳಗೇ ಮುಖ್ಯಮಂತ್ರಿಗಳ ಕಛೇರಿಯಿಂದ ಬಂದ ನಿರ್ದೇಶನದ ಕಾರಣದಿಂದ ವಾಪಸ್ಸು ಪಡೆಯಲಾಯಿತು ಅನ್ನೋ ಸುದ್ದಿ ನೋಡುದ್ರೆ ಇದೇನು? ನಮ್ಮ ರಾಜ್ಯದ ರಾಜ್ಯ ಸರ್ಕಾರ ಯಾವ ಯಾವುದೋ ಲಾಬೀಗೆ ಬಗ್ಗುತ್ತಲ್ಲ ಅನ್ನೋದು ಗೊತ್ತಾಗುತ್ತೆ ಗುರು. ನೆರೆಯ ಕೇರಳ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂಗೆ ರಾತ್ರಿ ಹೊತ್ತಲ್ಲಿ ಸಂಚಾರಕ್ಕೆ ಅಡ್ಡಿ ಮಾಡಿರೋದ್ರಿಂದ ನಮ್ಮ ಜನರಿಗೆ ಕರ್ನಾಟಕಕ್ಕೆ ಹೋಗಿಬರಕ್ಕೆ ತೊಂದ್ರೆ ಆಗ್ತಿದೆ. ನಮ್ಮೂರಿನ ಸರಕು ಸಾಗಣೆ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ ಅಂತಾ ಕಿರಿಕ್ ಮಾಡ್ತು. ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಕಾಡುಪ್ರಾಣಿಗಳ ಬೆಂಬಲಕ್ಕೆ ನಿಲ್ತೇನು? ಇವೂ ನಮ್ಮ ಕನ್ನಡದ ಜನರಂಗೇ ಮೂಕ ಮುಂಡೇವು ಅಂತಾ ರಸ್ತೆ ತೆರವಿನ ಪರವಾಗಿ ಒಂದು ಅಫಿಡವಿಟ್ಟು ಹಾಕಕ್ಕೆ ತಯಾರಾಗೇ ಬುಡ್ತು. ಬಹಳ ಆತಂಕ ತರೋ ಮಾತಂದ್ರೆ ಕರ್ನಾಟಕ ಸರ್ಕಾರ ಕೇರಳದ ರಾಜಕೀಯದ ಲಾಬಿ ಕರ್ನಾಟಕದ ಮುಖ್ಯಮಂತ್ರಿಗಳ ಕಛೇರಿ ತನಕ ಹರಡಿರೋದು. ಅಲ್ಲಿನ ಅರಣ್ಯ ಸಚಿವ ಇಲ್ಲಿಗೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿರ್ಬಂಧ ತೆರವು ಮಾಡುಸ್ತಾರೆ ಅನ್ನೋದು ಎಂಥಾ ನಾಚಿಕೆಗೇಡಿನ ಸಂಗತಿ ಅಲ್ವಾ? ಇಷ್ಟು ಸಾಲ್ದು ಅಂತಾ ಈ ರಸ್ತೇಲಿ ವಾಹನಗಳು ಓಡಾಡಕ್ಕೆ ಅನುಕೂಲ ಮಾಡ್ಕೊಡೋ ಪ್ರಮಾಣಪತ್ರಾನ ಕೋರ್ಟಿಗೆ ಸಲ್ಲಿಸೋ ಬಗ್ಗೆ ಆಲೋಚನೆ ಮಾಡೋದೂ ಎಂಥಾ ದುರಂತ ಅಲ್ವಾ ಗುರು!

ಸರ್ಕಾರ ನಾಡಸಂಪತ್ತು ಕಾಪಾಡೋ ವಿಷ್ಯದಲ್ಲಿ ರಾಜಿಯಾಗದಿರಲಿ!

ಏನೋ, ನಮ್ಮ ಕಾಡು ಪ್ರಾಣಿಗಳ ಪುಣ್ಯದ ಫಲವಾಗಿ ರಾಜ್ಯ ಹೈಕೋರ್ಟು ಈಗ ಎರಡೂ ಸರ್ಕಾರಗಳ ಮೇಲ್ಮನವಿ ವಜಾ ಮಾಡಿ ಎರಡೂ ಸರ್ಕಾರಗಳಿಗೆ ಸರಿಯಾಗಿ ಬುದ್ಧಿ ಹೇಳಿದೆ. ಆ ರಸ್ತೇಲಿ ಸಾಯೋ ಪ್ರಾಣಿಗಳಿಗೆ ಜೀವ ಕೊಟ್ಟು ಆಮೇಲೆ ಆ ರಸ್ತೇನಾ ಸಂಚಾರಕ್ಕೆ ತೆರೀರಿ ಅಂದುಬುಟ್ಟಿದೆ. ಅಲ್ಲಾ ಗುರು? ಕೋರ್ಟಿಗೆ ಇರೋ ಕಾಳಜಿ ನಮ್ಮ ಸರ್ಕಾರಕ್ಕೆ ಯಾಕಿಲ್ಲಾ ಅಂತ ಅನ್ನುಸ್ತಿಲ್ವಾ? ಆ ಹುಲಿಗಳೂ, ಜಿಂಕೆಗಳೂ, ಚಿರತೆಗಳೂ, ಕಾಡೆಮ್ಮೆಗಳೂ, ಆನೆಗಳೂ ಓಟು ಬ್ಯಾಂಕು ಮಾಡ್ಕೊಂಡಿದ್ದಿದ್ರೆ ಆಗ ಒಸಿ ಕಾಳಜಿ ತೋರುಸ್ತಿತ್ತೇನೋ ಈ ಸರ್ಕಾರ, ಅನ್ನುಸ್ತಿಲ್ವಾ ಗುರು? ನಮ್ಮ ನಾಡು, ನಮ್ಮ ನುಡಿ, ನಮ್ಮ ನಾಡಿನ ಸಂಪತ್ತು, ನಮ್ಮ ಕಾಡುಗಳು, ನಮ್ಮ ವನ್ಯಕುಲ ಸಂಕುಲ ಇವುನ್ನೆಲ್ಲಾ ಕಾಪಾಡಕ್ಕೇ ಅಂತಾನೆ ನಾವಿಲ್ಲಿ ಅಧಿಕಾರದಲ್ಲಿರೋದು ಅಂತಾ ನಮ್ಮ ಸರ್ಕಾರಗಳಿಗೆ, ಸರ್ಕಾರ ನಡ್ಸಕ್ಕೆ ತುದಿಗಾಲಲ್ಲಿ ಸದಾ ನಿಲ್ಲೋ ರಾಜಕೀಯ ಪಕ್ಷಗಳಿಗೆ ಅನ್ನಿಸೋದು ಎಂದಿಗೆ ಗುರು?

ಸೈನ್ಯ ಸೇರಲು ಮಾನದಂಡವೇನು ?

ಭಾರತ ಸೈನ್ಯಕ್ಕೆ ಸೈನಿಕರಾಗಿ/ಗುಮಾಸ್ತರಾಗಿ/ಉಗ್ರಾಣಪಾಲಕರಾಗಿ/ಆರೈಕೆ-ಸಹಾಯಕರಾಗಿ ಸೇರಲು ಹಿಂದಿ/ಇಂಗ್ಲಿಷ್ ಬೇಕಾ ? ಹೌದು, ಸೇನೆಯ ಆ ಹುದ್ದೆಗೆ ಸೇರಲು ಹಿಂದಿ/ಇಂಗ್ಲಿಷ್ ಬೇಕೇ ಬೇಕು ಅಂತ ಅನ್ನುತ್ತೆ ಡಿ.ಎನ್.ಎ ಪತ್ರಿಕೆಯ ಈ ವರದಿ. ದೇಶಾನ ರಕ್ಷಿಸೋಕೆ ದೇಶಭಕ್ತಿ, ತ್ಯಾಗ ಮನೋಭಾವನೆ, ಗಟ್ಟಿತನ, ದೇಹದಾರ್ಢ್ಯತೆ, ಕಿಚ್ಚು, ಹೋರಾಟ ಮನೋಭಾವ - ಇವುಗಳಿಗಿಂತ ಹೆಚ್ಹಾಗಿ ಹಿಂದಿ/ಇಂಗ್ಲಿಷ್ ಕಲಿತಿರಬೇಕಂತೆ. ಯಾಕಂದ್ರೆ ಮೇಲೆ ಹೇಳಿದ ಸೇನೆಯ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ನಮ್ಮ ನಾಡಿನ ಮಕ್ಕಳು ನಪಾಸಾಗಲು ಕರ್ನಾಟಕದ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್ ಬರದೆ ಇರೋದೇ ಬಲವಾದ ಕಾರಣ ಅಂತ ಡಿ.ಎನ್.ಎ ಪತ್ರಿಕೆಯ ಆ ವರದಿಯಲ್ಲಿ ತಿಳಿಸಿದೆ ಗುರು.

ಏನ್ ಹೇಳುತ್ತೆ ವರದಿ?
ಆ ಲೇಖನದಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯ ಅಂದ್ರೆ ನಮ್ಮ ನಾಡಿನ ಅಭ್ಯರ್ಥಿಗಳು ಫೇಲಾಗುತ್ತಿರುವುದು ಸೈನ್ಯ ಸೇರಲು ಮತ್ತೊಂದು ಮಾನದಂಡವಾದ ದೈಹಿಕ ಅರ್ಹತೆ ಪರೀಕ್ಷೆಯಲ್ಲಿ ಅಲ್ವಂತೆ ಬದಲಿಗೆ ಹಿಂದಿ/ಇಂಗ್ಲಿಷ್ ಪರೀಕ್ಷೆಯಲ್ಲಂತೆ. ಈ ಭಾಷೆಗಳು ಬರೋರು ಮಾತ್ರ ಸೇನೆ ಸೇರಲು ಯೋಗ್ಯರು ಅನ್ನೋ ನಿಲುವು ಸೇನೆಯವರದ್ದಾ ಅಂತಾ ಅನುಮಾನಾ ಬರ್ತಿದೆ ಗುರು. ಮೇಲೆ ಹೇಳಿದ ಹುದ್ದೆಗಳಿಗೆ ಸೇನೆಯನ್ನು ಪ್ರತಿನಿಧಿಸೋ ಅವಕಾಶವನ್ನು ಯಾವುದೇ ಒಂದು ನಾಡಿನ ಜನರಿಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಅನ್ನುವ ಕಾರಣ ಮುಂದಿಟ್ಟು ಅವರನ್ನು ಅಂತಹ ಅವಕಾಶದಿಂದ ವಂಚಿತನ್ನಾಗಿ ಮಾಡ್ತಿದಾರೆ ಅಂತ ಅನಿಸೋಲ್ವಾ ? ಅಲ್ಲಾ, ಒಬ್ಬ ಮನುಷ್ಯನಿಗೆ ದೇಶರಕ್ಷಣೆಯೇ ಗುರಿಯಾಗಿದ್ದು ಆ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇದ್ದೂ ಆತನಿಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಅಂತ ಆತನನ್ನು ನಿರಾಕರಿಸೋದು ಎಷ್ಟು ಸರಿ? ನಮ್ಮ ದೇಶದಲ್ಲಿ ದೇಶಸೇವೆಯನ್ನು ಮಾಡೋದು ಅಂದ್ರೆ ಸೈನ್ಯ ಸೇರೋದು ಅನ್ನೋ ಕಲ್ಪನೆ ಎಷ್ಟೋ ಜನರಲ್ಲಿ ಇದೆ. ಅಂತವರು 'ದೇಶರಕ್ಷಣೆಯು ಒಂದು ಶ್ರೇಷ್ಠ ಕೆಲಸ' ಅಂತ ಅಂದುಕೊಂಡು ದೇಶಕ್ಕಾಗಿ ಪ್ರಾಣ ಮುಡಿಪಾಗಿಡಲು ತಯಾರಿರ್ತಾರೆ. ಅಂತದ್ರಲ್ಲಿ ಭಾಷೆ ಹೆಸರಲ್ಲಿ ಅವರನ್ನು ಸೇರಿಸದೆ ಇರೋದು ಖಂಡಿತ ಸರಿಯಲ್ಲ. ಭಾರತದಂತಹ ಒಪ್ಪುಕೂಟ ವ್ಯವಸ್ಥೆಯಲ್ಲಿ, ಸೇನೆಗೆ ಆಯ್ಕೆ ಮಾಡುವ ಈ ಕ್ರಮ ಖಂಡಿತ ಸರಿ ಇಲ್ಲ ಗುರು.

ಸರಿಯಾದ ವಿಧಾನ ಏನು?
ಹಾಗಾದ್ರೆ ಸರಿಯಾದ ವಿಧಾನ ಯಾವುದು? ಇಕಾ ಇಲ್ಲಿದೆ ನೋಡು ಗುರು. ಭಾರತವು ರಾಜ್ಯಗಳ ಒಪ್ಪುಕೂಟವಾಗಿದ್ದು, ಭಾರತ ಸೇನೆಯು ದೇಶದ ಹೊರಗಿನ ಹಾಗೂ ಒಳಗಿನ ಶತ್ರುಗಳಿಂದ ಈ ಒಪ್ಪುಕೂಟವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿದೆ. ಒಪ್ಪುಕೂಟ ವ್ಯವಸ್ಥೆಯ ಯಾವುದೇ ಕ್ಷೇತ್ರವಾದ್ರೂ ಸರಿ, ಈ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ಭಾಗಿಯಾಗಿರುವ ಎಲ್ಲ ರಾಜ್ಯದ ಜನರಿಗೂ ಆ ಕ್ಷೇತ್ರವನ್ನು ಸೇರಲು ಪ್ರತಿನಿಧಿಸಲು ಸಮಾನ ಅವಕಾಶ ಇರಬೇಕು. ಇದಕ್ಕೆ ಸೇನೆಯೂ ಹೊರತಾಗಿಲ್ಲ. ನೂರಾರು ಭಾಷೆಗಳನ್ನು ಮಾತಾಡುವ ಈ ದೇಶದಲ್ಲಿ ಹಿಂದಿ/ಇಂಗ್ಲಿಷ್ ಎಂಬ ಮಾನದಂಡವನ್ನು ಆಯ್ಕೆಯ ಹಂತದಲ್ಲೇ ಉಪಯೋಗಿಸಿ ಅಭ್ಯರ್ಥಿಗಳನ್ನು ಸೈನ್ಯಕ್ಕೆ ಸೇರದ ಹಾಗೆ ಮಾಡುವುದು ಒಪ್ಪುಕೂಟದ ಪ್ರತಿನಿಧಿಗಳಿಗೆ ಮಾಡುವ ವಂಚನೆ ಮತ್ತು ಪಕ್ಷಪಾತ.

ಪರಿಹಾರ ಏನ್ ಗುರು?
ಸೇನೆ ಸೇರಿದವರಿಗೆ ಕಷ್ಟದ್ದೇ ಆದ್ರೂ ಸರಿ ಏನೆಲ್ಲಾ ತರಬೇತಿ ನೀಡುವ ಭಾರತೀಯ ಸೇನೆ, ಪರೀಕ್ಷೆಯ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್ ಪತ್ರಿಕೆ ಕಡ್ಡಾಯ ಮಾಡದೆ, ಉಳಿದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿದವರನ್ನು ಸೈನ್ಯಕ್ಕೆ ಸೇರಿಸ್ಕೊಂಡು ಯಾವ ಮಟ್ಟದ ಹಿಂದಿ/ಇಂಗ್ಲಿಷ್ ಜ್ಞಾನ ನಿರೀಕ್ಷಿಸುತ್ತಾರೋ ಅಷ್ಟು ತರಬೇತಿಯನ್ನು ಕೊಡೊ ವ್ಯವಸ್ಥೆ ತರಬೇಕು. ಅಂದರೆ ಸೈನ್ಯ ಸೇರಿದ ಮೇಲೆ, ಹಿಂದಿ/ಇಂಗ್ಲಿಷ್ ಅಥವ ಮತ್ತ್ಯಾವ ಭಾಷೆಯಾದ್ರೂ ಸರಿ ಅವಶ್ಯಕತೆಯ ಮೇರೆಗೆ ಭಾಷೆಯ ತರಬೇತಿನಾ ಕೊಡೊ ಏರ್ಪಾಡು ಮಾಡೋದು. ಇಂತಹ ಕಟ್ಟುಪಾಡು ಒಪ್ಪುಕೂಟ ವ್ಯವಸ್ಥೆಯ ಯಾವುದೇ ಹಾಗೂ ಎಲ್ಲಾ ಕ್ಷೇತ್ರದಲ್ಲೂ ಮಾಡಿದರೆ ನಿಜವಾದ ಒಪ್ಪುಕೂಟ ವ್ಯವಸ್ಥೆಯ ಕಾರ್ಯವೈಖರಿಯು ಹೇಗಿರಬೇಕೆಂದು ತೋರ್ಸಿಕೊಟ್ಟು ಒಪ್ಪುಕೂಟ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುತ್ತೆ. ಅಲ್ವಾ ಗುರು ?

ನಾಡೊಂದಾದ ಕತೆ ಹೇಳೋ ಡಿ.ವಿ.ಡಿ!

ನಾಡಹಬ್ಬದ ಆಚರಣೆ ಎಲ್ಲೆಡೆ ಆಚರಣೆಯಾಗ್ತಾ ಇರೋದೂ, ದಿನಾ ದಿನಾ ಹೆಚ್ತಾ ಇರೋದೂ ನಿಜಕ್ಕೂ ಸಕತ್ ಸಂತೋಷದ ವಿಷ್ಯ. ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಂದಾದ ಈ ದಿನ ಕನ್ನಡಿಗರೆಲ್ಲರ ಪಾಲಿಗೆ ಸುದಿನ. ನಾವೂ ನೀವೆಲ್ಲಾ ನಾಡಹಬ್ಬದ ಆಚರಣೆಗೆ ತಯಾರಿ ಮಾಡಿಕೊಳ್ತಾ ಇರೋ ಈ ಸಂದರ್ಭದಲ್ಲಿ ಮೈಸೂರಿನ CIIL ಕರ್ನಾಟಕ ಏಕೀಕರಣದ ಬಗ್ಗೆ, ಅದಕ್ಕಾಗಿ ಪಾಡು ಪಟ್ಟವರ ಬಗ್ಗೆ, ಕನ್ನಡ ನಾಡು ಒಂದಾಗಲು ಆ ದಿನಗಳಲ್ಲಿ ಎದುರಾದ ಸವಾಲುಗಳ ಬಗ್ಗೆ, ಆದ ಹೋರಾಟ. ತ್ಯಾಗ ಬಲಿದಾನಗಳ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ " ಕರ್ನಾಟಕ ಏಕೀಕರಣ ಇತಿಹಾಸ" ಅನ್ನುವ ಡಿ.ವಿ.ಡಿಯನ್ನು (ಬೆಲೆ ರೂ 100) ಹೊರ ತಂದಿರೋದು ಸಕಾಲಿಕವಾಗಿದೆ.

ಇದುನ್ನ ನಾಡಹಬ್ಬದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿದ್ರೆ ಅಲ್ಲಿ ನಡೆಯೋ ನಾಡಹಬ್ಬ ಕಳೆ ಕಟ್ಟೋದ್ರಲ್ಲಿ ಅನುಮಾನಾನೇ ಇಲ್ಲ ಗುರು!

ಬಲುರೋಚಕ ಈ ನಮ್ಮ ಇತಿಹಾಸ!

ಬ್ರಿಟಿಷರ ಆಳ್ವಿಕೆಯಲ್ಲಿ 20ಕ್ಕೂ ಹೆಚ್ಚು ಆಡಳಿತ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ನಾಡನ್ನು ಒಂದಾಗಿಸಲು ನಡೆದ ಕರ್ನಾಟಕ ಏಕೀಕರಣಕ್ಕೆ ಕಮ್ಮಿ ಅಂದ್ರೂ ನೂರು ವರ್ಷಗಳ ಕಾಲದ ಇತಿಹಾಸವಿದೆ. ಶ್ರೀಯುತರುಗಳಾದ ಮುದವೀಡು ಕೃಷ್ಣರಾಯರು, ಸಿದ್ಧಪ್ಪ ಕಂಬಳಿ, ಏಕೀಕರಣಾ ಶಿಲ್ಪಿ ಎಂದೇ ಖ್ಯಾತರಾದ ಎಸ್.ನಿಜಲಿಂಗಪ್ಪ, ಕೌಜಲಗಿ ಶ್ರೀನಿವಾಸರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್... ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಕುಲ ಪುರೋಹಿತರೆಂದೇ ಖ್ಯಾತಿಯಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಹಲವು ವರ್ಷಗಳ ಕಾಲ ನಡೆದ ನಿರಂತರ ಹೋರಾಟ ರೋಮಾಂಚಕಾರಿ. ಹುಬ್ಬಳ್ಳಿಯ ಹೋರಾಟ, ಅದರಗುಂಚಿ ಶಂಕರಗೌಡ ಪಾಟೀಲರ ದಾಖಲೆಯ 23 ದಿನಗಳ ಅಮರಣಾಂತ ಸತ್ಯಾಗ್ರಹ, ಜೀವ ತೆತ್ತ ಬಳ್ಳಾರಿಯ ರಂಜಾನ್‍ಸಾಬ್ ಕಥನಗಳು ರೋಚಕವಾಗಿವೆ. ಒಂದು ದೊಡ್ಡ ಜನಾಂದೋಲನದ ಫಲವಾಗಿ ಹಲವು ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮ ಈ ನಾಡು ನವೆಂಬರ್ 1, 1956ರಲ್ಲಿ ಒಂದಾದ ದಿನವೇ ಕನ್ನಡ ರಾಜ್ಯೋತ್ಸವ. CIIL ನ ಈ ಡಿ.ವಿ.ಡಿ ಒಮ್ಮೆ ನಮ್ಮನ್ನೆಲ್ಲ ಆ ದಿನಗಳತ್ತ ಕರೆದೊಯ್ದು, ಕನ್ನಡ ನಾಡಿನ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ ಆ ದಿನಗಳ ಬಗ್ಗೆ ನಮ್ಮ ಅರಿವು ಹೆಚ್ಚಿಸುವುದ್ರಲ್ಲಿ ಸಂದೇಹಾ ಇಲ್ಲ ಗುರು. ನಮ್ಮ ನಮ್ಮ ಮನೇಲಿ ಮಕ್ಕಳು ಮರಿಗಳಿಗೆ ಈ ವಿಡಿಯೋ ತೋರಿಸುವುದರ ಮೂಲಕ ಅವರಲ್ಲಿ ನಾಡಿನ ಇತಿಹಾಸದ ಬಗ್ಗೆ ಅರಿವು ಮೂಡಿಸೋಣ್ವಾ?

ಎಲ್ಲ ಸರಿ, ಈ ಡಿ.ವಿ.ಡಿ ಎಲ್ಲಿ ಸಿಗುತ್ತೆ ಅನ್ನೋದು ನಿಮ್ಮ ಪ್ರಶ್ನೆನಾ? ಬೆಂಗಳೂರಿನ ಜಯನಗರದಲ್ಲಿರುವ "ಟೋಟಲ್ ಕನ್ನಡ" ಅಂಗಡಿಯಲ್ಲಿ ಸಿಗುತ್ತೆ. ನೀವು ಹೊರ ದೇಶದಲ್ಲಿದ್ದರೆ ಟೋಟಲ್ ಕನ್ನಡದ ಮೂಲಕ ಅಲ್ಲಿಗೆಯೇ ತರಿಸಿಕೊಳ್ಳಬಹುದು. ಈ ಡಿ.ವಿ.ಡೀನಾ ತಪ್ಪದೇ ನೋಡಿ, ನಿಮ್ಮ ಗೆಳೆಯರಿಗೂ ಪರಿಚಯಿಸಿ. ಆಗುತ್ತಲ್ವಾ ಗುರುಗಳೇ?

Related Posts with Thumbnails