ಕನ್ನಡ ರಾಜ್ಯೋತ್ಸವ ಮತ್ತು ಕನ್ನಡಿಗರ ಏಳಿಗೆ!


(ಕೃಪೆ: ಯೂಟ್ಯೂಬಿನಲ್ಲಿ ಶ್ರೀ ದಿನೇಶ್ ಕುಮಾರ್)

ಇಡೀ ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆಯೊಂದನ್ನು ಪುಟಿದೆಬ್ಬಿಸುವ ನವೆಂಬರ್ ಒಂದರ ನಾಡಹಬ್ಬ ನಾಳೆ. ಭಾರತದಲ್ಲಿ ಭಾಷಾವಾರು ರಾಜ್ಯ ರಚನೆಯು ಆರಂಭವಾದ ನಂತರ ಅದುವರೆಗೆ ಹತ್ತು ಹಲವು ಆಡಳಿತದಲ್ಲಿ ಹಂಚಿಹೋಗಿದ್ದ ಕನ್ನಡನಾಡು ೧೯೫೬ರ ನವೆಂಬರ್ ಒಂದರಂದು ಒಂದು ರಾಜ್ಯವಾಗಿ ರೂಪುಗೊಂಡಿತು. ಈ ದಿನವನ್ನೇ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದೇವೆ. ಈ ದಿನದಂದು ನಮ್ಮ ಹೆಚ್ಚಿನ ಗಮನ ನಿನ್ನೆಗಳ ಬಗ್ಗೆ ಮಾತ್ರಾ ಇರುತ್ತದೆ. ಅಂದರೆ ಏಕೀಕರಣಕ್ಕಾಗಿ ಇಂತಿಂತವರು ಹೋರಾಡಿದರು, ಏಕೀಕರಣಕ್ಕೆ ಮೊದಲು ಕನ್ನಡ ಜನಾಂಗ ಒಂದೇ ಆಳ್ವಿಕೆಯಲ್ಲಿರಬೇಕೆಂದು ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಕನಸು ಕಂಡರು, ರಂಜಾನ್ ಸಾಬ್ ಜೀವ ಕೊಟ್ಟರು, ಜಯದೇವಿ ತಾಯಿ ಲಿಗಾಡೆ  ನೆತ್ತರಲ್ಲಿ ಓಲೆ ಬರೆದರು, ಅದರಗುಂಚಿ ಶಂಕರಪಾಟೀಲರು ೨೩ ದಿವಸ ಉಪವಾಸ ಮಾಡಿದರು... ಹೀಗೆ ನೆನಪು ಮಾಡಿಕೊಳ್ಳುವುದು ಒಂದು ಕಡೆಯಾದರೆ, ಕದಂಬ ಚಾಲುಕ್ಯ ಹೊಯ್ಸಳ ರಾಷ್ಟ್ರಕೂಟ ಗಂಗ ವಿಜಯನಗರ ಮೊದಲಾದ ಮಹಾ ಸಾಮ್ರಾಜ್ಯಗಳ ವೈಭವ, ಕನ್ನಡನಾಡಿನ ಕಲೆ ಸಾಹಿತ್ಯಗಳ ಹಿರಿಮೆಗಳನ್ನು ನೆನೆದು ಕೊಂಡಾಡುತ್ತೇವೆ. ಇವೆಲ್ಲಾ ಸರಿಯೇ! ಇವೆಲ್ಲವನ್ನೂ ಮಾಡಬೇಕಾದ್ದೇ!! ಆದರೆ ನಿಜಕ್ಕೂ ಭಾಷಾವಾರು ರಾಜ್ಯರಚನೆಯಾಗಿದ್ದು ಏಕೆ? ಇದರ ಉದ್ದೇಶ ಈಡೇರಿಕೆ ಆಗುತ್ತಿದೆಯೇ? ಆಗಿಸಲು ನಾವೇನು ಮಾಡಬೇಕು? ಆಗಿಸಬೇಕಾದ ಅಗತ್ಯವೇನು? ಇವನ್ನೆಲ್ಲಾ ಯೋಚಿಸಬೇಕಿದೆ.

ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ!

ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲೋದ್ದೇಶವೇ ಅಧಿಕಾರ ವಿಕೇಂದ್ರೀಕರಣ. ಜನರಿಂದ ಜನರಿಗಾಗಿ ಆಡಳಿತ ವ್ಯವಸ್ಥೆ ಇರುತ್ತದೆ ಎನ್ನುವುದು ಮೊದಲ ಗುಣಲಕ್ಷಣ. ಹೀಗಿದ್ದಾಗ ಒಂದು ನಾಡಿನ ಜನಜೀವನದ ಬದುಕಿನ ಅತ್ಯಗತ್ಯ ಅಂಗಗಳಾದ ಕಲಿಕೆ, ದುಡಿಮೆ, ಸಾರ್ವಜನಿಕ ಆಡಳಿತದ ಕೆಲಸ ಕಾರ್ಯಗಳ ಏರ್ಪಾಡುಗಳೆಲ್ಲವೂ ಜನರಿಗೆ ಹತ್ತಿರವಾಗಬೇಕು. ಅವರ ಕೈಗೆಟುಕಬೇಕು. ಅವರನ್ನು ಒಳಗೊಳ್ಳಬೇಕು. ಇವಲ್ಲವೂ ಪರಿಣಾಮಕಾರಿಯಾಗಿ ಆಗಬೇಕಾದರೆ ಈ ಏರ್ಪಾಟುಗಳೆಲ್ಲಾ ಜನರಿಗೆ ಅರ್ಥವಾಗಬೇಕು, ಬಳಸಲು ಸುಲಭವಾಗಿರಬೇಕಾಗುತ್ತದೆ. ಇದು ಸಾಧ್ಯವಾಗಲು ಇರುವ ಒಂದೇ ಒಂದು ದಾರಿ ಆ ಜನರಾಡುವ ನುಡಿಯಲ್ಲಿ ನಾಡಿನ ವ್ಯವಸ್ಥೆಗಳನ್ನು ಕಟ್ಟುವುದು. ಹೀಗೆ ಎಲ್ಲಾ ವ್ಯವಸ್ಥೆಗಳೂ ಜನರನ್ನು ಒಳಗೊಂಡಾಗ ಜನರ ಮಾಡುಗತನ ಹೆಚ್ಚಬಲ್ಲದು, ನಾಡಿನ ಏಳಿಗೆಯ ಹೆಬ್ಬಾಗಿಲು ತೆರೆದುಕೊಳ್ಳುವುದು. ಒಂದು ನುಡಿಯಾಡುವ ಜನರಲ್ಲಿ ಆ ಕಾರಣದಿಂದಾಗಿ ಸಹಜವಾಗೇ  ಇರುವ ಒಗ್ಗಟ್ಟು ಮತ್ತಷ್ಟು ಬಲಗೊಂಡು ಸಾಧನೆಯ ಹಾದಿಯತ್ತ ಇಡೀ ಜನಾಂಗ ಸಾಗುವುದು. ಹೀಗೆ ಕನ್ನಡದ ಮೂಲಕ ಕನ್ನಡಿಗರೂ, ತಮಿಳಿನ ಮೂಲಕ ತಮಿಳರೂ, ಹಿಂದಿಯ ಮೂಲಕ ಹಿಂದಿಯವರೂ ಏಳಿಗೆ ಸಾಧಿಸುವುದಾದರೆ ಭಾರತವೂ ಏಳಿಗೆ ಹೊಂದುತ್ತದೆ ಎನ್ನುವ ಉದ್ದೇಶವೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವುದು. ಇದರಿಂದಾಗಿ ಭಾಷೆಯ ಜೊತೆಜೊತೆಗೇ ಮೈಗೂಡಿಕೊಂಡಿರುವ ಸಂಸ್ಕೃತಿ, ಪರಂಪರೆ, ತನ್ನತನದ ಅನನ್ಯತೆಗಳೂ ಪೊರೆಯಲ್ಪಡುತ್ತವೆ ಎನ್ನುವುದೂ ಕೂಡಾ ದಿಟ. ಇದು ಭಾಷಾವಾರು ಪ್ರಾಂತ್ಯ ರಚನೆಯ ಪ್ರಮುಖ ಉದ್ದೇಶ.

ವಾಸ್ತವ - ಆಶಯಕ್ಕಿಂತಾ ಬೇರೆ!

ಆದರೆ ಇಂದು ಈ ಆಶಯಗಳು ಈಡೇರಿವೆಯೇ? ಈಡೆರುವತ್ತಾ ನಾವು ಸಾಗುತ್ತಿದ್ದೇವೆಯೇ? ಎಂದೆಲ್ಲಾ ನೋಡಿದರೆ ನಿರಾಸೆಯಾಗುತ್ತದೆ. ಆರಂಭದಲ್ಲಿ ಸಂವಿಧಾನದಲ್ಲೂ ಬರೆದಿದ್ದ "ರಾಜ್ಯಗಳ ಆಡಳಿತ ಭಾಷೆಯ ಆಯ್ಕೆಯ ಹಕ್ಕು" ಕೇವಲ ತೋರಿಕೆಯದ್ದು ಎನ್ನಿಸುವಂತೆ ಇಂದಿನ ಏರ್ಪಾಟುಗಳಿರುವುದು ಕಾಣುತ್ತಿದೆ. ಕರ್ನಾಟಕದ ಆಡಳಿತ ಭಾಷೆ ಕನ್ನಡ ಎನ್ನುವುದನ್ನೇ  ನೋಡೋಣ. ಸಂವಿಧಾನ ರಾಜ್ಯಕ್ಕೆ ಈ ಆಯ್ಕೆಯ ಸ್ವಾತಂತ್ರ ಕೊಟ್ಟಿದ್ದು ಕರ್ನಾಟಕಕ್ಕೆ ಕನ್ನಡವನ್ನು ಆಡಳಿತ ಭಾಷೆ ಮಾಡಿಕೊಳ್ಳುವ ಸಂಪೂರ್ಣ ಸಂವಿಧಾನಿಕ ಹಕ್ಕು ಇದೆ. ಸರಿ, ಇದನ್ನು ಚಲಾಯಿಸಿ ನಾವು ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯಾಗಿಸಿಯೂ ಆಯ್ತು. ಇದು ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ? ಸರ್ಕಾರಿ ಕಚೇರಿಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ಏರ್ಪಾಟುಗಳಲ್ಲಿ ಕನ್ನಡದ ಜಾರಿಯನ್ನು ರಾಜ್ಯಸರ್ಕಾರ ಮಾಡುವುದರಲ್ಲೇ ಸಾಕಷ್ಟು ಕುಂದುಕೊರತೆ ಎದುರಿಸಿದೆ. ಇಂದು ಅವೆಲ್ಲವನ್ನೂ ಮಾಡಿದರೂ ಜನರೇ ಬಳಸಲು ಹಿಂದೇಟು ಹಾಕುತ್ತಿದ್ದೇವೆಯೇ? ಉದಾಹರಣೆಗೆ ಒಂದು ಆಸ್ತಿ ಕೊಂಡಾಗ ಅದರ ನೋಂದಣಿ ಪತ್ರ ಈಗೆಲ್ಲಾ ಇಂಗ್ಲೀಶಿನಲ್ಲೇ ಇರುತ್ತದೆಯೇ ಹೊರತು ಕನ್ನಡ ಮರೆಯಾಗುತ್ತಿದೆ. ಎಷ್ಟೋ ಕನ್ನಡಿಗರಿಗೆ ಸರ್ಕಾರಿ ಆದೇಶ ಇಂಗ್ಲೀಶಿನಲ್ಲಿರುವುದೇ ಹಿತ ಎನ್ನಿಸುತ್ತದೆ. ಅದೆಷ್ಟೋ ಕನ್ನಡಿಗರಿಗೆ ಕನ್ನಡವಲ್ಲದ ಹೆರನುಡಿ ಅನ್ನ ಗಳಿಸಿಕೊಡುವ ಸಾಧನವಾಗಿರುವುದು ಕಾಣುತ್ತಿದೆ. ಇಂತಹ ಪರಿಸ್ಥಿತಿಗೆ ಕಾರಣವೇನೆಂದು ನೋಡಿದರೆ ಕನ್ನಡಿಗರು ಕನ್ನಡದ ಬಳಕೆಯಿಂದ ದೂರಾಗುತ್ತಿರುವುದು ಕಾಣುತ್ತದೆ. ಇದು ಸಹಜವಾಗಿ ಆಗುತ್ತಿರುವುದಲ್ಲದೆ ನಾಡಿನ ವ್ಯವಸ್ಥೆಗಳು ದೂರಮಾಡುತ್ತಿರುವುದಾಗಿದೆ. ದುರಂತವೆಂದರೆ ಈ ಮೃಷ್ಟಾನ್ನದ ಸಾಧನವು ಕನ್ನಡದಲ್ಲೇ ದೊರೆಯುವಂತಾದರೆ, ಎಲ್ಲಾ ಕನ್ನಡಿಗರಿಗೂ ಕೈಗೆಟುಕಬಲ್ಲದು ಎನ್ನುವ ದಿಟವನ್ನು ನಾವು ಕಾಣದೆ ಹೋಗುತ್ತಿದ್ದೇವೆ. ಒಟ್ಟಾರೆ, ಕನ್ನಡಿಗರು ಕನ್ನಡದಿಂದ ದೂರಾಗುವ, ಆ ಮೂಲಕ ಕನ್ನಡದ ಬಳಕೆಯ ಸಾಧ್ಯತೆಯನ್ನು ಕುಗ್ಗಿಸುವ, ಆ ಮೂಲಕ ಸಾಧನೆಯ ಶಿಖರವನ್ನು ಏರಲಾಗದ ಮಿತಿಗೆ ಒಳಪಡುವ ಪರಿಸ್ಥಿತಿ ಇಂದಿನ ಕನ್ನಡನಾಡಿನ ವಾಸ್ತವತೆಯಾಗಿದೆ.

ಇದಕ್ಕೇನು ಕಾರಣ?

ಇದಕ್ಕೆ ಕಾರಣ ಕನ್ನಡದಿಂದ ಕನ್ನಡಿಗರು ದೂರ ಹೋಗುತ್ತಿರುವುದು!  ಭಾರತದ ಕೇಂದ್ರಸರ್ಕಾರದ ಕಚೇರಿಗಳಲ್ಲಿ ಆಡಳಿತ ಭಾಷೆ ಹಿಂದೀ/ ಇಂಗ್ಲೀಶ್ ಎನ್ನುವ ಕಾರಣದಿಂದ ಅಲ್ಲೆಲ್ಲಾ ಕನ್ನಡ ನಡೆಯದು ಎನ್ನುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಅಂದರೆ ಕಲಿಕೆಯಲ್ಲಿ, ದುಡಿಮೆಯಲ್ಲಿ, ಆಡಳಿತದಲ್ಲಿ ನಿಧಾನವಾಗಿ ಕನ್ನಡದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತಿರುವುದನ್ನು ನಾವು ಗಮನಿಸಬೇಕಾಗಿದೆ. ಹೌದು! ಕಡಿಮೆ ಆಗುತ್ತಿದೆ ಎನ್ನುವುದಕ್ಕಿಂತಾ ಕಡಿಮೆ ಮಾಡಲಾಗುತ್ತಿದೆನ್ನುವುದು ವಾಸ್ತವ. ಇದಕ್ಕೆ ನೆರವಾಗಿ ಭಾರತೀಯ ಸಂವಿಧಾನವೇ ಟೊಂಕಕಟ್ಟಿ ನಿಂತಿದೆ. ಶಿಕ್ಷಣದಲ್ಲಿ ಕನ್ನಡ ಹೈಸ್ಕೂಲಿಗೆ ಮಿತಿಗೊಂಡಿರುವುದು, ಮೃಷ್ಟಾನ್ನ ಕೊಡಬಲ್ಲ ಅರಿಮೆಯ ವಿದ್ಯೆಗಳು ಕನ್ನಡದಲ್ಲಿಲ್ಲದಿರುವುದು ಇದಕ್ಕೆ ಕಾರಣ. ಕನ್ನಡಿಗರಲ್ಲೇ ನಮ್ಮ ನುಡಿ ಕಥೆ, ಹಾಡು, ಮಾತು, ಸಾಹಿತ್ಯಗಳಿಗೆ ಮಾತ್ರಾ ಲಾಯಕ್ಕು ಎನ್ನುವ ಭಾವವಿರುವುದು ಕಾರಣ. ಈ ನಾಡಿನ ವ್ಯವಸ್ಥೆಗಳು ಈ ನೆಲದ ಜನರಿಗಾಗಿ ರೂಪುಗೊಳ್ಳದೆ ಬೆರಳೆಣಿಕೆಯ ವಲಸಿಗರಿಗಾಗಿ ರೂಪುಗೊಂಡು ರಾಷ್ಟ್ರದ ಏಕತೆಯ ಹೆಸರಲ್ಲಿ ಎಲ್ಲೆಡೆ ಚಲಾವಣೆಯಾಗುತ್ತಿರುವುದು ಕಾರಣವಾಗಿದೆ.

ರಾಜ್ಯೋತ್ಸವ ಒಂದು ದಿನ ಬಾವುಟ ಹಾರಿಸುವುದಕ್ಕಲ್ಲಾ!

ಇಂತಹ ಪರಿಸ್ಥಿತಿಯಲ್ಲಿ ಕನ್ನಡನಾಡಿನ ಕೋಟ್ಯಂತರ ಮಂದಿ ನವೆಂಬರ್ ಒಂದರಂದು ಹಳದಿ ಕೆಂಪು ಬಾವುಟವನ್ನು ಹಾರಿಸಿ, ದೂರದರ್ಶನ ವಾಹಿನಿಗಳಲ್ಲಿ ಕನ್ನಡಪ್ರೇಮದ ಚಲನಚಿತ್ರಗಳನ್ನು, ಕಾರ್ಯಕ್ರಮಗಳನ್ನು ನೋಡಿ ಸಾರ್ಥಕತೆಯ ಭಾವನೆ ಅನುಭವಿಸುವುದರಲ್ಲೇ ಕಳೆದುಹೋಗುತ್ತಿದ್ದೇವೆ ಅನ್ನಿಸುತ್ತದೆ. ಏಕೀಕರಣವಾಗಿದ್ದರ ಉದ್ದೇಶವೇ ನಿಧಾನವಾಗಿ ಶಿಥಿಲವಾಗುತ್ತಿರುವುದನ್ನು ಗುರುತಿಸಲಾಗದಷ್ಟು ಮೈಮರೆವೆ ನಮ್ಮಲ್ಲಿದೆ. ಇದು ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆ. ಕಿತ್ತೊಗೆಯದೆ ಏಳಿಗೆ ಅಸಾಧ್ಯ! ಹಾಗಾದರೆ ಏನು ಮಾಡಬೇಕು ನಾವು? ಏನು ಮಾಡಬೇಕು ಕನ್ನಡ ಜನಾಂಗ?

ಕೊಚ್ಚೇವು ಕೊಳೆಯ! ಹಚ್ಚೇವು ದೀಪ

ಕನ್ನಡದ ಜನರು ಏಳಿಗೆಯ ಗೀಳು ಹಿಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಅಡಿಪಾಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬುಡದಿಂದಲೇ ಬದಲಾಗಬೇಕು. ಕನ್ನಡದ ಜನರಿಗೆ ಹತ್ತಿರವಾಗಿರುವ ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನು ಕನ್ನಡದ ಸಮಾಜ ಕಟ್ಟಿಕೊಳ್ಳಬೇಕು. ಉನ್ನತ ಕಲಿಕೆಯೂ ಸೇರಿದಂತೆ ಸಂಶೋಧನೆಗಳೂ ಕೂಡಾ ಪ್ರತಿಯೊಂದೂ ಕನ್ನಡದಲ್ಲೇ ಆಗುವಂತಾಗಬೇಕು. ಹೊರಜಗತ್ತಿನ ಜೊತೆ ಸಂಪರ್ಕಕ್ಕೆ ಹೆರನುಡಿಗಳು ಬೇಕು ಎನ್ನುವುದನ್ನು ಇದೇನೂ ಕಡೆಗಣಿಸದು ಎನ್ನುವುದನ್ನು ನಾವು ಅರಿಯಬೇಕಾಗಿದೆ. ಕನ್ನಡನಾಡಿನ ಆಡಳಿತ ವ್ಯವಸ್ಥೆ ಕನ್ನಡದ್ದಾಗಬೇಕಾಗಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ರಾಜ್ಯದ್ದಾದರೂ, ಕೇಂದ್ರದ್ದಾದರೂ, ಅಂತರಾಷ್ಟ್ರೀಯವಾದದ್ದಾದರೂ ಅದು ಕನ್ನಡದಲ್ಲಿ ವ್ಯವಹರಿಸಬೇಕು. ಸರ್ಕಾರಿ, ಖಾಸಗಿ ಯಾವುದಾದರೂ ಕೂಡಾ ಕನ್ನಡದಲ್ಲಿ ವ್ಯವಹರಿಸುವ, ಸೇವೆ ಕೊಡಬೇಕಾದ್ದು ಕಡ್ಡಾಯವಾಗಬೇಕು. ಈ ನಾಡಿನ ರಾಜಕೀಯ ಕನ್ನಡ ಕನ್ನಡಿಗ ಕೇಂದ್ರಿತವಾಗಬೇಕು. ಭಾರತ ಸರಿಯಾದ ಸಮಾನ ಗೌರವದ, ಸಮಾನ ಅವಕಾಶದ, ಅಧಿಕಾರಗಳ ವಿಕೇಂದ್ರೀಕರಣಕ್ಕೆ ಒತ್ತುಕೊಡುವ ಒಕ್ಕೂಟವಾಗುವತ್ತ ಕನ್ನಡಿಗ ಶ್ರಮಿಸಬೇಕು. ಜೊತೆಗೆ ನಾಡಿನ ಜನಲಕ್ಷಣವನ್ನು ತೀವ್ರವಾಗಿ ಬುಡಮೇಲು ಮಾಡುತ್ತಿರುವ ಅನಿಯಂತ್ರಿತ ವಲಸೆಗೆ ಕಡಿವಾಣವಿಡುವ ನೀತಿ ಬೇಕು. ಜಗತ್ತಿನ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುವ, ಜಗತ್ತಿಗೆಲ್ಲಾ ಮಾರಬಲ್ಲ ಯೋಗ್ಯತೆಯನ್ನು ಕನ್ನಡಿಗ ಗಳಿಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಿಗ ಪರಿಣಿತಿ ಸಾಧಿಸಬೇಕು. ಈ ಎಲ್ಲಾ ಸಾಧನೆಗೆ ಕನ್ನಡನಾಡು ನೆಲೆಯಾಗಬೇಕು. ಇವೆಲ್ಲಾ ಸಾಧಿಸಲು ನಾವು ಮಾಡಲು ಬೇಕಾದ್ದನ್ನೆಲ್ಲಾ ಮಾಡುವ ಕಡೆ ಯೋಚಿಸದಿದ್ದಲ್ಲಿ, ಯೋಜಿಸದಿದ್ದಲ್ಲಿ ಕನ್ನಡ ಜನತೆ ನವೆಂಬರ್ ತಿಂಗಳಲ್ಲಿ ಬಾವುಟ ಹಾರಿಸುತ್ತಾ ಹಾರಿಸುತ್ತಲೇ ಹೊತ್ತು ಕಳೆದು ಏಳಿಗೆಯನ್ನು ಮರೆಯಬೇಕಾಗುತ್ತದೆ!

ಬೇರೆ ರಾಜ್ಯವಾದರೆ ಏಳಿಗೆ ಅನ್ನೋದು ಪೊಳ್ಳು..

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಮಾತನ್ನು ಶ್ರೀ ಉಮೇಶ್ ಕತ್ತಿಯವರು ಆಡಿದ್ದರಿಂದಾಗಿ ಈ ಮಾತಿನ ಪರವಾಗಿ ಸಣ್ಣದಾಗಿಯೂ, ವಿರುದ್ಧವಾಗಿ ದೊಡ್ಡದಾಗಿಯೂ ಕೂಗೆದ್ದಿದೆ. ಮೊನ್ನೆ ಖಾಸಗಿ ವಾಹಿನಿಯೊಂದರಲ್ಲಿ ಮಾತಾಡುತ್ತಿದ್ದ ಗುಲ್ಬಾರ್ಗಾದ ಒಬ್ಬ ವ್ಯಕ್ತಿಯಂತೂ ಭಾರೀ ಉದ್ವೇಗದಿಂದ "ನಮ್ಮ ಕಡೆಯ ಹೋರಾಟಕ್ಕೆ ಹಳೇ ಮೈಸೂರಿನವರು ಸ್ಪಂದಿಸುತ್ತಿಲ್ಲಾ... ನೀವೆಲ್ಲಾ ಸುಖವಾಗಿ ಬೆಚ್ಚಗೆ ಮನೆಯಲ್ಲಿದ್ದೀರಿ, ನಾವು ಹಿಂದುಳಿದ್ದಿದ್ದೇವೆ. ಭಾಷೀ ತೊಗೊಂಡ್ ಏನ್ ಮಾಡ್ತೀರಿ... ನಮಗಾ ಏಳಿಗಿ ಬೇಕೈತಿ, ಕನ್ನಡ್ ಕನ್ನಡ್ ಅನ್ಕೋತಾ ಕುಂತ್ರಾ ನಮಗ್ ಅನ್ನಾ ಸಿಕ್ತೈತೇನ್ರೀ" ಎಂದು ಮಾತಾಡುತ್ತಿದ್ದರು. ಹೌದಲ್ಲಾ, ನಮಗಾದರೂ ಬೇಕಿರುವುದು ಜನರ ಏಳಿಗೆಯಷ್ಟೇ ಅಲ್ಲವೇ? ಜನರ ಏಳಿಗೆ ನಾವು ಒಂದಾಗಿದ್ದುದರಿಂದ ಆಗುತ್ತದೆಯೋ? ಬೇರಾಗುವುದರಿಂದಲೋ? ಒಂದೇ ರಾಜ್ಯದಲ್ಲಿ ಆ ಭಾಗ ಹಿಂದುಳಿಯಲು ಕಾರಣವೇನು? ನಿಜವಾಗಲೂ ಆ ಭಾಗ ಮಾತ್ರಾ ಹಿಂದುಳಿದಿದೆಯೇ? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತವೆ.

ಹಿಂದುಳಿದ ಉತ್ತರ ಕರ್ನಾಟಕ ಮತ್ತು ಮುಂದುವರೆದ ಮೈಸೂರು!

ಭೌಗೋಳಿಕವಾಗಿ ದಕ್ಷಿಣ ಕರ್ನಾಟಕ ಮಳೆ ಚೆನ್ನಾಗಿ ಬೀಳುವ ಗುಡ್ಡಗಾಡು ಪ್ರದೇಶವಾದರೆ ಉತ್ತರ ಕರ್ನಾಟಕ ಹೆಚ್ಚಾಗಿ ಬಯಲುಸೀಮೆ. ಒಳ್ಳೆಯ ಬಯಲಿನ ಕರಿಮಣ್ಣಿನ ಉತ್ತರದ ನಾಡಲ್ಲಿ ನೀರಾವರಿ ಸಿಕ್ಕಿದ್ದೇ ಆದರೆ ಅದ್ಭುತವಾಗಿ ವ್ಯವಸಾಯ ಮಾಡಬಹುದಿತ್ತಾದರೂ ಅಣೆಕಟ್ಟೆ ಕಟ್ಟಿ, ಕಾಲುವೆಯಲ್ಲಿ ನೀರು ಹರಿಸಿ ಜನರಿಗೆ ತಲುಪಿಸಬೇಕೆಂಬ ಮನಸ್ಥಿತಿ ಆಳುಗರಲ್ಲಿ ಇರಲಿಲ್ಲವೇನೋ ಎನ್ನಿಸುತ್ತದೆ. ಏಳಿಗೆಗೆ ಬೇಕಾದ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಆಳುವವರಲ್ಲಿ ಅಸಡ್ಡೆಯಿದ್ದುದನ್ನು ನಾವು ಕಾಣಬಹುದಾಗಿತ್ತು. ಇದಕ್ಕೆ ರಾಜಕೀಯ ಕಾರಣವೆಂದರೆ ಐತಿಹಾಸಿಕವಾಗಿ ಮೈಸೂರು ಒಡೆಯರ್ ಮನೆತನದ ರಾಜರುಗಳ ಆಳ್ವಿಕೆಯಲ್ಲಿದ್ದುದು ಮತ್ತು ಉತ್ತರ ಕರ್ನಾಟಕದ ಬಹುಭಾಗ ಮುಂಬೈ ಮತ್ತು ಹೈದರಾಬಾದ್ ನಡುವೆ ಹಂಚಿಹೋಗಿದ್ದುದು! ದಕ್ಷಿಣ ಕನ್ನಡ ಮದ್ರಾಸ್ ಕೈಲಿತ್ತು. ಬ್ರಿಟೀಶರ ಕೈಲಿದ್ದ ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕಗಳು ಶಿಕ್ಷಣದಲ್ಲಿ ಅದ್ಭುತ ಎನ್ನಿಸುವಂತೆ ಮೈಸೂರಿಗೆ ಸಮಸಮನಾಗೇ ಪ್ರಗತಿಯನ್ನು ಸಾಧಿಸಿದ್ದನ್ನೂ ನಾವು ನೋಡಬಹುದು! ನಿಜಾಮರ ಕರ್ನಾಟಕ ಮಾತ್ರಾ ತೀರಾ ಹಿಂದುಳಿದದ್ದಕ್ಕೆ ಭೌಗೋಳಿಕ, ಐತಿಹಾಸಿಕ ಪರಿಸ್ಥಿತಿಗಳೂ ಪ್ರಮುಖ ಕಾರಣವಾಗಿದ್ದವೆಂದರೆ ತಪ್ಪಾಗಲಾರದು. ಇದೆಲ್ಲಾ ಸ್ವಾತಂತ್ರ್ಯ ಬರುವ ಮೊದಲಿನ ಕತೆ.

ಸ್ವಾತಂತ್ರ್ಯ ಬಂದದ್ದಾಯ್ತು.  ಏಕೀಕರಣದ ಹೋರಾಟವೂ ತೀವ್ರವಾಯಿತು. ಭಾಷಾವಾರು ಪ್ರಾಂತ್ಯಗಳ ಅಗತ್ಯ ಮತ್ತು ಪರಿಣಾಮಕಾರಿ ಆಡಳಿತಕ್ಕೆ ದಾರಿ ಅದೇ ಎನ್ನುವ ಕಾರಣಕ್ಕೆ ರಾಜ್ಯಗಳ ಮರುರಚನೆಗೆ ಕೇಂದ್ರ ಸಿದ್ಧವಾಯ್ತು. ಅನೇಕಾನೇಕ ಸಂಸ್ಥೆಗಳು ಏಕೀಕರಣದ ಉದ್ದೇಶಕ್ಕಾಗೆ ಹುಟ್ಟಿದವು. ಉತ್ತರ ಕರ್ನಾಟಕದಲ್ಲೇ ಈ ಚಳವಳಿ ಬಲವಾಯ್ತು. ಆಗಲೂ ಇದ್ದ ಅಪಸ್ವರ "ಮುಂದುವರೆದ ಮೈಸೂರಿನ ಜೊತೆ ಹಿಂದುಳಿದ ಉತ್ತರ ಕರ್ನಾಟಕ ಬೇಕಿಲ್ಲಾ" ಎನ್ನುವುದೇ! ಅಂತೂ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆ, ಕರ್ನಾಟಕದ  ರಚನೆಯೂ ಆಯ್ತು. ಗಮನಿಸಿ, ಆಗ ಬೆರೆತದ್ದು ಎರಡು ಸಮಾನ ಏಳಿಗೆ ಹೊಂದಿದ ಪ್ರದೇಶಗಳಲ್ಲಾ! ಬದಲಿಗೆ ಮುಂದುವರೆದ ಒಂದು ಮತ್ತು ಅದಕ್ಕಿಂತಾ ಹಿಂದುಳಿದ ಐತಿಹಾಸಿಕವಾಗಿ ತಾತ್ಸಾರಕ್ಕೀಡಾದ ಮತ್ತೊಂದು ನಾಡು.

ಹಿಂದುಳಿದ ಪ್ರದೇಶಗಳು ಎರಡೂ ಕಡೆ ಇವೆ! 

ಸ್ವಾತಂತ್ರ ಬಂದು ಬಹುವರ್ಷಗಳ ನಂತರವೂ ಉತ್ತರ ಕರ್ನಾಟಕದ ಹಿಂದುಳಿದಿರುವ ಬಗ್ಗೆ ಕೂಗು ಕೇಳಿದಾಗ, ಅಸಮಾನತೆಯ ಆರೋಪ ಕೇಳಿದಾಗ ಡಾ. ಡಿ ಎಂ ನಂಜುಂಡಪ್ಪನವರ ಮುಂದಾಳ್ತನದಲ್ಲಿ ಸಮಿತಿ ರಚಿಸಿ ವರದಿ ಪಡೆದುಕೊಳ್ಳಲಾಯಿತು. ಕರ್ನಾಟಕದ ಅಷ್ಟೂ ತಾಲ್ಲೂಗಳ ಸ್ಥಿತಿಗತಿ ಅಧ್ಯಯನ ಮಾಡಿ ನೀಡಲಾದ ಆ ವರದಿಯ ಸಾರ ಹಿಂದುಳಿದ ಪ್ರದೇಶಗಳು ಎರಡೂ ಭಾಗದಲ್ಲಿ ಸಮಾನವಾಗೇ ಹರಡಿಕೊಂಡಿವೆ ಎನ್ನುವುದು! ಉತ್ತರ ಕರ್ನಾಟಕದಲ್ಲಿ ೫೯ ತಾಲ್ಲೂಕುಗಳು ಹಿಂದುಳಿದಿದ್ದರೆ ದಕ್ಷಿಣದಲ್ಲಿ ೫೫ ತಾಲ್ಲೂಕುಗಳು. ಇದರರ್ಥ ನಮ್ಮನ್ನು ಪ್ರಜಾಪ್ರಭುತ್ವದ ಹೆಸರಲ್ಲಿ ಇಷ್ಟು ವರ್ಷ  ಆಳಿದ ನಾಯಕರುಗಳು ಯಾವುದೇ ಪ್ರದೇಶದವರೇ ಆಗಿದ್ದರೂ ಹಿಂದೆ ಉಳಿಸುವುದರಲ್ಲಿ ಎಲ್ಲರನ್ನೂ ಸಮಾನವಾಗೇ ಕಂಡು ಯಾವುದನ್ನೂ ಏಳಿಗೆ ಮಾಡಿಲ್ಲಾ ಎಂದು! ಇದ್ದುದ್ದರಲ್ಲಿ ಆಗಿರುವ ಶಿಕ್ಷಣ/ ನೀರಾವರಿ/ ಕಾರ್ಖಾನೆಯಂತಹವುಗಳ ನಿರ್ಮಾಣ ಮೊದಲಾದವನ್ನು ನೋಡಿದರೆ ರಾಜಧಾನಿಯ ಸುತ್ತಮುತ್ತ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಇಷ್ಟು ವರ್ಷಗಳಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ನೀರಾವರಿ ಕಾಮಗಾರಿಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಕಟ್ಟಲ್ಪಟ್ಟಿವೆ. ಹಾಗಾಗಿ ಆಗಬೇಕಾದ್ದು ಎಲ್ಲಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯೇ ಹೊರತು ಬೇರೆ ರಾಜ್ಯವಲ್ಲಾ ಎನ್ನಬಹುದು!

ಬೇರೆ ರಾಜ್ಯವಾದರೆ ಮಾತ್ರಾ ಏಳಿಗೆ ಎನ್ನೋದು ಪೊಳ್ಳು! 

ಸಣ್ಣ ರಾಜ್ಯಗಳು ಆಡಳಿತ ಮಾಡಲು ಅನುಕೂಲಕರ ಎನ್ನುವ ಮಾತುಗಳಿವೆ. ನಿಜವೇ! ಆದರೆ ಇದು ಯಾವ ಸನ್ನಿವೇಶದಲ್ಲಿ ಎನ್ನುವುದು ಮುಖ್ಯ. ಏನು ಗುರುವಿನಲ್ಲಿ ಈ ಹಿಂದೆ ಬರೆದಿದ್ದ ಬರಹವೊಂದರ ಈ ಭಾಗ ನೋಡಿ:

ಚಿಕ್ಕರಾಜ್ಯಗಳು "ಯುಎಸ್‍ಐ"ನಲ್ಲಿ ಮಾತ್ರಾ ಸುರಕ್ಷಿತ!
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಉತ್ತರ ಮತ್ತು ದಕ್ಷಿಣ ಭಾರತಗಳೇ ಎದುರಾಳಿಗಳಾಗಬಹುದೆಂಬ ಆತಂಕ ವ್ಯಕ್ತಪಡಿಸಿ ಇದನ್ನು ಸರಿದೂಗಿಸಲು ಎಲ್ಲಾ ರಾಜ್ಯಗಳ ಜನಸಂಖ್ಯೆಯೂ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿರಲಿ, ಇದಕ್ಕಾಗಿ ಉತ್ತರದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಚಿಕ್ಕರಾಜ್ಯಗಳನ್ನಾಗಿಸುವುದು ಒಳ್ಳೆಯದು ಎಂದಿದ್ದರು. ಹಾಗೆ ಮಾಡುವುದರಿಂದ ಕೇಂದ್ರಸರ್ಕಾರದ ಮೇಲೆ ದೊಡ್ಡ ರಾಜ್ಯದ ಹಿಡಿತ ತಪ್ಪಿಸಲು ಸಾಧ್ಯವೆಂದಿದ್ದರು. ದಕ್ಷಿಣ ಭಾರತದ ಹೈದರಾಬಾದ್ ಭಾರತದ ಎರಡನೇ ರಾಜಧಾನಿಯಾಗಲೀ ಎನ್ನುವವರೆಗೂ ಅವರು ಹೇಳಿದ್ದರು. ಎಂದರೆ ಕೇಂದ್ರದ ಮೇಲೆ ಯಾವ ರಾಜ್ಯವು ದೊಡ್ಡದೋ ಅದರ ಪ್ರಭಾವ, ಹಿಡಿತ ಇರುತ್ತದೆ ಮತ್ತು ಅದು ಸರಿಯಲ್ಲಾ ಎನ್ನುವ ಕಾಳಜಿಯಿಂದಲೇ ಹೇಳಿದ್ದರು.
ಇಂದು ಭಾರತದ ರಾಜಕಾರಣದಲ್ಲಿ ಯಾವ ಪಕ್ಷಗಳು ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾವೋ ಆ ಪಕ್ಷಗಳು ದೇಶದ ಒಪ್ಪುಕೂಟ ಸ್ವರೂಪದ ಬಗ್ಗೆ ನಂಬಿಕೆಯನ್ನು ಹೊಂದಿರುವಂತೆ ತೋರುತ್ತಿಲ್ಲ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆನ್ನುವ ಮನಸ್ಥಿತಿಯಿಲ್ಲದೆ, ಚಿಕ್ಕರಾಜ್ಯ ಮಾಡಬೇಕೆನ್ನುವುದು "ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ"ದ ನಿರ್ಮಾಣದ ಪ್ರಯತ್ನವಾಗುತ್ತದೆ. ಇಂದು ಇಪ್ಪತ್ತೆಂಟು ಸಂಸದರ ಕರ್ನಾಟಕವು ಹೇಗೆ ಹೆಚ್ಚಿನ ಸಂಸದರ ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಗಳ ದೆಹಲಿ ಲಾಬಿಯ ಎದುರು ಕೈಚೆಲ್ಲುತ್ತದೆ ಎನ್ನುವುದು ಒಂದು ಕಡೆ, ಹಾಗೇ ಕಡಿಮೆ ಸಂಸದರನ್ನು ಹೊಂದಿರುವ ಹೆಚ್ಚು ರಾಜ್ಯಗಳಿರುವ ಈಶಾನ್ಯ ಭಾರತದ ಸಮಸ್ಯೆಗಳಿಗೆ ಭಾರತದ ಸಂಸತ್ತಿನಲ್ಲಿ ಸಿಗುವ ಆದ್ಯತೆಗಳ ಬಗ್ಗೆ ಕಣ್ಣು ಹಾಯಿಸಿದರೆ ಚಿಕ್ಕ ರಾಜ್ಯಗಳು ಭಾರತದಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಕಷ್ಟವೇನೋ ಎನ್ನುವ ಅನುಮಾನ ಮೂಡುತ್ತದೆ.
ಭಾರತವು ಸರಿಯಾದ ಸಂಯುಕ್ತ ಸಂಸ್ಥಾನವಾದಲ್ಲಿ ಇಂತಹ ತೊಡಕುಗಳನ್ನು ನಿವಾರಿಸಬಹುದಾಗಿದೆ. ‘ದೊಡ್ಡದಕ್ಕೆ ಬಲ/ ಪ್ರಭಾವ ಹೆಚ್ಚು’ ಎನ್ನುವ ಪರಿಸ್ಥಿತಿ ಇಂದಿನ ಭಾರತದಲ್ಲಿರುವುದು ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯದಿರಲು, ಬಗೆಹರಿದರೂ ಪರಿಹಾರಗಳು ಪಕ್ಷಪಾತತನದಿಂದ ಕೂಡಿವೆ ಎನ್ನಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಇದನ್ನು ಬಗೆಹರಿಸುವುದು ಎಂಬುದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ!
ಭಾರತ ಒಪ್ಪುಕೂಟದಲ್ಲಿ...
ರಾಜ್ಯಸಭೆಗೆ ಇಂದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ ಎನ್ನುವ ಅರ್ಥವಿದ್ದರೂ ಸದಸ್ಯ ಬಲ, ಆರ್ಥಿಕ ವಿಷಯಗಳಲ್ಲಿನ ಮಿತಿಯಂತಹ ಹಲವಾರು ವಿಷಯಗಳಲ್ಲಿ ಲೋಕಸಭೆಗಿಂತಲೂ ಕಡಿಮೆ ಅಧಿಕಾರಗಳಿವೆ. ಎರಡೂ ಸದನಗಳ ಸದಸ್ಯ ಬಲವನ್ನು ಸಮಾನವಾಗಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ರಾಜ್ಯಸಭೆಯಲ್ಲಿ ಪ್ರತಿರಾಜ್ಯದಿಂದ ಸಮಾನ ಪ್ರಾತಿನಿಧ್ಯವಿರುವುದೂ ಕೂಡಾ ಅಗತ್ಯವಾಗಿದೆ. ಅಮೇರಿಕಾದ ಸೆನೆಟ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಮರುರೂಪಿಸಬಹುದಾಗಿದೆ.
ಎಷ್ಟೇ ಚಿಕ್ಕ ರಾಜ್ಯವಿರಲಿ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು, ಅದರ ಸಹಮತಿಯಿಲ್ಲದೆ ಜಾರಿಮಾಡುವಂತಿಲ್ಲ ಎನ್ನುವ ವ್ಯವಸ್ಥೆ ಇರಬೇಕಾಗಿದೆ. ಇದು ಬಹುಮತದ ಕಾರಣದಿಂದಲೇ ರಾಜ್ಯವೊಂದರ ಮೇಲೆ ಕೇಂದ್ರ ಅಧಿಕಾರ ಚಲಾಯಿಸುವುದನ್ನು ತಪ್ಪಿಸುತ್ತದೆ. ಇಡೀ ಭಾರತದ ಸಂಸತ್ತು ಒಮ್ಮತದಿಂದ ತನ್ನೆಲ್ಲಾ ಸದಸ್ಯ ಬಲ ಬಳಸಿ ರಾಜ್ಯವೊಂದರ ಹಕ್ಕುಗಳನ್ನು ಮೊಟಕುಗೊಳಿಸಿಬಿಡಬಹುದಾದ ಅಪಾಯ ಇದರಿಂದ ದೂರವಾಗಬಹುದಾಗಿದೆ.
ಚಿಕ್ಕರಾಜ್ಯಗಳು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವೆನ್ನುವ ಮಾತಿಗೆ ಅರ್ಥ ಸಿಗಬೇಕೆಂದರೆ ರಾಜ್ಯಗಳಿಗೆ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವಾದರೂ ಇರಬೇಕಲ್ಲವೇ? ಹಾಗಾಗಿ ಕೇಂದ್ರವು ಕೇಂದ್ರಪಟ್ಟಿ ಮತ್ತು ಜಂಟಿ ಪಟ್ಟಿಯಲ್ಲಿರುವ ಆಡಳಿತಾತ್ಮಕ ವಿಷಯಗಳಲ್ಲಿನ ತನ್ನ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮೊದಲಾದ ಕೆಲವೇ ಕೆಲವು ವಿಷಯಗಳನ್ನು ಮಾತ್ರಾ ತಾನುಳಿಸಿಕೊಳ್ಳಬೇಕು. ಇನ್ನು ಕೆಲವರು ಪ್ರತಿಪಾದಿಸಿದಂತೆ ದ್ವಿಪೌರತ್ವವನ್ನೂ ಪರಿಗಣಿಸಬಹುದಾಗಿದೆ.
ಇಂಥಾ ವಿಷಯಗಳೆಲ್ಲಾ ಜಾರಿಯಾದಾಗ ರಾಜ್ಯಗಳ ಸ್ವಾಯತ್ತತೆಗೆ ಭದ್ರತೆ ಸಿಗುತ್ತವೆ. ಇಂದಿನ ಭಾರತದಲ್ಲಿ ಔಟ್‍ಲುಕ್‍ನಲ್ಲಿನ ಬರಹದಂತೆ ಆಡಳಿತದ ಕಾರಣಕ್ಕಾಗಿ ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಾಗುವುದಾದಲ್ಲಿ ರಾಜ್ಯಗಳು ಮತ್ತಷ್ಟು ಅತಂತ್ರವಾಗುವುದು ಖಚಿತ. ಬಲಿಷ್ಠವಾದ ಕೇಂದ್ರವು ಸಾಧ್ಯವಾಗುವುದು ಬಲಶಾಲಿಯಾದ ರಾಜ್ಯಗಳಿಂದಲೇ ಹೊರತು ರಾಜ್ಯಗಳನ್ನು ಚಿಕ್ಕದಾಗಿಸಿ, ಕೇಂದ್ರದಲ್ಲಿ ಅವುಗಳ ಪ್ರಾತಿನಿಧ್ಯ ಕಡಿಮೆ ಮಾಡಿಸಿ, ಅವುಗಳ ಬಲಕುಂದಿಸುವುದರಿಂದಲ್ಲಾ!!

ರಾಜ್ಯಸರ್ಕಾರವೇ ನಂಜುಂಡಪ್ಪ ವರದಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ಸರಿಯಾದ ದಾರಿ. ಉತ್ತರ ಕರ್ನಾಟಕದವರೂ ಕೂಡಾ ಕರ್ನಾಟಕದ ಭಾಗವಾಗಿರುವುದು ತಮ್ಮಿಚ್ಚೆಯಿಂದಲೇ ಹೊರತು ಯಾರ ಬಲವಂತಕ್ಕಾಗಲೀ, ಯಾರ ಉಪಕಾರಕ್ಕಾಗಲೀ ಅಲ್ಲಾ ಎನ್ನುವುದು ಕಟು ದಿಟ! ಇಷ್ಟಕ್ಕೂ ಮೀರಿ ನಿಜಕ್ಕೂ ಜನಪರ ಕಾಳಜಿಯಿರದ, ಇನ್ನೊಂದು ರಾಜ್ಯವಾದರೆ ತಾವಲ್ಲಿ ಅಧಿಕಾರ ಹಿಡಿಯಬಹುದೆನ್ನುವ ರಾಜಕಾರಣಿಗಳ ಕೀಳು ಆಶಯಗಳನ್ನು ಮೀರಿ ನಾಡು ಈ ಬಗ್ಗೆ ಚಿಂತಿಸಬೇಕಾಗಿದೆ!

ಡಾ. ಡಿ ಎಂ ನಂಜುಂಡಪ್ಪ ವರದಿ: ಒಂದು ನೋಟ

- ಚೇತನ್ ಜೀರಾಳ

ಸುಮಾರು ೨೦ ವಿವಿಧ ಆಡಳಿತ ಕೇಂದ್ರಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಕರ್ನಾಟಕವನ್ನಾಗಿ ಒಗ್ಗೂಡಿಸುವಲ್ಲಿ ನಮ್ಮ ಹಿರಿಯರು ಪಟ್ಟಿರುವ ಶ್ರಮ ತುಂಬಾ ದೊಡ್ಡದು. ಅವರ ಶ್ರಮದ ಫಲವಾಗಿ ೧ನೇ ನವೆಂಬರ್ ೧೯೫೬ರಲ್ಲಿ ಕರ್ನಾಟಕ ರಾಜ್ಯದ ಉದಯವಾಗಿತು. ಕನ್ನಡ ಮಾತನಾಡುವ ೫ ಪ್ರಾಂತ್ಯಗಳ ಒಗ್ಗೂಡಿಕೆಯಿಂದ ಕರ್ನಾಟಕ ರಾಜ್ಯದ ಉದಯವಾಯಿತು. ಆ ಪ್ರದೇಶಗಳ ವಿವರಗಳು ಈ ಕೆಳಗಿನಂತಿವೆ:
.          ಮೈಸೂರು ರಾಜ್ಯ: ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳು.
.          ಬಾಂಬೆ - ಕರ್ನಾಟಕ: ಧಾರವಾಡ, ಬೆಳಗಾವಿ, ಬಿಜಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳು
.          ಹೈದ್ರಬಾದ್ - ಕರ್ನಾಟಕ: ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಗಳು
.          ಮದ್ರಾಸ್ - ಕರ್ನಾಟಕ: ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ
.          ಕೊಡಗು ಜಿಲ್ಲೆ

ಗಮನಿಸಬೇಕಾದ ವಿಷಯವೆಂದರೆ ಹಿಂದಿನಿಂದಲೂ ಕನ್ನಡ ರಾಜರ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯವು ಅಭಿವೃದ್ಧಿಯ ಪಥದಲ್ಲಿ ಮುಂದಿತ್ತು. ಹಿಂದಿನ ಮೈಸೂರು ರಾಜ್ಯ ತನ್ನದೇ ಆದ ಬ್ಯಾಂಕಿಂಗ್ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ, ರೈಲ್ವೆ ವ್ಯವಸ್ಥೆ ಹಾಗೂ ಸಾರ್ವಜನಿಕ ಉದ್ಯಮಗಳನ್ನು ಹೊಂದಿತ್ತು. ಇವುಗಳ ಜೊತೆಜೊತೆಗೆ ಹಿಂದಿನ ಮೈಸೂರು ರಾಜ್ಯವು ತನ್ನದೇ ಆದ ತೆರಿಗೆ ಸಂಗ್ರಹಣಾ ವ್ಯವಸ್ಥೆ ಜೊತೆ ಮತ್ತು ನೀರಾವರಿ ಯೋಜನೆಗಳನ್ನು ಹೊಂದಿತ್ತು. ಇದಕ್ಕೆ ವಿರುದ್ಧ ಎನ್ನುವಂತೆ ಬೇರೆ ಭಾಷೆಗಳ ಪ್ರಾಂತ್ಯಕ್ಕೆ ಸೇರಿ ಹೋಗಿದ್ದ ಉಳಿದ ಕನ್ನಡ ಮಾತನಾಡುವ ಪ್ರದೇಶಗಳು ಅಲ್ಲಿಯ ಆಡಳಿತದ ಅಡಿಯಲ್ಲಿ ಅಷ್ಟಾಗಿ ಅಭಿವೃದ್ಧಿ ಕಾಣಲಿಲ್ಲ. ಇದಕ್ಕೆ ಇನ್ನೊಂದು ಮುಖ್ಯ ಕಾರಣ ಈ ಪ್ರದೇಶಗಳು ಉಳಿದ ಪ್ರಾಂತ್ಯಗಳ ಗಡಿ ಭಾಗಗಳಾಗಿದ್ದವು.

ಹಾಗಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದ ಕನ್ನಡ ಮಾತನಾಡುವ ಜನರು, ಕರ್ನಾಟಕ ರಾಜ್ಯ ಒಗ್ಗೂಡಿದಾಗ, ಮುಂದುವರಿದ ಮೈಸೂರು ಪ್ರಾಂತ್ಯದ ಜನರಿಗೆ ಸಿಗುತ್ತಿದ್ದ ಸವಲತ್ತುಗಳನ್ನು ಸಹಜವಾಗೇ ಬಯಸಿದರು. ಕಾಲಕ್ರಮೇಣ ಯಾವಾಗ ಉತ್ತರ ಭಾಗದ ಜನರಿಗೆ ತಮಗೆ ಸವಲತ್ತುಗಳು ಸಿಗುತ್ತಿಲ್ಲ ಎಂದೆನಿಸಿದಾಗ ಪ್ರಾದೇಶಿಕ ಅಸಮಾನತೆಯ ಕೂಗು ಕೇಳಿ ಬರಲು ಶುರುವಾಯಿತು. ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಸರ್ಕಾರಗಳು ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿಲ್ಲ, ಬದಲಾಗಿ ಎಲ್ಲಾ ಅಭಿವೃದ್ಧಿ ಯೋಜನೆಗಳು ದಕ್ಷಿಣ ಕರ್ನಾಟಕದ ಜನರಿಗೆ ದೊರೆಯುತ್ತಿವೆ ಅನ್ನೋ ದೂರು ಕೇಳಿ ಬರಲಾರಂಭಿಸಿತು.

ಆದರೆ ನಿಜಕ್ಕೂ ಈ ಮೇಲಿನ ಆಪಾದನೆಗಳು ನಿಜವೇ? ಈ ವಾದದಲ್ಲಿ ಹುರುಳೇನಾದರೂ ಇದೆಯೇ? ದಕ್ಷಿಣ ಕರ್ನಾಟಕ ಭಾಗ ನಿಜಕ್ಕೂ ಮುಂದುವರೆದಿದೆಯೇ? ಕರ್ನಾಟಕ ಹಿಂದುಳಿದಿರುವ ಭಾಗಗಳ ಅಭಿವೃದ್ಧಿಗೆ ತಗೆದುಕೊಳ್ಳಬೇಕಾಗಿರುವ ಕ್ರಮಗಳಾವುವು? ಅನ್ನುವುದರ ಬಗ್ಗೆ ಡಾ. ನಂಜುಂಡಪ್ಪ ವರದಿ ಬೆಳಕು ಚೆಲ್ಲುತ್ತದೆ.

ಅಭಿವೃದ್ಧಿ ಎಂದರೇನು?

ಅಭಿವೃದ್ಧಿ ಎನ್ನುವುದು ಒಂದು ನಿರಂತರ ಕ್ರಿಯೆ. ಈ ಕ್ರಿಯೆಯಲ್ಲಿ ಮನುಷ್ಯ ಉತ್ತಮವಾಗಿ ಬದುಕಲು ಬೇಕಾಗಿರುವ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಅವಕಾಶವಿರಬೇಕು. ಒಂದು ಅಭಿವೃದ್ಧಿ ಹೊಂದಿದ ಸಮಾಜದಲ್ಲಿ ಇರಬೇಕಾಗಿರುವ ಸವಲತ್ತುಗಳು ಈ ರೀತಿ ಇವೆ:
 - ಮನುಷ್ಯನಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳು ಉದಾ: ಮನೆ, ನೀರು, ವಿದ್ಯುತ್, ಶಾಲೆ, ವಾಹನ ಸೌಕರ್ಯ ಇತ್ಯಾದಿ.
 - ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ.
 - ಹೆಚ್ಚಿನ ಆದಾಯ.
 - ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬೇಕಾಗಿರುವ ಹೊಸ ಕಲಿಕೆಯ ವ್ಯವಸ್ಥೆ

ಈ ಅಭಿವೃದ್ಧಿಯು ಸಾಮಾಜಿಕ - ಆರ್ಥಿಕ - ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಬೇಕಾದದ್ದು ಸರಿಯಾದ ದಾರಿ. ಒಂದು ರಾಜ್ಯದ ಅಥವಾ ಪ್ರದೇಶದ ಅಭಿವೃದ್ಧಿಯುಲ್ಲಿ ಸರ್ಕಾರದ ಪಾತ್ರ ತುಂಬಾ ಮುಖ್ಯವಾಗಿರುತ್ತದೆ.  ಆದರೆ ಒಂದು ಪ್ರದೇಶ ಬೆಳವಣಿಗೆಯಲ್ಲಿ ಹಿಂದುಳಿಯಲು ಮುಖ್ಯ ಕಾರಣ ಅಲ್ಲಿನ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೇ ಬಳಸದೇ ಇರುವುದು ಆಗಿದೆ. ನಮ್ಮ ರಾಜ್ಯದಲ್ಲಿ ಹೇರಳವಾಗಿ ನೈಸರ್ಗಿಕ ಸಂಪತ್ತಿದ್ದರೂ, ಇದರ ಹಂಚಿಕೆ ಸಮಾನವಾಗಿ ಎಲ್ಲಾ ಜಿಲ್ಲೆಗಳಲ್ಲಿಲ್ಲ. ನಮ್ಮ ರಾಜ್ಯದಲ್ಲಿ ಮಲೆನಾಡು, ಅರೆಮಲೆನಾಡು, ಬಯಲು ಸೀಮೆ, ಮಳೆಯಾಶ್ರಿತ ಹಾಗೂ ಬರಪೀಡಿತ ಪ್ರದೇಶಗಳಿವೆ. ಇವುಗಳು ನೈಸರ್ಗಿಕವಾಗಿದ್ದರೂ, ಇವುಗಳ ಪ್ರಭಾವ ಒಂದು ಪ್ರದೇಶದ ಬೆಳವಣಿಗೆಯ ಮೇಲೆ ಇರುತ್ತದೆ. ಅಭಿವೃದ್ದಿ ಹೊಂದದ ಪ್ರದೇಶಗಳನ್ನು ನಾವು ಹಿಂದುಳಿದ ಪ್ರದೇಶಗಳು ಎಂದು ಕರೆಯುತ್ತೇವೆ. ಹಿಂದುಳಿದ ಪ್ರದೇಶಗಳ ಗುಣಲಕ್ಷಣಗಳು ಈ ಕೆಳಗಿನಂತಿವೆ:

       - ಆ ಪ್ರದೇಶದ ಬೆಳವಣಿಗೆಗೆ ಅವಕಾಶವಿರಬೇಕು
       - ಕೆಲವು ಕಾರಣಗಳಿಂದಾಗಿ ಆ ಪ್ರದೇಶದ ಬೆಳವಣಿಗೆ ಕುಂಠಿತವಾಗಿರಬೇಕು
      - ಕೆಲವು ವಿಶೇಷ ಯೋಜನೆಗಳಿಂದ ಬೆಳವಣಿಗೆಗೆ ಮಾರಕವಾಗಿರುವ ಅಂಶಗಳನ್ನು ಹೋಗಲಾಡಿಸಲು ಸಾಧ್ಯವಿರಬೇಕು

ಈ ಹಿನ್ನೆಲೆಯಲ್ಲಿ ನೋಡಿದಾಗ ಉತ್ತರ ಕರ್ನಾಟಕ ಭಾಗವನ್ನು ಹಿಂದುಳಿದ ಪ್ರದೇಶಗಳಿಗೆ ಸೇರಿಸಬಹುದು. ಕರ್ನಾಟಕ ರಾಜ್ಯ ಸ್ಥಾಪನೆಯಾದ ನಂತರದ ಸಮಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿ ಯೋಜನೆಗಳು, ಮೂಲಭೂತ ವ್ಯವಸ್ಥೆಗಳು ಹಾಗೂ ರಾಜ್ಯ ಮತ್ತು ಕೇಂದ್ರಸರ್ಕಾರದ ಕೆಲವು ನೀತಿಗಳಿಂದಾಗಿ ಈ ಭಾಗಕ್ಕೆ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ತರಬೇತಿ ಕೇಂದ್ರಗಳು ಬರದೇ ಅಭಿವೃದ್ಧಿಯಲ್ಲಿ ಹಿಂದುಳಿಯಿತು.

ಡಾ. ಡಿ. ಎಂ ನಂಜುಂಡಪ್ಪ ಸಮಿತಿ (HPC FRRI

ಕರ್ನಾಟಕದಲ್ಲಿ ಪ್ರದೇಶಿಕ ಅಸಮಾನತೆಯ ಕೂಗು ಕೇಳಿಬಂದಾಗಲೆಲ್ಲಾ ಸರ್ಕಾರಗಳು ಸಮಿತಿಗಳನ್ನು ರಚಿಸುತ್ತಾ ಬಂದಿವೆ. ಇದು ೧೯೫೪ ರಿಂದ ಮೊದಲ್ಗೊಂಡು ಇತ್ತೀಚಿನ ೨೦೦೦ ಇಸವಿ ವರೆಗೂ ನಡೆದುಕೊಂಡು ಬಂದಿದೆ. ನಂಜುಂಡಪ್ಪ ಸಮಿತಿ ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚೆ ಮೂರಕ್ಕಿಂತ ಹೆಚ್ಚು ಸಮಿತಿಗಳನ್ನು ಪ್ರಾದೇಶಿಕ ಅಸಮಾನತೆ ಅರಿಯಲು ಹಾಗೂ ಅದಕ್ಕೆ ಪರಿಹಾರ ಸೂಚಿಸಲು ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ವರದಿಗಳಿಂದ ಕರ್ನಾಟಕಕ್ಕೆ ಹೆಚ್ಚೇನು ಪ್ರಯೋಜನವಾಗಲಿಲ್ಲ. ಏಪ್ರಿಲ್ ೨೦೦೦ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣಾರವರು ಕರ್ನಾಟಕದಲ್ಲಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಹೈ ಪವರ್ ಕಮಿಟಿಯೊಂದನ್ನು ರಚಿಸಿತು. ಈ ಸಮಿತಿಯ ಮುಖ್ಯ ಉದ್ದೇಶ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ಅಭ್ಯಾಸ ಮಾಡಿ ಅವುಗಳಿಗೆ ಪರಿಹಾರ ಸೂಚಿಸುವುದು ಆಗಿತ್ತು. ಈ ಸಮಿತಿಗೆ ಮುಖ್ಯಸ್ಥರನ್ನಾಗಿ ಖ್ಯಾತ ಅರ್ಥಶಾಸ್ತ್ರಜ್ಞ, ರಾಜ್ಯದ ಯೋಜನಾ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದ ಡಾ. ಡಿ. ಎಂ. ನಂಜುಂಡಪ್ಪ ಅವರನ್ನು ನೇಮಿಸಲಾಯಿತು. ಇವರ ಅಡಿಯಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ೧೬ನೇ ನವೆಂಬರ್ ೨೦೦೦ರಲ್ಲಿ ಸಮಿತಿಯು ತನ್ನ ಕಾರ್ಯಾರಂಭ ಮಾಡಿತು.

ನಂಜುಂಡಪ್ಪ ಸಮಿತಿಯು ಈ ಹಿಂದೆ ರಾಷ್ಟ್ರ ಮಟ್ಟದಲ್ಲಿ ಹಾಗೂ ಇತರೇ ರಾಜ್ಯಗಳಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಮಾಡಿರುವ ಸಮಿತಿಗಳು ಹಾಗೂ ಅವರ ವರದಿಗಳನ್ನು ಅಭ್ಯಾಸ ಮಾಡಿತು. ಇದರಲ್ಲಿ ಕೇಂದ್ರ ಯೋಜನಾ ಆಯೋಗದ ವರದಿ, ರಾಜ್ಯ ಯೋಜನಾ ಆಯೋಗದ ವರದಿ, ಪಾಂಡೇ ಸಮಿತಿಯ ವರದಿ, ಚಕ್ರವರ್ತಿ ಸಮಿತಿಯ ವರದಿ ಹಾಗೂ ದಾಂಡೇಕರ್ ಸಮಿತಿಯ ವರದಿಗಳನ್ನು ಅಭ್ಯಾಸ ಮಾಡಿತು. ಇಲ್ಲಿ ಸಮಿತಿಗೆ ಕಂಡು ಬಂದ ಅಂಶಗಳೆಂದರೆ ಎಲ್ಲಾ ಸಮಿತಿಗಳು ಬೇರೆ ಬೇರೆಯಾದ ಮಾನದಂಡಗಳ ಮೇಲೆ ವರದಿಯನ್ನು ತಯಾರಿಸಿದ್ದವು ಹಾಗೂ ಈ ಮಾನದಂಡಗಳು ಎಲ್ಲಾ ಅಂಶಗಳನ್ನು ಒಳಗೊಂಡಿರಲಿಲ್ಲ. ಜಿಲ್ಲೆಗಳನ್ನ್ನು ಘಟಕಗಳನ್ನಾಗಿಸಿ ಇವುಗಳು ವರದಿ ನೀಡಿದ್ದವು. ಒಂದು ಜಿಲ್ಲೆಯ ಒಳಗಿನ ಭಿನ್ನತೆ, ಅನನ್ಯತೆಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಮ್ಳವುದಕ್ಕಿಂತ, ಅದಕ್ಕಿಂತಲೂ ಸಣ್ಣ ಘಟಕವಾದ ತಾಲೂಕುಗಳನ್ನು ನಚಿಜುಂಡಪ್ಪ ಸಮಿತಿ ಲೆಕ್ಕಕ್ಕೆ ತೆಗೆದುಕೊಂಡಿತು ಮತ್ತು ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ರೂಪಿಸುವಲ್ಲಿ ನಿರತವಾಯಿತು. ಸಮಿತಿಯು ಸತತವಾಗಿ ಒಂದೂವರೆ ವರ್ಷಗಳ ಕಾಲ ಅಧ್ಯಯನ ಮಾಡಿ ತನ್ನ ವರದಿಯನ್ನು ಸರ್ಕಾರಕ್ಕೆ ೨೦೦೨ರಲ್ಲಿ ಸಲ್ಲಿಸಿತು.

ನಂಜುಂಡಪ್ಪ ಸಮಿತಿ ಸಲ್ಲಿಸಿದ ವರದಿಯಲ್ಲಿ ಬಹು ಅಚ್ಚರಿಯ ವಿಷಯಗಳು ಕಂಡುಬಂದವು. ಈ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಸ್ಪಷ್ಟವಾಗಿ ಕಂಡು ಬಂದ ಅಂಶವೆಂದರೆ ಕೇವಲ ಉತ್ತರ ಭಾಗದ ಕರ್ನಾಟಕ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿಲ್ಲಾ. ಬದಲಾಗಿ ದಕ್ಷಿಣ ಕರ್ನಾಟಕದ ಅನೇಕ ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದವು. ಹಾಗೆಯೇ ಹಲವಾರು ವಿಷಯಗಳಲ್ಲಿ ಉತ್ತರ ಕರ್ನಾಟಕದ ಭಾಗಗಳು ದಕ್ಷಿಣ ಕರ್ನಾಟಕದ ಅನೇಕ ಭಾಗಗಳನ್ನು ಹಿಂದಿಕ್ಕಿದ್ದು ಕಾಣಸಿಗುತ್ತದೆ.

ಸಮಿತಿಯ ಅಧ್ಯಯನದಿಂದ ತಿಳಿದು ಬಂದ ಸಂಗತಿಗಳು:

- ಕರ್ನಾಟಕದ ತಲಾದಾಯ ೧೯೭೦-೭೧ ರಲ್ಲಿ ೬೯೫ ರೂ ನಷ್ಟಿತ್ತು ಹಾಗೂ ೧೯೯೯-೨೦೦೦ರದ ಹೊತ್ತಿಗೆ ೧೮,೬೫೧ ರಷ್ಟು ಮುಟ್ಟಿತ್ತು. ಈ ಸಮಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ತನ್ನ ತಲಾದಾಯವನ್ನು ಹೆಚ್ಚಿಸಿಕೊಂಡಿವೆ ಅನ್ನುವುದು ಗಮನಾರ್ಹ ಸಂಗತಿ. ಗಮನಿಸಬೇಕಾದ ಅಂಶವೆಂದರೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳು ರಾಜ್ಯದ ಸರಾಸರಿ ತಲಾದಾಯಕ್ಕಿಂತ ಕಡಿಮೆ ತಲಾದಾಯ ಹೊಂದಿದ್ದರೆ, ದಕ್ಷಿಣ ಕರ್ನಾಟಕದ ೬ ಜಿಲ್ಲೆಗಳು ಕಡಿಮೆ ತಲಾದಾಯ ಹೊಂದಿದ್ದವು.

- ರಾಜ್ಯದ ೭೮ ತಾಲೂಕುಗಳು ರಾಜ್ಯದ ಸರಾಸರಿ ಬಡತನ ರೇಖೆಗಿಂತ ಕೆಳಗಿವೆ ಇದರಲ್ಲಿ ೪೮ (೬೨%) ತಾಲೂಕುಗಳು ಉತ್ತರ ಕರ್ನಾಟಕಕ್ಕೆ ಸೇರಿದ್ದರೆ ೩೦ ತಾಲೂಕುಗಳು (೩೮%) ದಕ್ಷಿಣ ಕರ್ನಾಟಕಕ್ಕೆ ಸೇರಿದ್ದವು.

- ೧೯೯೧ರಲ್ಲಿ ೦.೪೭ ರಷ್ಟಿದ್ದ ಮಾನವ ಬೆಳವಣಿಗೆ ಸೂಚಿ ೧೯೯೮ರ ಹೊತ್ತಿಗೆ ೦.೬೩ ಮುಟ್ಟಿತ್ತು. ಆದರೆ ಉತ್ತರ ಕರ್ನಾಟಕದ  ೫ ಹಾಗೂ ದಕ್ಷಿಣ ಕರ್ನಾಟಕದ ೫ ಜಿಲ್ಲೆಗಳ ಬೆಳವಣಿಗೆ ರಾಜ್ಯದ ಸರಾಸರಿಗಿಂತ ಕಡಿಮೆಯಿತ್ತು.

- ಸಾಕ್ಷರತಾ ಪ್ರಮಾಣ: ಕರ್ನಾಟಕ ಸಾಕ್ಷರತಾ ಪ್ರಮಾಣ ೧೯೬೧ ರಲ್ಲಿ ಶೇ ೨೯.೮೦ ರಿಂದ ೨೦೦೧ ರಲ್ಲಿ ಶೇ ೬೭.೦೪% ತಲುಪಿತ್ತು. ಆದರೆ ದಕ್ಷಿಣ ಕರ್ನಾಟಕದ ೩ ಜಿಲ್ಲೆಗಳಲ್ಲಿ (ಕೋಲಾರ, ಮಂಡ್ಯ ಹಾಗೂ ಮೈಸೂರು) ಹಾಗೂ ಉತ್ತರ ಕರ್ನಾಟಕದ ೬ ಜಿಲ್ಲೆಗಳಲ್ಲಿ (ಬೆಳಗಾವಿ, ಬಿಜಾಪುರ, ಬಳ್ಳಾರಿ, ಬೀದರ್, ಗುಲ್ಬರ್ಗಾ ಹಾಗೂ ರಾಯಚೂರು) ಸಾಕ್ಷರತಾ ಪ್ರಮಾಣ ರಾಜ್ಯದ ಸರಾಸರಿಗಿಂತ ಕಡಿಮೆಯಿತ್ತು.

- ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ ಪ್ರಾಥಮಿಕ ಶಾಲೆಗಳ ಸಂಖೆ: ೧೯೫೬ರಲ್ಲಿ ೯೬ ಶಾಲಗಳನ್ನು ಹೊಂದಿದ್ದರೆ ೨೦೦೦ನೇ ಇಸವಿಯ ಹೊತ್ತಿಗೆ ಈ ಶಾಲೆಗಳ ಸಂಖ್ಯೆ ೯೪ ಕ್ಕೆ ಇಳಿದಿತ್ತು. ಇದಕ್ಕೆ ಮುಖ್ಯ ಕಾರಣ ಉತ್ತರ ಕರ್ನಾಟಕದ ಅನೇಕ ಶಾಲೆಗಳು ಬಾಗಿಲು ಮುಚ್ಚಿದವು

- ಒಂದು ಲಕ್ಷ ಜನಸಂಖ್ಯೆಗೆ ಆಸ್ಪತ್ರೆಯಲ್ಲಿ ಸರಾಸರಿ ಹಾಸಿಗೆಗಳ ಸಂಖ್ಯೆ: ೧೯೫೮-೫೯ ರಲ್ಲಿ ೫೪ ಇದ್ದವು, ೨೦೦೧ನೇ ಇಸವಿಯ ಹೊತ್ತಿಗೆ ಈ ಸಂಖ್ಯೆ ೭೫ಕ್ಕೆ ಮುಟ್ಟಿತ್ತು. ಈ ರಾಜ್ಯದ ಸರಾಸರಿಯ ಲೆಕ್ಕದಲ್ಲಿ ನೋಡಿದಾಗ ದಕ್ಷಿಣ ಕರ್ನಾಟಕದ ಭಾಗದಲ್ಲಿ ಸರಾಸರಿ ೮೫ ಹಾಸಿಗೆಗಳಿದ್ದರೆ, ಉತ್ತರ ಕರ್ನಾಟಕದ ಭಾಗದಲ್ಲಿ ೭೫ ಹಾಸಿಗೆಗಳಿದ್ದವು

- ವ್ಯವಸಾಯಕ್ಕೆ ಒಳಪಡಿಸಿದ ಭೂಮಿ ೧೯೫೭-೫೮ ರಲ್ಲಿ ೭.೬ ಲಕ್ಷ ಹೆಕ್ಟೇರ್ ಇತ್ತು ಹಾಗೂ ೨೦೦೧ರ ಹೊತ್ತಿಗೆ ೨೫.೫ ಲಕ್ಷ ಹೆಕ್ಟೇರ್ ಆಗಿತ್ತು. ಇದರಲ್ಲಿ ದಕ್ಷಿಣ ಕರ್ನಾಟಕದ ಪ್ರತಿಶತ ಬೆಳವಣಿಗೆ ೨೧ ರಷ್ಟು ಹಾಗೂ ಉತ್ತರ ಕರ್ನಾಟಕದ ಪ್ರತಿಶತ ಬೆಳವಣಿಗೆ ೭೧ ರಷ್ಟು.

- /೩ ರಷ್ಟು ಕೈಗಾರಿಕೆಗಳು ದಕ್ಷಿಣ ಕರ್ನಾಟಕದಲ್ಲಿವೆ. ಗಮನಿಸಬೇಕಾದ ಅಂಶಗಳೆಂದರೆ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳು ದಕ್ಷಿಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಿಗಿಂತ ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂದಿವೆ. ಇಲ್ಲಿ ನಾವುಗಳು ಈ ತುಲನೆ ಮಾಡುವಾಗ ಬೆಂಗಳೂರು ನಗರವನ್ನು ಹೊರಗಿಟ್ಟು ನೋಡುವುದು ಸಮಂಜಸವಾಗುತ್ತದೆ.

- ರಾಜ್ಯದ ರಸ್ತೆಯ ಸರಾಸರಿ ಉದ್ದ: .೩ ಕಿಮಿ (೧೯೫೯) ರಿಂದ ೭೦ ಕಿಮಿ ಪ್ರತಿ ೧೦೦ ಚ. ಕಿಮಿ ಪ್ರದೇಶಕ್ಕೆ. ರಾಜ್ಯದ ಸರಾಸರಿಗಿಂತ ಕೆಳಗಿರುವ ಜಿಲ್ಲೆಗಳೆಂದರೆ ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ (ದಕ್ಷಿಣ ಕರ್ನಾಟಕ). ಬೆಳಗಾವಿ, ಬಳ್ಳಾರಿ, ಬೀದರ್, ಗುಲ್ಬರ್ಗಾ, ಬಿಜಾಪುರ, ರಾಯಚೂರು ಹಾಗೂ ಉತ್ತರ ಕನ್ನಡ (ಉತ್ತರ ಕರ್ನಾಟಕ)
- ಒಂದು ಬ್ಯಾಂಕ್ ನಿಂದ ಸೇವೆ ಪಡೆಯುತ್ತಿದ್ದ ಸರಾಸರಿ ಜನಸಂಖ್ಯೆ: ೧೬೦೦೦ (೧೯೭೫) ರಿಂದ ೧೧,೦೦೦ (೧೯೯೬). ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ. ದಕ್ಷಿಣ ಕರ್ನಾಟಕ - ೧೦,೦೦೦ ವಾದರೆ ಉತ್ತರ ಕರ್ನಾಟಕದಲ್ಲಿ ೧೩,೦೦೦

- ಸಾಕ್ಷರತೆಯ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಮುಂದಿದ್ದರೆ, ದಕ್ಷಿಣ ಕರ್ನಾಟಕ ಭಾಗದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು ಹಿಂದುಳಿದಿವೆ

- ನೀರಾವರಿ ಕ್ಷೇತ್ರದಲ್ಲಿ ಉತ್ತರ  ಕರ್ನಾಟಕದ ಬೆಳಗಾವಿ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳನ್ನು ಹಿಂದಿಕ್ಕಿವೆ.

- ಕೈಗಾರಿಕಾ ಕ್ಷೇತ್ರದಲ್ಲಿ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳು ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳನ್ನು ಹಿಂದಿಕ್ಕಿವೆ

- ಆರೋಗ್ಯ ಕ್ಷೇತ್ರದಲ್ಲಿ ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಗಣನೀಯ ಪ್ರಮಾಣದಲ್ಲಿ ಸುಧಾರಿಸಿದರೆ ತೂಮಕೂರು ಜಿಲ್ಲೆ ಹಿಂದುಳಿದಿದೆ.

- ರಸ್ತೆ ಅಭಿವೃದ್ಧಿಯಲ್ಲಿ ಧಾರವಾಡ ಜಿಲ್ಲೆ ಮುಂದಿದ್ದರೆ, ದಕ್ಷಿಣ ಕರ್ನಾಟಕಕ್ಕೆ ಸೇರುವ ಚಿತ್ರದುರ್ಗ ಜಿಲ್ಲೆ ಹಿಂದುಳಿದಿದೆ.

ಈ ಮೇಲಿನ ಅಂಕೆ ಸಂಖ್ಯೆಗಳಿಂದ ತಿಳಿದು ಬರುವ ಅಂಶಗಳೆಂದರೆ ಕೇವಲ ಉತ್ತರ ಕರ್ನಾಟದ ಭಾಗಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ ಅನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ, ಬದಲಾಗಿ ರಾಜ್ಯದ ಎರಡೂ ಭಾಗಗಳಲ್ಲಿ ಅಭಿವೃದ್ಧಿ ಹೊಂದಬೇಕಾಗಿರುವ ತಾಲೂಕುಗಳ ಸಂಖ್ಯೆ ದೊಡ್ಡದಿದೆ.

ನಂಜುಂಡಪ್ಪ ಸಮಿತಿಯು ತಾಲೂಕು ಮಟ್ಟದಲ್ಲಿ ಅಭಿವೃದ್ಧಿಯನ್ನು ತಿಳಿಯಲು ಸುಮಾರು ೩೫ ವಿವಿಧ ಅಂಶಗಳನ್ನು ಪಟ್ಟಿಮಾಡಿಕೊಂಡಿತು. ಈ ಎಲ್ಲಾ ಅಂಶಗಳ ಮೇಲೆ ಸಮಿತಿಯು Comprehensive Composite Development Index (CCDI) ಅನ್ನು ಸಿದ್ಧಪಡಿಸಿತು. ಈ ಅಂಶಗಳ ಸಹಾಯದಿಂದ ಅಧ್ಯಾಯನ ಮಾಡಿದಾಗ ಕಂಡುಬಂದಿದ್ದೇನೆಂದರೆ ಕರ್ನಾಟಕದಲ್ಲಿ ೧೧೪ ತಾಲೂಕುಗಳು ಹಿಂದುಳಿದಿವೆ
       ಅತಿ ಹಿಂದುಳಿದ ತಾಲೂಕುಗಳು - ೩೯
       ಹೆಚ್ಚು ಹಿಂದುಳಿದ ತಾಲೂಕುಗಳೂ - ೪೦
       ಹಿಂದುಳಿದ ತಾಲೂಕುಗಳು - ೩೫
       ಒಟ್ಟು ತಾಲೂಕುಗಳು - ೧೧೪
ವಿಭಾಗವಾರು ಹಿಂದುಳಿದ ತಾಲೂಕುಗಳ ಪಟ್ಟಿ ಕೆಳಗಿನಂತಿದೆ:


ಈ ಮೇಲಿನ ಅಂಶಗಳಿಂದ ತಿಳಿದು ಬರುವುದು ಏನೆಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ೫೯ ಹಿಂದುಳಿದ ತಾಲೂಕುಗಳಿದ್ದರೆ, ೫೫ ಹಿಂದುಳಿದ ತಾಲೂಕುಗಳು ದಕ್ಷಿಣ ಕರ್ನಾಟಕದಲ್ಲಿ ಇವೆ.

ಕರ್ನಾಟಕದ ಎರಡೂ ಭಾಗದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ನಂಜುಂಡಪ್ಪ ಸಮಿತಿಯು ೮ ವರ್ಷಗಳ ವಿಶೇಷ ಯೋಜನೆಯೊಂದನ್ನು ತಯಾರಿಸಿತು. ಇದರ ಪ್ರಕಾರ ಸರ್ಕಾರ ಒಟ್ಟು ೩೧,೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿತು. ಇದರ ಜೊತೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ದುಡ್ಡು ಹೂಡಬೇಕು ಎಂದು ನೀಲನಕ್ಷೆಯನ್ನು ತಯಾರಿಸಿ ಕೊಟ್ಟಿತು. ಸಮಿತಿಯ ಪ್ರಕಾರ ಸರ್ಕಾರ ಈ ಕೆಳಗೆ ಹೇಳಿರುವ ಕ್ಷೇತ್ರದಲ್ಲಿ ಹಣ ಹೂಡಬೇಕು ಎಂದು ಸಲಹೇ ನೀಡಿತು: ಕಾರ್ಯಪಡೆ (workforce), ಕೃಷಿ, ನೀರಾವರಿ, ಪುಷ್ಪೋದ್ಯಮ, ರೇಷ್ಮೆ ಉದ್ಯಮ ಹಾಗೂ ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ, ಮಾನವ ಸಂಪನ್ಮೂಲ ಬೆಳವಣಿಗೆ, ಆರೋಗ್ಯ ಕ್ಷೇತ್ರ, ಕಲಿಕೆ, ಗ್ರಾಮೀಣ ನೀರು ಸರಬರಾಜು ಹಾಗೂ ಒಳಚರಂಡಿ, ನಗರ ನೀರು ಸರಬರಾಜು ಹಾಗೂ ಒಳಚರಂಡಿ, ನಗರಾಭಿವೃದ್ಧಿ ಹಾಗೂ ಸ್ಲಂಗಳು, ವಾಣಿಜ್ಯ ಬ್ಯಾಂಕ್, ಸಹಕಾರಿ ಸಂಘಗಳು, ಭಾರತ ಮಟ್ಟದ ಹಾಗೂ ರಾಜ್ಯ ಮಟ್ಟದ ಹಣಕಾಸು ಅಧ್ಯಯನ ಕೇಂದ್ರಗಳ ಸ್ಥಾಪನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ಸೇವೆಗಳು, ಪ್ರವಾಸೋದ್ಯಮ, ಪ್ರಾದೇಶಿಕ ಮಂಡಳಿಗಳು, ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ವಿಮಾನ ನಿಲ್ದಾಣಗಳೂ, ಮಹಿಳಾ ಅಭಿವೃದ್ಧಿ.

ಆದರೆ ವರದಿ ಸಲ್ಲಿಕೆಯ ನಂತರ ಬಂದ ಯಾವ ಸರ್ಕಾರಗಳು, ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾಟಾಚಾರಕ್ಕೆ ಎಂಬಂತೆ ನಂಜುಂಡಪ್ಪ ವರದಿ ಅನುಷ್ಠಾನ ಮಂಡಳಿಯೊಂದನ್ನು ಮಾಡಲಾಗಿದೆ. ಆದರೆ ಈ ಮಂಡಳಿಯಿಂದ ಆಗಬೇಕಾದ ಕೆಲಸಗಳು ಆಗಿಲ್ಲ ಅನ್ನೋದು ಸತ್ಯ. ಒಂದು ಪ್ರದೇಶ ಹಿಂದುಳಿಯಲು ಅಲ್ಲಿನ ಜನಪ್ರತಿನಿಧಿಗಳೇ ನೇರ ಕಾರಣ, ತಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ, ದೂರದೃಷ್ಠಿಯಿರದ ರಾಜಕಾರಣದಿಂದ ಇಂದು ಹಿಂದುಳಿದ ಪ್ರದೇಶಗಳ ಜನರು ಕಷ್ಟಪಡುವಂತಾಗಿದೆ. ವರದಿ ಸಲ್ಲಿಸಿ ೯ ವರ್ಷಗಳಾದರೂ ಸರ್ಕಾರ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಈ ಕೂಡಲೇ ಸರ್ಕಾರ ಆದ್ಯತೆಯ ಮೇರೆಗೆ ನಂಜುಂಡಪ್ಪ ವರದಿಯನ್ನು ಪುನರ್ ವಿಮರ್ಶಿಸಿ ಯೋಜನೆಯ ಅನುಷ್ಠಾನಕ್ಕೆ ಬೇಕಾಗಿರುವ ಹೆಚ್ಚಿನ ಹಣವನ್ನ ಹಾಗೂ ಸಂಪನ್ಮೂಲಗಳನ್ನು ಒದಗಿಸಿ ನಾಡನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಕೆಲಸ ಮಾಡಬೇಕು.

ಕನ್ನಡದ ಸೊಲ್ಲರಿಮೆ: ಮೂರನೇ ಹೊತ್ತಗೆ ಮಾರುಕಟ್ಟೆಗೆ



ಡಾ. ಡಿ ಎನ್ ಶಂಕರಬಟ್ ಅವರ "ಕನ್ನಡ ಬರಹದ ಸೊಲ್ಲರಿಮೆ - ೩" ಹೊತ್ತಗೆ ಮಾರುಕಟ್ಟೆಗೆ ಬಂದಿದೆ. ಮೊದಲ ಹೊತ್ತಗೆಯಲ್ಲಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ ಮತ್ತು ಹೆಸರು ಪದಗಳ ಬಗ್ಗೆ ವಿವರಿಸಲಾಗಿತ್ತು. ಎರಡನೇ ಹೊತ್ತಗೆಯಲ್ಲಿ ಎಸಕಪದಗಳ ಬಳಕೆ ಮತ್ತು ಹೆಸರುಕಂತೆಗಳ ಇಟ್ಟಳಗಳ ಬಗ್ಗೆ ವಿವರಿಸಿದ್ದರು. ಈ ಹೊತ್ತಗೆಯಲ್ಲಿ "ಎಸಕಪದಗಳ ಪಾಂಗುಗಳು" ಮತ್ತು "ಪಾಂಗಿಟ್ಟಳಗಳಲ್ಲಿ ಮಾರ್ಪಾಡುಗಳ" ಬಗ್ಗೆ ವಿವರಿಸಲಾಗಿದೆ.

ಇದು ಕನ್ನಡದ್ದೇ ವ್ಯಾಕರಣ

ಈ ಹಿಂದೆ ಡಾ. ಡಿ ಎನ್ ಶಂಕರಬಟ್ ಅವರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಹೊತ್ತಗೆಯಲ್ಲಿ ಇದುವರೆಗೂ ನಮಗೆ ಕಲಿಸಲಾಗುತ್ತಿದ್ದ ವ್ಯಾಕರಣದ ಮೂಲನೆಲೆ ಕನ್ನಡದ್ದೇ ಅಲ್ಲ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿದ್ದರು ಮತ್ತು ಕನ್ನಡಕ್ಕೆ ಅದರದೇ ನೆಲೆಯಲ್ಲಿ ವ್ಯಾಕರಣವನ್ನು ಬರೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟಿದ್ದರು. ಕನ್ನಡದ್ದೇ ನೆಲೆಯಲ್ಲಿ ನಿಂತು ಕನ್ನಡದ ವ್ಯಾಕರಣವನ್ನು ಬಣ್ಣಿಸುವ ಕೆಲಸದಲ್ಲಿ ತೊಡಗಿ ಅವರು ಹೊರತರುತ್ತಿರುವ "ಕನ್ನಡ ಬರಹದ ಸೊಲ್ಲರಿಮೆ" ಸರಣಿ ಹೊತ್ತಗೆಗಳಲ್ಲಿ ಮೂರನೇ ತುಂಡು ಇದು.

ಈ ಹೊತ್ತಗೆಯ ಮುನ್ನುಡಿಯಲ್ಲಿ ಶಂಕರ ಬಟ್ಟರು ತಮ್ಮ ಹೊತ್ತಗೆಯ ಬಗ್ಗೆ ಬರೆದಿರುವ ಒಂದೆರಡು ಮಾತುಗಳನ್ನು ನೋಡೋಣ:
ಇದರಲ್ಲಿ ನಾನು ಕನ್ನಡ ಬರಹದ ಸೊಲ್ಲರಿಮೆ(ವ್ಯಾಕರಣ)ಯನ್ನು ಬರೆಯುತ್ತಿದ್ದೇನೆ. ನುಡಿಯ ಸೊಲ್ಲರಿಮೆಗಿಂತ ಬರಹದ ಸೊಲ್ಲರಿಮೆ ಹಲವು ವಿಶಯಗಳಲ್ಲಿ ಬೇರಾಗಿರುತ್ತದೆ ಎಂಬುದನ್ನು ಇದರ ಮೊದಲನೇ ಪಸುಗೆಯಾದ ಮುನ್ನೋಟದಲ್ಲಿ ವಿವರಿಸಿದ್ದೆ. ಇವತ್ತು ಕನ್ನಡ ಬರಹದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ವಿವರಿಸುವುದರೊಂದಿಗೆ, ಎಂತಹವನ್ನು ಬಳಸಿದರೆ ಒಳ್ಳೆಯದು ಎಂಬುದನ್ನೂ ಬರಹದ ಸೊಲ್ಲರಿಮೆ ತಿಳಿಸಬಲ್ಲುದು.ಈ ಮೂರನೆಯ ತುಂಡಿನಲ್ಲಿ ಎಸಕಪದಗಳ ಪಾಂಗುಗಳು ಮತ್ತು ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು ಎಂಬ ಎರಡು ಪಸುಗೆಗಳಿವೆ; ಇವುಗಳಲ್ಲಿ ಮೊದಲನೆಯ ಪಸುಗೆ ಸೊಲ್ಲುಗಳಲ್ಲಿ ಎಸಕಪದಗಳೊಂದಿಗೆ ಬರುವ ಹೆಸರುಪದಗಳು ಇಲ್ಲವೇ ಪದಕಂತೆಗಳು (ಪಾಂಗುಗಳು) ಯಾವ ರೀತಿಯಲ್ಲಿ ಎಸಕಪದಗಳೊಂದಿಗೆ ಸಂಬಂದಿಸಿರುತ್ತವೆ, ಮತ್ತು ಎಸಕಪದಗಳ ಹುರುಳುಗಳು ಅವುಗಳ ಎಣಿಕೆ ಮತ್ತು ಬಗೆಗಳನ್ನು ಹೇಗೆ ತೀರ್ಮಾನಿಸುತ್ತವೆ ಎಂಬುದನ್ನು ವಿವರಿಸುತ್ತದೆ.
ನವಕರ್ನಾಟಕ ಪ್ರಕಾಶನವೂ ಸೇರಿದಂತೆ ಈ ಹೊತ್ತಗೆಯು ಬೆಂಗಳೂರಿನ ಹೆಸರಾಂತ ಹೊತ್ತಗೆ ಮಳಿಗೆಗಳಲ್ಲಿ ದೊರಕುತ್ತಿದೆ. ಕನ್ನಡ ಬರಹದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

೪. ಕನ್ನಡನಾಡಿನ ಜೀವನದಿ ಈ ಕಾವೇರಿ...



ಕಾವೇರಿ ನದಿನೀರು ಹಂಚಿಕೆಯ ವಿವಾದ ಶುರುವಾಗಿ ಒಂದು ನಿರ್ಣಾಯಕ ಅಂತ್ಯ ಕಂಡದ್ದು ಹೀಗೆ! "ಏನಿದು? ನಿರ್ಣಾಯಕ ಅಂತ್ಯಾನಾ?" ಎನ್ನಬೇಡಿ. "ಸ್ವತಂತ್ರ ಭಾರತದ ಇಂದಿನ ವ್ಯವಸ್ಥೆಯಲ್ಲಿ ಈಗಾಗಿರುವ ತೀರ್ಮಾನಗಳು ನಿರ್ಣಾಯಕವೇ... ಇನ್ನೇನಿದ್ದರೂ ಗುಂಡಿಗೆ ತಳ್ಳಲ್ಪಟ್ಟಿರುವ ನಮ್ಮ ಮೇಲೆ ಮಣ್ಣು ಮುಚ್ಚುವುದೊಂದೇ ಬಾಕಿ ಇರುವುದು!" ಎಂದು ಕನ್ನಡಿಗರಿಗೆ ಅನ್ನಿಸಿದರೆ ತಪ್ಪೇನಿಲ್ಲಾ!! ಹಾಗಾದರೆ ಇಷ್ಟಕ್ಕೂ ಆಗಿರುವುದು ಏನು? ಮುಂದೆ ದಾರಿ ಏನು? ನೋಡೋಣ.

ತಮಿಳುನಾಡಿನ ಗೆಲುವು ಆದದ್ದು ಯಾವಾಗೆಂದರೆ...

ಇಡೀ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ತಮಿಳುನಾಡಿನ ವಾದಗಳು ೧೯೭೦~೮೦ರ ದಶಕಗಳಲ್ಲಿ ಪ್ರಧಾನಮಂತ್ರಿಗಳಿಗೆ ದೂರುವಾಗಲಾಗಲೀ,ನ್ಯಾಯಾಧಿಕರಣ ರಚನೆಯಾಗಬೇಕೆಂದು ಸುಪ್ರಿಂಕೋರ್ಟಿಗೆ ಬೇಡಿಕೆಯಿಡುವ ಹಂತದಲ್ಲಾಗಲೀ ಅಷ್ಟೊಂದು ಬಲವಾಗಿರಲಿಲ್ಲ. ಯಾಕೆಂದರೆ ಅವರು ಮಾಡಿದ್ದ ವಾದ ೧೮೯೨ರ ಮತ್ತು ೧೯೨೪ರ ಒಪ್ಪಂದಗಳಿಗೆ ಕರ್ನಾಟಕ ಬದ್ಧವಾಗಿಲ್ಲಾ ಎನ್ನುವುದಷ್ಟೇ ಆಗಿದ್ದರೆ ಕರ್ನಾಟಕವು ಸ್ವಾತಂತ್ರ್ಯಕ್ಕೆ ಮೊದಲಿನ ಒಪ್ಪಂದವೂ ರದ್ದಾಗಬೇಕು ಎಂದುಬಿಡುತ್ತಿತ್ತು. ಅದನ್ನೇನಾದರೂ ನ್ಯಾಯಾಲಯ, ಕೇಂದ್ರಸರ್ಕಾರಗಳು ಒಪ್ಪಿಬಿಟ್ಟಿದ್ದರೆ ಅಲ್ಲಿಗೆ ತಮಿಳುನಾಡಿನ ಹೋರಾಟ ನಿಲ್ಲುತ್ತಿತ್ತು! ಆದರೆ ಈ ವಾದದ ಜೊತೆಯಲ್ಲಿ ಅವರು ವಾದಿಸಿದ್ದು "ಕರ್ನಾಟಕವು ನಾಲ್ಕು ಅಣೆಕಟ್ಟೆಗಳನ್ನು ಕಟ್ಟಿ ತಮಿಳುನಾಡಿಗೆ ಸಂಪೂರ್ಣವಾಗಿ ನೀರು ಹರಿಸುವುದನ್ನು ನಿಲ್ಲಿಸಿಬಿಟ್ಟಿದೆ, ಅವರ ಅಣೆಕಟ್ಟೆ ಕಾಮಗಾರಿ ನಿಲ್ಲಿಸಲು ಹೇಳಿ, ದಯಮಾಡಿ ನ್ಯಾಯಾಧಿಕರಣ ರಚಿಸಿ" ಎಂದು. ಇದೇ ಹೊತ್ತಿಗೆ ತಮಿಳುನಾಡು ಅನೇಕ ಅನ್ಯಾಯದ ಬೇಡಿಕೆಗಳನ್ನು ಕರ್ನಾಟಕದ ಜೊತೆಗಿನ ಮಾತುಗಳಲ್ಲಿ ಇಟ್ಟು, ಒಟ್ಟಾರೆ ಮಾತುಕತೆ ವಿಫಲವಾಗುವಂತೆ ನೋಡಿಕೊಂಡಿತೆಂದರೆ ತಪ್ಪಾಗದು!

ನಂತರ ೧೯೯೦ರಲ್ಲಿ ನ್ಯಾಯಾಧಿಕರಣವನ್ನು ರಚಿಸುವಂತೆ ಸುಪ್ರಿಂಕೋರ್ಟಿಗೆ ತಮಿಳುನಾಡು ಹೇಳಿದ್ದೇ ’ಕರ್ನಾಟಕದ ಜೊತೆ ಎಲ್ಲಾ ಮಾತುಕತೆಗಳು ವಿಫಲವಾಗಿರುವುದರಿಂದ ನ್ಯಾಯಾಧಿಕರಣವನ್ನು ರಚಿಸಲು ಕೇಂದ್ರಸರ್ಕಾರಕ್ಕೆ ಸೂಚನೆ ನೀಡಿ’ ಎಂದು! ಈ ಹಂತದಲ್ಲಿ ಕೇಂದ್ರ ಅಧಿಸೂಚನೆ ಹೊರಡಿಸಿದಾಗಲೇ ಕರ್ನಾಟಕ ಒಂದು ಶರತ್ತನ್ನು ಮುಂದಿಟ್ಟು ಒಪ್ಪಿಕೊಂಡಿದ್ದರೆ ನಮಗೆ ನ್ಯಾಯ ಸಿಗುವ ಸಾಧ್ಯತೆ ಇತ್ತು! ಆದರೆ ನಮ್ಮ ರಾಜ್ಯದ ವಾದ ಬೇರೆಯೇ ರೀತಿ ಇತ್ತು!! ಕೊನೆಗೆ ನ್ಯಾಯಾಧಿಕರಣ ರಚನೆಯಾಯಿತು. ಅದರಿಮ್ದ ಕರ್ನಾಟಕಕ್ಕೆ ಮಾರಣಾಂತಿಕವಾದ ಆದೇಶಗಳೂ ಬಂದವು. ಒಮ್ಮೆ ನ್ಯಾಯಾಧಿಕರಣದ ರಚನೆಯನ್ನು ಒಪ್ಪಿದ ಮೇಲೆ ಅದರ ಆದೇಶವನ್ನು ಪಾಲಿಸದೇ ಇರುವುದು ತಪ್ಪೆನಿಸಿ ಪದೇ ಪದೇ ತಮಿಳುನಾಡು  ಸುಪ್ರಿಂಕೋರ್ಟಿನ ಮುಂದೆ ನಮ್ಮನ್ನೊಯ್ದು ಛೀಮಾರಿ ಹಾಕಿಸುವುದು ವಾಡಿಕೆಯಾಯ್ತು. ಕರ್ನಾಟಕವು ನ್ಯಾಯಾಧಿಕರಣವನ್ನು ಒಪ್ಪುವ ಮುನ್ನ ಹಾಕಬೇಕಿದ್ದ ಶರತ್ತು ಯಾವುದೆಂದರೆ "ಈ ಹಿಂದಿನ ಒಪ್ಪಂದಗಳು ಅಸಿಂಧುವಾಗಬೇಕಿರುವಂತೆಯೇ ಈಗಾಗಲೇ ಅಸ್ತಿತ್ವದಲ್ಲಿವೆಯೆನ್ನುವ ಕಾರಣಕ್ಕೆ ಯಾವುದೇ ರಾಜ್ಯಕ್ಕೆ ಪಾರಂಪರಿಕ ಹಕ್ಕು ಇದೆ ಎನ್ನುವಂತಿಲ್ಲಾ ಮತ್ತು ಮೊದಲಿಂದ ಸರಿಯಾಗಿ ನೀರು ಹಂಚಿಕೆ, ನೀರಾವರಿ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಗುರುತಿಸಿ ನಿಗದಿ ಮಾಡುವಿಕೆ ನಡೆಯಬೇಕು" ಎನ್ನುವುದು!

ನ್ಯಾಯಾಧಿಕರಣ ವಿಚಾರಣೆ ಶುರುಮಾಡಿದ ನಂತರ ಕರ್ನಾಟಕ ಈ ವಾದವನ್ನು ಮುಂದಿಟ್ಟಿತು. "ಒಮ್ಮೆ ಕೊರಳು ಕೊಟ್ಟ ಮೇಲೆ ಮುಗಿಯಿತು. ಅದಕ್ಕವರು ಹೂಮಾಲೆ ಹಾಕುವರೋ, ನೇಣುಕುಣಿಕೆ ಬಿಗಿಯುವರೋ ಅದು ನಮ್ಮ ಕೈಯ್ಯಲ್ಲಿರುವುದಿಲ್ಲ" ಎನ್ನುವುದನ್ನು ಸಾಬೀತುಪಡಿಸುವಂತೆ ನ್ಯಾಯಾಧಿಕರಣವು "ಈ ಹಿಂದಿನ ಇತಿಹಾಸಗಳು, ನ್ಯಾಯ ಅನ್ಯಾಯಗಳೇನೆ ಇರಲಿ ನಮ್ಮ ವಿಚಾರಣೆಗೆ ಆಧಾರ ಈಗ ಎಲ್ಲಿಲ್ಲಿ ಎಷ್ಟೆಷ್ಟು ಬೆಳೆಗಳನ್ನು ಬೆಳೆಯಲಾಗುತ್ತಿದೆ, ಎಷ್ಟೆಷ್ಟು ನೀರನ್ನು ಬಳಸಲಾಗುತ್ತಿದೆ, ಎಷ್ಟೆಷ್ಟು ನೀರಾವರಿ ಪ್ರದೇಶಗಳಿವೆ ಎನ್ನುವುದು ಮಾತ್ರವೇ" ಎಂದುಬಿಟ್ಟಿತು! ಈ ನಿಲುವೇ ತಮಿಳುನಾಡಿಗೆ ಸಿಕ್ಕ ನಿಜವಾದ ಗೆಲುವು! ಇನ್ನೇನಿದ್ದರೂ ಇಷ್ಟು ಪ್ರದೇಶಕ್ಕೆ ಎಷ್ಟೆಷ್ಟು ನೀರು ಬೇಕು ಎಂದು ಹಂಚಿಕೆ ಮಾಡುವುದಷ್ಟೇ ಬಾಕಿ ಇದ್ದದ್ದು! ಇಡೀ ಕಾವೇರಿ ನ್ಯಾಯಾಧಿಕರಣ ತೀರ್ಪು ನೀಡಿದ್ದು ಈ ವಿಷಯವಾಗಿ ಮಾತ್ರವೇ!

ನ್ಯಾಯಾಲಯದ ಪಾತ್ರವೇನು!

ಭಾರತದ ಸಂವಿಧಾನದಲ್ಲಿ ಅಂತರರಾಜ್ಯ ಬಿಕ್ಕಟ್ಟುಗಳ ಬಗ್ಗೆ ೧೩೧ನೇ ವಿಧಿಯಲ್ಲಿ ಹೇಳಲಾಗಿದ್ದರೂ ಅಂತರರಾಜ್ಯ ನದಿನೀರು ಹಂಚಿಕೆಯ ಬಗ್ಗೆ ಹೇಳಿರುವುದು ೨೬೨ನೇ ವಿಧಿಯಲ್ಲಿಯೇ. ಇದರಲ್ಲಿ ಅಂತರರಾಜ್ಯ ನದಿನೀರು ಹಂಚಿಕೆಯ ವಿಷಯವು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿದೆಯೆಂದು ಹೇಳಲಾಗಿದೆ.

Disputes relating to Waters
262. (1) Parliament may by law provide for the adjudication of any dispute or complaint with respect to the use, distribution or control of the waters of, or in, any inter-State river or river valley.
(2) Notwithstanding anything in this Constitution, Parliament may by law provide that neither the Supreme Court nor any other court shall exercise jurisdiction in respect of any such dispute or complaint as is referred to in clause (1).

ಹಾಗಾಗೇ ನೀವು ಗಮನಿಸಿ ನೋಡಿದರೆ ಅರ್ಥವಾಗುವುದು ಸುಪ್ರಿಂಕೋರ್ಟ್ ಸದಾ ಹೇಳುವುದು "ನ್ಯಾಯಾಧಿಕರಣವನ್ನು, ಅದು ರಚಿಸಿರುವ ಪ್ರಾಧಿಕಾರದ ಆದೇಶಗಳನ್ನು ಪಾಲಿಸಿ" ಎಂದು ಮಾತ್ರವೇ!

ನ್ಯಾಯಾಧಿಕರಣದ ಪಾತ್ರ!

ರಾಜ್ಯಗಳ ನಡುವೆ ನದಿನೀರಿನ ಹಂಚಿಕೆಗೆ ತಕರಾರುಗಳುಂಟಾದಲ್ಲಿ "೧೯೫೬ರ ಅಂತರರಾಜ್ಯ ನದಿನೀರು ತಗಾದೆ ಕಾಯ್ದೆ"ಯನ್ನು ಬಳಸಿ ನ್ಯಾಯ ತೀರ್ಮಾನಿಸಲು ನ್ಯಾಯಾಧಿಕರಣವನ್ನು ರಚಿಸಬೇಕೆಂದು ಹೇಳಲಾಗಿದೆ. ಇಡೀ ಕಾಯ್ದೆ ಮಾತನ್ನಾಡುವುದು ನ್ಯಾಯಾಧಿಕರಣದ ಹಕ್ಕು ಬಾಧ್ಯತೆ ಸ್ವರೂಪಗಳ ಬಗ್ಗೆ ಮಾತ್ರವೇ ಎನ್ನುವುದು ವಿಶೇಷ ಸಂಗತಿಯಾಗಿದೆ. ಈ ಕಾಯ್ದೆಯ ಅನ್ವಯ ಇದುವರೆಗೆ ಏಳು ನ್ಯಾಯಾಧಿಕರಣಗಳು ಸ್ಥಾಪನೆಯಾಗಿದ್ದು ಐದರಲ್ಲಿ ಪ್ರತಿವಾದಿ ಕರ್ನಾಟಕವೇ ಆಗಿದೆ! ಇಷ್ಟಕ್ಕೂ ಇಂತಹ ನ್ಯಾಯಾಧಿಕರಣಗಳು ನದಿನೀರು ಹಂಚಿಕೆಯ ತಕರಾರುಗಳನ್ನು ಬಗೆಹರಿಸಲು ಯಾವುದಾದರೋ ನೀತಿಯನ್ನು ಬಳಸುತ್ತವೆಯೇ? ಭಾರತದಲ್ಲಿ ಅಸಲಿಗೆ ಇಂತಹ ಒಂದು ರಾಷ್ಟ್ರೀಯ ನದಿನೀರು ಹಂಚಿಕೆ ನೀತಿಯಿದೆಯೇ ಎಂದು ಹುಡುಕಿದರೆ ಸಿಗುವುದು "ರಾಷ್ಟೀಯ ಜಲನೀತಿ" ಎನ್ನುವ ಒಂದು ದಾಖಲೆ. ಇದರಲ್ಲೆಲ್ಲೂ ಅಂತರರಾಜ್ಯ ನದಿನೀರನ್ನು ಹೇಗೆ ಹಂಚಿಕೊಳ್ಳಬೇಕೆಂಬ ಮಾತಿಲ್ಲ! ಬರಗಾಲದಲ್ಲಿ ಸಂಕಷ್ಟವನ್ನು ಹೇಗೆ ಹಂಚಿಕೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ತ ಮಾರ್ಗದರ್ಶಿ ಸೂತ್ರಗಳಿಲ್ಲ!! ಹಾಗಾದರೆ ಕಾವೇರಿ ನ್ಯಾಯಾಧಿಕರಣ ಸಂಕಷ್ಟದ ಬಗ್ಗೆ ಏನು ಹೇಳಿದೆ ಎಂದರೆ "ಮಳೆ ಕಡಿಮೆ ಬೀಳುವಷ್ಟು ಪ್ರಮಾಣದಲ್ಲೇ ನೀರಿನ ಪಾಲೂ ಕಡಿಮೆಯಾಗಬೇಕು" ಎಂದು! ವಿಷಯ ಇಷ್ಟು ಸರಳವಾಗಿದ್ದರೆ ಇಂದಿನ ಪರಿಸ್ಥಿತಿ ಬರುತ್ತಲೇ ಇರಲಿಲ್ಲ! ಇದನ್ನು ಜಾರಿ ಮಾಡುವಾಗ ಇರುವ ತೊಡಕುಗಳ ಬಗ್ಗೆ ಕೇಳಿದರೆ "ಅಂತಹ ಸಮಯ ಬಂದಲ್ಲಿ ನೀವು ಅಪೀಲು ಸಲ್ಲಿಸಲು ಅವಕಾಶವಿದೆ ಎಂದು ಹೇಳಲಾಗಿದೆ, ಹಾಗಾಗಿ ಅಂತೆಯೇ ನಡೆದುಕೊಳ್ಳಿ" ಎನ್ನಲಾಗುತ್ತದೆ! ಹೀಗಾಗಿ ಬಿಕ್ಕಟ್ಟು ನಿರಂತರ!!

ಕರ್ನಾಟಕದ ಮುಂದಿನ ಪಾಡೇನು?

ಈಗಾಗಲೇ ಕಾವೇರಿ ನ್ಯಾಯಾಧಿಕರಣವು ಐತೀರ್ಪು ನೀಡಿಯಾಗಿದೆ. ಇದು ಕೇಂದ್ರಸರ್ಕಾರದ ಗೆಜೆಟ್ಟಿನಲ್ಲಿ ಬರುವುದು ಮಾತ್ರಾ ಬಾಕಿಯಿದೆ. ಆ ದಿನವೂ ಬರಲಿದೆ. "ಈಗ ಕದ್ದು ಮುಚ್ಚಿ ಇರುಳಲ್ಲಿ ನೀರು ಹರಿಸಿ ಕನ್ನಡಿಗರ ಆಕ್ರೋಶವನ್ನು ನಂತರ ನಿಭಾಯಿಸುತ್ತಿರುವಂತೆ"ಯೇ ಆಗಲೂ ಗೆಜೆಟ್‌ನಲ್ಲಿ ಪ್ರಕಟಿಸಿ ಆಮೇಲೆ ಕರ್ನಾಟಕದವರು ನಡೆಸುವ ಒಂದೆರಡು ದಿನದ ಪ್ರತಿಭಟನೆಯನ್ನು ತಣ್ಣಗೆ ಮಾಡಿಬಿಡಲಾಗುತ್ತದೆ! ಏಕೆಂದರೆ ಅನ್ಯಾಯದ ತೀರ್ಪು ಕಾನೂನುಬದ್ಧವೂ, ನ್ಯಾಯದ ಹೋರಾಟವು ಕಾನೂನುಬಾಹಿರವೂ ಆಗಿಬಿಡುತ್ತದೆಯಾದ್ದರಿಂದ ಹೀಗೆ ಆಗಿಬಿಡುವ ಸಾಧ್ಯತೆಯಿದೆ. ಒಮ್ಮೆ ರಾಜ್ಯಪತ್ರದಲ್ಲಿ ಪ್ರಕಟವಾಗಿಬಿಟ್ಟರೆ ಮುಂದಿನದ್ದೆಲ್ಲಾ ಅದರಂತೆ ನಡೆಯುವುದು ಮಾತ್ರವೇ. ಹಾಗೆ ನಡೆಯಲಾಗದಿದ್ದರೆ ಅದು ದೇಶದ್ರೋಹ, ಅದು ಕಾನೂನುಭಂಗ, ಒಕ್ಕೂಟಕ್ಕೆ ತೋರುವ ಅಗೌರವ ಎಂದು ವರ್ಷಾ ವರ್ಷಾ ನ್ಯಾಯಾಲಯಗಳಿಂದ, ಸರ್ಕಾರಗಳಿಂದ, ಮಾಧ್ಯಮಗಳಿಂದ ಹೆಟ್ಟಿಸಿಕೊಳ್ಳುವುದು ಕರ್ನಾಟಕಕ್ಕೆ ತಪ್ಪುವುದಿಲ್ಲ!

ಕಾವೇರಿ ವಿವಾದ ಬಗೆಹರಿಯಲು ಇರುವ ದಾರಿಯೇನು?

ಕಾವೇರಿ ವಿವಾದವನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುವುದೇನೆಂದರೆ, ಇದು ನ್ಯಾಯಾಲಯಗಳಲ್ಲಿ ತೀರ್ಮಾನವಾಗುವ ವಿಷಯವೇ ಅಲ್ಲಾ! ಇದೊಂದು ಪಕ್ಕಾ ರಾಜಕೀಯ ಸಮಸ್ಯೆ! ಇತಿಹಾಸವನ್ನು ಪಕ್ಕಕ್ಕಿಟ್ಟು, ನೂರಾರು ವರ್ಷಗಳು ನಡೆದ ಅನ್ಯಾಯವನ್ನು ಸಕ್ರಮವೆಂದೂ ಪಾರಂಪರಿಕ ಹಕ್ಕೆಂದೂ ಪರಿಗಣಿಸಲಾಗಿರುವ  ಬುಡವನ್ನೇ ತಿರಸ್ಕರಿಸಬೇಕು. ಈಗಾಗಲೇ ನೀರು ಬಳಸುತ್ತಿದ್ದೇವೆ ಎನ್ನುವುದು, ಎಂದೆಂದಿಗೂ ನೀರು ಬಳಸುವ ಹಕ್ಕಾಗುವುದನ್ನು ತಿರಸ್ಕರಿಸಬೇಕು. ಇದರ ಆಧಾರದ ಮೇಲೆ ನ್ಯಾಯದಾನ ಮಾಡಿರುವ ನ್ಯಾಯಾಧಿಕರಣದ ತೀರ್ಪಿಗೆ ನಮ್ಮ ಒಪ್ಪಿಗೆಯಿಲ್ಲವೆಂದೂ, ಸರಿಯಾದ ರಾಷ್ಟ್ರೀಯ ನದಿನೀರು ಹಂಚಿಕೆ ನೀತಿಯನ್ನು ರೂಪಿಸಬೇಕೆಂದೂ ಆಗ್ರಹಿಸಬೇಕು. ಅಂತಹ ರಾಷ್ಟ್ರೀಯ ಜಲನೀತಿಯ ಆಧಾರದಲ್ಲಿ  ನದಿಯೊಂದು ಹುಟ್ಟುವ ಸ್ಥಳದಿಮ್ದ ಕಡಲು ಸೇರುವವರೆಗೆ ಎಷ್ಟೆಷ್ಟು ದೂರದವರೆಗೆ ನೀರಾವರಿ ಸೌಲಭ್ಯವನ್ನು ಒದಗಿಸಬಹುದು ಎಂದು ನಿಶ್ಚಯಿಸಬೇಕು. ಇದಕ್ಕೆ ಪ್ರತಿ ಪ್ರದೇಶದ ಭೌಗೋಳಿಕ ಲಕ್ಷಣ, ಅಲ್ಲಿ ಸುರಿಯುವ ಮಳೆಯ ಪ್ರಮಾಣ, ಆ ಭಾಗದಲ್ಲಿರುವ ಬರದ ಪ್ರಮಾಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಮಾನ ನ್ಯಾಯವನ್ನು ನದಿಪಾತ್ರದ ಎಲ್ಲಾ ಜನಗಳಿಗೆ ಒದಗಿಸುವ ವ್ಯವಸ್ಥೆ ಈ ಜಲನೀತಿಯಲ್ಲಿರಬೇಕು. ಇದರ ಆಧಾರದ ಮೇರೆಗೆ ಕಾವೇರಿ ನದಿನೀರಿನ ಮೇಲಿರುವ ಹಕ್ಕುಗಳ ಮರುಹಂಚಿಕೆಯಾಗಬೇಕು.

ಸರಿಯಾಗಬೇಕಾದ್ದು ಒಕ್ಕೂಟದ ವ್ಯವಸ್ಥೆ!

ಈ ದೇಶದಲ್ಲಿ ಪ್ರಜಾಪ್ರಭುತ್ವವೆಂದರೆ ಬಹುಮತವೆನ್ನುವ ನಂಬಿಕೆಯಿದೆ. ಅಂದರೆ ಬಹುಸಂಖ್ಯಾತರಿಗೆ ಬೇಕಾದ ಹಾಗೆ ವ್ಯವಸ್ಥೆ ಇರಬೇಕು ಎನ್ನುವುದು. ಇದಕ್ಕೊಂದು ಉದಾಹರಣೆ ಭಾರತದಲ್ಲಿ ಹೆಚ್ಚು ಜನರು ಹಿಂದೀ ಮಾತಾಡುತ್ತಾರೆ ಹಾಗಾಗಿ ಹಿಂದೀ ಭಾರತದ ಆಡಳಿತ ಭಾಷೆ ಎನ್ನುವುದು. ಇಂತಹ ನೀತಿಯು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿಸುವ ಜೊತೆಗೆ ಕೊನೆಗೊಮ್ಮೆ ಅವರ ನಿರ್ನಾಮ ಮಾಡಿಬಿಡುತ್ತದೆ. ಕೇಂದ್ರಸರ್ಕಾರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ರಾಜ್ಯಗಳ ಸದಸ್ಯರ ಸಂಖ್ಯೆಯು ಹೆಚ್ಚು ಕಮ್ಮಿಯಿದ್ದಾಗಲೂ ಇದೇ ಸಮಸ್ಯೆ. ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆ ಇರುವ ಏರ್ಪಾಡು ಸಣ್ಣ ರಾಜ್ಯಗಳ ಪಾಲಿಗೆ ಮರಣಸದೃಶ. ಕೇಂದ್ರದಲ್ಲಿ ಸಮಾನ ಪ್ರಾತಿನಿಧ್ಯ ಇರುವ ಏರ್ಪಾಡು ನಮಗೆ ಬೇಕು. ಇದು ಒಂದೆಡೆಯಾದರೆ ಒಂದು ರಾಜ್ಯದ ಅನುಮತಿಯೇ ಇಲ್ಲದೆ ಆ ರಾಜ್ಯದ ಬಗ್ಗೆ ಇಡೀ ಸಂಸತ್ತು ಒಂದು ನಿರ್ಣಯವನ್ನು ತೆಗೆದುಕೊಂಡುಬಿಡುವ ಅವಕಾಶವನ್ನು ಈ "MIGHT IS RIGHT" ಸಿದ್ಧಾಂತದ ಈ ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿಕೊಡುತ್ತದೆ. ಭಾರತದಲ್ಲಿ ಸರಿಯಾದ ಒಪ್ಪುಕೂಟ ವ್ಯವಸ್ಥೆ ಜಾರಿಯಾಗುವುದು ಈ ಎಲ್ಲಾ ಹಿನ್ನೆಲೆಯಲ್ಲಿ ಅತ್ಯವಶ್ಯಕವಾಗಿದೆ.

ಪ್ರಾದೇಶಿಕ ಪಕ್ಷ ಹುಟ್ಟಲಿ!

ವಾಸ್ತವವಾಗಿ  ಕಾವೇರಿ ನ್ಯಾಯಾಧಿಕರಣದ ರಚನೆಯಾದದ್ದು ವಿ ಪಿ ಸಿಂಗ್ ಅವರ ಸರ್ಕಾರ ಡಿಎಂಕೆಯ ಬೆಂಬಲದಲ್ಲಿ ನಡೆಯುತ್ತಿದ್ದಾಗಲೇ ಎನ್ನುವುದನ್ನು ಗಮನಿಸಬೇಕಾಗಿದೆ. ಇಂದು ಕೂಡಾ ನಮ್ಮ ಪ್ರಧಾನಮಂತ್ರಿಗಳು, ಹಿಂದೂಮುಂದೂ ನೋಡದೆ ಒಮ್ಮೆಗೇ "ಕರ್ನಾಟಕವು ತಮಿಳುನಾಡಿಗೆ ಪ್ರತಿನಿತ್ಯ ೯೦೦೦ ಕ್ಯುಸೆಕ್ ನೀರು ಬಿಡಬೇಕು" ಎನ್ನುವ ಆದೇಶ ನೀಡಿದ್ದರ ಹಿಂದೆಯೂ "ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಕೇಂದ್ರಸರ್ಕಾರ ಉಳಿಯದೆನ್ನುವ" ಲೆಕ್ಕಾಚಾರವೇ ಕೆಲಸಮಾಡಿರುವ ಶಂಕೆಯಿದೆ. ನಮ್ಮ ಇಂದಿನ ಸರ್ಕಾರವಾಗಲೀ, ಹಿಂದಿನ ಸರ್ಕಾರಗಳಾಗಲೀ ನಡೆದುಕೊಂಡ ಬಗೆಯನ್ನು ನೋಡಿ. ಕಾವೇರಿ ವಿಷಯ ಬಂದಾಗಲೆಲ್ಲಾ ವೀರಾವೇಶದಿಂದ "ರಕ್ತ ಕೊಟ್ಟೇವು, ನೀರು ಬಿಡೆವು" "ಅಧಿಕಾರ ಬಿಟ್ಟೇವು, ನೀರು ಬಿಡೆವು" ಎನ್ನುವ ತೋರಿಕೆಯ ಮಾತುಗಳಿಗಷ್ಟೇ ಇವುಗಳ ನಾಡಪ್ರೇಮ ಸೀಮಿತ. ಇದ್ದುದರಲ್ಲೊಬ್ಬರು ಬಂಗಾರಪ್ಪನವರು ಸಡ್ಡು ಹೊಡೆದುನಿಂತದ್ದು ಬಿಟ್ಟರೆ ಉಳಿದವರದ್ದೆಲ್ಲಾ ಇದೇ ಗೋಳೆ! ಕೊನೆಗೆ ಹೈಕಮಾಂಡ್ ಹೇಳಿತೆಂದೋ, ನ್ಯಾಯಾಲಯ ಛೀಮಾರಿ ಹಾಕಿತೆಂದೋ ನೀರು ಬಿಟ್ಟೆವು ಎನ್ನುವುದು ವಾಡಿಕೆ. ಕರ್ನಾಟಕವು ನಾಡಿನ ಜನಕ್ಕೆ ನ್ಯಾಯ ದಕ್ಕಿಸಿಕೊಡಲು ಭಾರತ ಸರ್ಕಾರವನ್ನು ಎದಿರುಹಾಕಿಕೊಳ್ಳುವ ಸಂದರ್ಭ ಬಂದಲ್ಲಿ ನಾಡು ಅದಕ್ಕೆ ಸಂಪೂರ್ಣ ಸಿದ್ಧವಾಗಬೇಕಾಗುತ್ತದೆ. ಇದು ಎಲ್ಲಿಯವರೆವಿಗೆ ರಾಷ್ಟೀಯ ಪಕ್ಷಗಳು ನಮ್ಮನ್ನು ಪ್ರತಿನಿಧಿಸುತ್ತಿರುತ್ತವೆಯೋ ಅಲ್ಲಿಯವರೆವಿಗೂ ಅಸಾಧ್ಯ. ಈ ನೆಲದ ಹಿತಕಾಯಬಲ್ಲ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುವತ್ತ ಕನ್ನಡಿಗ ಸಾಗದಿದ್ದಲ್ಲಿ ಮುಂದೆ ಇಂತಹ ಅನ್ಯಾಯಗಳು ಮತ್ತಷ್ಟು ಕಾದಿವೆ!
(ಮುಗಿಯಿತು)

೩. ಕಾವೇರಿ ಏಕೆ ಓಡುವೇ...?



೧೯೭೧ರ ವೇಳೆಗೆ ಕರ್ನಾಟಕದ ನೀರಾವರಿ ಪ್ರದೇಶ ೬.೭೪ ಲಕ್ಷ ಎಕರೆಯಷ್ಟಾದರೆ ತಮಿಳುನಾಡಿನದು ೨೩.೬೦  ಲಕ್ಷ ಎಕರೆಯಷ್ಟು ಆಗಿತ್ತು. ಇಂದು ಕರ್ನಾಟಕದ ನೀರಾವರಿ ಪ್ರದೇಶ ೧೧.೨ ಲಕ್ಷ ಎಕರೆಯಷ್ಟಾದರೆ ತಮಿಳುನಾಡಿನದು ೨೯.೪ ಲಕ್ಷ ಎಕರೆಯಾಗಿದೆ. ೧೯೬೮ರಲ್ಲಿ ಅನುಮತಿ ಪಡೆದೇ ಕರ್ನಾಟಕವು ಹಾರಂಗಿ, ಕಬಿನಿ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಅಡ್ಡಿಪಡಿಸಿದ ತಮಿಳುನಾಡು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು. ಮತ್ತೆ ಅಲ್ಲಿನ ತೀರ್ಪು ಬರುವವರೆಗೆ ಕಾಲ ಕಳೆದು ಹೋಗುವುದೆಂದು ಕರ್ನಾಟಕ ‘ಅಣೆಕಟ್ಟೆಯಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ನೀರು ಇಟ್ಟುಕೊಳ್ಳುವುದಿಲ್ಲ ಮತ್ತು ಅಂತಹ ನೀರನ್ನು ಬಳಸುವುದಿಲ್ಲ’ ಎನ್ನುವ ಅನ್ಯಾಯದ ಮುಚ್ಚಳಿಕೆ ಬರೆದುಕೊಟ್ಟು ರಾಜಿಯಾಯಿತು. ಮುಂದೆ ಈ ವಿವಾದ ನ್ಯಾಯಾಧಿಕರಣದ ಮುಂದೆ ಬಂದಾಗ ತಮಿಳುನಾಡು "ಕಾವೇರಿ ನದಿನೀರನ್ನು ನಾವು ಸಾವಿರಾರು ವರ್ಷಗಳಿಂದ ಬಳಸುತ್ತಿದ್ದೇವೆ. ಆದರೆ ಕರ್ನಾಟಕವು ೧೯೨೪ರ ಒಪ್ಪಂದ ಉಲ್ಲಂಘಿಸಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಮೂಲಕ ನೀರನ್ನು ನಮಗೆ ಬಿಡುತ್ತಲೇ ಇಲ್ಲಾ! ಇದರಿಂದಾಗಿ ತಮಿಳುನಾಡಿನ ರೈತರು, ಕೃಷಿ, ರಾಜ್ಯದ ಆರ್ಥಿಕತೆ ನೆಲಕಚ್ಚಿ ಹೋಗುತ್ತಿದೆ...ಈಗಂತೂ ನಮ್ಮ ಅನುಮತಿ ಪಡೆಯದೇ ನಾಲ್ಕು ಅಣೇಕಟ್ಟೆ ಕಟ್ಟಿಬಿಟ್ಟಿದೆ. ಇದರಿಂದಾಗಿ ನೀರಿನ ಹರಿವು ನಿಂತೇ ಹೋಗಿದೆ. ಅಯ್ಯಯ್ಯೋ ಅನ್ಯಾಯ... ತಮಿಳುನಾಡಿಗೆ ಮೋಸವಾಗುತ್ತಿದೆ... ನೀರು ಬಿಡಿಸಿ! ನೀರು ಬಿಡಿಸಿ!" ಎಂದು ದೂರಿತು. ಈ ಕೂಗು ತಮಿಳುನಾಡಿನಿಂದ ಹೊರಟು ಕಾವೇರಿ ನ್ಯಾಯಾಧಿಕರಣದ ಮನಮುಟ್ಟುವಲ್ಲಿ ಯಶಕಂಡಿತು! ಕರ್ನಾಟಕವು ತನಗೆ ಆಂಗ್ಲರ ಕಾಲದಿಂದಲೂ ಆದ ತಾರತಮ್ಯದ ಬಗ್ಗೆ ಬಾಯಿ ಬಡಕೊಂಡರೂ ಕೇಳದೆ ಹೋಯಿತು ನ್ಯಾಯಾಧಿಕರಣ. ತಮಿಳುನಾಡು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಿದೆ, ಕರ್ನಾಟಕ ಎರಡೇನದ್ದನ್ನು ಬೆಳೆಯೋಕೂ ಆಗ್ತಿಲ್ಲಾ ಎಂದರೆ "ಅದು ಅದರ ಪಾರಂಪರಿಕ ಹಕ್ಕು" ಎಂದಿತು! ಒಟ್ಟಾರೆ ನ್ಯಾಯಾಧಿಕರಣವಾಗಲೀ ಮತ್ತೊಂದಾಗಲೀ ಪರಿಗಣಿಸಿದ್ದು "ತಮಿಳುನಾಡು ನೂರಾರು ವರ್ಷಗಳಿಂದ ಕಾವೇರಿ ನೀರನ್ನು ಚೆನ್ನಾಗಿ ಬಳಸಿಕೊಳ್ಳುತ್ತಾ ಬಂದಿರುವುದು ಅದರ ಪಾರಂಪರಿಕ ಹಕ್ಕು ಮತ್ತು ಕರ್ನಾಟಕ ಆಗೆಲ್ಲಾ ಯಾವುದೇ ಕಾರಣಕ್ಕಾಗಿದ್ದರೂ ಸರಿ, ನೀರು ಬಳಸದೆ ಈಗ ಬಳಸಲು ಯೋಜನೆ ಮಾಡುವುದು ಸರಿಯಲ್ಲಾ, ಇಲ್ಲಿ ನೀರಾವರಿ ಮಾಡುವ ಪ್ರಯತ್ನ, ಅಣೆಕಟ್ಟೆ ಕಟ್ಟುವ ಪ್ರಯತ್ನಗಳೆಲ್ಲಾ ಅಕ್ರಮ" ಎಂದು!! 

ಕಾವೇರಿ ಮಧ್ಯಂತರ ತೀರ್ಪು!

ತಮಿಳುನಾಡಿನ ಪರ ವಾದ ಮಾಡಲು ಶ್ರೀ ಪರಾಶರನ್ ಎನ್ನುವ ವಕೀಲರು ಮುಂದಾದರು. (ಶ್ರೀ ಪರಾಶರನ್ ಅವರ ವಿಶೇಷತೆ ಏನೆಂದರೆ ಕೃಷ್ಣಾ ನದಿ ನೀರಿನ ಹಂಚಿಕೆ, ಕಾವೇರಿ ವಿವಾದ, ಕಳಸಾ ಭಂಡೂರಾ ವಿವಾದ... ಹೀಗೆ ಕರ್ನಾಟಕಕ್ಕೆ ಸಂಬಂಧಿಸಿದ ಜಲವಿವಾದದ ಎಲ್ಲಾ ಹೋರಾಟಗಳಲ್ಲಿ ಕರ್ನಾಟಕದ ಎದುರಾಳಿ ರಾಜ್ಯದ ಪರವಾಗಿ ಇವರೇ ವಕೀಲರು). ಕರ್ನಾಟಕವು ಶ್ರೀ ಎಫ಼್.ಎಸ್. ನಾರಿಮನ್ ಅವರನ್ನು ನೇಮಕ ಮಾಡಿತು! ವಾದ ಮಾಡುವಲ್ಲಿ ಕರ್ನಾಟಕ ಸಾಕಷ್ಟು ಹೋರಾಡಿದರೂ ಹಲವಾರು ವಿಷಯಗಳಲ್ಲಿ ವಾಸ್ತವ ಕರ್ನಾಟಕಕ್ಕೆ ವಿರುದ್ಧವಾಗೇ ಇದ್ದಿತು. ತಮಿಳುನಾಡು ನ್ಯಾಯಾಧಿಕರಣದ ಅಂತಿಮತೀರ್ಪು ಬರುವವರೆಗೆ ಮಧ್ಯಂತರ ತೀರ್ಪು ನೀಡಬೇಕೆಂದೂ ಕೋರಿತು. ನ್ಯಾಯಾಧಿಕರಣ ಕರ್ನಾಟಕದಿಂದ ಪ್ರತಿವರ್ಷ ತಮಿಳುನಾಡಿಗೆ ಹರಿದ ನೀರಿನ ಪ್ರಮಾಣದ ಆಧಾರದ ಮೇಲೆ ಪ್ರತಿವರ್ಷ ೨೦೫ ಟಿಎಂಸಿಯಷ್ಟು ನೀರು ಬಿಡಬೇಕೆಂದು ಆದೇಶಿಸಿತು.

ತಮಿಳುನಾಡು ದೂರಿನಲ್ಲಿ ಕರ್ನಾಟಕವು ನಮಗೆ ನೀರು ಬಿಡದೆ ಹಿಡಿದಿಟ್ಟುಕೊಳ್ಳುತ್ತಿದೆ ಎಂದು ವಾದಿಸಿತ್ತು. ಅದಕ್ಕೆ ಕರ್ನಾಟಕ ಪ್ರತಿವರ್ಷ ಬಿಳಿಗೊಂಡ್ಲುವಿನ ಮಾಪಕದಲ್ಲಿ ಹರಿದ ನೀರಿನ ಪ್ರಮಾಣ ತೋರಿಸಿ, ನೋಡಿ ಕಡಿಮೆಯೆಂದರೆ ೨೫೨ ಟಿಎಂಸಿಯಷ್ಟನ್ನು ನೀರನ್ನು ಬಿಟ್ಟಿದ್ದೇವೆ ಎಂದಿತ್ತು. ಹಾಗಂದಿದ್ದ ಕಾರಣದಿಂದಲೇ ನ್ಯಾಯಾಧಿಕರಣ ಮಧ್ಯಂತರ ಆದೇಶದಲ್ಲಿ ೨೦೫ ಟಿಎಂಸಿ ಬಿಡಿ ಎಂದಿತ್ತು! ಕರ್ನಾಟಕ ಮರುಪರಿಶೀಲನೆಗೆ ಮನವಿ ಸಲ್ಲಿಸಿದಾಗ ಇದನ್ನೇ ಮುಖಕ್ಕೆ ಹಿಡಿದು ಕರ್ನಾಟಕದ ಮನವಿಯನ್ನು ತಿರಸ್ಕರಿಸಿಬಿಟ್ಟಿತು ನ್ಯಾಯಾಧಿಕರಣ!!

ಮುಂದೆ ಕರ್ನಾಟಕಕ್ಕೆ ಮಾರಣಾಂತಿಕವಾದ ಐತೀರ್ಪು ೨೦೦೭ರ ಫೆಬ್ರವರಿ ಐದರಂದು ಪ್ರಕಟವಾಯಿತು!

ಕಾವೇರಿ ನ್ಯಾಯಾಧಿಕರಣದ ಐತೀರ್ಪು! 

ಈ ತೀರ್ಪಿನಲ್ಲಿ ಹೇಳಲಾಗಿರುವ ಪ್ರಮುಖವಾದ ಅಂಶ, ೧೮೯೨ರ ಮತ್ತು ೧೯೨೪ರ ಒಪ್ಪಂದಗಳು ಕ್ರಮವಾಗಿ ೧೧೦ ಮತ್ತು ೮೦ ವರ್ಷಗಳಷ್ಟು ಹಳೆಯವಾದ್ದರಿಂದ ಈಗ ಅನೂರ್ಜಿತವೆನ್ನಲಾಗದು! ಈ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಎರಡೂ ಪ್ರಾಂತ್ಯಗಳು ಸಂಪೂರ್ಣ ಸಮಾಲೋಚನೆಯನ್ನು ಮಾಡಿಯೇ ಒಪ್ಪಂದಕ್ಕೆ ಬಂದಿದ್ದವು! ೧೯೨೪ರ ಒಪ್ಪಂದದಲ್ಲಿ ಕೆಲಅಂಶಗಳನ್ನು ೧೯೭೪ರ ನಂತರ ಪರಾಮರ್ಶಿಸಬಹುದು ಎಂದು ಹೇಳಲಾಗಿದೆ. ಅದರಂತೆ ನಾವೀಗ ಪರಾಮರ್ಶಿಸಿದ್ದೇವೆ.

ಈ ನ್ಯಾಯಾಧಿಕರಣ ೧೮೯೨ ಮತ್ತು ೧೯೨೪ರ ಒಪ್ಪಂದಗಳನ್ನು ರದ್ದು ಮಾಡುತ್ತದೆ.

ನದಿ ತೀರದ ಯಾವುದೇ ರಾಜ್ಯದ ಅಂತರ್ಜಲ ಬಳಕೆಯನ್ನು ಕಾವೇರಿ ನದಿನೀರಿನ ಬಳಕೆಯೆಂದು ಪರಿಗಣಿಸಲಾಗದು. (ಅಂದರೆ ಅಂತರ್ಜಲ ಮಟ್ಟ ಅಲ್ಲಿ ಹೆಚ್ಚಿದ್ದು ಇಲ್ಲಿ ಕಡಿಮೆ ಇದ್ದರೆ ನದಿ ನೀರು ಹಂಚಿಕೆ ಸೂತ್ರದಲ್ಲಿ ಇದಕ್ಕೆ ಯಾವ ಕಿಮ್ಮತ್ತಿಲ್ಲ)

ಈ ತೀರ್ಪಿನಲ್ಲಿ ಸಂಕಷ್ಟ ಸೂತ್ರವನ್ನು ಸಮಗ್ರವಾಗಿ ತಿಳಿಸಿಲ್ಲ! ಮಳೆ ಪ್ರಮಾಣ ಕಡಿಮೆಯಾದಲ್ಲಿ ನದಿನೀರಿನ ಪಾಲಿನಲ್ಲೂ ಅದೇ ಪ್ರಮಾಣದಲ್ಲಿ ಕಡ್ಮೆಯಾಗಬೇಕು ಎಂದಷ್ಟೇ ಹೇಳಿದೆ. ಇದರರ್ಥ ಮುಂಗಾರು ವಿಫಲವಾದ ಕೂಡಲೇ ತಮಿಳುನಾಡು ತನ್ನ ಪಾಲನ್ನು ಕೇಳಿದರೆ ಸಂಕಷ್ಟದ ಹಂಚಿಕೆಯೂ ಅಷ್ಟಕ್ಕೆ ಮಾತ್ರಾ ಸೀಮಿತವಾಗುತ್ತದೆ. ಒಂದುವೇಳೆ ಈ ಕೊರತೆ ಹಿಂಗಾರಿನಲ್ಲಿ ತುಂಬಿದರೆ ಅದು ತಮಿಳುನಾಡಿಗೆ ಬೋನಸ್. ಯಾಕೆಂದರೆ ಹಿಂಗಾರಿನ ಲಾಭ ಇರುವುದು ತಮಿಳುನಾಡಿಗೆ ಮಾತ್ರವೇ. ಹೀಗಾಗಿ ಕರ್ನಾಟಕ ಸಂಕಷ್ಟವೆಂದರೆ ಹಿಂಗಾರು ಮುಂಗಾರು ಎರಡರಲ್ಲೂ ಬರುವ ನೀರನ್ನು ಪರಿಗಣಿಸಿ ಎನ್ನುವ ವಾದ ಮಾಡುತ್ತಿದೆ. ಆದರೆ ತಮಿಳುನಾಡು ಹಿಂಗಾರು ಶುರುವಾಗುವ ಮುನ್ನವೇ ದನಿ ಎತ್ತಿ ಸಿಕ್ಕಷ್ಟನ್ನು ಗೋರಿಕೊಳ್ಳುವ ಉದ್ದೇಶಹೊಂದಿದೆ. ಬರ ಬಂದಾಗಲೆಲ್ಲಾ ತಮಿಳುನಾಡು ಐತೀರ್ಪಿನಲ್ಲಿ ತಿಳಿಸಿರುವಷ್ಟು ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶಿಸಿ ಎನ್ನಲು ಇದೇ ಕಾರಣವಾಗಿದೆ.

ಮುಂದುವರೆದ ತಾರತಮ್ಯ!! 

ಕಾವೇರಿ ಕಣಿವೆಯ ಶೇಕಡಾ ೪೨ ಪ್ರದೇಶ ಕರ್ನಾಟಕದಲ್ಲಿದೆ. ನಮ್ಮ ನೀರಾವರಿ ಪ್ರದೇಶವನ್ನೂ ಅದೇ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಬಹುದಾಗಿದೆ. ಆದರೆ ಕಾವೇರಿಗೆ ಕರ್ನಾಟಕದಿಂದ ಸೇರುವ ನೀರಿನ ಪ್ರಮಾಣದ ಲೆಕ್ಕದಂತೆ ನಮಗೆ ೨೩ ಲಕ್ಷ ಎಕರೆಗೆ ಅನುಮತಿ ನೀಡಬೇಕಿತ್ತು. ಮತ್ತು ತಮಿಳುನಾಡಿಗೆ ೧೩.೬ ಲಕ್ಷ ಎಕರೆಗೆ ಮಾತ್ರ ಕಾವೇರಿ ನೀರು ಕೊಡಬೇಕಿತ್ತು. ಹಿಂದಿನಿಂದ ನಮ್ಮ ಕೈಕಟ್ಟಿಹಾಕಿ ಅನ್ಯಾಯವಾಗಿ ತಮ್ಮ ನೀರಾವರಿ ಪ್ರದೇಶ ಬೆಳೆಸಿಕೊಂಡು ಬಂದು ಈಗ ಅದಕ್ಕೆ ಪಾರಂಪರಿಕ ಹಕ್ಕಿನ ಬಣ್ಣ ಕೊಟ್ಟು, ನೀರನ್ನು ತಮ್ಮ ಹಕ್ಕಂತೆ ಕೇಳುವ ತಮಿಳುನಾಡಿನ ನಿಲುವಿಗೆ ಮಣೆಹಾಕಿದ್ದು ಮೊದಲನೆಯ ಅನ್ಯಾಯ.

ಬಿಳಿಗುಂಡ್ಲುವಿನಲ್ಲಿ ೧೯೨ ಟಿ.ಎಂ.ಸಿ ನೀರು ಬಿಡಬೇಕೆನ್ನುವ ಆದೇಶದ ಭಾಗ ಕನ್ನಡಿಗರಿಗೆ ೧೯೨ ಎನ್ನುವುದು ಮಧ್ಯಂತರ ಆದೇಶದ ೨೦೫ಕ್ಕಿಂತ ಕಡಿಮೆ ಎನ್ನಿಸಲಿ ಎಂಬ ಕಣ್ಣು ಒರೆಸುವ ತಂತ್ರವಾಗಿದೆ. ಆದರೆ ನಿಜವಾಗಿ ನಾವು ಬಿಡಬೇಕಾದ ನೀರಿನ ಪ್ರಮಾಣ ಇದಕ್ಕಿಂತ ಬಹಳ ಹೆಚ್ಚೇ ಆಗಿದೆ. ಬಿಳಿಗುಂಡ್ಲುವಿನಿಂದ ಮೆಟ್ಟೂರುವರೆಗೆ ನದಿಗೆ ಸೇರುವ ೨೫ ಟಿ.ಎಂ.ಸಿ ನೀರು ಕಳೆದು ನಾವು ಇದುವರೆಗೆ ೧೮೦ ಟಿ.ಎಂಸಿ ನೀರು ಬಿಡುತ್ತಿದ್ದೆವು. ಈಗ ಅದು ೧೯೨ ಆಗುವುದೆಂದರೆ ನಾವು ಬಿಡುವ ನೀರಿನ ಪ್ರಮಾಣ ೨೧೭ ಟಿ.ಎಂ.ಸಿಯಷ್ಟು (ಮೆಟ್ಟೂರಿನಲ್ಲಿ ಅಳೆದಂತೆ). ಇದು ಎರಡನೆಯ ಅನ್ಯಾಯ.

ಕೇರಳಕ್ಕೆ ೩೦ ಟಿ.ಎಂ.ಸಿ ಹಂಚಿರುವ ನ್ಯಾಯಾಧಿಕರಣ ಅದರಲ್ಲಿ ೯ ಟಿ.ಎಂ.ಸಿ ನೀರನ್ನು ತಮಿಳುನಾಡು ಕೊಡುವಂತೆಯೂ ೨೧ ಟಿ.ಎಂ.ಸಿಯಷ್ಟು ನೀರನ್ನು ಕರ್ನಾಟಕ ಬಿಡುವಂತೆಯೂ ಹೇಳಿದೆ. ಕೇರಳದಲ್ಲಿ ಸದ್ಯಕ್ಕೆ ಆ ನೀರನ್ನು ಬಳಸುವ ಶಕ್ತಿಯಿಲ್ಲದ ಕಾರಣ ತಮಿಳುನಾಡು ತಾನು ಬಿಡಬೇಕಾದ ೯ ಟಿ.ಎಂ.ಸಿ ನೀರನ್ನು ತಾನೇ ಬಳಸಿಕೊಳ್ಳಬಹುದು. ಆದರೆ ಕರ್ನಾಟಕ ಮಾತ್ರ ತಾನು ಬಿಡಬೇಕಾದ ೨೧ ಟಿ.ಎಂ.ಸಿ ನೀರನ್ನು ತಾನು ಬಳಸುವಂತಿಲ್ಲ. ಆ ನೀರನ್ನು ತಮಿಳುನಾಡಿಗೆ ಬಿಡಬೇಕು ಮತ್ತು ತಮಿಳುನಾಡು ಅದನ್ನು ಬಳಸಬಹುದು. ಇದು ಮೂರನೆಯ ಅನ್ಯಾಯ.

ಪರಿಸರ ರಕ್ಷಣೆಗಾಗಿ ೧೦ ಟಿ.ಎಂ.ಸಿ ನೀರನ್ನು ಕರ್ನಾಟಕ ಬಿಡಬೇಕು. ಆದರೆ ತಮಿಳುನಾಡು ಯಾವ ಪ್ರಮಾಣದ ನೀರನ್ನೂ ಪರಿಸರ ರಕ್ಷಣೆಗೆಂದು ಬಿಡುವ ಅಗತ್ಯವಿಲ್ಲ. ಪರಿಸರ ರಕ್ಷಣೆ ಬರಿಯ ನಮ್ಮ ಹೊಣೆಯೇ? ಇದು ನಾಲ್ಕನೆಯ ಅನ್ಯಾಯ.

ಕರ್ನಾಟಕವು ಬೆಂಗಳೂರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ಪ್ರಮಾಣ ಈಗ ಸುಮಾರು ೧೫ ಟಿ.ಎಂ.ಸಿ. ಬೃಹತ್ ಬೆಂಗಳೂರು ಯೋಜನೆಯಂತೆ ಅದು ೩೦ ಟಿ.ಎಂ.ಸಿಯಷ್ಟು ಆಗುತ್ತದೆ. ಉಳಿದ ನಗರಗಳಾದ ಚಾಮರಾಜನಗರ, ಮಂಡ್ಯ, ಮೈಸೂರು, ಚನ್ನಪಟ್ಟಣ, ರಾಮನಗರಗಳಿಗೆಲ್ಲ ಸೇರಿ ಬೇಕಾಗುವ ಒಟ್ಟು ಕುಡಿವ ನೀರಿನ ಪ್ರಮಾಣ ೬೦ ಟಿ.ಎಂ.ಸಿ.ಯಷ್ಟು. ಆದರೆ ನ್ಯಾಯಾಧಿಕರಣವು ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ನಿಗದಿ ಮಾಡಿರುವ ಪ್ರಮಾಣ ೧.೮೫ ಟಿ.ಎಂ.ಸಿ ಮಾತ್ರ. ಅಚ್ಚರಿಯೆಂದರೆ ಬೆಂಗಳೂರಿನಲ್ಲಿ ಕಾವೇರಿ ಅಚ್ಚುಕಟ್ಟಿಗೆ ಒಳಪಡುವುದು ಬರೀ ೧/೩ನೇ ಜನಸಂಖ್ಯೆ ಮಾತ್ರಾ! ಹಾಗಾಗಿ ಅಷ್ಟನ್ನು ಮಾತ್ರಾ ಪರಿಗನಿಸಿದ್ದೇವೆ ಎನ್ನುತ್ತದೆ ತೀರ್ಪು! ನದಿ ನೀರು ಹಂಚಿಕೆಯಲ್ಲಿ ಮೊದಲ ಆದ್ಯತೆ ಕುಡಿಯುವ ನೀರಿಗೆ. ನಂತರ ಕೃಷಿಗೆ, ಆ ನಂತರ ಕೈಗಾರಿಕೆಗಳಿಗೆ. ಆದರೆ ತಮಿಳುನಾಡಿನ ಕೃಷಿಭೂಮಿಗೆ ಸರಬರಾಜು ಮಾಡುವ ಸಲುವಾಗಿ ಕರ್ನಾಟಕದ ಕುಡಿಯುವ ನೀರಿನ ಪೂರೈಕೆಗೇ ಕತ್ತರಿ ಹಾಕುವುದು ಎಷ್ಟು ಸರಿ. ಇದು ಈ ಅನ್ಯಾಯ ಸರಣಿಯಲ್ಲಿ ಐದನೆಯದು.

ಒಟ್ಟು ತೀರ್ಪು ನೀಡುವಾಗ ತಮಿಳುನಾಡಿನಲ್ಲಿ ಲಭ್ಯವಿರುವ ೧೫೦ ಟಿ.ಎಂ.ಸಿ ಅಂತರ್ಜಲವನ್ನು ಪರಿಗಣಿಸಿಯೇ ಇಲ್ಲ. ಸ್ವತಹ ತಮಿಳುನಾಡೇ ತಾನು ೨೦ ಟಿ.ಎಂ.ಸಿಯಷ್ಟು ಅಂತರ್ಜಲ ಬಳಸುತ್ತಿರುವುದಾಗಿ ಹೇಳಿಕೊಂಡಿದ್ದರೂ ಕೂಡಾ ಇಂತಹ ತೀರ್ಪು ಬಂದಿದೆ. ನ್ಯಾಯಾಧಿಕರಣದ ತಜ್ಞರ ತಂಡ ತಮಿಳುನಾಡಿಗೆ ೩೯೫ ಟಿ.ಎಂ.ಸಿ ನೀರು ಅಗತ್ಯವಿದೆಯೆಂದು ವರದಿ ಮಾಡಿದೆ. ಆದರೆ ನ್ಯಾಯಾಧಿಕರಣ ಮಾತ್ರ ೪೧೯ ಟಿ.ಎಂ.ಸಿ ನೀರಿನ ವರದಾನ ನೀಡಿದೆ.

ಇಂತಹ ಹಲವಾರು ಅನ್ಯಾಯಗಳ ಚಪ್ಪಡಿಗಳನ್ನು ಕನ್ನಡಿಗರ ತಲೆಯ ಮೇಲೆ ಎಳೆಯಲಾಗಿದೆ. ಕೇಂದ್ರ ಸರ್ಕಾರದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಾಲುದಾರನಾಗಿರುವಾಗ, ಕೇಂದ್ರ ಸರ್ಕಾರದಲ್ಲಿ ನಾಲ್ವರು ಮಂತ್ರಿಗಳನ್ನು ತಮಿಳುನಾಡು ಹೊಂದಿರುವಾಗ, ಕನ್ನಡ ನಾಡು ತನ್ನ ನೆಲದಿಂದ ರಾಜ್ಯಸಭೆಗೆ ಪರರಾಜ್ಯದವರನ್ನು ಆರಿಸಿ ಕಳಿಸುತ್ತಿರುವಾಗ, ನಾಡಿನ ಎಲ್ಲ ರಾಜಕೀಯ ಪಕ್ಷಗಳೂ ರಾಷ್ಟ್ರೀಯ ಪಕ್ಷಗಳ ತೆಕ್ಕೆಯಲ್ಲಿ ಇರುವಾಗ . . . ಕನ್ನಡಿಗನಿಗೆ ನ್ಯಾಯ ದೊರಕೀತೆ? ಎಂಬ ಪ್ರಶ್ನೆ ಎಲ್ಲಕ್ಕಿಂತ ದೊಡ್ಡದಾಗಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗ ತನ್ನ ಮೈಮರೆವು ತೊರೆದು, ಮೈಕೊಡವಿ ಏಳದಿದ್ದರೆ ನಾಳೆ ಈ ಅನ್ಯಾಯಗಳು ಮುಂದುವರೆಯುತ್ತಲೇ ಇರುತ್ತವೆ.

ಇಷ್ಟಕ್ಕೂ ನದಿನೀರು ಹಂಚಿಕೆಯು ನ್ಯಾಯಯುತವಾಗಿ ನಡೆಯಲು ಭಾರತದಲ್ಲಿರುವ ನೀತಿ ನಿಯಮಗಳೇನು? ಕರ್ನಾಟಕದ ದೃಷ್ಟಿಯಲ್ಲಿ ನಿಜವಾಗಿ ನ್ಯಾಯವೆಂದರೆ ಏನು? ಕರ್ನಾಟಕಕ್ಕೆ ಮುಂದಾದರೂ ನ್ಯಾಯ ಸಿಗುವ ಸಾಧ್ಯತೆಯಿದೆಯೇ? ನಾಳೆ ಕಾವೇರಿ ಐತೀರ್ಪನ್ನು ಗೆಜೆಟ್‍ನಲ್ಲಿ ಪ್ರಕಟಿಸಿದರೆ ನಮ್ಮ ಪಾಡೇನಾದೀತು? ಕರ್ನಾಟಕ ಯಾವ ದಾರಿ ಹಿಡಿದೀತು? ನಮ್ಮ ರಾಜಕೀಯ ಪಕ್ಷಗಳು ಏನು ಪಾತ್ರ ವಹಿಸಿವೆ? ವಹಿಸಬಲ್ಲವು? ಎಂಬುದನ್ನು ನಾಳೆ ನೋಡೋಣ.

(....ಮುಂದುವರೆಯುವುದು)

೨. ಕೊಡಗಿನ ಕಾವೇರಿ.. ನೀ ಕನ್ನಡನಾಡಿನ ಭಾಗ್ಯನಿಧಿ!


ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಯದ್ದು ಸುಮಾರು ೮೦೦ ಕಿಲೋಮೀಟರ್ ದೂರದ ಪಯಣ. ಆರಂಭದಿಂದಲೇ ಜೊತೆಯಾಗುವ ಪ್ರಮುಖ ಸಂಗಾತಿಗಳು ಹಾರಂಗಿ, ಹೇಮಾವತಿ, ಸುವರ್ಣಾವತಿ, ಅರ್ಕಾವತಿ ಮತ್ತು ಶಿಂಷಾ ಉಪನದಿಗಳು. ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಕಾವೇರಿಯನ್ನು ಸೇರುವ ನದಿ ಕಬಿನಿ. ತಮಿಳುನಾಡಿನಲ್ಲಿ ಭವಾನಿ, ನೊಯ್ಯಿಲ್ ಮತ್ತು ಅಮರಾವತಿ ನದಿಗಳು ಕಾವೇರಿಯನ್ನು ಸೇರಿಕೊಳ್ಳುತ್ತವೆ. ಕಾವೇರಿ ಕರ್ನಾಟಕದ ಒಳಗೆ ೩೨೦ ಕಿ ಮೀ ದೂರದಷ್ಟು ಹರಿದರೆ ಸುಮಾರು ೬೪ ಕಿಮೀ ದೂರ ಎರಡೂ ರಾಜ್ಯಗಳ ಗಡಿಯಾಗಿ ಹರಿಯುತ್ತದೆ. ಮುಂದೆ ತಮಿಳುನಾಡಿನಲ್ಲಿ ಸುಮಾರು ೪೧೬ ಕಿಮೀ ಹರಿಯುತ್ತದೆ. ಕಾವೇರಿ ಹರಿವಿನ ಬಗ್ಗೆ ಮಾಹಿತಿ ಈ ಪಟ್ಟಿಯಲ್ಲಿ ನೋಡಿ:


ದೇಶಪ್ರೇಮಕ್ಕೆ ಸಿಕ್ಕ ಉಡುಗೊರೆ!

೧೭ನೇ ಶತಮಾನದಿಂದಲೇ ಮದ್ರಾಸ್ ಸಂಸ್ಥಾನ ಬ್ರಿಟೀಷರದ್ದಾಗಿತ್ತು! ಮೈಸೂರಿನಲ್ಲಿ ಹೈದರಾಲಿ, ಟಿಪ್ಪೂ ಸುಲ್ತಾನರು, ವಿದೇಶಿ ಆಳ್ವಿಕೆಯನ್ನು ವಿರೋಧಿಸಿ ಹೋರಾಡಿ ಹುತಾತ್ಮರಾದ ನಂತರ ಮೈಸೂರು ದೇಶವೂ ಬ್ರಿಟೀಷರ ಕೈವಶವಾಯಿತು. ಕೆಲ ಹತ್ತುವರ್ಷಗಳ ನಂತರ ಮೈಸೂರನ್ನು ಒಡೆಯರ್ ಮನೆತನಕ್ಕೆ ಒಪ್ಪಿಸಿ ತನ್ನ ಸಾಮಂತ ರಾಜ್ಯವಾಗಿಸಿಕೊಂಡಿತು, ಆಂಗ್ಲರ ಆಳ್ವಿಕೆ. ಮೈಸೂರು ಪ್ರಾಂತ್ಯದಲ್ಲಿ ಕಾವೇರಿ ಹರಿಯುತ್ತಿದ್ದರೂ ಮಳೆ ಆಧಾರಿತ ಕೃಷಿಯೇ  ಪ್ರಧಾನವಾಗಿತ್ತು. ನಂತರದ ದಿನಗಳಲ್ಲಿ ನೀರಾವರಿಗೆ ಒತ್ತುಕೊಟ್ಟು ಕಾಮಗಾರಿಗೆ ಮುಂದಾದಾಗಲೆಲ್ಲಾ ಆಂಗ್ಲರಿಂದ ಬೇಕಾದ ಅನುಮತಿ ಸಿಗುತ್ತಿರಲಿಲ್ಲ. ಸಾಕಷ್ಟು ಪತ್ರ ವ್ಯವಹಾರದ ನಂತರ ಕರ್ನಾಟಕದ ಮೇಲೆ ಹೇರಲಾಗಿದ್ದು ೧೮೯೨ರ ಒಪ್ಪಂದ.

೧೮೯೨ರ ಒಪ್ಪಂದದ ತಿರುಳು

ಕರ್ನಾಟಕದಿಂದ ಮದ್ರಾಸ್ ಪ್ರಾಂತ್ಯಕ್ಕೆ ಕೃಷ್ಣಾ, ಕಾವೇರಿ, ತುಂಗಭದ್ರಾ ನದಿಗಳು ಹರಿಯುತ್ತಿದ್ದು ಈ ನೀರುಗಳ ಬಳಕೆಯನ್ನು ಮದ್ರಾಸ್ ಪ್ರಾಂತ್ಯವು ತಲತಲಾಂತರದಿಂದ ನಡೆಸಿಕೊಂಡು ಬರುತ್ತಿದೆ. ಹಾಗಾಗಿ ಕೆಳರಾಜ್ಯವಾದ ಮದ್ರಾಸ್ ಪ್ರಾಂತ್ಯದ ನೀರಿನ ಬಳಕೆಗೆ ಧಕ್ಕೆ ತರಬಾರದು ಎನ್ನುತ್ತಾ ಅವರು ಬಳಸುವ ನೀರಿನ ಪ್ರಮಾಣಕ್ಕೆ ಅಡ್ಡಿ ಮಾಡಬಾರದೆನ್ನುವ ಉದ್ದೇಶದಿಂದ ಕೆಲವು ನಿಬಂಧನೆಗಳನ್ನು ಹೇರಿತು. ಮೈಸೂರು ಯಾವುದೇ ನೀರಾವರಿ ಯೋಜನೆ ಕೈಗೊಳ್ಳಬೇಕಾದರೆ ಮದ್ರಾಸಿನಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಯಾವುದೇ ಯೋಜನೆಯ ಪೂರ್ಣ ಮಾಹಿತಿಯನ್ನು ಮದ್ರಾಸಿಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಮೈಸೂರು ಪ್ರಾಂತ್ಯವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಹಾವೇರಿಯ ರಸ್ತೆಗಿಂತ ಕೆಳಭಾಗದಲ್ಲಿ, ಕಾವೇರಿ  ನದಿಗೆ ಅಡ್ಡಲಾಗಿ ರಾಮಸ್ವಾಮಿ ಅಣೆಕಟ್ಟಿಗಿಂತ ಕೆಳಭಾಗದಲ್ಲಿ ಮತ್ತು ಕಬಿನಿ ನದಿಗೆ ಅಡ್ಡಲಾಗಿ ರಾಂಪುರ ಅಣೆಕಟ್ಟೆಗಿಂತ ಕೆಳಭಾಗದಲ್ಲಿ ಯಾವುದೇ ಜಲಾಶಯಗಳನ್ನು ನಿರ್ಮಿಸುವಂತಿಲ್ಲ! ಯಾವುದೇ ಹೊಸ ಜಲಾಶಯಗಳನ್ನು ಕಟ್ಟುವಂತಿಲ್ಲ.. ಹೊಸ ಜಲಾಶಯಗಳು ಅಂದರೆ ಈ ಮೊದಲೇ ಇದ್ದು ಕಳೆದ ೩೦ ವರ್ಷಗಳಲ್ಲಿ ಬಳಕೆಯಲ್ಲಿರದ, ಹಿಂದೆಂದೂ ಅಸ್ತಿತ್ವದಲ್ಲಿರದ, ಯಾವುದೇ ತೊರೆಗೆ ಅಡ್ಡಲಾಗಿ ಕಟ್ಟುವ ನೀರಾವರಿ ಜಲಾಶಯಗಳು. ಯಾವುದೇ ಜಲಾಶಯಗಳ ದುರಸ್ತಿ ಮಾಡುವಾಗಲಾಗಲೀ,  ಹಳೆಯದಕ್ಕೆ ಬದಲಾಗಿ ಹೊಸದಾಗಿ ಕಟ್ಟುವಾಗಲಾಗಲೀ..  ಈ ಹಿಂದೆ ಶೇಖರಿಸುತ್ತಿದ್ದುದಕ್ಕಿಂತ ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವಂತೆ ಮಾಡುವಂತಿಲ್ಲ! ಇಂತಹ ಒಪ್ಪಂದವು ಜಾರಿ ಮಾಡಿ ಆಂಗ್ಲ ಸರ್ಕಾರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಮುರುಟಿಹಾಕಿತು. ಅದೇ ಸಮಯದಲ್ಲಿ ತಮಿಳುನಾಡಿಗೆ ಇಂತಹ ಯಾವ ನಿರ್ಬಂಧವೂ ಇರದೆ ತಾವು ಬೇಕಾದಷ್ಟು ನೀರಾವರಿ ಮಾಡಿಕೊಳ್ಳಲು ಬಿಟ್ಟು ಮುಂದೆ ತಮಿಳುನಾಡು ಪಾರಂಪರಿಕ, ಶತಶತಮಾನಗಳ ಅವಲಂಬನೆ ಎಂದು ವಾದಿಸಲು ಅನುವು ಮಾಡಿಕೊಟ್ಟಿತು.

೧೯೨೪ರ ಒಪ್ಪಂದ

ವಾಸ್ತವವಾಗಿ ೧೮೯೨ರ ಒಪ್ಪಂದವು ಮೈಸೂರು ರಾಜ್ಯದ ಎಲ್ಲಾ ನದಿಗಳ ನೀರಿಗೆ ಅನ್ವಯವಾಗುತ್ತಿತ್ತು. ಮೈಸೂರು ರಾಜ್ಯ   ಕನ್ನಂಬಾಡಿಯಲ್ಲಿ ಅಣೆಕಟ್ಟೆಯೊಂದನ್ನು ಕಟ್ಟಲು ಮನಸ್ಸು ಮಾಡಿ ೧೮೯೨ರ ಒಪ್ಪಂದದಂತೆ ಮದ್ರಾಸಿಗೆ ಅನುಮತಿ ಕೋರಿ ಮನವಿ ಸಲ್ಲಿಸಿತು. ಅದಕ್ಕೆ ಮದ್ರಾಸ್ ತೀವ್ರ ವಿರೋಧ ತೋರಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಲು ಅಡ್ಡಗಾಲು ಹಾಕಿತು. ಮೈಸೂರು ಅರಸರು ನಿರಂತರವಾಗಿ ಒತ್ತಡ ಹಾಕಿ, ಬೇಡಿಕೆ ಬೇಡಿ, ಪತ್ರವ್ಯವಹಾರ ಮಾಡಿದ್ದರಿಂದಾಗಿ ಅಂತೂ ಇಂತೂ ಒಂದು ಒಪ್ಪಂದವನ್ನು ಮುಂದಿಡಲಾಯಿತು. ಅದೇ ಮುಂದಿನ ಐವತ್ತು ವರ್ಷಗಳಿಗೆ ಅನ್ವಯವಾಗುವಂತಹ ೧೯೨೪ರ ಮೈಸೂರು - ಮದ್ರಾಸ್ ಒಪ್ಪಂದ. ವಾಸ್ತವವಾಗಿ ಇಷ್ಟಾದರೂ ಅವಕಾಶವಾಯಿತಲ್ಲಾ ಎಂಬ ಕಾರಣಕ್ಕೆ ಮೈಸೂರು ಇದಕ್ಕೂ ಸಹಿ ಹಾಕಿತು. ಈ ಒಪ್ಪಂದದಂತೆ ಮೈಸೂರು ತನ್ನ ನೀರಾವರಿ ಪ್ರದೇಶವನ್ನು ೧,೧೦,೦೦೦ ಎಕರೆಗೆ ಸೀಮಿತಗೊಳಿಸಿಕೊಳ್ಳುವಂತೆ ಮಾಡಲಾಯಿತು ಮತ್ತು ಉದಾರತೆಯನ್ನು ತೋರಿ ಮದ್ರಾಸ್ ತನ್ನ ನೀರಾವರಿ ಭೂಮಿಯನ್ನು ೩,೦೦,೦೦೦ ಎಕರೆಗಳಷ್ಟು ಹೆಚ್ಚಿಸಿಕೊಳ್ಳುವ ಸ್ವಯಂ ನಿರ್ಬಂಧಕ್ಕೆ ಒಪ್ಪಿತು (!). ಮುಂದೆ ಮದ್ರಾಸ್ ಯಾವುದೇ ಅಣೆಕಟ್ಟು ನಿರ್ಮಿಸಲು ಸ್ವತಂತ್ರ್ಯ. ಹಾಗೆ ಆದಾಗ ಮೈಸೂರು ಮದ್ರಾಸು ನಿರ್ಮಿಸಿದ ಅಣೆಕಟ್ಟೆಯ ಸಾಮರ್ಥ್ಯದ ೬೦% ಸಾಮರ್ಥ್ಯದ ನೀರು ಹಿಡಿದುಕೊಳ್ಳಬಲ್ಲ ಹೊಸ ಅಣೆಕಟ್ಟೆ ಕಟ್ಟಬಹುದು ಎನ್ನಲಾಯಿತು!

ಇಂತಹ ಒಪ್ಪಂದಕ್ಕೆ ಸಿಲುಕಿ ನಲುಗಿದ ಮೈಸೂರು "ಈ ಅನ್ಯಾಯ ಮಾಡಿದ್ದು ಬ್ರಿಟೀಷರು, ಹಾಗಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇವೆಲ್ಲಾ ಸರಿಹೋಗಬಹುದು" ಎಂದು ಭಾವಿಸಿತು. ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗ ಬ್ರಿಟೀಷರು ಭಾರತ ಬಿಟ್ಟು ಹೋದರು. ಅವರು ವಿಧಿಸಿದ್ದ ಶಿಕ್ಷೆಗಳು ರದ್ದಾಗಿ ಸ್ವಾತಂತ್ರ್ಯ ಸೇನಾನಿಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿತು. ಆದರೆ ಆಂಗ್ಲರ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡಿ ಮಡಿದ ಹೈದರಾಲಿ, ಟಿಪ್ಪೂಸುಲ್ತಾನರ "ಆಂಗ್ಲ ವಿರೋಧಿ" ನಿಲುವಿನಿಂದಾಗಿಯೇ ತುಳಿತಕ್ಕೊಳಗಾದ ಮೈಸೂರಿಗೆ ಮಾತ್ರಾ ೧೯೨೪ರ ಒಪ್ಪಂದದಿಂದ ಮುಕ್ತಿ ಸಿಗಲೇ ಇಲ್ಲಾ! ೧೯೭೪ಕ್ಕೆ ಈ ಒಪ್ಪಂದ ಕೊನೆಗೊಳ್ಳಲಿದ್ದು ನಂತರ ಮತ್ತೊಂದು ಹೊಂದಾಣಿಕೆ ಸೂತ್ರ ಮೂಡುವ ಹೊತ್ತಿಗೆ ಏನಾನಾಗಿರುತ್ತದೋ ಬಲ್ಲವರಾರೆಂದು ಮೈಸೂರು ರಾಜ್ಯ ಸ್ವತಂತ್ರ್ಯವಾಗಿ ನಾಲ್ಕಾರು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿತು.

ಸ್ವತಂತ್ರ್ಯ ಭಾರತದಲ್ಲೂ ನೀರಾವರಿ ಯೋಜನೆಗೆ ಅಡ್ಡಗಾಲು!

ಹೌದು! ಕರ್ನಾಟಕ ಹೊಸ ನೀರಾವರಿ ಯೋಜನೆಗೆ ಭಾರತ ಸರ್ಕಾರದ ಅನುಮತಿ ಕೇಳಿದಾಗ ಭಾರತ "ಮೊದಲು ನೀವು ತಮಿಳುನಾಡಿನ ಒಪ್ಪಿಗೆ ಪಡೆದುಬನ್ನಿ, ಅವರೊಂದಿಗಿನ ತಿಕ್ಕಾಟ ಮುಗಿಸಿಕೊಂಡು ಬನ್ನಿ" ಎಂದುಬಿಟ್ಟಿತು. ೧೯೨೪ರಲ್ಲಿ ಕನ್ನಂಬಾಡಿ ಕಟ್ಟುವಾಗಲೇ ಶತಾಯಗತಾಯ ವಿರೋಧಿಸಿದ್ದ ತಮಿಳುನಾಡು, ಈಗ ಒಪ್ಪಿಗೆ ನೀಡುವುದೆಂದು ನಂಬುವುದಾದರೂ ಹೇಗೆ? ತಮಿಳುನಾಡನ್ನು ನಾವು ಏಕೆ ಅನುಮತಿ ಕೇಳಬೇಕು? ಕರ್ನಾಟಕವೇನು ತಮಿಳುನಾಡಿನ ಸಾಮಂತ ರಾಜ್ಯವೇ? ಒಟ್ಟಲ್ಲಿ ಕರ್ನಾಟಕ ಕೇಂದ್ರದ ಅನುಮತಿಯನ್ನಾಗಲೀ, ತಮಿಳುನಾಡಿನ ಒಪ್ಪಿಗೆಯಾಗಲೀ ಪಡೆಯದೆ ನಾಲ್ಕು ಅಣೆಕಟ್ಟುಗಳನ್ನು ನಿರ್ಮಿಸಿಬಿಟ್ಟಿತು. ಅವೇ ಗೊರೂರು ಬಳಿಯ ಹೇಮಾವತಿ ಅಣೇಕಟ್ಟೆ, ಕಬಿನಿ ಜಲಾಶಯ, ಹಾರಂಗಿ ಜಲಾಶಯ ಮತ್ತು ಸುವರ್ಣಾವತಿ ಜಲಾಶಯಗಳು. ಹೀಗೆ ನಿರ್ಮಾಣ ಮಾಡಿದ್ದೇ ಇಡೀ ಕಾವೇರಿ ಹೋರಾಟಕ್ಕೆ ಪ್ರಮುಖ ಕಾರಣ. ತಮಿಳುನಾಡು ಹಲವಾರು ವರ್ಷ ಕರ್ನಾಟಕದ ಜೊತೆ ಈ ವಿಷಯವಾಗಿ ತಕರಾರು ಚರ್ಚೆ ಮಾಡಿ, ಕರ್ನಾಟಕ ಯಾವುದಕ್ಕೂ ಮಣಿಯದೇ ಇದ್ದಾಗ ನೇರವಾಗಿ ಪ್ರಧಾನಮಂತ್ರಿಗಳಿಗೆ ದೂರು ನೀಡಿತು. ನಂತರ ನ್ಯಾಯಾಲಯಕ್ಕೆ ತಮಿಳುನಾಡಿನ "ತಮಿಳುನಾಡು ಕಾವೇರಿ ನೀರಪ್ಪಾಸನ ವಿಲೈಪೊರುಳುಗಳ್ ವಿವಸಾಯಿಗಳ್ ನಾಲಾ ಉರಿಮೈ ಪೊದುಗಪ್ಪು ಸಂಗಂ" ಎನ್ನುವ ಸಂಘವು ದೂರು ಸಲ್ಲಿಸಿತು, ಸರ್ಕಾರವೂ ದಾವೆ ಹೂಡಿತು. ದ್ವಿಪಕ್ಷೀಯ ಮಾತುಕತೆಗಳು ವಿಫಲವಾದ ಕಾರಣದಿಂದಾಗಿ ನ್ಯಾಯಾಧಿಕರಣವನ್ನು ರಚಿಸಬೇಕೆಂದು ಬೇಡಿಕೆ ಇಟ್ಟಿತು. ಇದನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ೨೬೨ನೇ ವಿಧಿಯಂತೆ  "ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣ"ವನ್ನು ರಚಿಸಲು ಕೇಂದ್ರಸರ್ಕಾರಕ್ಕೆ ಸೂಚಿಸಿತು. ಹೀಗೆ ೧೯೯೦ರಲ್ಲಿ ಕಾವೇರಿ ನ್ಯಾಯಾಧಿಕರಣವು ಜಾರಿಗೆ ಬಂದಿತು.

(...ಮುಂದುವರೆಯುವುದು)
Related Posts with Thumbnails